ಜೂಬಿಲಿ ವರ್ಷದ ಸಂದರ್ಭದಲ್ಲಿ 3.3 ಕೋಟಿಗೂ ಹೆಚ್ಚು ಯಾತ್ರಿಕರುರೋಮ್‌ಗೆ ಭೇಟಿ
ವ್ಯಾಟಿಕನ್ ವರದಿ
ಪವಿತ್ರ ವರ್ಷದ ಅವಧಿಯಲ್ಲಿ 185 ದೇಶಗಳಿಂದ ಸುಮಾರು 3.35 ಕೋಟಿ ಯಾತ್ರಿಕರು ರೋಮ್‌ಗೆ ಆಗಮಿಸಿದರು ಎಂದು ಮಹಾಧರ್ಮಾಧ್ಯಕ್ಷ ರಿನೋ ಫಿಸಿಚೆಲ್ಲಾ ಅವರು ತಿಳಿಸಿದ್ದಾರೆ.
ಜಗದ್ಗುರು XIVನೇ ಲಿಯೋರವರು ಜನವರಿ 6ರಂದು ಸಂತ ಪೀಟರ್ ಮಹಾದೇವಾಲಯದ ಪವಿತ್ರ ಬಾಗಿಲನ್ನು ಮುಚ್ಚುವ ಮೂಲಕ ಜೂಬಿಲಿಯನ್ನು ಅಧಿಕೃತವಾಗಿ ಸಮಾಪ್ತಿಗೊಳಿಸಲಿರುವ ಹಿನ್ನೆಲೆಯಲ್ಲಿ, ಕಳೆದ ವರ್ಷದ ಸಾರಾಂಶವನ್ನು ವಿವರಿಸುವ ಸಂದರ್ಭದಲ್ಲಿ ಅವರು ಈ ಅಂಕಿಅಂಶಗಳನ್ನು ಪ್ರಕಟಿಸಿದರು.
ಪವಿತ್ರ ವರ್ಷದ ಅವಧಿಯಲ್ಲಿ ಸಂಪೂರ್ಣ ಜಗತ್ತೇ ರೋಮ್ ಗೆ ಬಂದಂತಾಯಿತು ಎಂದು ಅವರು ಹೇಳಿದರು. ರೋಮ್ ವಿಶ್ವವಿದ್ಯಾಲಯವು ಮೊದಲಿಗೆ ಅಂದಾಜಿಸಿದ್ದ ಸುಮಾರು 3.1 ಕೋಟಿ ಯಾತ್ರಿಕರ ಸಂಖ್ಯೆಯನ್ನು ಇದು ಮೀರಿಸಿದೆ ಎಂದು ಉಲ್ಲೇಖಿಸಿದರು.
ಧರ್ಮಸಭೆಯ ಜೊತೆಗೆ ನಿಕಟ ಸಹಕಾರದಿಂದ ಕಾರ್ಯನಿರ್ವಹಿಸಿದ ಸ್ಥಳೀಯ ನಾಗರಿಕ ಆಡಳಿತದ ಅಧಿಕಾರಿಗಳೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರು ಇದನ್ನು ಏಕಮತದಿಂದ “ಜೂಬಿಲಿ ವಿಧಾನ” ಎಂದು ಕರೆದರು. ಈ ವಿಧಾನದಿಂದ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಗಳ ನಿರ್ಮಾಣ ಸಾಧ್ಯವಾಯಿತು.
ಯೂರೋಪ್‌ನಿಂದಲೇ ಹೆಚ್ಚಿನ ಯಾತ್ರಿಕರು ಆಗಮಿಸಿದ್ದು, ಒಟ್ಟು ಯಾತ್ರಿಕರಲ್ಲಿ 62% ಯೂರೋಪಿನವರು. ಭಾಗವಹಿಸಿದವರ ಸಂಖ್ಯೆಯಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ. ಉತ್ತರ ಅಮೇರಿಕಾ ಎರಡನೇ ಸ್ಥಾನದಲ್ಲಿದ್ದು, ಅಲ್ಲಿಗೆ 17% ಯಾತ್ರಿಕರು ಬಂದಿದ್ದರು. ಇಟಲಿಯ ನಂತರ ಅಮೇರಿಕ ಸಂಯುಕ್ತ ಸಂಸ್ಥಾನ, ಸ್ಪೇನ್, ಬ್ರೆಜಿಲ್ ಮತ್ತು ಪೋಲೆಂಡ್ ಪ್ರಮುಖ ರಾಷ್ಟ್ರಗಳಾಗಿವೆ.
ಭವಿಷ್ಯದತ್ತ ನೋಡುವ ಆಧ್ಯಾತ್ಮಿಕ ಜೂಬಿಲಿ
ಯಾತ್ರಿಕರ ಸಂಖ್ಯೆ ಅಥವಾ 35 ಪ್ರಮುಖ ಕಾರ್ಯಕ್ರಮಗಳು ಮಾತ್ರ ಈ ವರ್ಷದ ನಿಜವಾದ ಮಹತ್ವವನ್ನು ತೋರಿಸುವುದಿಲ್ಲ. ಜನರ ಜೀವನವನ್ನು ಆಂತರಿಕವಾಗಿ ಸ್ಪರ್ಶಿಸಿ, ನವೀಕರಿಸುವುದೇ ಈ ವರ್ಷದ ಪ್ರಮುಖ ಗುರಿಯಾಗಿತ್ತು.
ಜೂಬಿಲಿಯ ಮೂಲದಲ್ಲಿದ್ದ ಆಧ್ಯಾತ್ಮಿಕ ಆಯಾಮವು ಪ್ರಾರ್ಥನೆ ಮತ್ತು ಪರಿವರ್ತನೆಯತ್ತ ಆಳವಾದ ಆಸೆ ಹೊಂದಿದ ಜನರನ್ನು ಚಲಿಸುವಂತೆ ಮಾಡಿತು ಎಂದು ಮಹಾಧರ್ಮಾಧ್ಯಕ್ಷ ಫಿಸಿಚೆಲ್ಲಾ ಹೇಳಿದರು.
ಜಗದ್ಗುರುಗಳು ಮಹಾದೇವಾಲಯಗಳು ಮತ್ತು ಪವಿತ್ರ ಮೆಟ್ಟಿಲುಗಳಂತಹ ಪ್ರಾರ್ಥನಾ ಕೇಂದ್ರಗಳಲ್ಲಿ ಅಪೂರ್ವ ಸಂಖ್ಯೆಯ ಜನರು ಭೇಟಿ ನೀಡಿದರು. ಪಾಪ ನಿವೇದನೆ ಹೆಚ್ಚಾದವು, ಹಾಗೂ ಸಂಪೂರ್ಣ ಕ್ಷಮೆಯ ಜೂಬಿಲಿಯ ಅನುಭವ ಎಲ್ಲರಿಗೂ ತಲುಪಿತು ಎಂದು ಅವರು ಹೇಳಿದರು.
ಜೂಬಿಲಿ ಅಂತ್ಯಗೊಳ್ಳುತ್ತಿದೆ, ಆದರೆ ಅದು ನೀಡಿದ ಆಶೆಯ ಚಿಹ್ನೆಗಳು ಮುಂದುವರಿಯುತ್ತವೆ. ಶಾಂತಿ ಮತ್ತು ನೆಮ್ಮದಿ ತುಂಬಿದ ಭವಿಷ್ಯಕ್ಕಾಗಿ ದಾರಿಯನ್ನು ಇದು ತೆರೆದಿದೆ. ಸ್ಪೆಸ್ ನಾನ್ ಕಾನ್ಪುದಿತ್ ಜೂಬಿಲಿಯ ಘೋಷಣೆಯ ಉದ್ದೇಶದಂತೆ, ಈ ಪವಿತ್ರ ವರ್ಷವು ಎಲ್ಲರಿಗೂ ಆಶೆಯನ್ನು ಪುನರುಜ್ಜೀವನಗೊಳಿಸುವ ಅವಕಾಶವಾಯಿತು ಎಂದು ಅವರು ವಿವರಿಸಿದರು.
7,000 ಸ್ವಯಂಸೇವಕರ ಉದಾರ ಸೇವೆ
ವೈಯುಕ್ತಿಕತೆಯು ಹೆಚ್ಚುತ್ತಿರುವ ಈ ಯುಗದಲ್ಲಿ, ಅನೇಕ ಸ್ವಯಂಸೇವಕರ ಉದಾರ ಸೇವೆ ಬಹುಮುಖ್ಯವಾಗಿದೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.
ಪವಿತ್ರ ವರ್ಷದ ಅವಧಿಯಲ್ಲಿ 5,000 ಸ್ವಯಂಸೇವಕರು ಸೇವೆ ಸಲ್ಲಿಸಿದರು. ಜೊತೆಗೆ, ಮಾಲ್ಟಾದ ಆದೇಶ 2,000 ಸದಸ್ಯರು ನಾಲ್ಕು ಜಗದ್ಗುರುಗಳ ಮಹಾದೇವಾಲಯಗಳಲ್ಲಿ ಪ್ರಥಮ ಚಿಕಿತ್ಸೆ ಸೇವೆಗಳನ್ನು ಒದಗಿಸಿದರು.
ಸಂವಾದ ಮತ್ತು ಸಹಕಾರ: ಜೂಬಿಲಿ ವಿಧಾನ
ಇಟಲಿಯ ಸಚಿವ ಸಂಪುಟದ ಕಾರ್ಯದರ್ಶಿ ಅಲ್ಫ್ರೆಡೊ ಮಾಂಟೋವಾನೊ ಅವರು ಜೂಬಿಲಿ ವಿಧಾನವನ್ನು ವಿವರಿಸುತ್ತಾ ಹೇಳಿದರು:
ರಾಜ್ಯ ಆಡಳಿತವು ಇತರ ಇಲಾಖೆಗಳ ಮೇಲೆ ಆಜ್ಞಾಪಿಸುವುದಕ್ಕಿಂತ ಅವುಗಳನ್ನು ಸಂಯೋಜಿಸಬೇಕು. ಸಮಸ್ಯೆಗಳನ್ನು ಸೃಷ್ಟಿಸುವ ಬದಲು ಅವುಗಳನ್ನು ಪರಿಹರಿಸುವ ಸಂಯೋಜನಾ ಸಭೆಗಳು ನಡೆಯಬೇಕು. ಸಾಧನೆಗಳು ಎಲ್ಲರ ಸಹಕಾರದ ಫಲವೆಂದು ಪರಿಗಣಿಸಬೇಕು.
ಇದರಿಂದ ಆಡಳಿತ ವ್ಯವಸ್ಥೆಯು ಆಧ್ಯಾತ್ಮಿಕತೆಯ ಸೇವೆಗೆ ನಿಲ್ಲುವಂತಾಯಿತು.
ಎಲ್ಲರಿಗೂ ಆತಿಥ್ಯ ನೀಡಿದ ಶಾಶ್ವತ ನಗರ
ರೋಮ್‌ನ ನಗರಾಧ್ಯಕ್ಷ ಹಾಗೂ ಜೂಬಿಲಿಯ ವಿಶೇಷ ಸರ್ಕಾರಿ ಆಯುಕ್ತರಾದ ರೊಬೆರ್ಟೊ ಗುಆಲ್ತಿಯೇರಿ ರವರು, ನಗರ ಮತ್ತು ಅದರ ನಿವಾಸಿಗಳು ಅಪಾರ ಸಂಖ್ಯೆಯ ಯಾತ್ರಿಕರನ್ನು ಸಹನಶೀಲತೆಯಿಂದ ಸ್ವಾಗತಿಸಿದರು ಎಂದು ಹೇಳಿದರು.
ಯಾತ್ರಿಕರು ಬಂದಿದ್ದರಿಂದ ರೋಮ್‌ನ ಪ್ರವಾಸೋದ್ಯಮ ಅಥವಾ ನಾಗರಿಕ ಸೇವೆಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಲಿಲ್ಲ. ಬದಲಾಗಿ, ಜೂಬಿಲಿಯು ನಗರಕ್ಕೆ ಚೈತನ್ಯ ನೀಡಿತು ಎಂದು ಅವರು ಹೇಳಿದರು.
ಯಾತ್ರಿಕರ ಸಂತೋಷ, ನಂಬಿಕೆ ಮತ್ತು ಆಶೆಯು ರೋಮನ್ನರ ಹೃದಯಗಳನ್ನು ಸ್ಪರ್ಶಿಸಿತು. ಆಗಸ್ಟ್‌ನಲ್ಲಿ ನಡೆದ ಯುವಕರ ಜೂಬಿಲಿಯ ಸಂದರ್ಭದಲ್ಲಿ ಟೊರ್ ವರ್ಗಾಟಾದಲ್ಲಿ ನಡೆದ ಕಾರ್ಯಕ್ರಮವು ನಮ್ಮ ನಗರದ ಮತ್ತು ಚರ್ಚ್‌ನ ಇತಿಹಾಸದಲ್ಲೇ ಅಚ್ಚಳಿಯದ ಘಟನೆಯಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ಸಿಬ್ಬಂದಿ ಮತ್ತು ಭದ್ರತಾ ಪಡೆಗಳ ಕೊಡುಗೆ
ಲಾಜಿಯೋ ಪ್ರದೇಶದ ಅಧ್ಯಕ್ಷ ಫ್ರಾನ್ಚೆಸ್ಕೊ ರೊಕ್ಕಾ ರವರು ಹೇಳಿದರು.
ಜೂಬಿಲಿ ವಿಧಾನವು ಸ್ಪರ್ಧೆಯಲ್ಲದೆ ಶಾಂತ ಸಹಕಾರದ ಮನೋಭಾವವನ್ನು ಬೆಳೆಸಿತು. ತುರ್ತು ವೈದ್ಯಕೀಯ ಸೇವೆಗಳು 5,80,000 ಕಾರ್ಯಾಚರಣೆಗಳನ್ನು ನಡೆಸಿದವು, ಇದು ಹಿಂದಿನ ವರ್ಷಕ್ಕಿಂತ 40,000 ಹೆಚ್ಚು. ತುರ್ತು ವಿಭಾಗಗಳಿಗೆ 16 ಲಕ್ಷ ಭೇಟಿಗಳು ನಡೆದಿದ್ದು, 2024ಕ್ಕಿಂತ 1 ಲಕ್ಷ ಹೆಚ್ಚು ಸೇವೆಗಳು ನಡೆದಿದೆ ಎಂದರು.
ಕೊನೆಯಲ್ಲಿ, ರೋಮ್‌ನ ಆಡಳಿತಾಧಿಕಾರಿ ಲಾಂಬೆರ್ಟೊ ಜಿಯಾನ್ನಿನಿರವರು ಹೇಳಿದರು
ಭದ್ರತೆ ಮತ್ತು ನೆಮ್ಮದಿ ಎರಡನ್ನೂ ಒದಗಿಸುವುದು ನಮ್ಮ ಗುರಿಯಾಗಿತ್ತು. ಸೈನಿಕರಣದ ಮೂಲಕವಲ್ಲ, ಸಮಸ್ಯೆಗಳನ್ನು ತಡೆಗಟ್ಟುವ ಮೂಲಕ ಭದ್ರತೆಯನ್ನು ಒದಗಿಸಿದ್ದೇವೆ. ಅತಿ ದೊಡ್ಡ ಸಕ೯ಸ್ ಸ್ಥಳದಲ್ಲಿ ಸ್ಥಾಪಿಸಲಾದ ಪಾಪನಿವೇದನ ಕೋಣೆಗಳೊಂದಿಗೆ ನಡೆದ ಯುವಕರ ಜೂಬಿಲಿ ಎಲ್ಲರ ಸ್ಮರಣೆಯಲ್ಲಿ ಉಳಿಯುವ ವಿಶಿಷ್ಟ ಅನುಭವವಾಗಿತ್ತು ಎಂದರು.