U.S. Navy's Arleigh Burke-class guided-missile destroyer USS Frank E. Petersen Jr. fires a Tomahawk Land Attack Missile (TLAM) during operations in support of Operation Epic Fury attack on Iran

ಮರುಸಶಸ್ತ್ರೀಕರಣದ ಸ್ಪರ್ಧೆ: ಅಂಕಿಅಂಶಗಳ ವಾಸ್ತವಿಕೆ ಮತ್ತು ಶಾಂತಿಯ ತುರ್ತು ಅಗತ್ಯ.

ನಮ್ಮ ಸಂಪಾದಕೀಯ ನಿರ್ದೇಶಕರು, ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಪ್ರಸ್ತುತ ರಕ್ಷಣಾ ವೆಚ್ಚಗಳ ಕುರಿತು ಜಗದ್ಗುರುಗಳ ಮ್ಯಾಜಿಸ್ಟೀರಿಯಮ್ (ಜಗದ್ಗುರುಗಳ ಉಪದೇಶಗಳು) ಬೆಳಕಿನಲ್ಲಿ ಒಂದು ಚಿಂತನೆ ವ್ಯಕ್ತಪಡಿಸುತ್ತಾರೆ.

ವ್ಯಾಟಿಕನ್ ವರದಿ

ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಮರುಸಶಸ್ತ್ರೀಕರಣದ  ಸ್ಪರ್ಧೆ ಮತ್ತು ರಕ್ಷಣಾ ವೆಚ್ಚಗಳ ಕುರಿತು, ಜಗದ್ಗುರುಗಳ ಉಪದೇಶಗಳ ಬೆಳಕಿನಲ್ಲಿ ಒಂದು ಗಂಭೀರ ಚಿಂತನೆ ಅಗತ್ಯವಿದೆ. 2025ರಲ್ಲಿ ನಾಟೋ ಮಾಜಿ ಉಪಸೇನಾಧ್ಯಕ್ಷ ರಿಚರ್ಡ್ ಶಿರ್ರೆಫ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೇವಲ 100 ಗಂಟೆಗಳಲ್ಲಿ ಯುರೋಪನ್ನು ನಾಶ ಮಾಡಬಹುದು ಎಂದು ಹೇಳಿದ ಮಾತು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಆದರೆ ಯುದ್ಧಗಳ ನೈಜ ಪರಿಸ್ಥಿತಿಯನ್ನು ನೋಡಿದಾಗ, ಸಂಪ್ರದಾಯಿಕ ಯುದ್ಧದ ಮೂಲಕ ಶತ್ರುವನ್ನು ಸಂಪೂರ್ಣವಾಗಿ ನಾಶ ಮಾಡುವುದು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಇತ್ತೀಚಿನ ತಿಂಗಳುಗಳಲ್ಲಿ ಯುರೋಪಿನ ಹಲವಾರು ದೇಶಗಳಲ್ಲಿ ಡ್ರೋನ್ ಹಾರಾಟಗಳ ಕುರಿತು ಎಚ್ಚರಿಕೆಗಳು ಕೇಳಿಬಂದವು. ಪೋಲಂಡ್, ಡೆನ್ಮಾರ್ಕ್, ನಾರ್ವೆ, ಜರ್ಮನಿ ಮತ್ತು ಬೆಲ್ಜಿಯಂ ಸೇರಿದಂತೆ ಹಲವು ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಆದರೆ ನಂತರ ಈ ಡ್ರೋನ್‌ಗಳ ಮೂಲ ಅಥವಾ ಅವುಂಟುಮಾಡಿದ ಅಪಾಯ ಕುರಿತು ಸ್ಪಷ್ಟ ಮಾಹಿತಿ ದೊರಕಲಿಲ್ಲ. ಉದಾಹರಣೆಗೆ, 2025ರಲ್ಲಿ ಜರ್ಮನಿಯಲ್ಲೇ ಸುಮಾರು 225 ಬಾರಿ ಡ್ರೋನ್‌ಗಳ ಕಾರಣದಿಂದ ವಿಮಾನ ಸಂಚಾರ ವ್ಯತ್ಯಯಗೊಂಡಿರುವುದು ದಾಖಲಾಗಿದೆ. ಇದರಿಂದ ಕೆಲವೊಮ್ಮೆ ಅಪಾಯದ ಅಂದಾಜು ಹೆಚ್ಚಾಗಿ ಮಾಡಲ್ಪಡುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಇದೇ ಸಮಯದಲ್ಲಿ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ತಮ್ಮ ಬಜೆಟ್ ಕಾನೂನುಗಳನ್ನು ಅಂಗೀಕರಿಸುತ್ತಿದ್ದವು. ಜಾಗತಿಕ ಮಟ್ಟದಲ್ಲಿ ಸೈನಿಕ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿದ್ದು, ನಾಟೋ ರಾಷ್ಟ್ರಗಳು 2035ರೊಳಗೆ ರಕ್ಷಣಾ ವೆಚ್ಚವನ್ನು ಜಿಡಿಪಿಯ 5%ಕ್ಕೆ ಹೆಚ್ಚಿಸುವ ಗುರಿ ಹೊಂದಿವೆ. ಆದರೆ ಈ ನಿರ್ಧಾರದಿಂದ ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ ಮತ್ತು ಪರಿಸರ ರಕ್ಷಣೆಗೆ ಮೀಸಲಾದ ಸಂಪನ್ಮೂಲಗಳು ಕಡಿಮೆಯಾಗುವ ಅಪಾಯವಿದೆ. ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಪಿಯಾತ್ರೋ ಪಾರೋಲಿನ್ ರವರು, ಜಗದ್ಗುರುಗಳ ಅಧಿಕಾರ ಸ್ಥಳವು ಮೊದಲ ಮಹಾಯುದ್ಧದಿಂದಲೇ ಸಾಮಾನ್ಯ ಮತ್ತು ನಿಯಂತ್ರಿತ ನಿರಾಯುಧೀಕರಣಕ್ಕಾಗಿ ಒತ್ತಾಯಿಸುತ್ತಿದೆ ಎಂದು ನೆನಪಿಸಿದರು.

ಇತಿಹಾಸದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆ ಹೊಸದಲ್ಲ. ಎರಡನೇ ಮಹಾಯುದ್ಧದ ನಂತರ ಮತ್ತು ಶೀತಯುದ್ಧದ ಕಾಲದಲ್ಲಿ, ರಾಷ್ಟ್ರಗಳು ತಮ್ಮ ಭದ್ರತೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಸೈನಿಕ ವೆಚ್ಚಗಳನ್ನು ಅನಿವಾರ್ಯವೆಂದು ಕಂಡವು. ಆದರೆ ಶೀತಲಯುದ್ಧದ ಅಂತ್ಯದ ನಂತರ ಹಲವೆಡೆ ಸೈನಿಕ ವೆಚ್ಚ ಕಡಿಮೆಯಾಯಿತು ಮತ್ತು ಸೇನೆಗಳು ಶಾಂತಿ ಕಾಪಾಡುವ ಕಾರ್ಯಗಳು ಮತ್ತು ಮಾನವೀಯ ಸೇವೆಗಳಲ್ಲಿ ಪಾಲ್ಗೊಂಡವು. ಇತ್ತೀಚಿನ ವರ್ಷಗಳಲ್ಲಿ ಮತ್ತೆ ಯುದ್ಧಗಳು ಮತ್ತು ಭೌರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗಿ, ಸೈನಿಕ ವೆಚ್ಚಗಳು ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿವೆ.

ಆರ್ಥಿಕ ಅಂಕಿಅಂಶಗಳನ್ನು ನೋಡಿದಾಗ ಸ್ಪಷ್ಟವಾದ ಅಸಮತೋಲನ ಕಾಣಿಸುತ್ತದೆ. 2025ರಲ್ಲಿ ನಾಟೋ ರಾಷ್ಟ್ರಗಳ ಒಟ್ಟು ಜಿಡಿಪಿ ಸುಮಾರು 57 ಟ್ರಿಲಿಯನ್ ಡಾಲರ್ ಆಗಿದ್ದು, ಸೈನಿಕ ವೆಚ್ಚ ಸುಮಾರು 1.49 ಟ್ರಿಲಿಯನ್ ಡಾಲರ್ ಆಗಿದೆ. ಇತ್ತ ರಷ್ಯಾ ಮತ್ತು ಚೀನಾ ರಾಷ್ಟ್ರಗಳ ವೆಚ್ಚಗಳು ಹೋಲಿಸಿದರೆ ಕಡಿಮೆ ಇದ್ದರೂ, ಜಾಗತಿಕ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಇನ್ನಷ್ಟು ಉದ್ದೀಪನಗೊಳಿಸುವ ಸಾಧ್ಯತೆ ಇದೆ. ಈ ಪರಿಸ್ಥಿತಿ ನಿಜವಾಗಿಯೂ ಭದ್ರತೆಯನ್ನು ಹೆಚ್ಚಿಸುತ್ತಿದೆಯೇ ಅಥವಾ ಹೊಸ ಸಂಘರ್ಷಗಳಿಗೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಶಸ್ತ್ರಾಸ್ತ್ರ ಉದ್ಯಮವೂ ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಯುರೋಪ್ ಮತ್ತು ಅಮೇರಿಕಾದಲ್ಲಿ ರಕ್ಷಣಾ ಉದ್ಯಮದ ಷೇರುಗಳು ಕಳೆದ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯನ್ನು ಕಂಡಿವೆ. ಆದರೆ ಈ ಸ್ಪರ್ಧೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವೆಚ್ಚಗಳನ್ನು ಉಂಟುಮಾಡುತ್ತದೆ. ಹೆಚ್ಚುತ್ತಿರುವ ಸೈನಿಕ ವೆಚ್ಚವು ದೇಶಗಳ ಸ್ವಾಯತ್ತತೆಯನ್ನು ಕಡಿಮೆ ಮಾಡಬಹುದು ಮತ್ತು ಸಾಲದ ಭಾರವನ್ನು ಹೆಚ್ಚಿಸಬಹುದು.

ಈ ಹಿನ್ನೆಲೆಯಲ್ಲೇ ಜಗದ್ಗುರು XIVನೇ ಲಿಯೋರವರು 2026ರ ವಿಶ್ವ ಶಾಂತಿ ದಿನದ ಸಂದೇಶದಲ್ಲಿ ಸೈನಿಕ ವೆಚ್ಚಗಳನ್ನು ಹೆಚ್ಚಿಸುವ ಪ್ರವೃತ್ತಿಯನ್ನು ಗಂಭೀರವಾಗಿ ವಿಮರ್ಶಿಸಿದರು. ರಾಷ್ಟ್ರಗಳ ನಡುವಿನ ಸಂಬಂಧಗಳು ಭಯ ಮತ್ತು ಬಲದ ಆಧಾರದ ಮೇಲೆ ಅಲ್ಲ, ನ್ಯಾಯ ಮತ್ತು ವಿಶ್ವಾಸದ ಆಧಾರದ ಮೇಲೆ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು. ಶಾಂತಿಯನ್ನು ಕಾಪಾಡುವ ನಿಜವಾದ ಮಾರ್ಗವು ಶಸ್ತ್ರಾಸ್ತ್ರಗಳಲ್ಲ, ಆದರೆ ಸಂವಾದ, ರಾಜತಾಂತ್ರಿಕತೆ ಮತ್ತು ಸಹಕಾರದಲ್ಲಿದೆ ಎಂದು ಅವರು ಒತ್ತಿ ಹೇಳಿದರು.

ಇಂದಿನ ಜಗತ್ತಿನಲ್ಲಿ ಸುಮಾರು 12,000 ಅಣುಶಸ್ತ್ರಗಳು ಇದ್ದು, ಅವುಗಳಲ್ಲಿ ಹೆಚ್ಚಿನವು ರಷ್ಯಾ ಮತ್ತು ಅಮೇರಿಕಾದ ಕೈಯಲ್ಲಿವೆ. ಈ ಶಸ್ತ್ರಾಸ್ತ್ರಗಳು ಮಾನವ ನಾಗರಿಕತೆಯನ್ನು ಅನೇಕ ಬಾರಿ ನಾಶಮಾಡುವಷ್ಟು ಶಕ್ತಿಯನ್ನು ಹೊಂದಿವೆ. ಆದ್ದರಿಂದ ಜಗದ್ಗುರುಗಳ ಉಪದೇಶವು ಸ್ಪಷ್ಟವಾಗಿದೆ ಮಾನವಕುಲದ ಭವಿಷ್ಯವನ್ನು ರಕ್ಷಿಸಲು ನಿರಾಯುಧೀಕರಣ, ಸಂವಾದ ಮತ್ತು ಶಾಂತಿಯ ಮಾರ್ಗವನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಇದು ಕೇವಲ ಒಂದು ಆದರ್ಶವಲ್ಲ, ಆದರೆ ಸ್ಥಿರ ಮತ್ತು ಮಾನವೀಯ ಭವಿಷ್ಯತ್ತಿಗಾಗಿ ಅಗತ್ಯವಾದ ವಾಸ್ತವಿಕ ಮಾರ್ಗವಾಗಿದೆ.

16 ಮಾರ್ಚ್ 2026, 09:29