ಪಶ್ಚಿಮ ದಂಡೆಯಲ್ಲಿ ದಾಳಿಯ ನಂತರ ಗೋಚರಿಸುತ್ತಿರುವ ವಿನಾಶ. ಪಶ್ಚಿಮ ದಂಡೆಯಲ್ಲಿ ದಾಳಿಯ ನಂತರ ಗೋಚರಿಸುತ್ತಿರುವ ವಿನಾಶ.  (ANSA)

ಕಾಡಿ೯ನಲ್ ಗುಗೆರೊಟ್ಟಿ: ಯುದ್ಧದಿಂದ ಬಳಲುತ್ತಿರುವ ಪವಿತ್ರ ಭೂಮಿಗೆ ಶುಕ್ರವಾರದ ವಿಶೇಷ ಸಂಗ್ರಹಣೆಯು ಭರವಸೆಯನ್ನು ನೀಡುತ್ತದೆ

ಪವಿತ್ರ ಭೂಮಿಗಾಗಿ ನಡೆಯುವ ಪವಿತ್ರ ಶುಕ್ರವಾರ ಸಂಗ್ರಹಣೆಗೆ ಮುನ್ನ,ಕ್ಲಾಡಿಯೊ ಗುಗೆರೊಟ್ಟಿ ರವರು ಎಲ್ಲಾ ಕಥೋಲಿಕ ವಿಶ್ವಾಸಿಗಳನ್ನು ಯೇಸು ಕ್ರಿಸ್ತನು ಬದುಕಿದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಮತ್ತೆ ಭರವಸೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾದಷ್ಟು ಸಹಾಯವನ್ನು ನೀಡುವಂತೆ ಪ್ರೋತ್ಸಾಹಿಸಿದ್ದಾರೆ.

ವ್ಯಾಟಿಕನ್ ವರದಿ

ಪವಿತ್ರ ಶುಕ್ರವಾರದ ದಿನದಂದು ಪ್ರತಿ ವರ್ಷ ಜಗತ್ತಿನ ಎಲ್ಲಾ ಕಥೋಲಿಕ ದೇವಾಲಯಗಳಲ್ಲಿ ವಿಶೇಷ ಸಂಗ್ರಹಣೆ ನಡೆಯುತ್ತದೆ. ಈ ಸಂಗ್ರಹಿಸಿದ ಹಣವನ್ನು ಪವಿತ್ರ ಭೂಮಿಯ ಧರ್ಮ ಸಭೆಯ ಕಾರ್ಯಗಳನ್ನು ನೋಡಿಕೊಳ್ಳುವವರಿಗೆ ಕಳುಹಿಸಲಾಗುತ್ತದೆ. ಪವಿತ್ರ ಸ್ಥಳಗಳ ಸಂರಕ್ಷಣೆ ಮತ್ತು ಅಲ್ಲಿ ವಾಸಿಸುವ ಕ್ರೈಸ್ತ ಸಮುದಾಯಗಳ ಸೇವೆಗಾಗಿ ಈ ಸಹಾಯವನ್ನು ಬಳಸಲಾಗುತ್ತದೆ.

ಈ ಹಿನ್ನೆಲೆಯಲ್ಲೇ ಅವರು ಜಗತ್ತಿನ ಎಲ್ಲಾ ಬಿಷಪ್‌ಗಳಿಗೆ ಪತ್ರ ಬರೆದು, ಪವಿತ್ರ ಭೂಮಿಗಾಗಿ ನಡೆಯುವ ಪವಿತ್ರ ಶುಕ್ರವಾರ ಸಂಗ್ರಹಣೆಗೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ. ಅವರು “ಶಾಂತಿ ಮರಳಿ ಬಂದು ಪವಿತ್ರ ಭೂಮಿಯಲ್ಲಿ ಜೀವನ ಮತ್ತು ಭರವಸೆಯನ್ನು ಪುನಃ ನೀಡುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಹಲವಾರು ಸಂವಾದಗಳು ಮತ್ತು ಒಪ್ಪಂದಗಳಿದ್ದರೂ, ಯುದ್ಧದ ಶಸ್ತ್ರಾಸ್ತ್ರಗಳು ಇನ್ನೂ ನಿಲ್ಲಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.

ಶಾಂತಿಯ ಘೋಷಣೆಗಳಿದ್ದರೂ ಸಹ ಜನರು ಇನ್ನೂ ಸಾವನ್ನಪ್ಪುತ್ತಿದ್ದಾರೆ ಎಂದು ಕಾರ್ಡಿನಲ್ ಹೇಳಿದರು. ಈ ಪರಿಸ್ಥಿತಿಯ ಕಾರಣದಿಂದ ಅನೇಕ ಕ್ರೈಸ್ತರು ತಮ್ಮ ದೇಶವನ್ನು ತೊರೆದು ಹೊರಟಿದ್ದಾರೆ ಮತ್ತು ಹಲವಾರು ಮಕ್ಕಳು ಶಿಕ್ಷಣವಿಲ್ಲದೆ ಉಳಿಯುತ್ತಿದ್ದಾರೆ. ಆದರೂ, “ದೇವರು ನಮ್ಮ ಭರವಸೆಯಾಗಿರುವುದರಿಂದ ಕ್ರೈಸ್ತರು ನಿರಾಶರಾಗಬಾರದು” ಎಂದು ಅವರು ವಿಶ್ವಾಸಿಗಳಿಗೆ ಧೈರ್ಯ ತುಂಬಿದರು.

ಪವಿತ್ರ ಭೂಮಿಯ ಕ್ರೈಸ್ತರಿಗೆ ಸಹಾಯ ಮಾಡುವುದಕ್ಕಾಗಿ ನೀಡುವ ದೇಣಿಗೆ ಹೊರಗೆ ನೋಡಲು ಚಿಕ್ಕದಾಗಿ ಕಾಣಬಹುದು, ಆದರೆ ಅದರ ಅರ್ಥ ಬಹಳ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಯೇಸು ಕ್ರಿಸ್ತನ ಜೀವನದ ಸಾಕ್ಷಿಯಾಗಿರುವ ಪವಿತ್ರ ಸ್ಥಳಗಳನ್ನು ಕಾಪಾಡುತ್ತಿರುವ ಧರ್ಮ ಸಭೆಯ ಕಾರ್ಯಗಳಿಗೆ ಈ ಸಹಾಯ ಅತ್ಯಂತ ಅಗತ್ಯವಾಗಿದೆ.

ಇದಲ್ಲದೆ, ಕ್ರಿಸ್ತನು ನಮ್ಮ ಪಾಪಗಳಿಗಾಗಿ ಪ್ರಾಣ ತ್ಯಾಗ ಮಾಡಿದ ದಿನದಲ್ಲಿ ಈ ದೇಣಿಗೆ ನೀಡುವುದು ಮಾನವಕುಲಕ್ಕಾಗಿ ದೇವರು ಯೋಜಿಸಿದ್ದ ಪ್ರೀತಿಯ ಯೋಜನೆಯನ್ನು ಪ್ರತಿಬಿಂಬಿಸುವ ಕ್ರಿಯೆಯಾಗಿದೆ ಎಂದು ಅವರು ಹೇಳಿದರು. ಜನರಿಗೆ ಪವಿತ್ರ ಭೂಮಿಯ ಕ್ರೈಸ್ತರ ದಿನನಿತ್ಯದ ಸಂಕಷ್ಟಗಳನ್ನು ತಿಳಿಸುವುದು ಮತ್ತು ಅವರಿಗಾಗಿ ಜವಾಬ್ದಾರಿಯ ಭಾವನೆ ಬೆಳೆಸುವುದು ಅಗತ್ಯ ಎಂದು ಅವರು ಬಿಷಪ್‌ಗಳಿಗೆ ಮನವಿ ಮಾಡಿದರು.

ಕೊನೆಯಲ್ಲಿ, ಪವಿತ್ರ ಭೂಮಿಯಲ್ಲಿ ಸೇವೆ ಸಲ್ಲಿಸುವ ಅವರ ಕಾರ್ಯವನ್ನು ಬೆಂಬಲಿಸಿದ ಎಲ್ಲಾ ಕಥೋಲಿಕ ವಿಶ್ವಾಸಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. “ಪವಿತ್ರ ಭೂಮಿಗಾಗಿ ಮಾಡುವ ಈ ಸಂಗ್ರಹಣೆ ಸಮುದ್ರದಲ್ಲಿ ಒಂದು ಹನಿ ನೀರಿನಂತಿರಬಹುದು; ಆದರೆ ಆ ಹನಿಗಳು ಇಲ್ಲದೆ ಸಮುದ್ರವೇ ಮರುಭೂಮಿಯಾಗುತ್ತದೆ” ಎಂದು ಅವರು ಹೇಳಿದರು.

16 ಮಾರ್ಚ್ 2026, 09:42