2026.03.09 Global Alliance Laudato Si

“ಲೌದಾತೋ ಸಿ’ ಗ್ರಾಮದಲ್ಲಿ ಪರಿಸರ ಪ್ರತಿನಿಧಿಗಳು ಜಾಗತಿಕ ಮೈತ್ರಿಯನ್ನು ಪ್ರಾರಂಭಿಸಿದರು.

ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ ಮತ್ತು ನೊಟ್ರೆ ಡೇಮ್ ವಿಶ್ವವಿದ್ಯಾಲಯ ಒಟ್ಟಾಗಿ ವಿಶ್ವದ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ಶೈಕ್ಷಣಿಕ ತಜ್ಞರು ಮತ್ತು ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಸಮಗ್ರ ಪರಿಸರಶಾಸ್ತ್ರ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಜ್ಞಾನ, ಅನುಭವ ಹಾಗೂ ಉತ್ತಮ ಕಾರ್ಯಪದ್ದತಿಗಳನ್ನು ಪರಸ್ಪರ ಹಂಚಿಕೊಳ್ಳುವ ಪ್ರಯತ್ನವನ್ನು ನಡೆಸಿವೆ.

ವ್ಯಾಟಿಕನ್ ವರದಿ

ಲೌದಾತೋ ಸಿ ಹಳ್ಳಿಯಲ್ಲಿ ನಡೆದ ಸಭೆಯಲ್ಲಿ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ 60 ಕ್ಕೂ ಹೆಚ್ಚು ಪ್ರತಿನಿಧಿಗಳು ಮಾರ್ಚ್ 9 ರಂದು ಸೇರಿ “ಜಾಗತಿಕ ಒಕ್ಕೂಟ” ಎಂಬ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಿದರು. ಇದರ ಉದ್ದೇಶ ಸಮಗ್ರ ಪರಿಸರಶಾಸ್ತ್ರ ಮತ್ತು ಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಜಗತ್ತಿನ ವಿವಿಧ ಕ್ಷೇತ್ರಗಳವರನ್ನು ಒಗ್ಗೂಡಿಸುವುದಾಗಿದೆ. ಈ ಕಾರ್ಯಕ್ರಮವು ಜಗದ್ಗುರುಗಳ ತೋಟಗಳ ಸುಂದರ ಪರಿಸರದಲ್ಲಿ, ಪ್ರಕೃತಿ ಮತ್ತು ಕೃಷಿ ಪ್ರಾಣಿಗಳ ನಡುವೆ ನಡೆಯಿತು.

ಈ ಉಪಕ್ರಮದ ಮೂಲ ಉದ್ದೇಶವೆಂದರೆ ಲೌದಾತೋ ಸಿ ಎಂಬ ದಸ್ತಾವೇಜಿನಲ್ಲಿ ವಿವರಿಸಿದ ತತ್ವಗಳನ್ನು ಶಿಕ್ಷಣ, ವಲಯಾಕಾರದ ಆರ್ಥಿಕತೆ ಮತ್ತು ಪರಿಸರ ಸ್ನೇಹಿ ಕಾರ್ಯಾಚರಣೆಗಳ ಮೂಲಕ ಜೀವನದಲ್ಲಿ ಜಾರಿಗೆ ತರುವುದು. ಈ ಕಾರ್ಯಕ್ರಮವನ್ನು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ ಮತ್ತು ನೊಟ್ರೆ ಡೇಮ್ ವಿಶ್ವವಿದ್ಯಾಲಯ ಒಟ್ಟಾಗಿ ಆಯೋಜಿಸಿವೆ. ಸಭೆಯಲ್ಲಿ ಸಮಗ್ರ ಪರಿಸರಶಾಸ್ತ್ರದ ನಾಯಕತ್ವ, ಹವಾಮಾನ ನ್ಯಾಯತೆ ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಈ ಕಾರ್ಯಕ್ರಮದ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ಫ್ಯಾಬಿಯೊ ಬ್ಯಾಗಿಯೊರವರು, ಸಮಗ್ರ ಪರಿಸರಶಾಸ್ತ್ರದ ವಿಷಯದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವಿವಿಧ ಸಂಸ್ಥೆಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಒಂದೇ ವೇದಿಕೆಯಲ್ಲಿ ಸೇರುವುದು ಅಗತ್ಯವೆಂದು ಹೇಳಿದರು. ಈ ಸಹಕಾರದಿಂದ ಮುಂದಿನ ಸಂಶೋಧನೆಗಳು ಮತ್ತು ನೈಜ ಕಾರ್ಯಚಟುವಟಿಕೆಗಳಿಗೆ ಹೊಸ ಆಲೋಚನೆಗಳು ಬೆಳೆಯಲಿವೆ ಎಂದು ಅವರು ಹೇಳಿದರು.

ಅವರು ಇನ್ನೂ ಹೇಳಿದ್ದು, ಈ ಚರ್ಚೆಗಳು ಕೇವಲ ಮಾತುಕತೆಯಲ್ಲದೆ ಪ್ರಾಯೋಗಿಕ ಕಾರ್ಯಗಳಲ್ಲಿ ಪರಿವರ್ತಿಸಬೇಕು. ಸಂಸ್ಥೆಗಳು ಪರಿಸರ ಪರಿವರ್ತನೆಯ ಮಾದರಿಗಳನ್ನು ಜಾರಿಗೆ ತಂದು ಜನರು ನೇರವಾಗಿ ನೋಡಬಹುದಾದ ಮತ್ತು ಅನುಭವಿಸಬಹುದಾದ ರೀತಿಯಲ್ಲಿ ಪರಿಸರ ಕಾಳಜಿಯನ್ನು ತೋರಿಸಬೇಕು. ಈ ದೃಷ್ಟಿಯಿಂದ ಲೌದಾತೋ ಸಿ’ ಗ್ರಾಮವು ಈ ತತ್ವಗಳನ್ನು ಕಾರ್ಯರೂಪಕ್ಕೆ ತರುವ ಒಂದು ಉತ್ತಮ ಮಾದರಿಯಾಗಿದೆ.

ಅಲೆಸ್ಸಾಂಡ್ರಾ ಸ್ಮೆರಿಲ್ಲಿರವರು, ಈ ಸಭೆಯಲ್ಲಿ ವಿವಿಧ ದೇಶಗಳಿಂದ ಬಂದ ತಜ್ಞರು ಒಂದೇ ಗುರಿಯೊಂದಿಗೆ ಸೇರಿದ್ದಾರೆ ಎಂದು ಹೇಳಿದರು. ಅವರ ಗುರಿ ಉತ್ತಮ ಆಲೋಚನೆಗಳು ಮತ್ತು ಉತ್ತಮ ಕಾರ್ಯಪದ್ದತಿಗಳನ್ನು ಹಂಚಿಕೊಂಡು ಲೌದಾತೋ ಸಿ’ ತತ್ವಗಳ ಪ್ರಕಾರ ಬದುಕುವ ಮಾರ್ಗವನ್ನು ಪ್ರೋತ್ಸಾಹಿಸುವುದು. ಇದು ಜಗತ್ತನ್ನು ಬದಲಾಯಿಸುವ ಒಂದು ಮಹತ್ವದ ಆರಂಭವಾಗಬಹುದು ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಅದರ ಜೊತೆಗೆ, ಡೇನಿಯಲ್ ಗ್ರೂಡಿರವರು ವಿಶ್ವವಿದ್ಯಾಲಯಗಳು ಧರ್ಮ ಸಭೆಗೆ ಸೇವೆ ಸಲ್ಲಿಸುವಲ್ಲಿ ಮಹತ್ವದ ಪಾತ್ರವಹಿಸಬಹುದು ಎಂದು ಹೇಳಿದರು. ಪರಿಸರ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಗಳು ಸಂಕೀರ್ಣವಾಗಿರುವುದರಿಂದ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಜಗತ್ತನ್ನು ಹೆಚ್ಚು ನ್ಯಾಯಸಮ್ಮತ ಮತ್ತು ಸ್ಥಿರವಾದ ಸ್ಥಳವನ್ನಾಗಿ ಮಾಡಬಹುದು ಎಂದು ಅವರು ಹೇಳಿದರು.

09 ಮಾರ್ಚ್ 2026, 19:43