ಮಾರ್ಚ್ 2, 2026 ರಂದು ಕುವೈತ್ ನಗರದ ನೋಟ ಮಾರ್ಚ್ 2, 2026 ರಂದು ಕುವೈತ್ ನಗರದ ನೋಟ  (AFP or licensors)

ಕುವೈತ್‌ನ ಪ್ರೇಷಿತರ ರಾಯಭಾರಿ: ಈಗಾಗಲೇ ಒತ್ತಡದಲ್ಲಿರುವ ಪ್ರದೇಶದಲ್ಲಿ ದೀರ್ಘ ಯುದ್ಧವು ಯಾರಿಗೂ ಲಾಭಕರವಲ್ಲ

ಕುವೈತ್, ಬಹ್ರೇನ್ ಮತ್ತು ಕತಾರ್ ರಾಷ್ಟ್ರಗಳಿಗೆ ಪ್ರೇಷಿತರ ರಾಯಭಾರಿ ಆಗಿರುವ ಮಹಾಧರ್ಮಾಧ್ಯಕ್ಷ ಯೂಜಿನ್ ನ್ಯೂಜೆಂಟ್ ರವರು, ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸ ಆಚರಿಸಲು ಸ್ಥಳೀಯ ಧರ್ಮ ಸಭೆಯ ಬಯಕೆಯ ಕುರಿತು ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದರು.

ವ್ಯಾಟಿಕನ್ ವರದಿ

ಫೆಬ್ರವರಿ 28, ಶನಿವಾರದಿಂದ ಗಲ್ಫ್ ಪ್ರದೇಶದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಅವರಲ್ಲೆಲ್ಲರೂ ವಿದೇಶಿ ನಾಗರಿಕರು ಒಬ್ಬರು ಕುವೈತ್‌ನಲ್ಲಿ, ಮೂವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ, ಮತ್ತೊಬ್ಬರು ಬಹ್ರೇನ್‌ನಲ್ಲಿ.

ಮಾರ್ಚ್ 2, ಸೋಮವಾರ, ದುಬೈ, ಅಬುಧಾಬಿ, ದೋಹಾ ಮತ್ತು ಮನಾಮಾ ನಗರಗಳಲ್ಲಿ ಹೊಸ ಸ್ಫೋಟಗಳ ಶಬ್ದ ಕೇಳಿಸಿತು. ಕುವೈತ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿಯಿಂದ ದಟ್ಟ ಹೊಗೆ ಏರಿತು.

ಇರಾನ್‌ನ ದಾಳಿಗಳು, ಬಹುಕಾಲದಿಂದ ಭದ್ರತೆಯ ಆಶ್ರಯಸ್ಥಾನಗಳೆಂದು ಪರಿಗಣಿಸಲ್ಪಟ್ಟಿದ್ದ ಅರೇಬಿಯನ್ ಉಪಖಂಡದ ಈ ರಾಷ್ಟ್ರಗಳನ್ನು ಕದಡುತ್ತಿವೆ.

ಕೆಳಗಿನ ಸಂದರ್ಶನದಲ್ಲಿ, ಕುವೈತ್, ಬಹ್ರೇನ್ ಮತ್ತು ಕತಾರ್ ರಾಷ್ಟ್ರಗಳಿಗೆ ಪ್ರೇಷಿತರ ರಾಯಭಾರಿ ಆಗಿರುವ ಮಹಾಧರ್ಮಾಧ್ಯಕ್ಷ ಯೂಜಿನ್ ನ್ಯೂಜೆಂಟ್ ರವರು ಪರಿಸ್ಥಿತಿಯನ್ನೂ ಹಾಗೂ ಶಾಂತಿಗಾಗಿ ಧರ್ಮ ಸಭೆಯ ಆಕಾಂಕ್ಷೆಯನ್ನೂ ವ್ಯಾಟಿಕನ್ ನ್ಯೂಸ್‌ಗೆ ವಿವರಿಸುತ್ತಾರೆ.

ಪ್ರಶ್ನೆ: ನೀವು ನೆಲೆಸಿರುವ ಕುವೈತ್‌ನಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಪರಿಸ್ಥಿತಿ ಗಂಭೀರವಾಗಿದೆ ಮತ್ತು ದಿನೇದಿನೇ ಹದಗೆಡುತ್ತಿದೆ. ಕಳೆದ ರಾತ್ರಿ ಬೆಳಿಗ್ಗೆ 2:00 ಗಂಟೆಯಿಂದ ನಿರಂತರ ಸ್ಫೋಟಗಳ ಶಬ್ದ ಮತ್ತು ಸೈರನ್‌ಗಳ ಗದ್ದಲದ ಕಾರಣದಿಂದ ನಮಗೆ ಬಹುತೇಕ ನಿದ್ರೆ ಆಗಲಿಲ್ಲ. ಈ ಬೆಳಿಗ್ಗೆ ಕುವೈತ್‌ನ ಅಮೆರಿಕದ ರಾಯಭಾರ ಕಚೇರಿಯ ಮೇಲೆ ಡ್ರೋನ್ ದಾಳಿ ನಡೆದಿರುವುದಾಗಿ ತಿಳಿದುಬಂದಿತು. ಅದೃಷ್ಟವಶಾತ್ ಸಾವಿನ ಪ್ರಕರಣಗಳಿಲ್ಲ, ಆದರೆ ಕಟ್ಟಡದ ಒಳಗೆ ಬೆಂಕಿ ಸೇರಿದಂತೆ ಹಾನಿಯಾಗಿದೆ.

ಇದೇ ಬೆಳಿಗ್ಗೆ, “ಅಲಿ ಅಲ್ ಸಲೇಮ್” ಎಂಬ ಅಮೆರಿಕದ ವಾಯುನೆಲೆ ಸಮೀಪ ಎರಡು ಅಮೆರಿಕದ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಸುದ್ದಿ ತಿಳಿಯಿತು. ನಾನು ಅಲ್ಲಿಗೆ ನಿಯಮಿತವಾಗಿ ಬಲಿ ಪೂಜೆಯನ್ನು ಆಚರಿಸಲು ಹೋಗುವ ಕಾರಣ ಆ ನೆಲೆ ನನಗೆ ಚೆನ್ನಾಗಿ ಪರಿಚಿತವಾಗಿದೆ. ಅದರ ಪಕ್ಕದಲ್ಲೇ ಇಟಾಲಿಯನ್ ಪಡೆಗಳ ಘಟಕವೂ ಇದೆ.

ನಾವು ಶಾಂತವಾಗಿರಲು ಪ್ರಯತ್ನಿಸುತ್ತಿದ್ದೇವೆ, ಆದರೆ ನಿಜವಾಗಿ ಹೇಳುವುದಾದರೆ ಇದು ಭಯಾನಕವಾಗಿದೆ. ಪ್ರೇಷಿತರ ರಾಯಭಾರಿ ಸುತ್ತಮುತ್ತ ಯಾವುದೇ ಹಾನಿ ಕಂಡುಬಂದಿಲ್ಲ. ನಾವು ಶಾಬ್ ಪ್ರದೇಶದಲ್ಲಿರುವ ಏಕೈಕ ರಾಯಭಾರ ಕಚೇರಿ, ಅದು ನಗರದ ಶಾಂತ ಭಾಗವಾಗಿದೆ.

ಇರಾನ್ ರಾಯಭಾರ ಕಚೇರಿಯೂ ಇರುವ ರಾಜತಾಂತ್ರಿಕ ವಲಯ ನಮ್ಮಿಂದ ದೂರದಲ್ಲಿಲ್ಲ, ಆದರೆ ನಮ್ಮ ಪ್ರದೇಶ ಶಾಂತವಾಗಿದೆ. ಸೇನಾ ನೆಲೆಗಳು ಮತ್ತು ವಿಮಾನ ನಿಲ್ದಾಣಗಳು ಪ್ರಮುಖ ಗುರಿಯಾಗಿವೆ. ಕುವೈತ್ ವಿಮಾನ ನಿಲ್ದಾಣದ ಟರ್ಮಿನಲ್ 1 ಕೂಡ ಮೊದಲ ದಿನವೇ ಡ್ರೋನ್ ದಾಳಿಗೆ ಒಳಗಾಯಿತು.

ಪ್ರಶ್ನೆ: ಸಾಮಾನ್ಯವಾಗಿ ಅಂತರ್‌ಧರ್ಮ ಸಂವಾದ ಮತ್ತು ಶಾಂತ ಸಹಜೀವನವನ್ನು ಉತ್ತೇಜಿಸುವ ಬಹ್ರೇನ್ ಮತ್ತು ಕುವೈತ್ ರಾಜ್ಯಗಳಲ್ಲಿ ಈ ಯುದ್ಧವನ್ನು ಹೇಗೆ ಅನುಭವಿಸುತ್ತಿದ್ದಾರೆ?

ನಡೆಯುತ್ತಿರುವ ಘಟನೆಗಳಿಂದ ನಾವು ಎಲ್ಲರೂ ಬೆಚ್ಚಿಬಿದ್ದಿದ್ದೇವೆ. ಸಂವಾದ ಮತ್ತು ಮಾತುಕತೆ ಫಲಕಾರಿಯಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗ ನಾವು ನಿಜವಾಗಿಯೂ ಅಚ್ಚರಿಗೊಳಗಾದೆವು.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ ಪವಿತ್ರ ಜಗದ್ಗುರುಗಳು ನೀಡಿದ ಸಂದೇಶ ಹಾಗೂ ಈ ಪ್ರದೇಶದಲ್ಲಿ ಶಾಂತಿಗಾಗಿ ಪ್ರಾರ್ಥನೆ ಮತ್ತು ಸಂವಾದಕ್ಕೆ ಕರೆ ನೀಡಿದ ಮನವಿ ಇಲ್ಲಿ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು. ನಾವು ಅದನ್ನು ವ್ಯಾಪಕವಾಗಿ ಹಂಚಿಕೊಂಡೆವು.

ಉತ್ತರ ಅರೇಬಿಯಾದ ಪ್ರೇಷಿತರ ಪ್ರತಿನಿಧಿ ಆಗಿರುವ ಬಿಷಪ್ ಅಲ್ಡೋ ಬರಾರ್ಡಿ ರವರು ಈ ಸಮಯದಲ್ಲಿ ಪ್ರಾರ್ಥನೆ ಮತ್ತು ಏಕತೆಗಾಗಿ ನೀಡಿದ ಸಂದೇಶವೂ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು.

ಪ್ರಶ್ನೆ: ದಾಳಿಗಳು ಮತ್ತು ಪ್ರತಿದಾಳಿಗಳು ಕ್ಷಣಕ್ಷಣಕ್ಕೂ ನಡೆಯುತ್ತಿರುವ ಸಂದರ್ಭದಲ್ಲಿ ಯಾವ ಧ್ವನಿಯನ್ನು ಎತ್ತಬಹುದು?

ಯುದ್ಧವನ್ನು ಕೊನೆಗಾಣಿಸಲು ಸಾಧ್ಯವಾದ ಎಲ್ಲ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳನ್ನು ಮತ್ತು ರಾಯಭಾರಿಗಳನ್ನು ಪ್ರೋತ್ಸಾಹಿಸಲು ನಾವು ಸಂಪರ್ಕದಲ್ಲಿದ್ದೇವೆ. ದುಃಖಕರವಾಗಿ, ಯುದ್ಧ ಆರಂಭವಾದ ನಂತರ ಅದು ಯಾವಾಗ ಮುಗಿಯುತ್ತದೆ ಎಂಬುದನ್ನು ಯಾರಿಗೂ ತಿಳಿಯದು.

ಎಲ್ಲವೂ ವೇಗವಾಗಿ ನಡೆಯುತ್ತಿದೆ, ಆದರೆ ಪ್ರತಿಯೊಂದು ಮಾರ್ಗವನ್ನೂ ಪ್ರಯತ್ನಿಸಬೇಕು. ದೀರ್ಘ ಯುದ್ಧವು ಯಾರಿಗೂ ಲಾಭಕರವಲ್ಲ, ವಿಶೇಷವಾಗಿ ಅನೇಕ ಸಂಘರ್ಷಗಳಿಂದ ಈಗಾಗಲೇ ಕಂಗೆಟ್ಟಿರುವ ಈ ಪ್ರದೇಶದಲ್ಲಿ.

ಪ್ರಶ್ನೆ: ಬೇರೂರಿದ ವೈಮನಸ್ಸಿನ ನಡುವೆ ರಾಜತಾಂತ್ರಿಕತೆಯನ್ನು ಹೇಗೆ ಪುನರುಜ್ಜೀವನಗೊಳಿಸಬಹುದು?

ಈ ಕ್ಷಣದಲ್ಲಿ ಶಸ್ತ್ರಾಸ್ತ್ರಗಳೇ ಗದ್ದಲ ಮಾಡುತ್ತಿವೆ. ಆದರೂ ಪರಂಪರೆಯ ರಾಜತಾಂತ್ರಿಕತೆ ಮತ್ತು ಮಾತುಕತೆಯ ಮಾರ್ಗಗಳನ್ನು ಪ್ರಯತ್ನಿಸಬೇಕು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಇರಾನ್‌ನ ಹೊಸ ಆಡಳಿತದೊಂದಿಗೆ ಮಾತುಕತೆ ನಡೆಯಲಿದೆ ಎಂದು ಸೂಚಿಸಿರುವ ಹೇಳಿಕೆಯಿಂದ ಸಂವಾದ ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ.

ಎಲ್ಲಾ ಪಕ್ಷಗಳೊಂದಿಗೆ ಸಮಂಜಸವಾದ ಸಂವಾದ ನಡೆಯಲಿ ಎಂದು ನಾವು ಆಶಿಸುತ್ತೇವೆ. ಈಗಿನ ಪರಿಸ್ಥಿತಿ ಬಹಳ ಸಂಕೀರ್ಣವಾಗಿದೆ, ವಿಶೇಷವಾಗಿ ಇರಾನ್‌ನ ಒಳರಾಜಕೀಯ ಪರಿಸ್ಥಿತಿ ಜಟಿಲವಾಗಿದೆ. ದೇಶದೊಳಗೆ ಅನೇಕ ಗುಂಪುಗಳಿದ್ದು ಭೌರಾಜಕೀಯ ಚಲನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಪ್ರತಿಯೊಂದು ಹಂತದಲ್ಲೂ ಸಂವಾದವನ್ನು ಪ್ರಯತ್ನಿಸಬೇಕು. ಈ ಯುದ್ಧವನ್ನು ಕೊನೆಗಾಣಿಸಲು ರಾಜತಾಂತ್ರಿಕತೆಯೇ ಏಕೈಕ ಮಾರ್ಗ.

ಪ್ರಶ್ನೆ: 2022ರಲ್ಲಿ ಬಹ್ರೇನ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಯುದ್ಧವನ್ನು “ದುಃಖಕರವಾಗಿ ಬಾಲಿಶ ದೃಶ್ಯ” ಎಂದು ವಿವರಿಸಿ, ಮಾನವಕೋಟಿಯು ಪಾಲಿಸುವ ಬದಲು ನಾವು ಕ್ಷಿಪಣಿಗಳು ಮತ್ತು ಬಾಂಬ್‌ಗಳೊಂದಿಗೆ ಬೆಂಕಿಯೊಂದಿಗೆ ಆಟವಾಡುತ್ತೇವೆ ಎಂದು ಹೇಳಿದ್ದಾರೆ. ಆ ಮಾತುಗಳು ಇಂದು ಹೇಗೆ ಪ್ರತಿಧ್ವನಿಸುತ್ತವೆ?

ಅವು ಭವಿಷ್ಯವಾಣಿಯಂತೆ ಕಾಣಿಸುತ್ತವೆ. ಎಲ್ಲರಿಗೂ ಮಾತನಾಡುವ ಶಕ್ತಿಯುತ ಮಾತುಗಳಾಗಿವೆ. ಶತಮಾನಗಳ ಕಾಲ ಮಾನವಕುಲವು ಅನೇಕ ಸಂಘರ್ಷಗಳಲ್ಲಿ ತೊಡಗಿಕೊಂಡಿದೆ, ಆದರೆ ಅಂತಿಮವಾಗಿ ಸಹೋದರತ್ವವನ್ನು ಹುಡುಕಬೇಕು ಮತ್ತು ನಮ್ಮಲ್ಲಿ ಸಾಮಾನ್ಯವಾದುದನ್ನು ಕಂಡುಕೊಳ್ಳಬೇಕು.

ನಾವು ಈ ಪ್ರದೇಶದಲ್ಲಿ ಶತಮಾನಗಳಿಂದ ಬದುಕಿದ್ದೇವೆ. ಪ್ರತಿಯೊಂದು ರಾಷ್ಟ್ರವೂ ಶಾಂತಿ ಮತ್ತು ಸೌಹಾರ್ದವನ್ನು ಹುಡುಕಬೇಕು. ನಾವು ಅದಕ್ಕಾಗಿ ತುಂಬಾ ಪ್ರಾರ್ಥಿಸುತ್ತೇವೆ. ಕಳೆದ ವಾರ ಕುವೈತ್‌ನ ಮಹಾಗಿರಿಜೆಯಲ್ಲಿ ಉಕ್ರೇನ್ ಯುದ್ಧದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಬಲಿ ಪೂಜೆಯನ್ನು ಆಚರಿಸಿದ್ದೇವೆ. ನಾಲ್ಕು ದಿನಗಳ ನಂತರ ಇಲ್ಲಿ ಯುದ್ಧ ಪ್ರಾರಂಭವಾಯಿತು.

ಪ್ರಾರ್ಥನೆಯೂ  ವಿಶೇಷವಾಗಿ ತಪಸ್ಸು ಕಾಲದ ಅವಧಿಯಲ್ಲಿ ಉಪವಾಸವೂ ಬಹಳ ಮಹತ್ವದ್ದಾಗಿದೆ. ಇದೇ ಸಮಯದಲ್ಲಿ ರಂಜಾನ್ ಕೂಡ ನಡೆಯುತ್ತಿದೆ. ಕ್ರೈಸ್ತರು ಮತ್ತು ಮುಸ್ಲಿಮರು ಇಬ್ಬರೂ ಉಪವಾಸ ಮತ್ತು ಪ್ರಾರ್ಥನೆಯ ಸಮಯದಲ್ಲಿದ್ದಾರೆ. ದೇವರು ನಮಗೆ ಶಾಂತಿಯ ವರವನ್ನು ನೀಡಲೆಂದು ನಾವು ಬೇಡಿಕೊಳ್ಳೋಣ ಎಂದರು

ಪ್ರಶ್ನೆ: ಸ್ಥಳೀಯ ಧರ್ಮ ಸಭೆ ಮತ್ತು ನಡುಗಿದ ವಿಶ್ವಾಸಿಗಳಿಗೆ ನೀವು ಯಾವ ಬೆಂಬಲವನ್ನು ನೀಡಬಹುದು?

ನಾನು ಪ್ರತಿದಿನ ಬಿಷಪ್ ಅಲ್ಡೋ ಬರಾರ್ಡಿ ಹಾಗೂ ಕುವೈತ್, ಬಹ್ರೇನ್ ಮತ್ತು ಕತಾರ್ ದೇಶಗಳ ಧರ್ಮ ಕೇಂದ್ರದ ಗುರುಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಪ್ರಯತ್ನಿಸುತ್ತೇನೆ. ಕೆಲವು ಧರ್ಮ ಸಭೆಗಳು ತೆರೆದಿವೆ, ಇತರವುಗಳು ಮುಚ್ಚಲ್ಪಟ್ಟಿವೆ ಆದ್ದರಿಂದ ಖಾಸಗಿ ಬಲಿ ಪೂಜೆಗಳನ್ನು ಆಚರಿಸಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ 7:30ಕ್ಕೆ ಬಲಿ ಪೂಜೆಯನ್ನು ಆಚರಿಸುತ್ತೇವೆ ಮತ್ತು ಸಂಜೆ 5:00ಕ್ಕೆ ಶಾಂತಿಗಾಗಿ ಜಪಸರ ಪ್ರಾರ್ಥನೆ ಮಾಡುತ್ತೇವೆ. ವಾಟ್ಸ್ಆಪ್‌ನಲ್ಲಿ ಪ್ರಾರ್ಥನಾ ಗುಂಪುಗಳೂ ಇವೆ. ಎಲ್ಲರೂ ಶಾಂತವಾಗಿರಲು ಮತ್ತು ನಮ್ಮೆಲ್ಲರಿಗೂ ಅಗತ್ಯವಾದ ಈ ವರಕ್ಕಾಗಿ ಪವಿತ್ರ ಕನ್ಯಾ ಮರಿಯಮ್ಮನವರಿಗೆ ಪ್ರಾರ್ಥಿಸಲು ನಾನು ಪ್ರೋತ್ಸಾಹಿಸುತ್ತೇನೆ.

ಪ್ರಶ್ನೆ: ಇಂತಹ ಸಂದರ್ಭದಲ್ಲಿ ಅರೇಬಿಯಾದ ಮಾತೆಯ ಭಕ್ತಿ ಎಷ್ಟು ಮಹತ್ವದ್ದು?

ಅರೇಬಿಯಾದ ಮಾತೆ ಅತ್ಯಂತ ಮಹತ್ವದ್ದಾಗಿದ್ದಾರೆ ನಮ್ಮ ವಿಶ್ವಾಸಿಗಳಿಗೆ ಅವರ ಮೇಲಿನ ಆಳವಾದ ಭಕ್ತಿ ಇದೆ. ಮುಸ್ಲಿಮರೂ ಕೂಡ ಕುರಾನ್‌ನಲ್ಲಿ ಅನೇಕ ಬಾರಿ ಉಲ್ಲೇಖಿಸಲ್ಪಟ್ಟಿರುವ ಮರಿಯಮ್ಮನವರಿಗೆ ಭಕ್ತಿಯನ್ನಿಟ್ಟಿದ್ದಾರೆ.

ಈ ಗಂಭೀರ ಕ್ಷಣದಲ್ಲಿ ನಾವು ಶಾಂತಿಯ ರಾಣಿಯಾಗಿರುವ ಪವಿತ್ರ ಮರಿಯಮ್ಮನಿಗೆ ಹೆಚ್ಚು ಪ್ರಾರ್ಥಿಸುತ್ತೇವೆ. ಅವರ ಮಧ್ಯಸ್ಥಿಕೆಯಿಂದ, ಅವರ ಮಗನ ಬಳಿಯಲ್ಲಿ, ಈ ಯುದ್ಧವು ಕೊನೆಗಾಣಲಿ ಎಂಬುದೇ ನಮ್ಮ ಆಶಯವಾಗಿದೆ.

02 ಮಾರ್ಚ್ 2026, 17:32