“ಬಾಡಿಗೆ ಗರ್ಭಧಾರಣೆ ಕುರಿತು ಜಗದ್ಗುರುಗಳ ಅಧಿಕಾರ ಸ್ಥಳ: ಮಹಿಳೆಯರು ಮತ್ತು ಮಕ್ಕಳನ್ನು ಸದಾ ರಕ್ಷಿಸಬೇಕು.”
ವ್ಯಾಟಿಕನ್ ವರದಿ
ಜಗದ್ಗರುಗಳ ಅಧಿಕಾರ ಸ್ಥಳವು ವಿಶ್ವಸಂಸ್ಥೆಗೆ ಜಗದ್ಗರುಗಳ ಅಧಿಕಾರ ಸ್ಥಳದ ಶಾಶ್ವತ ಮಿಷನ್ ಪ್ರಕಟಿಸಿದ ಹೇಳಿಕೆಯಲ್ಲಿ ಬಾಡಿಗೆ ಗಭ೯ಧಾರಣೆ ಪದ್ಧತಿಗೆ ಸಂಬಂಧಿಸಿದ ಹಿಂಸಾಚಾರ ಮತ್ತು ಶೋಷಣೆಯನ್ನು ತಡೆದು, ಮಹಿಳೆಯರು ಮತ್ತು ಮಕ್ಕಳ ಗೌರವವನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಈ ಹೇಳಿಕೆ ಮಹಿಳೆಯರ ಸ್ಥಾನಮಾನದ ಆಯೋಗ 70ನೇ ಸಭೆಯ ಸಂದರ್ಭದಲ್ಲಿ ನಡೆದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ: ಬಾಡಿಗೆ ಗಭ೯ಧಾರಣೆಯಲ್ಲಿ ಹಿಂಸಾಚಾರ ಮತ್ತು ಶೋಷಣೆಗೆ ವಿರುದ್ಧ ಹೋರಾಟ ಎಂಬ ವಿಷಯದ ಉಪಕಾರ್ಯಕ್ರಮದ ಸಂದರ್ಭದಲ್ಲಿ ಹೊರಬಂದಿದೆ.
ಹೇಳಿಕೆಯಲ್ಲಿ ಇಟಲಿ, ತುರ್ಕಿಯೆ ಮತ್ತು ಪ್ಯಾರಗ್ವೇ ದೇಶಗಳ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಲಾಗಿದ್ದು, ಬಾಡಿಗೆ ಗಭ೯ಧಾರಣೆಯ ವಿಷಯವನ್ನು “ತುರ್ತು ಗಮನಕ್ಕೆ ಅರ್ಹವಾದ ಸಮಸ್ಯೆ” ಎಂದು ವಿವರಿಸಲಾಗಿದೆ. ತಂತ್ರಜ್ಞಾನ ಮತ್ತು ಪ್ರಾಯೋಗಿಕ ವಿಧಾನಗಳು ಕಾನೂನು ಮತ್ತು ನೈತಿಕ ಮೌಲ್ಯಗಳನ್ನು ಮೀರಿ ವೇಗವಾಗಿ ಮುಂದುವರೆದಿರುವುದರಿಂದ ಈ ಸಮಸ್ಯೆಯ ಪರಿಣಾಮಗಳು ಗಂಭೀರವಾಗಿವೆ ಎಂದು ಅದು ಸೂಚಿಸುತ್ತದೆ.
ಕೆಲವರು ಬಾಡಿಗೆ ಗಭ೯ಧಾರಣೆಯಲ್ಲಿ ಮಕ್ಕಳನ್ನು ಹೊಂದಲು ಬಯಸುವವರಿಗೆ ಸಹಾನುಭೂತಿಯ ಪರಿಹಾರವೆಂದು ನೋಡಿದರೂ, ಈ ಪದ್ಧತಿ ಮಹಿಳೆಯರು ಮತ್ತು ಮಕ್ಕಳ ಗೌರವ ಹಾಗೂ ಹಕ್ಕುಗಳಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ನಿರ್ಧರಿಸಲು ಸಂಪೂರ್ಣ ಸಂದರ್ಭವನ್ನು ಗಮನದಲ್ಲಿಡಬೇಕು ಎಂದು ಹೇಳಿಕೆ ತಿಳಿಸುತ್ತದೆ. ಆರ್ಥಿಕ ಅಗತ್ಯದಿಂದ ಅನೇಕ ಮಹಿಳೆಯರು ಬಾಡಿಗೆ ಗಭ೯ಧಾರಣೆಗೆ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಆದ್ದರಿಂದ ಶ್ರೀಮಂತರು ಬಾಡಿಗೆ ಗಭ೯ಧಾರಣೆಯ ಮೂಲಕ ಮಕ್ಕಳನ್ನು ಪಡೆಯುವ ಘಟನೆಗಳು ಸಾಮಾನ್ಯವಾಗಿದ್ದರೂ, ಶ್ರೀಮಂತ ಮಹಿಳೆಯರು ಬಾಡಿಗೆ ತಾಯಿಯಾಗುವ ಘಟನೆಗಳು ವಿರಳವಾಗಿವೆ.
ಹೇಳಿಕೆಯಲ್ಲಿ ಬಾಡಿಗೆ ಗಭ೯ಧಾರಣೆ ಆರ್ಥಿಕ ಅಂಶ ಮತ್ತು ಶೋಷಣೆಯ ಅಪಾಯಗಳ ಬಗ್ಗೆ ಕೂಡ ಚಿಂತೆ ವ್ಯಕ್ತಪಡಿಸಲಾಗಿದೆ. ಮಕ್ಕಳಿಗೆ ಇರುವ ಬೇಡಿಕೆ ಹೆಚ್ಚಾಗುತ್ತಿರುವಾಗ, ಮಹಿಳೆಯರಿಗೆ ಸಾಮಾಜಿಕ ರಕ್ಷಣೆ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳು ದೊರಕಿದರೆ ಅವರು ಇಂತಹ ಒಪ್ಪಂದಗಳಲ್ಲಿ ಭಾಗವಹಿಸಲು ನಿರಾಕರಿಸುವ ಸಾಧ್ಯತೆ ಹೆಚ್ಚುತ್ತದೆ ಎಂದು ಅದು ಹೇಳುತ್ತದೆ. ಕೆಲ ಸಂದರ್ಭಗಳಲ್ಲಿ ಕುಟುಂಬದ ಒತ್ತಡದಿಂದ ಅಥವಾ ಬಡತನದಿಂದ ಮಹಿಳೆಯರು ಈ ಒಪ್ಪಂದಗಳಿಗೆ ಒತ್ತಾಯಿಸಲ್ಪಡುವ ಸಾಧ್ಯತೆಯೂ ಇದೆ.
ಮಕ್ಕಳ ಹಕ್ಕುಗಳ ವಿಷಯದಲ್ಲಿಯೂ ಹೇಳಿಕೆ ಗಂಭೀರ ಚಿಂತೆ ವ್ಯಕ್ತಪಡಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಹಲವಾರು ಶಿಶುಗಳು ಬಾಡಿಗೆ ಮನೆಗಳಲ್ಲಿ ನರ್ಸ್‌ಗಳ ನೋಡಿಕೊಳ್ಳುವಿಕೆಯಲ್ಲಿ ಇರುವುದು ಕಂಡುಬಂದಿದೆ. ಮಕ್ಕಳನ್ನು ವಾಣಿಜ್ಯ ವಸ್ತುವಿನಂತೆ ಕಾಣುವ ಮನೋಭಾವವು, ವಿಶೇಷವಾಗಿ ಗರ್ಭದಲ್ಲೇ ಅಂಗವೈಕಲ್ಯ ಪತ್ತೆಯಾದಾಗ, ಮಗುವನ್ನು “ದೋಷಪೂರ್ಣ ಉತ್ಪನ್ನ”ವೆಂದು ಕಾಣುವ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಮಕ್ಕಳಿಗೆ ಪ್ರೀತಿಯ ಕ್ರಿಯೆಯಿಂದ ಹುಟ್ಟುವ ನೈತಿಕ ಹಕ್ಕು ಮತ್ತು ತಮ್ಮ ಪೋಷಕರನ್ನು ತಿಳಿದು ಅವರಿಂದಲೇ ಆರೈಕೆ ಪಡೆಯುವ ಹಕ್ಕು ಇದೆ ಎಂದು ಹೇಳಿಕೆ ಒತ್ತಿಹೇಳುತ್ತದೆ.
ಅಂತಿಮವಾಗಿ, ಜಗದ್ಗುರುಗಳ ಅಧಿಕಾರ ಸ್ಥಳವು ಬಾಡಿಗೆ ಗಭ೯ಧಾರಣೆಯ ಸಮಸ್ಯೆಯನ್ನು ಕೇವಲ ನಿಯಂತ್ರಣ ಕ್ರಮಗಳಿಂದ ಪರಿಹರಿಸಲಾಗುವುದಿಲ್ಲ ಎಂದು ತಿಳಿಸಿದೆ. ಜಗದ್ಗುರು XIVನೇ ಲಿಯೋರವರು ಮಾತುಗಳನ್ನು ಉಲ್ಲೇಖಿಸಿ, ಬಾಡಿಗೆ ಗರ್ಭಧಾರಣೆಯನ್ನು ವಾಣಿಜ್ಯ ಸೇವೆಯಾಗಿ ಪರಿವರ್ತಿಸಿ ಮಗುವಿನ ಮತ್ತು ತಾಯಿಯ ಗೌರವವನ್ನು ಹಾನಿಗೊಳಿಸುತ್ತದೆ ಎಂದು ಹೇಳಿದೆ. ಹಾಗೆಯೇ ಜಗದ್ಗುರು ಫ್ರಾನ್ಸಿಸ್ ರವರು ಮಗು ಯಾವಾಗಲೂ ದೇವರ ಕೊಡುಗೆ; ಅದು ಯಾವತ್ತೂ ವ್ಯಾಪಾರ ಒಪ್ಪಂದದ ಆಧಾರವಾಗಬಾರದು ಎಂದು ಹೇಳಿರುವುದನ್ನೂ ನೆನಪಿಸಿದೆ. ಮಹಿಳೆಯರು ಮತ್ತು ಮಕ್ಕಳನ್ನು ಶೋಷಣೆಯಿಂದ ಹಾಗೂ ಹಿಂಸಾಚಾರದಿಂದ ರಕ್ಷಿಸುವ ಉದ್ದೇಶದಿಂದ ಈ ಪದ್ಧತಿಯನ್ನು ಎಲ್ಲಾ ಮಟ್ಟಗಳಲ್ಲಿ ಕೊನೆಗೊಳಿಸಲು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿಕೆ ಭರವಸೆ ವ್ಯಕ್ತಪಡಿಸಿದೆ.