ಹುಡುಕಿ

ಕಾಡಿ೯ನಲ್ ಪರೋಲಿನ್ ರವರು ಕಾಡಿ೯ನಲ್ ಪರೋಲಿನ್ ರವರು  

ಕಾರ್ಡಿನಲ್ ಪಾರೋಲಿನ್: ಯುವಕರಲ್ಲಿ ಹೂಡಿಕೆ ಮಾಡಿ ಅವರು ‘ಬಲಿಯಾಗುವವರಾಗುವುದನ್ನು’ ತಡೆಯಿರಿ.

ಕಾರ್ಡಿನಲ್ ಪಿಯೆತ್ರೋ ಪರೋಲಿನ್ ರವರು ರೋಮ್ ಸಮೀಪದ ಸ್ಯಾಕ್ರೊಫಾನೊ ಪಟ್ಟಣದಲ್ಲಿ ನಡೆದ ಆತಿಥ್ಯದ ಮಠ ಸಭೆಯಲ್ಲಿ ಮಾತನಾಡುತ್ತಾ, ಇಂದಿನ ಯುವಕರು ಎದುರಿಸುತ್ತಿರುವ ಅಪಾಯಗಳನ್ನು ಉಲ್ಲೇಖಿಸಿದರು. ಯುದ್ಧ, ಅತಿರೇಕವಾದ, ವಲಸೆ ಸಮಸ್ಯೆಗಳು ಮತ್ತು ಕಡಿಮೆಯಾಗುತ್ತಿರುವ ಜನನ ಪ್ರಮಾಣ ಸೇರಿದಂತೆ ಹಲವಾರು ಸವಾಲುಗಳು ಯುವಕರ ಜೀವನವನ್ನು ಪ್ರಭಾವಿಸುತ್ತಿವೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

 ಕಾರ್ಡಿನಲ್ ಪಿಯೆತ್ರೋ ಪರೋಲಿನ್ ರವರು ರೋಮ್ ಸಮೀಪದ ಸ್ಯಾಕ್ರೊಫಾನೊದಲ್ಲಿ ನಡೆದ ಆತಿಥ್ಯದ ಮಠ ಎಂಬ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಬಂಧಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಂಟಿಫಿಕಲ್ ಲ್ಯಾಟರನ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ “ಯುವಕರು ಮತ್ತು ಧರ್ಮ ಸಭೆ ಸೇರಿಕೊಂಡಿರುವ ಭಾವನೆಯನ್ನು ಬೆಳೆಸುವ ಆತಿಥ್ಯ ಎಂಬ ವಿಷಯದ ಮೇಲೆ ಸಂವಾದ ಮತ್ತು ಚಿಂತನೆ ನಡೆಸಲಾಯಿತು.

ಕಾರ್ಡಿನಲ್ ಪಾರೋಲಿನ್ ರವರು ಇಂದಿನ ಯುವಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ಯುದ್ಧಗಳು, ಅತಿರೇಕವಾದ, ವಲಸೆ ಸಮಸ್ಯೆಗಳು ಮತ್ತು ಉದ್ಯೋಗದ ಕೊರತೆ ಕಾರಣದಿಂದ ಯುವಕರು ಸುಲಭವಾಗಿ ಅತಿರೇಕಿ ಚಿಂತನೆಗಳ ಬಲಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಅವಕಾಶಗಳ ಕೊರತೆಯಿಂದ ಕೆಲವರು ವಾಸ್ತವಿಕ ಜೀವನದಿಂದ ದೂರಾಗಿ ಆನ್‌ಲೈನ್ ಅಥವಾ ವರ್ಚುವಲ್ ಲೋಕದಲ್ಲಿ ಆಶ್ರಯ ಹುಡುಕುತ್ತಿರುವುದನ್ನೂ ಅವರು ಉಲ್ಲೇಖಿಸಿದರು.

ಇದಕ್ಕೆ ಜೊತೆಗೆ ವಲಸೆ ಮತ್ತು ಕಡಿಮೆಯಾಗುತ್ತಿರುವ ಜನನ ಪ್ರಮಾಣವೂ ದೊಡ್ಡ ಸವಾಲುಗಳಾಗಿವೆ ಎಂದು ಅವರು ಹೇಳಿದರು. ಯುದ್ಧ ಮತ್ತು ಭವಿಷ್ಯದ ಭಯದಿಂದ ಹಲವಾರು ಯುವಕರು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ. ಒಂದು ಮಗುವನ್ನು ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಭಾರವಾಗಿ ನೋಡಲು ಆರಂಭಿಸಿದರೆ ಭವಿಷ್ಯದಲ್ಲಿ ಹೊಸ ಜೀವಗಳಿಗೆ ಅವಕಾಶ ಕಡಿಮೆಯಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕಾರ್ಡಿನಲ್ ಪಾರೋಲಿನ್ ರವರು ಯುವಕರಿಗೆ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳನ್ನು ಒದಗಿಸುವುದು ಅತ್ಯಂತ ಅಗತ್ಯವೆಂದು ಹೇಳಿದರು. ಈ ಅವಕಾಶಗಳಿಲ್ಲದಾಗ ಯುವಕರು ಅತಿರೇಕಿ ಗುಂಪುಗಳ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಇಂದಿನ ಅನೇಕ ಯುದ್ಧಗಳಲ್ಲಿ, ವಿಶೇಷವಾಗಿ ಆಫ್ರಿಕಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ, ಯುದ್ಧಕ್ಕೆ ಹೋಗುವವರಲ್ಲಿ ಹೆಚ್ಚಿನವರು ಯುವಕರೇ ಎಂಬುದನ್ನು ಅವರು ಗಮನಿಸಿದರು.

ಅದರೊಂದಿಗೆ, ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಯುವಕರಿಗೆ ಹೆಚ್ಚಿನ ಸ್ಥಾನ ನೀಡಬೇಕು ಎಂದು ಅವರು ಒತ್ತಿಹೇಳಿದರು. ಭವಿಷ್ಯವು ಅವರದ್ದಾಗಿರುವುದರಿಂದ ಮಾತ್ರವಲ್ಲ, ಸಮಸ್ಯೆಗಳ ಪರಿಹಾರದಲ್ಲೂ ಅವರಿಂದ ಹೊಸ ಆಲೋಚನೆಗಳು ಬರಬಹುದು ಎಂದು ಅವರು ಹೇಳಿದರು.

ಕೊನೆಯಲ್ಲಿ, ಧರ್ಮ ಸಭೆ ಯುವಕರೊಂದಿಗೆ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು ಮೊದಲನೆಯದಾಗಿ ಅವರನ್ನು ಗಮನದಿಂದ ಕೇಳಬೇಕು, ಮತ್ತು ಎರಡನೆಯದಾಗಿ ಅವರ ಜೀವನದ ಸವಾಲುಗಳಲ್ಲಿ ಜೊತೆಗಿರಬೇಕು. ಕುಟುಂಬ, ಶಾಲೆ ಮತ್ತು ಧರ್ಮ ಕೇಂದ್ರದ ಮೂಲಕ ಕ್ರೈಸ್ತ ಮೌಲ್ಯಗಳನ್ನು ಯುವಕರಿಗೆ ನೀಡುವುದು ಬಹಳ ಮುಖ್ಯವಾಗಿದ್ದು, ಈ ಮೂಲಕ ಅವರು ಭವಿಷ್ಯದ ಶಾಂತಿಯ ಸಮಾಜವನ್ನು ನಿರ್ಮಿಸಲು ಪ್ರಮುಖ ಪಾತ್ರವಹಿಸಬಹುದು ಎಂದು ಕಾರ್ಡಿನಲ್ ಪಾರೋಲಿನ್ ಹೇಳಿದರು.

11 ಮಾರ್ಚ್ 2026, 17:03