ಹುಡುಕಿ

ಜೂನ್ 2023 ರಲ್ಲಿ ಕಾರ್ಡಿನಲ್ ಕ್ರೇಜೆವ್ಸ್ಕಿಯವರ ಭೇಟಿಯ ಸಮಯದಲ್ಲಿ ಖೆರ್ಸನ್‌ನಲ್ಲಿರುವ ಒಗ್ಗಟ್ಟಿನ ಅಡುಗೆಮನೆ ಮತ್ತು ಊಟದ ಹಾಲ್. ಜೂನ್ 2023 ರಲ್ಲಿ ಕಾರ್ಡಿನಲ್ ಕ್ರೇಜೆವ್ಸ್ಕಿಯವರ ಭೇಟಿಯ ಸಮಯದಲ್ಲಿ ಖೆರ್ಸನ್‌ನಲ್ಲಿರುವ ಒಗ್ಗಟ್ಟಿನ ಅಡುಗೆಮನೆ ಮತ್ತು ಊಟದ ಹಾಲ್. 

ಉಕ್ರೇನ್: ಖೆರ್ಸೋನ್‌ನಲ್ಲಿ ಡ್ರೋನ್ ದಾಳಿಗಳ ಮಧ್ಯೆ ಜಗದ್ಗುರುಗಳ ಬೆಂಬಲಿತ ಸಾಮಾಜಿಕ ಅಡುಗೆಮನೆ ನೆರವು ನೀಡುತ್ತಿದೆ

ವಂ.ಸ್ವಾಮಿ ಮೈಖೈಲೊ ರೊಮಾನೋವ್ ಎಂಬ ಡೊಮಿನಿಕನ್ ಧರ್ಮಗುರು, ಯುದ್ಧದಿಂದ ತೀವ್ರವಾಗಿ ಹಾನಿಗೊಂಡಿರುವ ನಗರಗಳಲ್ಲಿ ಒಂದಾದ ಖೆರ್ಸನ್, ಉಕ್ರೇನ್ ನಲ್ಲಿ ಒಂದು ಸಾಮಾಜಿಕ ಅಡುಗೆಮನೆಯ ಮೂಲಕ ನೆರವು ಒದಗಿಸಲು ನಿಯಮಿತವಾಗಿ 500 ಕಿಲೋಮೀಟರ್‌ಗಿಂತ ಹೆಚ್ಚು ದೂರವನ್ನು ಪ್ರಯಾಣಿಸುತ್ತಿದ್ದಾರೆ. ಇತ್ತೀಚೆಗೆ ಕಾರ್ಡಿನಲ್ ತಿಮೋತಿ ರಾಡ್ಕ್ಲಿಫ್ ರವರ ಭೇಟಿ, ನಿರಂತರ ಬಾಂಬ್ ದಾಳಿಗಳ ನಡುವೆಯೂ ಅಲ್ಲಿನ ಸಮುದಾಯಕ್ಕೆ ಧೈರ್ಯ, ಬೆಂಬಲ ಮತ್ತು ಸಹಾಯವನ್ನು ನೀಡುವ ಮಹತ್ವದ ಸಂಕೇತವಾಗಿ ಪರಿಣಮಿಸಿದೆ.

ವ್ಯಾಟಿಕನ್ ವರದಿ

ಉಕ್ರೇನ್‌ನ ಖೆರ್ಸನ್ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಡೊಮಿನಿಕನ್ ಧರ್ಮಗುರು ವಂ.ಸ್ವಾಮಿ ಮೈಖೈಲೊ ರೊಮಾನೋವ್  ಯುದ್ಧದ ಮಧ್ಯೆಯಲ್ಲೂ ಜನರಿಗೆ ನೆರವಾಗಲು ಸುಮಾರು 500 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸುತ್ತಿದ್ದಾರೆ. ಫಾಸ್ಟಿವ್ ನಗರದಲ್ಲಿರುವ ಸ್ಯಾನ್ ಮಾರ್ಟಿನೊ ಡಿ ಪೊರೆಸ್ ಕೇಂದ್ರದ ನಿರ್ದೇಶಕರಾಗಿರುವ ಅವರು ಖೆರ್ಸೋನ್‌ನಲ್ಲಿ ಸಾಮಾಜಿಕ ಅಡುಗೆಮನೆ ಮತ್ತು ವಿವಿಧ ಮಾನವೀಯ ಯೋಜನೆಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯಗಳಿಗೆ ಜಗದ್ಗುರು XIVನೇ ಲಿಯೋರವರ ಬೆಂಬಲವು ಕಾರ್ಡಿನಲ್ ಕೊನ್ರಾಡ್ ಕ್ರೇಜೆವ್ಸ್ಕಿ ರವರ ಮೂಲಕ ದೊರೆಯುತ್ತಿದೆ.

ಇತ್ತೀಚೆಗೆ ಕಾರ್ಡಿನಲ್ ತಿಮೋತಿ ರಾಡ್ಕ್ಲಿಫ್ ಉಕ್ರೇನ್‌ಗೆ ಭೇಟಿ ನೀಡಿ ಈ ಸೇವಾ ಕಾರ್ಯಗಳನ್ನು ಸಮೀಪದಿಂದ ನೋಡಿದರು. ಅವರ ಉಪಸ್ಥಿತಿ ಜನರಿಗೆ ಭರವಸೆಯ ಸಂಕೇತವಾಗಿದ್ದು, ಅವರು ಸ್ಥಳೀಯ ಜನರನ್ನು ಭೇಟಿಯಾಗಿ ಅವರಿಂದಲೇ ಬಹಳವನ್ನು ಕಲಿಯುತ್ತಿದ್ದೇನೆ ಎಂದು ಕಣ್ಣೀರಿನಿಂದ ಹೇಳಿದ್ದಾರೆ ಎಂದು ವಂ. ಸ್ವಾಮಿ ರೊಮಾನಿವ್ ತಿಳಿಸಿದ್ದಾರೆ. ಖೆರ್ಸೋನ್ ಉಕ್ರೇನ್‌ನ ಅತ್ಯಂತ ಬಾಂಬ್ ದಾಳಿಗೆ ಒಳಗಾಗುವ ನಗರಗಳಲ್ಲಿ ಒಂದಾಗಿದ್ದು, ಅಲ್ಲಿನ ನಿವಾಸಿಗಳು ಪ್ರತಿದಿನ ಜೀವಭಯದ ನಡುವೆ ಬದುಕುತ್ತಿದ್ದಾರೆ.

2022ರಲ್ಲಿ ರಷ್ಯಾ ದಾಳಿಯ ಆರಂಭದಲ್ಲಿ ಖೆರ್ಸೋನ್‌ನ ಕೆಲವು ಭಾಗಗಳು ರಷ್ಯನ್ ಪಡೆಗಳ ಆಕ್ರಮಣಕ್ಕೆ ಒಳಗಾಗಿದ್ದವು. ನಂತರ ಡ್ನಿಪ್ರೊ ನದಿಯ ಬಲ ದಡವನ್ನು ಉಕ್ರೇನ್ ಸೇನೆ ಮರಳಿ ಪಡೆದರೂ, ಮುಂಭಾಗದ ಯುದ್ಧರೇಖೆ ಇನ್ನೂ ನದಿಯ ಬಳಿ ಮುಂದುವರಿದಿದೆ. ಪ್ರತಿದಿನವೂ ರಾಕೆಟ್‌, ಡ್ರೋನ್‌, ಕ್ಷಿಪಣಿ ಹಾಗೂ ದಾಳಿಗಳಿಂದ ನಗರವನ್ನು ಹೊಡೆಯಲಾಗುತ್ತಿದ್ದು, 2026ರ ಜನವರಿಯಲ್ಲಿ ಮಾತ್ರವೇ ಸಾವಿರಾರು ದಾಳಿಗಳು ದಾಖಲಾಗಿವೆ.

ಈ ಪರಿಸ್ಥಿತಿಯಲ್ಲಿ ವಂ. ಸ್ವಾಮಿ ರೊಮಾನಿವ್ ಮತ್ತು ಅವರ ಸಹೋದ್ಯೋಗಿಗಳು ಜನರಿಗೆ ಆಹಾರ, ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವ ಸೇವೆಯನ್ನು ಆರಂಭಿಸಿದರು. 2022ರಲ್ಲಿ ನಗರ ಮುಕ್ತವಾದ ಕೆಲವೇ ದಿನಗಳ ನಂತರ ಅವರು ಅಲ್ಲಿಗೆ ತೆರಳಿ ಜನರ ಜೊತೆ ಉಳಿದರು. ನಂತರ ಸಾಮಾಜಿಕ ಅಡುಗೆಮನೆ ಸ್ಥಾಪನೆಯಾಗಿ, ಅದು ಸುಮಾರು ಮೂರು ವರ್ಷಗಳಲ್ಲಿ ಸುಮಾರು 4.5 ಲಕ್ಷಕ್ಕೂ ಹೆಚ್ಚು ಊಟಗಳನ್ನು ವಿತರಿಸಿದೆ. ನಂತರ ಬ್ರೆಡ್ ಮತ್ತು ಸಿಹಿತಿಂಡಿಗಳನ್ನು ತಯಾರಿಸುವ ಬೇಕರಿ ಹಾಗೂ 2024ರಲ್ಲಿ ಸಾಮಾಜಿಕ ಲಾಂಡ್ರಿ ಸೇವೆಯನ್ನೂ ಆರಂಭಿಸಲಾಯಿತು.

ನಿರಂತರ ಡ್ರೋನ್ ದಾಳಿಗಳು ಮತ್ತು ಬಾಂಬ್ ಸ್ಫೋಟಗಳ ನಡುವೆಯೂ ಈ ಸೇವೆಗಳು ಮುಂದುವರಿದಿವೆ. 2026ರ ಫೆಬ್ರವರಿಯಲ್ಲಿ ರಾಕೆಟ್ ದಾಳಿ ಅಡುಗೆಮನೆಯ ಮೇಲ್ಚಾವಣಿಯನ್ನು ಹಾನಿಗೊಳಿಸಿದರೂ ಸಹ ಕಾರ್ಯ ನಿಲ್ಲಲಿಲ್ಲ. ಅಲ್ಲಿಗೆ ಬರುವ ವೃದ್ಧರು ಚಹಾ ಕುಡಿಯುತ್ತಾ, ಊಟಕ್ಕಾಗಿ ಕಾಯುತ್ತಾ, ಸ್ವಲ್ಪ ಕಾಲ ಮನೆಯಂತೆಯೇ ಅನುಭವಿಸುವುದು ಜನರಿಗೆ ಭರವಸೆಯನ್ನು ನೀಡುತ್ತದೆ ಎಂದು ವಂ.ಸ್ವಾಮಿ  ರೊಮಾನಿವ್ ಹೇಳಿದ್ದಾರೆ.

ವಂ.ಸ್ವಾಮಿ ರೊಮಾನಿವ್ ರವರ ಮಾತಿನಲ್ಲಿ, ಖೆರ್ಸೋನ್‌ನಲ್ಲಿ ಬದುಕುಳಿಯುವ ಮೂಲ ಆಧಾರ ಪರಸ್ಪರ ಸಹಾಯವೇ ಆಗಿದೆ. ಅಡುಗೆಮನೆಗೆ ಬರುವವರು ತಮ್ಮ ನೆರೆಹೊರೆಯವರಿಗೂ ಆಹಾರ ತೆಗೆದುಕೊಂಡು ಹೋಗುತ್ತಾರೆ. ಈ ಸಹಕಾರ ಮತ್ತು ಏಕತೆಯ ಮನೋಭಾವವೇ ಜನರಿಗೆ ಬದುಕಲು ಶಕ್ತಿ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಯುದ್ಧದ ನಡುವೆಯೂ ಮಾನವೀಯತೆ ಮತ್ತು ಭರವಸೆಯನ್ನು ಉಳಿಸಿಕೊಳ್ಳುವ ಈ ಕಾರ್ಯ ಮುಂದುವರಿಯುತ್ತಿದೆ.

07 ಮಾರ್ಚ್ 2026, 16:15