ಹುಡುಕಿ

ಆರ್ಚ್‌ಬಿಷಪ್ ಪಾವೊಲೊ ಬೋರ್ಗಿಯ ನೆರವು ವಿತರಿಸಲು ಸಹಾಯ ಮಾಡುತ್ತಿದ್ದಾರೆ ಆರ್ಚ್‌ಬಿಷಪ್ ಪಾವೊಲೊ ಬೋರ್ಗಿಯ ನೆರವು ವಿತರಿಸಲು ಸಹಾಯ ಮಾಡುತ್ತಿದ್ದಾರೆ 

“ಲೆಬನಾನ್‌ನ ಪ್ರೇಷಿತರ ರಾಯಭಾರಿ ದಕ್ಷಿಣ ಭಾಗದ ಗ್ರಾಮಗಳಿಗೆ ನೆರವು ವಿತರಿಸಿ, ಹೆಚ್ಚಿನ ಬೆಂಬಲಕ್ಕಾಗಿ ಮನವಿ ಮಾಡಿದರು.”

ಆರ್ಚ್‌ಬಿಷಪ್ ಪಾವೊಲೊ ಬೋರ್ಗಿಯರವರು 2022ರಿಂದ ಲೆಬನಾನ್‌ನ ಪ್ರೇಷಿತರ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ದಕ್ಷಿಣ ಭಾಗದ ಗ್ರಾಮಗಳಿಗೆ ಭೇಟಿ ನೀಡಿ ಲೌವ್ರೆ ಡಿ ಓರಿಯಂಟ್ ಸಂಸ್ಥೆಯಿಂದ ಒದಗಿಸಲಾದ 15 ಟನ್ ಮಾನವೀಯ ಸಹಾಯವನ್ನು ವಿತರಿಸಲು ಸಹಾಯ ಮಾಡಿದ ನಂತರ ತುರ್ತು ಬೆಂಬಲದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಆರ್ಚ್‌ಬಿಷಪ್ ಪಾವೊಲೊ ಬೋರ್ಗಿಯರವರು ಲೆಬನಾನ್‌ನ ಬೈರೂತ್ ನಗರದಲ್ಲಿರುವ ಪ್ರೇಷಿತರ ರಾಯಭಾರಿಯಾಗಿದ್ದಾಗ ಸ್ಫೋಟದ ಶಬ್ದವನ್ನು ಕೇಳಿದ್ದಾಗಿ ಹೇಳಿದ್ದಾರೆ. ಹಾರಿಸ್ಸಾ ಬೆಟ್ಟದಲ್ಲಿರುವ ಅವರ್ ಲೇಡಿ ಆಫ್ ಲೆಬನಾನ್ ಪ್ರತಿಮೆ ನಗರವನ್ನು ನೋಡುವ ಸ್ಥಳದಿಂದ ಮಾತನಾಡಿದ ಅವರು, ಬೈರೂತ್‌ನಲ್ಲಿ ಮತ್ತೆ ಯುದ್ಧದ ಸದ್ದು ಕೇಳಿಸುತ್ತಿರುವುದನ್ನು ದುಃಖದಿಂದ ಉಲ್ಲೇಖಿಸಿದರು. ಅದಕ್ಕೂ ಮೊದಲು ಅವರು ಕ್ಲಾಯಾ ಗ್ರಾಮದಲ್ಲಿ ಗಾಯಗೊಂಡವರನ್ನು ಸಹಾಯ ಮಾಡುವಾಗ ಸಾವಿಗೀಡಾದ ಮರೋನೈಟ್ ಯಾಜಕರು ವಂ.ಸ್ವಾಮಿ  ಪಿಯರೆ ಎಲ್ ರೈ ರವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಅದಾದ ಬಳಿಕ ಆರ್ಚ್‌ಬಿಷಪ್ ಬೋರ್ಜಿಯಾ ಮಾನವೀಯ ನೆರವಿನ ಸಾಮಗ್ರಿಗಳನ್ನು ಹೊತ್ತ ಲಾರಿಯೊಂದಿಗೆ ದಕ್ಷಿಣ ಲೆಬನಾನ್‌ನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಸಹಾಯ ವಿತರಿಸಿದರು. ಯಾಜಕರು ವಸ್ತ್ರದಲ್ಲೇ ಸ್ವತಃ ಸಾಮಗ್ರಿಗಳನ್ನು ಇಳಿಸುವ ಅವರ ಚಿತ್ರಗಳು ಮತ್ತು ವೀಡಿಯೊಗಳು ಲೆಬನಾನ್ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದವು. ಆ ದಿನ ಅವರು ಆರು ಗ್ರಾಮಗಳಿಗೆ ಭೇಟಿ ನೀಡಿ ಮರೋನೈಟ್, ಆರ್ಥಡಾಕ್ಸ್, ಗ್ರೀಕ್-ಮೆಲ್ಕೈಟ್, ಲ್ಯಾಟಿನ್ ಕ್ರೈಸ್ತರು ಹಾಗೂ ಡ್ರೂಜ್ ಮತ್ತು ಸುನ್ನಿ ಸಮುದಾಯದ ಜನರೊಂದಿಗೆ ಕೂಡ ಭೇಟಿಯಾದರು.

ಈ ಅನುಭವವನ್ನು ಅವರು ಸಹೋದರತ್ವದ ಸುಂದರ ಕ್ಷಣವೆಂದು ವಿವರಿಸಿದರು. ಒಂದು ಸಣ್ಣ ಗ್ರಾಮ ದೇವಾಲಯದಲ್ಲಿ ಪ್ರಾರ್ಥನೆ ಮಾಡುವಾಗ ಮೋರ್ಟಾರ್ ಶೆಲ್‌ಗಳು ಹಾರಿಸಲ್ಪಟ್ಟರೂ, ಸ್ಥಳೀಯರು ಹಾಸ್ಯವಾಗಿ ಇದು ನಿಮ್ಮ ಸ್ವಾಗತ ಎಂದು ಹೇಳಿದ ಸಂದರ್ಭವನ್ನೂ ಅವರು ನೆನಪಿಸಿಕೊಂಡರು. ಆ ಕಠಿಣ ಪರಿಸ್ಥಿತಿಯಲ್ಲೂ ಜನರ ನಡುವೆ ಒಗ್ಗಟ್ಟು ಮತ್ತು ಧೈರ್ಯ ಕಂಡುಬಂದಿತು ಎಂದು ಅವರು ಹೇಳಿದರು.

ಸ್ಥಳೀಯ ಜನರು ಜಗದ್ಗುರು ಹಾಗೂ ಜಗದ್ಗುರಗಳ ಅಧಿಕಾರ ಸ್ಥಳದ ಹೆಚ್ಚಿನ ವಿಶ್ವಾಸವಿಟ್ಟಿದ್ದಾರೆ ಎಂದು ಆರ್ಚ್‌ಬಿಷಪ್ ಹೇಳಿದರು. ಜನರು ವಿಶೇಷವಾಗಿ ಜಗದ್ಗುರುಗಳಿಂದ ಒಂದು ಉತ್ತೇಜನದ ಮಾತನ್ನು ಕೇಳಲು ಬಯಸುತ್ತಾರೆ ಎಂದು ಅವರು ಹೇಳಿದರು. 2025ರ ಡಿಸೆಂಬರ್‌ನಲ್ಲಿ ಬೈರೂತ್‌ಗೆ ಭೇಟಿ ನೀಡಿದ ಜಗದ್ಗುರು XIVನೇ ಲಿಯೋರವರೊಂದಿಗೆ ಜನರು ವಿಶೇಷವಾದ ನಂಟನ್ನು ಅನುಭವಿಸಿದ್ದರು ಎಂದು ಅವರು ನೆನಪಿಸಿದರು.

ಇದೇ ವೇಳೆ ಯುದ್ಧದ ಪರಿಣಾಮವಾಗಿ ರಸ್ತೆ ಮತ್ತು ಮೂಲಸೌಕರ್ಯಗಳಿಗೆ ದೊಡ್ಡ ಹಾನಿಯಾಗಿರುವುದನ್ನು ಅವರು ವಿಷಾದಿಸಿದರು. ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ನಂತರ ಆ ಪ್ರದೇಶದ ಕೆಲವು ರಸ್ತೆಗಳು ಬಾಂಬ್ ದಾಳಿಯಿಂದ ಹಾನಿಗೊಳಗಾದವು ಮತ್ತು ಕೆಲವು ಗ್ರಾಮಗಳು ಸಂಪೂರ್ಣವಾಗಿ ಸಂಪರ್ಕದಿಂದ ಕಡಿತಗೊಂಡಿವೆ ಎಂದು ಅವರು ಹೇಳಿದರು. ದಕ್ಷಿಣ ಭಾಗದ ಸಂಚಾರ ಮಾರ್ಗಗಳನ್ನೂ ನಿಧಾನವಾಗಿ ಮುಚ್ಚಲಾಗುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ಕೊನೆಗೆ, ಹಿಜ್ಬೊಲ್ಲಾ ಕ್ಷಿಪಣಿ ದಾಳಿಗಳು ಮತ್ತು ಇಸ್ರೇಲ್‌ನ ಪ್ರತಿದಾಳಿಗಳಿಂದ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು. ಲಕ್ಷಾಂತರ ಜನರು ಸರ್ಕಾರದ ನೆರವಿಗಾಗಿ ನೋಂದಾಯಿಸಿಕೊಂಡಿದ್ದು, ಹಲವರು ಆಶ್ರಯ ಕೇಂದ್ರಗಳಲ್ಲಿ ಭಯಭೀತ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಯುದ್ಧ ಬೇಗ ಅಂತ್ಯಗೊಂಡು ಶಾಂತಿ ಮರಳಲಿ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

14 ಮಾರ್ಚ್ 2026, 14:57