ಕಾರ್ಡಿನಲ್ ಪಾರೊಲಿನ್: ದೇವರು ಶಸ್ತ್ರಾಸ್ತ್ರಗಳನ್ನು ಮೌನಗೊಳಿಸಿ ಮಾನವಕುಲವನ್ನು ಸಮಾಧಾನಗೊಳಿಸಲಿ
ವ್ಯಾಟಿಕನ್ ವರದಿ
ಇಟಲಿಯ ಸೈನಿಕ ಆರ್ಡಿನರಿಯೇಟ್ ಶತಮಾನೋತ್ಸವದ ಅಂಗವಾಗಿ ಪವಿತ್ರ ಬಲಿಪೂಜೆ.
ಮಾರ್ಚ್ 3ರಂದು ರೋಮ್‌ನ ಸಂತ ಪೌಲರ ಬಸಿಲಿಕಾದಲ್ಲಿ, ಇಟಲಿಯ ಸೈನಿಕ ಆರ್ಡಿನರಿಯೇಟ್‌ನ ಶತಮಾನೋತ್ಸವ ಆಚರಣೆಯ ಭಾಗವಾಗಿ ರಾಜ್ಯ ಕಾರ್ಯದರ್ಶಿ ಪಿಯೇತ್ರೋ ಪಾರೋಲಿನ್ ರವರ ಅಧ್ಯಕ್ಷತೆಯಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. 1926ರಲ್ಲಿ ಸ್ಥಾಪಿತವಾದ ಈ ಆರ್ಡಿನರಿಯೇಟ್ ಇಟಲಿಯ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಾರ್ಗದರ್ಶನ ನೀಡುವ ಉದ್ದೇಶದಿಂದ ಆರಂಭಿಸಲಾಯಿತು. ಕರಾಬಿನಿಯೇರಿ, ಇಟಾಲಿಯನ್ ಸೇನೆ, ಗಾರ್ಡಿಯಾ ದಿ ಫಿನಾಂಝಾ, ವಾಯುಪಡೆ ಮತ್ತು ನೌಕಾಪಡೆಯ ಸದಸ್ಯರು ಈ ಬಲಿಪೂಜೆಯಲ್ಲಿ ಭಾಗವಹಿಸಿದರು.
ತಮ್ಮ ಪ್ರಭೋಧನೆಯಲ್ಲಿ ಕಾರ್ಡಿನಲ್ ಪಾರೊಲಿನ್ ರವರು ಶಾಂತಿಗಾಗಿ ಪ್ರಾರ್ಥಿಸಿ, ಈ ಕಾಲಘಟ್ಟದಲ್ಲಿ ನಾವು ಎಲ್ಲರೂ ತಿಳಿದಿರುವ ಪರಿಸ್ಥಿತಿಯಲ್ಲಿ, ದೇವರು ಶಸ್ತ್ರಾಸ್ತ್ರಗಳನ್ನು ಮೌನಗೊಳಿಸಿ ಮಾನವಕುಲವನ್ನು ಸಮಾಧಾನಗೊಳಿಸಲಿ ಎಂದು ವಿನಂತಿಸಿದರು. ಸುವಾರ್ತೆಯ ಬೆಳಕಿನಲ್ಲಿ ಫರಿಸಾಯರ ವರ್ತನೆಯನ್ನು ವಿಶ್ಲೇಷಿಸುತ್ತಾ, ಸೈನಿಕ ಪರಿಸರದಲ್ಲಿ ಸೇವೆ ಮಾಡುವ ಚಾಪ್ಲೇನ್‌ಗಳ ಸೇವೆ ವಿನಮ್ರತೆ, ಸತತತೆ ಮತ್ತು ಸೇವಾಭಾವದಿಂದ ಕೂಡಿರಬೇಕು ಎಂದು ಹೇಳಿದರು.
ಶಿಲುಬೆಯ ತತ್ತ್ವವೇ ಕ್ರೈಸ್ತ ಅಧಿಕಾರದ ಮಾದರಿ ಎಂದು ಅವರು ಒತ್ತಿಹೇಳಿದರು. ಜಗತ್ತಿನಾದ್ಯಂತ ನಡೆಯುತ್ತಿರುವ ಸಂಘರ್ಷಗಳು ಮತ್ತು ರಾಜಕೀಯ ಉದ್ವಿಗ್ನತೆಗಳ ನಡುವೆಯೂ, ಧರ್ಮ ಸಭೆ ಶಾಂತಿಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಇದು ದೌರ್ಬಲ್ಯವಲ್ಲ, ಬದಲಾಗಿ ನ್ಯಾಯ, ಸಂವಾದ ಮತ್ತು ಹಕ್ಕುಗಳ ರಕ್ಷಣೆಯನ್ನು ಸಹನಶೀಲತೆಯಿಂದ ಕಟ್ಟಿಕೊಳ್ಳುವ ಪ್ರಕ್ರಿಯೆ ಎಂದು ವಿವರಿಸಿದರು.
ಚಾಪ್ಲೇನ್‌ಗಳ ಕರ್ತವ್ಯವು ಮೌನ ಸತತತೆಯಾಗಿರಬೇಕು ತೀರ್ಪು ನೀಡದೆ ಕೇಳುವುದು, ಹಸ್ತಕ್ಷೇಪಿಸದೆ ಬೆಂಬಲಿಸುವುದು, ನೀತಿಪಾಠದ ಧೋರಣೆ ಇಲ್ಲದೆ ದೇವರ ಬಗ್ಗೆ ಮಾತನಾಡುವುದು. ಈಗಾಗಲೇ ಕಠಿಣ ಶಿಸ್ತು ಮತ್ತು ಹೊಣೆಗಾರಿಕೆಯಿಂದ ಗುರುತಿಸಲ್ಪಟ್ಟ ಸೈನಿಕ ಜೀವನದಲ್ಲಿ, ಧರ್ಮ ಸಭೆ ಹೆಚ್ಚುವರಿ ಭಾರವಾಗದೆ, ಆತ್ಮಶಾಂತಿಯ ಸ್ಥಳವಾಗಿರಬೇಕು ಎಂದು ಹೇಳಿದರು.
ವ್ಯಕ್ತಿಯ ಅಂತಃಕರಣವೇ ಅತ್ಯಂತ ಪವಿತ್ರವಾದ ಸ್ಥಳ ಎಂದು ಗೌಡಿಯಂ ಎಟ್ ಸ್ಪೆಸ್ ಉಲ್ಲೇಖಿಸುತ್ತಾ ಅವರು ನೆನಪಿಸಿದರು. ಸೈನಿಕರ ಜೀವನದಲ್ಲಿ ಅಪಾಯ, ತ್ಯಾಗ ಮತ್ತು ದೂರ ವಾಸದ ಕಷ್ಟಗಳ ನಡುವೆ, ಚಾಪ್ಲೇನ್‌ಗಳ ಸಾನ್ನಿಧ್ಯ ಧರ್ಮ ಸಭೆಯ ತಾಯಿತನದ ಸ್ಪಷ್ಟ ಸಂಕೇತವಾಗುತ್ತದೆ. ಎಲ್ಲ ಪರಿಸ್ಥಿತಿಗಳಲ್ಲೂ ಮಾನವ ಗೌರವವನ್ನು ಕಾಪಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಕೊನೆಯಲ್ಲಿ, ಕ್ರಿಸ್ತನ ಉಪದೇಶದಂತೆ ನಿಮ್ಮಲ್ಲಿ ದೊಡ್ಡವನು ನಿಮ್ಮ ಸೇವಕನಾಗಿರಲಿ ಎಂಬ ತತ್ತ್ವವನ್ನು ಸ್ಮರಿಸಿದರು. ಹಿಂಸೆಯನ್ನು ಜಯಿಸಿದ ಪ್ರಭು ನಿಮ್ಮ ಸೇವೆಯನ್ನು ನ್ಯಾಯ ಮತ್ತು ಶಾಂತಿಯ ನಂಬಬಹುದಾದ ಸಂಕೇತವನ್ನಾಗಿಸಲಿ ಎಂದು ಪ್ರಾರ್ಥಿಸಿದರು. ಇಟಲಿಯ ಸೈನಿಕ ಆರ್ಡಿನರಿ ಜಿಯಾನ್ ಫ್ರಾಂಕೊ ಸಬಾ ಕೂಡ ಮಾತನಾಡಿ, ಜಗತ್ತಿನ ಸಂಘರ್ಷಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಮತ್ತು ಅವರ ಕುಟುಂಬಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.