ಜಗದ್ಗರುಗಳ ಅಧಿಕಾರ ಸ್ಥಳ: ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯನ್ನು ಶಸ್ತ್ರೀಕರಿಸಬಾರದು
ವ್ಯಾಟಿಕನ್ ವರದಿ
ಜಗದ್ಗರುಗಳ ಅಧಿಕಾರ ಸ್ಥಳದ ರಾಜ್ಯ ಕಾರ್ಯಾಲಯದ ಬಹುಪಕ್ಷೀಯ ವಿಭಾಗದ ಉಪ ಕಾರ್ಯದರ್ಶಿ ಮ್ಸ್ಗ್ರ್ ಡ್ಯಾನಿಯಲ್ ಪಾಚೋ ರವರು ಜಿನೀವಾದಲ್ಲಿ ನಡೆದ 2026ರ ವಿಶ್ವಸಂಸ್ಥೆಯ ನಿಷಸ್ತ್ರೀಕರಣ ಸಮ್ಮೇಳನದಲ್ಲಿ ಧರ್ಮ ಸಭೆಯ ನಿಷಸ್ತ್ರೀಕರಣ ಕರೆಗೆ ಪುನರುಚ್ಚಾರಣೆ ಮಾಡಿದರು. ಮಾನವಕುಲವು ಗಂಭೀರ ತಿರುವುಬಿಂದುವಿನಲ್ಲಿ ನಿಂತಿದೆ ಎಂದು ಹೇಳಿ, ಯುದ್ಧವು ಮತ್ತೆ ಪ್ರಚಲಿತವಾಗುತ್ತಿದೆ ಎಂಬ ಜಗದ್ಗುರು XIVನೇ ಲಿಯೋರವರ ಎಚ್ಚರಿಕೆಯನ್ನು ಅವರು ಸ್ಮರಿಸಿದರು. ಸಂವಾದ ಮತ್ತು ಸಹಮತದ ಬದಲಿಗೆ ಬಲಾಧಾರಿತ ರಾಜತಾಂತ್ರಿಕತೆಯು ಮೇಲ್ಮೈಗೊಳ್ಳುತ್ತಿರುವುದು ನಿಷಸ್ತ್ರೀಕರಣದ ಬಹುಪಕ್ಷೀಯ ಚರ್ಚೆಗಳನ್ನು ದುರ್ಬಲಗೊಳಿಸಿದೆ ಎಂದು ಅವರು ವಿಷಾದಿಸಿದರು.
ನಿಷಸ್ತ್ರೀಕರಣವು ಕೇವಲ ರಾಜಕೀಯ ಗುರಿಯಲ್ಲ, ಅದು ನೈತಿಕ ಕಡ್ಡಾಯವೆಂದು ಮ್ಸ್ಗ್ರ್ ಪಾಚೋ ಒತ್ತಿಹೇಳಿದರು. ಶಸ್ತ್ರಾಸ್ತ್ರಗಳು ಮತ್ತೊಮ್ಮೆ ಹಾನಿಗೆ ಬಳಕೆಯಾಗದಂತೆ ತಡೆಯುವುದು ಅದರ ಉದ್ದೇಶ ಎಂದು ಹೇಳಿದರು. ಇದು ವಿಶ್ವಾಸ ನಿರ್ಮಾಣಕ್ಕೂ, ನ್ಯಾಯಸಮ್ಮತ ಮತ್ತು ದೀರ್ಘಕಾಲಿಕ ಶಾಂತಿ ಸಾಧನೆಗೂ ಪ್ರಮುಖ ಸಾಧನವಾಗಿದ್ದು, ಸಮಗ್ರ ಮಾನವ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ಅಣ್ವಸ್ತ್ರಗಳ ವಿಸ್ತರಣೆ ಕುರಿತು ಜಗದ್ಗುರುಗಳ ಅಧಿಕಾರ ಸ್ಥಳ ತೀವ್ರ ಆತಂಕ ವ್ಯಕ್ತಪಡಿಸಿದೆ. ಅಣು ನಿರೋಧಕ ತತ್ವವು ನ್ಯಾಯ, ಕಾನೂನು ಮತ್ತು ವಿಶ್ವಾಸಕ್ಕಿಂತ ಬಲದ ಬೆದರಿಕೆಯನ್ನು ಆಧಾರವಾಗಿಟ್ಟುಕೊಳ್ಳುತ್ತದೆ ಎಂಬುದು ತಪ್ಪು ಧಾರಣೆ ಎಂದು ಅವರು ಹೇಳಿದರು. ರಾಜತಾಂತ್ರಿಕ ಪ್ರಯತ್ನಗಳ ಬದಲು ಭಯದ ಮಾರ್ಗವನ್ನು ಆರಿಸಿದರೆ, ಮಾನವಕುಲ ಮತ್ತು ಭೂಮಿಯೇ ನಾಶದ ಅಂಚಿನತ್ತ ತಳ್ಳಲ್ಪಡುವ ಅಪಾಯವಿದೆ ಎಂದು ಎಚ್ಚರಿಸಿದರು. ಆದ್ದರಿಂದ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಸತ್ಯನಿಷ್ಠ ಸಂವಾದದ ಮೂಲಕ ತಮ್ಮ ಶಸ್ತ್ರಾಗಾರವನ್ನು ಕಡಿಮೆ ಮಾಡಿ, ಅಂತಿಮವಾಗಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕೆಂದು ಅವರು ಕರೆ ನೀಡಿದರು.
ಬಾಹ್ಯಾಕಾಶವು ಮಹಾಶಕ್ತಿಗಳ ಸ್ಪರ್ಧಾ ವೇದಿಕೆಯಾಗುತ್ತಿರುವುದರ ಬಗ್ಗೆ ಅವರು ಚಿಂತನೆ ವ್ಯಕ್ತಪಡಿಸಿದರು. ಬಾಹ್ಯಾಕಾಶದ ಸೈನ್ಯೀಕರಣ ಈಗಾಗಲೇ ವಾಸ್ತವವಾಗಿದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಅದು ಶಸ್ತ್ರೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು. 1967ರ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಬಾಹ್ಯಾಕಾಶವು ಸಕಲ ಮಾನವಕುಲದ ಸಾಮೂಹಿಕ ಕ್ಷೇತ್ರವಾಗಿದ್ದು, ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಬಳಸಲ್ಪಡಬೇಕು ಎಂದು ಅವರು ಒತ್ತಿಹೇಳಿದರು.
ಅಂತಿಮವಾಗಿ, ಕೃತಕ ಬುದ್ಧಿಮತ್ತೆಯ ಶಸ್ತ್ರೀಕರಣದ ಬಗ್ಗೆ ಅವರು ಗಂಭೀರ ಎಚ್ಚರಿಕೆ ನೀಡಿದರು. ಸ್ವಯಂಚಾಲಿತ ಮಾರಕ ಆಯುಧ ವ್ಯವಸ್ಥೆಗಳು ಯುದ್ಧದಲ್ಲಿ ಮಾನವೀಯ ನೈತಿಕ ನಿರ್ಧಾರ ಸಾಮರ್ಥ್ಯವನ್ನು ದೂರಗೊಳಿಸುತ್ತವೆ ಎಂದು ಹೇಳಿದರು. ಆದ್ದರಿಂದ ಶಕ್ತಿಯ ಬಳಕೆಯಲ್ಲೆಲ್ಲ ಮಾನವ ನಿಯಂತ್ರಣ ಅನಿವಾರ್ಯವಾಗಿರಬೇಕು ಎಂದು ಅವರು ತಿಳಿಸಿ, ಮಾರಕ ಸ್ವಯಂಚಾಲಿತ ಆಯುಧಗಳ ಅಭಿವೃದ್ಧಿ ಮತ್ತು ಬಳಕೆಯ ಮೇಲೆ ತಾತ್ಕಾಲಿಕ ನಿಷೇಧ ಹೇರಲು ಕರೆ ನೀಡಿದರು. ಶಾಶ್ವತ ಶಾಂತಿಗಾಗಿ ನಿಷಸ್ತ್ರೀಕರಣ ಸಮ್ಮೇಳನವು ಸ್ಪಷ್ಟ ಮತ್ತು ದೀರ್ಘಕಾಲಿಕ ಒಪ್ಪಂದಗಳನ್ನು ಸಾಧಿಸಬೇಕೆಂದು ಅವರು ಮನವಿ ಮಾಡಿದರು.