ಇರ್ಪಿನ್‌ನಲ್ಲಿ ಉಕ್ರೇನ್‌ನ ಪೂರ್ಣ ಪ್ರಮಾಣದ ರಷ್ಯಾದ ಆಕ್ರಮಣದ ನಾಲ್ಕನೇ ವಾರ್ಷಿಕೋತ್ಸವವನ್ನು ಗುರುತಿಸಲು ಜನರು ಸೇರುತ್ತಾರೆ ಇರ್ಪಿನ್‌ನಲ್ಲಿ ಉಕ್ರೇನ್‌ನ ಪೂರ್ಣ ಪ್ರಮಾಣದ ರಷ್ಯಾದ ಆಕ್ರಮಣದ ನಾಲ್ಕನೇ ವಾರ್ಷಿಕೋತ್ಸವವನ್ನು ಗುರುತಿಸಲು ಜನರು ಸೇರುತ್ತಾರೆ 

ಉಕ್ರೇನ್‌ಗೆ ಪ್ರೇಷಿತರ ರಾಯಭಾರಿ: ಯುದ್ಧದ ನೋವಿನ ಮಧ್ಯೆಯೂ ನಾವು ಭರವಸೆಯ ದೃಷ್ಟಿಯನ್ನು ಉಳಿಸಿಕೊಂಡಿದ್ದೇವೆ

ರಷ್ಯಾದ ಉಕ್ರೇನ್ ಮೇಲಿನ ಪೂರ್ಣ ಪ್ರಮಾಣದ ಆಕ್ರಮಣದ ನಾಲ್ಕನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಉಕ್ರೇನ್‌ನ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರು, ಸಂಘರ್ಷದ ತೀವ್ರತೆ ಹೆಚ್ಚುತ್ತಿದ್ದರೂ ಉಕ್ರೇನ್ ಜನರು ದೃಢತೆಯನ್ನು ಕಾಪಾಡಿಕೊಂಡು, ಪರಸ್ಪರ ಸಹಾಯಮಾಡುತ್ತಾ, ಭರವಸೆಯನ್ನು ಕಳೆದುಕೊಳ್ಳದೆ ಮುಂದುವರಿಯುತ್ತಿರುವುದನ್ನು ವಿವರಿಸಿದರು.

ವ್ಯಾಟಿಕನ್ ವರದಿ

ಹಿಂದೆ ಉಕ್ರೇನ್‌ನಲ್ಲಿ ಮುಂಚೂಣಿ ರೇಖೆಯ ಸಮೀಪದ ನೆಲಮಾಳಿಗೆಯಲ್ಲಿ ವೈದ್ಯಕೀಯ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು ಸಾಧ್ಯವಾಗುತ್ತಿತ್ತು. ಆದರೆ ಈಗ ಅದು ಸಾಧ್ಯವಿಲ್ಲ, ಏಕೆಂದರೆ ಪ್ರತಿಯೊಂದು ಕಟ್ಟಡವೂ ಗುಂಡಿನ ದಾಳಿಗೆ ಒಳಗಾಗುತ್ತಿದೆ. ಮುಂಚೂಣಿಗೆ ಇನ್ನಷ್ಟು ಹತ್ತಿರವಾದಂತೆ, ನಿರಂತರ ಡ್ರೋನ್ ದಾಳಿಗಳಿಂದ ರಕ್ಷಿಸಿಕೊಳ್ಳಲು ಐದು ಅಥವಾ ಆರು ಮೀಟರ್ ಆಳದ ಭೂಗತ ಆಶ್ರಯಗಳನ್ನು ನಿರ್ಮಿಸಬೇಕಾಗಿದೆ.

ಈ ವಿವರಣೆಯೊಂದರಲ್ಲೇ ನಾಲ್ಕು ವರ್ಷಗಳ ಸಂಪೂರ್ಣ ಯುದ್ಧ ಮತ್ತು ನಿರಂತರ ದಾಳಿಯಿಂದ ಬದುಕುತ್ತಿರುವ ದೇಶದ ಪರಿಸ್ಥಿತಿ ಸ್ಪಷ್ಟವಾಗುತ್ತದೆ. ಅಸ್ಥಿರತೆಯ ಮಧ್ಯೆಯೂ ಕನಿಷ್ಠ ಮಟ್ಟದ ಭದ್ರತೆ ಮತ್ತು ಬದುಕನ್ನು ಕಾಯ್ದುಕೊಳ್ಳಲು ಉಕ್ರೇನ್ ಪ್ರತಿದಿನ ಹೋರಾಡುತ್ತಿದೆ.

ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಉಕ್ರೇನ್‌ನ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರು, ಕೆವಲ ನೋವಿನ ಮೇಲೆ ಮಾತ್ರ ಕಣ್ಣೊಡ್ಡದೆ ಬದುಕಲು ಪ್ರಯತ್ನಿಸುವ ಜನರ ಬಗ್ಗೆ ಚಿಂತನೆ ಹಂಚಿಕೊಂಡರು. ಅವರು “ಆಶೆಯ ಮೊಗ್ಗುಗಳನ್ನು” ಗಮನಿಸುತ್ತಾರೆ ಮತ್ತು ಜಗದ್ಗುರು XIVನೇ ಲಿಯೋರವರ “ಭಸ್ಮದ ನಡುವೆ ಉಳಿಯದೆ, ಎದ್ದು ಮರುನಿರ್ಮಿಸಬೇಕು” ಎಂಬ ಮಾತುಗಳಿಗೆ ಹೃದಯವನ್ನು ಹೊಂದಿಸುತ್ತಾರೆ ಎಂದು ಹೇಳಿದರು.

ಪ್ರಶ್ನೆ: ರಷ್ಯಾದ ಸಂಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದುದರಿಂದ ನಾಲ್ಕು ವರ್ಷಗಳು ಕಳೆದಿವೆ…

ಇಂತಹ ದೊಡ್ಡ ಮಟ್ಟದ ಯುದ್ಧಕ್ಕೆ ನಾಲ್ಕು ವರ್ಷಗಳು ಬಹಳ ದೀರ್ಘ ಅವಧಿ. ಯುದ್ಧದ ತೀವ್ರತೆ ಇನ್ನೂ ಹೆಚ್ಚುತ್ತಿದೆ. ನಾಲ್ಕು ವರ್ಷಗಳ ಹಿಂದೆ ಹೋಲಿಸಿದರೆ ಉಕ್ರೇನ್ ಪ್ರದೇಶದಲ್ಲಿರುವ ರಷ್ಯಾ ಸೇನೆಯ ಸಂಖ್ಯೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸಂಖ್ಯೆಯೂ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಐಕ್ಯರಾಷ್ಟ್ರ ಸಂಸ್ಥೆ ಮತ್ತು ಇತರ ಸಂಸ್ಥೆಗಳ ವರದಿಗಳ ಪ್ರಕಾರ ನಾಗರಿಕರ ಸಾವುನೋವುಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಯುದ್ಧದ ಆರಂಭದಲ್ಲಿ ಹೆಚ್ಚು ಸಾವುನೋವುಗಳು ಆಕ್ರಮಿತ ಪ್ರದೇಶಗಳಲ್ಲಿ ಅಥವಾ ಮುಂಚೂಣಿ ಸಮೀಪದಲ್ಲಿದ್ದವು. ಈಗ ಮುಂಚೂಣಿಯಿಂದ ದೂರದಲ್ಲಿಯೂ ನಾಗರಿಕರು ಸಾವನ್ನಪ್ಪುತ್ತಿದ್ದಾರೆ ಅಥವಾ ಗಾಯಗೊಳ್ಳುತ್ತಿದ್ದಾರೆ. ಐಕ್ಯರಾಷ್ಟ್ರ ಸಂಸ್ಥೆಯ ಪ್ರಕಾರ 35% ನಾಗರಿಕರ ಸಾವುನೋವುಗಳು ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿವೆ.

ಪ್ರಶ್ನೆ: ಮುಂಚೂಣಿಯಿಂದ ದೂರದಲ್ಲಿಯೂ ಶೆಲ್ ದಾಳಿ ನಡೆಯುತ್ತಿದೆಯೇ?

ಹೌದು. ಕಳೆದ ವರ್ಷ ಒಂದೇ ದಾಳಿಯಲ್ಲಿ ಹೆಚ್ಚಿನ ನಾಗರಿಕರ ಸಾವುನೋವುಗಳು ಟೆರ್‌ನೋಪಿಲ್ ನಗರದಲ್ಲಿ ಸಂಭವಿಸಿತು, ಅದು ಮುಂಚೂಣಿಯಿಂದ ಬಹಳ ದೂರದಲ್ಲಿದೆ. ರಾಜಧಾನಿ ಕೀವ್‌ನಲ್ಲಿಯೂ ಅನೇಕ ಸಾವುನೋವುಗಳು ಸಂಭವಿಸಿವೆ. ಇಪ್ಪತ್ತಕ್ಕೂ ಹೆಚ್ಚು ರಾಯಭಾರ ಕಚೇರಿಗಳು ಹಾನಿಗೊಳಗಾದವು.

ಕಳೆದ ಜುಲೈನಲ್ಲಿ ಪ್ರೇಷಿತರ ರಾಯಭಾರಿ ಸಣ್ಣ ಪ್ರಮಾಣದ ಹಾನಿಯಾಯಿತು. ಆದರೆ ಅಝರ್ಬೈಜಾನ್ ರಾಯಭಾರ ಕಚೇರಿ ಮೂರು ಬಾರಿ ದಾಳಿಗೆ ಒಳಗಾಗಿದ್ದು ಬಹುತೇಕ ಸಂಪೂರ್ಣ ನಾಶವಾಯಿತು.

ಪ್ರಶ್ನೆ: ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿ ಏನು ಮಾಡಬಹುದು?

ಕೆಲವು ದಿನಗಳ ಹಿಂದೆ ಮುಂಚೂಣಿಯಲ್ಲಿ ಗಾಯಾಳುಗಳಿಗೆ ನೆರವಾಗುತ್ತಿರುವ ಒಬ್ಬ ವೈದ್ಯರೊಂದಿಗೆ ಮಾತನಾಡಿದೆ. 2022–2023ರಲ್ಲಿ ಅವರು ನೆಲಮಾಳಿಗೆಯಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಬಹುದಾಗಿತ್ತು. ಈಗ ಪ್ರತಿಯೊಂದು ಕಟ್ಟಡವೂ ದಾಳಿಗೆ ಒಳಗಾಗುತ್ತಿರುವುದರಿಂದ ಅದು ಸಾಧ್ಯವಿಲ್ಲ.

ಮುಂಚೂಣಿಗೆ ಹತ್ತಿರವಾದಂತೆ ಐದು ಅಥವಾ ಆರು ಮೀಟರ್ ಆಳದಲ್ಲಿ ಭೂಗತ ಆಶ್ರಯಗಳನ್ನು ನಿರ್ಮಿಸಬೇಕು. ಗಾಯಾಳುಗಳನ್ನು ಸ್ಥಳಾಂತರಿಸುವುದು ಅತ್ಯಂತ ಕಷ್ಟಕರವಾಗಿದೆ. ಕೆಲವೊಮ್ಮೆ ಏಳು ದಿನಗಳವರೆಗೆ ಕಾಯಬೇಕಾಗುತ್ತದೆ. ತಾಪಮಾನ ಮೈನಸ್ ಇಪ್ಪತ್ತು ಡಿಗ್ರಿ ಸೆಲ್ಸಿಯಸ್ ತನಕ ಇಳಿದಿದೆ, ಇದರಿಂದ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ.

ಪ್ರಶ್ನೆ: ಇಂತಹ ಪರಿಸ್ಥಿತಿಯಲ್ಲಿ ಮಾನವೀಯ ಸಹಾಯ ಒದಗಿಸುವುದು ಸಾಧ್ಯವೇ?

ಅಂತರರಾಷ್ಟ್ರೀಯ ರೆಡ್ ಕ್ರಾಸ್ ಪ್ರತಿನಿಧಿಯೊಬ್ಬರನ್ನು ಕೇಳಿದಾಗ, ಅವರು ಮಾನವೀಯ ನೆರವು ಬಹಳ ಮಟ್ಟಿಗೆ ಕಡಿಮೆಯಾಗಬೇಕಾಯಿತು ಎಂದರು, ಏಕೆಂದರೆ ನಾಗರಿಕರು, ಸೈನಿಕರು, ವೈದ್ಯರು, ಯಾಜಕರು ಯಾರೂ ಸುರಕ್ಷಿತರಲ್ಲ. ನೀರು, ಆಹಾರ, ಔಷಧಿ ಮುಂತಾದ ಮೂಲಭೂತ ಅಗತ್ಯಗಳನ್ನು ತಲುಪಿಸುವುದು ಬಹಳ ಕಷ್ಟಕರವಾಗಿದೆ.

ಪ್ರಶ್ನೆ: ಇಂತಹ ಸಂದರ್ಭದಲ್ಲಿ ಏನು ಮಾಡಬಹುದು?

ನಮಗೆ ಹೆಚ್ಚಿನ ಪ್ರಾರ್ಥನೆ ಅಗತ್ಯ. ರಷ್ಯಾ ಐಕ್ಯರಾಷ್ಟ್ರಗಳ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ಎಂಬುದನ್ನು ಮರೆಯಬಾರದು. 1994ರ ಬುಡಾಪೆಸ್ಟ್ ಒಪ್ಪಂದವನ್ನು ನೆನಪಿಸಿಕೊಳ್ಳಬೇಕು, ಅಲ್ಲಿ ಉಕ್ರೇನ್‌ನ ಪ್ರಭುತ್ವ ಮತ್ತು ಭೌಗೋಳಿಕ ಸಮಗ್ರತೆಯನ್ನು ಖಾತರಿಪಡಿಸಲಾಯಿತು.

ಹಿಂಸೆ ಹೆಚ್ಚುತ್ತಾ ಹೋಗುತ್ತಿರುವ ಈ ಪರಿಸ್ಥಿತಿಯಿಂದ ಹೇಗೆ ಹೊರಬರಬೇಕು ಎಂಬುದು ಅರ್ಥವಾಗಲು ಕಷ್ಟಕರವಾಗಿದೆ. ಆದ್ದರಿಂದ ನಾನು ಪ್ರಾರ್ಥನೆಗೆ ಹೆಚ್ಚಿನ ಭರವಸೆ ಇಡುತ್ತೇನೆ.

ಪ್ರಶ್ನೆ: ಈ ದುಃಖಕರ ಪರಿಸ್ಥಿತಿಯಲ್ಲಿಯೂ ದೃಢತೆಯ ಉದಾಹರಣೆಗಳಿವೆ…

ಹೌದು. ಕೆಲವಾರಗಳ ಹಿಂದೆ ಅಂತಧರ್ಮೀಯ ಸಂಘಟನೆಯ ಮಹಿಳೆಯರ ಗುಂಪೊಂದು ಪವಿತ್ರ ಜಗದ್ಗುರುಗಳ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದರು. ಅವರು ಹೇಳಿದರು: “ನಾವು ಮಾಡಬಹುದಾದದ್ದರ ಮೇಲೆ ಗಮನ ಕೊಡುತ್ತೇವೆ. ಗಾಯಗೊಂಡ ಹುಡುಗಿಗೆ ಕೈ ಕಳೆದುಹೋದರೆ ಕೃತಕ ಭಾಗವನ್ನು ಹುಡುಕುತ್ತೇವೆ. ಸೈನಿಕರಿಗೂ ಮಕ್ಕಳಿಗೂ ಸಹಾಯ ಮಾಡುತ್ತೇವೆ.

ಅವರು ಮತ್ತಷ್ಟು ಹೇಳಿದರು: ಎಲ್ಲ ರಷ್ಯದವರನ್ನು ಈಗಲೇ ದೋಷಾರೋಪಣೆ ಮಾಡುವುದಕ್ಕೆ ಅರ್ಥವಿಲ್ಲ ನಾವು ಅದೇ ರಾಜಕೀಯ ವಾಸ್ತವಿಕತೆಯಲ್ಲಿ ಇದ್ದರೆ ಏನು ಮಾಡುತ್ತಿದ್ದೆವು ಎಂಬುದು ನಮಗೆ ತಿಳಿದಿಲ್ಲ ಎಂದರು.

ಪ್ರಶ್ನೆ: ಇಂತಹ ಪ್ರತಿಕ್ರಿಯೆಯನ್ನು ಇತರರಲ್ಲಿಯೂ ಕಾಣುತ್ತೀರಾ?

ಹೌದು. ಕೀವ್‌ನಲ್ಲಿ ಬಾಂಬ್ ದಾಳಿಯ ರಾತ್ರಿ ನಂತರ ಬೆಳಗ್ಗೆ ಜನರು ಕೆಲಸಕ್ಕೆ ತೆರಳುತ್ತಿರುವುದನ್ನು ಒಬ್ಬ ರಾಯಭಾರಿ ಕಂಡು ಆಶ್ಚರ್ಯಪಟ್ಟರು. ಜನರು ನೋವಿನ ಮೇಲೆ ಮಾತ್ರ ಗಮನ ಕೊಡದೆ, ದೇವರಿಗೆ ಉಳಿದಿರುವುದಕ್ಕಾಗಿ ಧನ್ಯವಾದ ಸಲ್ಲಿಸುತ್ತಾರೆ.

ಪ್ರಶ್ನೆ: ನಿಮ್ಮ ಮನವಿ ಏನು?

ಎಲ್ಲರೂ ಉಕ್ರೇನ್‌ಗೆ ಆಧ್ಯಾತ್ಮಿಕ ಬೆಂಬಲ ನೀಡಬೇಕು ಪ್ರಾರ್ಥನೆ, ಮಾನವೀಯ ಸಹಾಯ, ಐಕ್ಯತೆ ಮತ್ತು ಹೃದಯಪೂರ್ವಕ ಸಮೀಪತೆ.ಜಗದ್ಗುರು XIV ನೇ ಲಿಯೋರವರು ವಿಭೂತಿ ಬುಧವಾರದಂದು ಹೇಳಿದಂತೆ, ನಾವು ವಿಭೂತಿಯ ನಡುವೆ ಉಳಿಯದೆ ಎದ್ದು ಮರುನಿರ್ಮಿಸಬೇಕು. ಜನರು ಶಾಂತಿಯನ್ನು ನಿರ್ಮಿಸದಿದ್ದರೂ ದೇವರು ಕಾರ್ಯನಿರ್ವಹಿಸುತ್ತಾನೆ.

ಪ್ರಶ್ನೆ: ನಾಲ್ಕು ವರ್ಷಗಳ ನಂತರ ಭವಿಷ್ಯದ ಸಾಧ್ಯತೆಗಳೇನು?

ಸಂವಾದಗಳು ಸೀಮಿತವಾಗಿದ್ದರೂ, ಭರವಸೆಯ ಕಿರಣಗಳನ್ನು ನೋಡಬೇಕು. ದೇವರಲ್ಲಿ ಹೆಚ್ಚು ನಂಬಿಕೆ ಇಟ್ಟಾಗ, ಈ ವಿಭೂತಿ ನಡುವೆ ಕೂಡ ಭರವಸೆಯನ್ನು ಕಂಡುಕೊಳ್ಳಬಹುದು.

ಧರ್ಮ ಸಭೆ ಉಕ್ರೇನ್ ಜನರಿಗೆ ನೀಡಬಹುದಾದ ಮಹತ್ತರ ಸಹಾಯವೆಂದರೆ ಆಧ್ಯಾತ್ಮಿಕ ಸಹಾಯ—ನಮ್ಮ ದೃಷ್ಟಿಯನ್ನು ವಿಸ್ತರಿಸಿ, ಪ್ರತಿದಿನದ ಕೆಟ್ಟತನದ ಮೇಲೆ ಮಾತ್ರ ಗಮನ ಕೊಡದೆ, ಆಶಾಭರಿತ ದೃಷ್ಟಿಯನ್ನು ಉಳಿಸಿಕೊಳ್ಳುವುದು.

ಸೈನಿಕ ಚಾಪ್ಲೇನ್‌ಗಳು ಹೇಳುವಂತೆ: “ಯುದ್ಧಭೂಮಿಯಲ್ಲಿ ಭರವಸೆ ಅಲ್ಪವಾಗಿರುತ್ತದೆ. ನಾವು ಸೈನಿಕರಿಗೆ ದೇವರಿಂದ ಬರುವ ಭರವಸೆಯನ್ನು ನೀಡಬೇಕು.

ಆದ್ದರಿಂದ, ಮುಖ್ಯವಾಗಿ ನಾವು ನೀಡಬಹುದಾದ ಎರಡು ಅಮೂಲ್ಯ ಕೊಡುಗೆಗಳು—ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಭರವಸೆ ಎಂಬುದಾಗಿ ತಿಳಿಸಿದರು.

24 ಫೆಬ್ರವರಿ 2026, 18:03