“ಉಕ್ರೇನ್ ಕುರಿತು ಕೇವಲ ಶಸ್ತ್ರಾಸ್ತ್ರಗಳ ಮೂಲಕ ಹೇರಲಾಗುವ ಶಾಂತಿ ನಿಜವಾದ ಶಾಂತಿಯಲ್ಲ", ಎಂದು ಕಾರ್ಡಿನಲ್ ಜುಪ್ಪಿ ಹೇಳಿದರು.
ವ್ಯಾಟಿಕನ್ ವರದಿ
ಕಾರ್ಡಿನಲ್ ಜುಪ್ಪಿ ರವರು ವಿಶ್ವದ ವಿವಿಧ ಭಾಗಗಳಿಂದ ಬಂದ ಯಾತ್ರಿಕರು ಮತ್ತು ಉಕ್ರೇನ್ ಸಮುದಾಯದ ಪ್ರತಿನಿಧಿಗಳ ಮುಂದೆ ಮಾತನಾಡುತ್ತಾ, ಅಸ್ಸಿಸಿಯ ಸಂತ ಫ್ರಾನ್ಸಿಸ್ ಇಂದಿಗೂ ಎಲ್ಲರನ್ನು ಸಹೋದರರೆಂದು ಕಾಣುವ ವ್ಯಕ್ತಿಯಾಗಿದ್ದಾರೆ ಎಂದು ನೆನಪಿಸಿದರು. ಅವರಂತೆ ವಿಶ್ವಮಾನವೀಯ ಹೃದಯ ಹೊಂದಿದರೆ ಮಾತ್ರ ಯುದ್ಧದ ಅಂತ್ಯಕ್ಕಾಗಿ ನಾವು ಪ್ರಾರ್ಥಿಸಬಹುದು ಎಂದು ಅವರು ಹೇಳಿದರು. ಇಂತಹ ಕಷ್ಟಕರ ಸಮಯದಲ್ಲಿ ಜಗತ್ತಿಗೆ ಬೆಳಕು ಮತ್ತು ನಿರೀಕ್ಷೆ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
2026ರಲ್ಲಿ ಉಕ್ರೇನ್ ಯುದ್ಧ ಆರಂಭವಾಗಿ ನಾಲ್ಕು ವರ್ಷಗಳು ಪೂರ್ಣಗೊಂಡಿವೆ. ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಸಾವಿರಾರು ಯಾತ್ರಿಕರೊಂದಿಗೆ ಮಾತನಾಡಿದ ಕಾರ್ಡಿನಲ್ ಜುಪ್ಪಿರವರು, ಇಂದು ನಾವು ಕೇಳುತ್ತಿರುವುದು “ಎಲ್ಲರಿಗೂ ಶಾಂತಿ” ಎಂಬುದೇ ಎಂದು ಹೇಳಿದರು. ನಿಜವಾದ ಶಾಂತಿಯನ್ನು ನಾವು ಒಟ್ಟಾಗಿ ಹುಡುಕಿ ಕಾಪಾಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸಂತ ಫ್ರಾನ್ಸಿಸ್ ರವರ ಜೀವನವನ್ನು ಉಲ್ಲೇಖಿಸಿ, ಅವರು ಪ್ರೀತಿ ಮಾಡಲು ಇರುವ ಸ್ವಾತಂತ್ರ್ಯ ಮತ್ತು ಸ್ವಾರ್ಥವಿಲ್ಲದ ಪ್ರೀತಿಯ ಬಂಧನವೇ ಜೀವನದ ಮುಖ್ಯ ಅರ್ಥವನ್ನು ನಮಗೆ ಕಲಿಸುತ್ತದೆ ಎಂದು ಕಾರ್ಡಿನಲ್ ಹೇಳಿದರು. ಅವರ ಸಂದೇಶದಿಂದ ನಾವು ಎಲ್ಲರೂ ಸಹೋದರರು ಮತ್ತು ಸಹೋದರಿಯರಂತೆ ಬದುಕಲು ಪ್ರೇರೇಪಿತರಾಗುತ್ತೇವೆ ಯುದ್ಧವು ಸಹೋದರರ ನಡುವಿನ ಹಿಂಸೆಯೇ ಆಗಿದೆ ಎಂದು ಅವರು ಹೇಳಿದರು.
ಕಾರ್ಡಿನಲ್ ಜುಪ್ಪಿರವರು ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿ, ಅನೇಕ ಯುದ್ಧಗಳು ಮತ್ತು ಸಮಾಜದ ಒಳಗಿನ ವಿಭಜನೆಗಳಿಂದ ಕೂಡಿದ ಈ ಕಾಲದಲ್ಲಿಯೂ ಸಂತ ಫ್ರಾನ್ಸಿಸ್ ರವರು ಶಾಂತಿಯ ನಿಜವಾದ ಮೂಲವನ್ನು ನಮಗೆ ತೋರಿಸುತ್ತಾರೆ ಎಂದು ಹೇಳಿದರು. ಯುದ್ಧದ ತತ್ವವನ್ನು ನಾವು ಹೇಗೆ ಒಪ್ಪಿಕೊಳ್ಳಬಹುದು ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.
ಸಂತ VIನೇ ಪೌಲ್ ರವರ ಮಾತುಗಳನ್ನು ಉಲ್ಲೇಖಿಸಿ, ಕೇವಲ ಶಕ್ತಿ ಮತ್ತು ಬಲದಿಂದ ಹೇರಲ್ಪಡುವ ಶಾಂತಿ ನಿಜವಾದ ಶಾಂತಿಯಲ್ಲ ಎಂದು ಹೇಳಿದರು. ನಗರಗಳನ್ನು ಸಂಪೂರ್ಣವಾಗಿ ನಾಶಮಾಡುವ ಯುದ್ಧ ಕ್ರಮಗಳು ದೇವರಿಗೂ ಮಾನವಕುಲಕ್ಕೂ ವಿರೋಧವಾದ ಅಪರಾಧಗಳಾಗಿವೆ ಎಂದು ಅವರು ತಿಳಿಸಿದರು. ಆದ್ದರಿಂದ ಬಾಂಬ್‌ಗಳ ಶಬ್ದ ನಿಲ್ಲಬೇಕು, ಆಯುಧಗಳು ಮೌನವಾಗಬೇಕು ಮತ್ತು ಸಂವಾದದ ದಾರಿಗಳು ತೆರೆಯಬೇಕು ಎಂದು ಅವರು ಪ್ರಾರ್ಥಿಸಿದರು.
ಕಾರ್ಯಕ್ರಮದ ನಂತರ ಜನರು ಸಂತ ಫ್ರಾನ್ಸಿಸ್ ರವರ ಅವಶೇಷಗಳ ಮುಂದೆ ಪ್ರಾರ್ಥನೆ ಮಾಡಲು ಮೆರವಣಿಗೆಯಲ್ಲಿ ಭಾಗವಹಿಸಿದರು. ಯುದ್ಧ ಮತ್ತು ನೋವಿನಿಂದ ಗಾಯಗೊಂಡಿರುವ ಇಂದಿನ ಜಗತ್ತಿಗೆ ಶಾಂತಿ ದೊರಕಲೆಂದು ಎಲ್ಲರೂ ಕ್ರಿಸ್ತನ ಶಿಲುಬೆಯ ಮುಂದೆ ಪ್ರಾರ್ಥಿಸಿದರು. ಮುಂದಿನ ಶಾಂತಿ ಪ್ರಾರ್ಥನಾ ಕಾರ್ಯಕ್ರಮವು ಮಾರ್ಚ್ 15ರಂದು ರೋಮಿನ ಸಂತ ಸೋಫಿಯಾದ ಬಸಿಲಿಕಾದಲ್ಲಿ ನಡೆಯುವ “ವಿಯಾ ಕ್ರೂಸಿಸ್” ಆಗಿರುತ್ತದೆ.