ಮೈಕೆಲ್ ಬುಬ್ಲೇ: ನಾನು ಸಂಗೀತವನ್ನು ಕೇಳುವಾಗ, ದೇವರ ಧ್ವನಿಯನ್ನು ಕೇಳುವಂತಾಗುತ್ತದೆ.
ನಾನು ಸಂಗೀತವನ್ನು ಕೇಳುವಾಗ, ದೇವರ ಧ್ವನಿಯನ್ನು ಕೇಳುವಂತಾಗುತ್ತದೆ ಎಂದು ಮೈಕೆಲ್ ಬುಬ್ಲೇ ಅವರು ಡಿಸೆಂಬರ್ 6 ರಂದು ಬಡವರಿಗಾಗಿ ನಡೆಯಲಿರುವ ವ್ಯಾಟಿಕನ್‌ನ ಸಂಗೀತ ಕಾರ್ಯಕ್ರಮದ 6ನೇ ಆವೃತ್ತಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2015ರಲ್ಲಿ ಆರಂಭಗೊಂಡ ಈ ಬಡವರಿಗಾಗಿ ನಡೆಯಲಿರುವ ಸಂಗೀತ ಕಚೇರಿ, VIನೇ ಪಾಲ್ ಸಭಾಂಗಣದಲ್ಲಿ 3,000 ಆಸನಗಳನ್ನು ವಿಶೇಷವಾಗಿ ನಿರಾಶ್ರಿತರು, ವಲಸಿಗರು, ವಿಶೇಷ ಅನುಮತಿಗಳೊಂದಿಗೆ ಬಂಧಿತರು, ಹಾಗೂ ಮಾನಸಿಕ ಮತ್ತು ಸಾಮಾಜಿಕ ಸಂಕಷ್ಟದಲ್ಲಿರುವವರಿಗಾಗಿ ಮೀಸಲಿಟ್ಟರು. ಕಾರ್ಯಕ್ರಮದ ನಂತರ, ಅವಶ್ಯಕತೆಯಲ್ಲಿರುವವರಿಗೆ ಭೋಜನ ಹಾಗೂ ಆರಾಮಕ್ಕೆ ಬೇಕಾದ ವಸ್ತುಗಳನ್ನು ನೀಡಲಾಯಿತು.
ಈ ಕಾರ್ಯಕ್ರಮವನ್ನು ಆಯೋಜಿಸುವವರಲ್ಲಿ ಒಬ್ಬರಾದ ಹಿರಿಯ ಧಮ೯ಗುರು ಮಾರ್ಕೋ ಫ್ರಿಸಿನಾ, ಸೆರೆನಾ ಆಟಿಯೇರಿ ಮತ್ತು ನೋವಾ ಓಪೆರಾ ಆರ್ಕೆಸ್ಟ್ರಾ ಅವರೊಂದಿಗೆ, ಆಗಮನ ಕಾಲದ ಆರಂಭದಲ್ಲಿ VIನೇ ಪಾಲ್ ಸಭಾಂಗಣ ಸಂಗೀತದಿಂದ ತುಂಬಿಕೊಳ್ಳಲಿದೆ ಎಂದರು.
ಈ ಕಾರ್ಯಕ್ರಮವನ್ನು ಬುಬ್ಲೇ, ಈ ಕ್ಷಣಕ್ಕೆ ಗೌರವ ಸಲ್ಲಿಸುವುದಕ್ಕೂ, ಸೇವೆ ಸಲ್ಲಿಸುವುದಕ್ಕೂ ಮಾರ್ಗವಾಗಿದ್ದು, ಜೊತೆಗೆ ಹಬ್ಬವನ್ನು ಆಚರಿಸುವುದಾಗಿದೆ. ಕ್ರಿಸ್‌ಮಸ್ ಎಂದರೆ ಕ್ರಿಸ್ತನ ಜನನವನ್ನು ಸಂತೋಷದಿಂದ ಆಚರಿಸುವುದಾಗಿದೆ ಎಂದು ವಿವರಿಸಿದರು.
ಜಗದ್ಗುರುಗಳಿಂದ ಬಂದ ಹಾಡುಗಳ ಬೇಡಿಕೆ
ಜೀವನಪೂರ್ತಿ ಕಾಥೋಲಿಕನಾಗಿರುವ ಬುಬ್ಲೇ, ಇಂದು ಬೆಳಿಗ್ಗೆ ಜಗದ್ಗುರು XIVನೇ ಲಿಯೋ ಅವರನ್ನು ಭೇಟಿಯಾದ ಕ್ಷಣವನ್ನು ತನ್ನ ಜೀವನದ ಶ್ರೇಷ್ಠ ಕ್ಷಣಗಳಲ್ಲಿ ಒಂದೆಂದು ನೆನಪಿಸಿಕೊಂಡರು. ಸಂಗೀತ ಕಚೇರಿಯಲ್ಲಿ ಪೋಪ್ ಅವರಿಗೆ ಯಾವ ಹಾಡುಗಳನ್ನು ಕೇಳಲು ಇಷ್ಟವಿರಬಹುದು ಎಂದು ಅವರು ವ್ಯಾಟಿಕನ್‌ನಲ್ಲಿರುವ ತನ್ನ ಸ್ನೇಹಿತರನ್ನು ಕೇಳಿದರು. ಜಗದ್ಗುರು ಕೇಳಿದ ಹಾಡುಗಳಲ್ಲಿ ಒಂದು “ಆವೆ ಮರಿಯಾ”. ಈ ಹಾಡನ್ನು ಕೇವಲ ಒಮ್ಮೆ ಮಾತ್ರ ಹಾಡಿದ್ದೇನೆ ಎಂದು ಬುಬ್ಲೇ ಹೇಳಿದರು.
ಅವರು ಕೇಳಿದಾಗ ನನಗೆ ತುಂಬಾ ಆತಂಕವಾಯಿತು. ನಾನು ಜಗದ್ಗುರುಗಳನ್ನು ಅಥವಾ ಯಾರನ್ನಾದರೂ ನಿರಾಶೆಗೊಳಿಸಬಾರದೆಂದು ಭಾವಿಸಿದೆ. ನನ್ನ ಹಿಂದೆ ಇರುವ ಅದ್ಭುತ ತಂಡ—ಸ್ವರಮಂಡಳಿ ಮತ್ತು ಆರ್ಕೆಸ್ಟ್ರಾ—ನೋಡಿದಾಗ ಭಯಪಡುವ ಅಗತ್ಯವಿಲ್ಲ ಎಂದು ಅರಿತುಕೊಂಡೆ. ಆವೆ ಮರಿಯಾ ಮಾತ್ರವಲ್ಲದೆ, ಈ ಸಂಗೀತ ಕಚೇರಿಯಲ್ಲಿ ನಾನು ಹಾಡುವ ಅನೇಕ ಹಾಡುಗಳನ್ನು ಸ್ವತಃ ಜಗದ್ಗುರು XIVನೇ ಲಿಯೋರವರು ಕೇಳಿದ್ದರು ಎಂದು ಬುಬ್ಲೇ ಹಂಚಿಕೊಂಡರು.
ಸಂಗೀತವು ದೇವರಿಂದ ದೊರೆತ ವರ
ತಮ್ಮ ನಂಬಿಕೆ ಸಂಗೀತವನ್ನು ಹೇಗೆ ಪ್ರೇರೇಪಿಸಿದೆ ಎಂದು ಕೇಳಿದಾಗ, ಬುಬ್ಲೇ, ತನ್ನ ನಂಬಿಕೆ ತನ್ನ ಪ್ರತಿಯೊಂದು ಕೆಲಸಕ್ಕೂ ಮತ್ತು ಪ್ರತಿಯೊಂದು ನಿರ್ಧಾರಕ್ಕೂ ಪ್ರಭಾವ ಬೀರುತ್ತದೆ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಬ್ಬ ಕಲಾವಿದನಿಗೂ ತನ್ನದೇ ಆದ ಗುರುತು ಮತ್ತು ವೇದಿಕೆಯಿದೆ. ತನ್ನ ನಂಬಿಕೆಯ ಕಾರಣದಿಂದ ತನ್ನ ಗುರುತು “ದಯೆ, ನಿರೀಕ್ಷೆ ಮತ್ತು ಪ್ರೀತಿ” ಯಿಂದ ರೂಪುಗೊಳ್ಳಬೇಕೆಂದು ಅವನು ಬಯಸುತ್ತಾನೆ.
ಯುದ್ಧಗಳು, ಹಿಂಸಾಚಾರ ಮತ್ತು ಅನೇಕ ಸವಾಲುಗಳಿಂದ ಕೂಡಿರುವ ಜಗತ್ತಿನಲ್ಲಿ, ನಂಬಿಕೆ ಅಂಧಕಾರದ ಮಧ್ಯದಲ್ಲಿ ಬೆಳಕಿನಂತೆ ಎಂದು ಅವರು ಹೇಳಿದರು.
ನಿಮಗೆ ನಂಬಿಕೆ ಇದ್ದರೆ, ನಿಮ್ಮೊಳಗೆ ಒಂದು ದೀಪ ಇರುತ್ತದೆ. ಆ ನಂಬಿಕೆ ಮತ್ತು ಬೆಳಕು ನಿಮ್ಮೊಳಗಿದ್ದರೆ, ನೀವು ನಿಮ್ಮ ದಾರಿಯನ್ನು ಕಂಡುಕೊಳ್ಳಬಹುದು ಎಂದು ಬುಬ್ಲೇ ಹೇಳಿದರು. ತನ್ನ ಸಂಗೀತವೇ ತನ್ನ ನಂಬಿಕೆಯ ಬೆಳಕನ್ನು ಹಂಚಿಕೊಳ್ಳುವ ಮಾರ್ಗವಾಗಿದೆ ಎಂದು ಅವರು ತಿಳಿಸಿದರು.
ಸಂಗೀತವು ಕೇವಲ ಪದಗಳಲ್ಲಾ ಅಥವಾ ಸ್ವರಗಳಿಗೆ ಸೀಮಿತವಲ್ಲ. ಅದು ದೇವರಿಂದ ದೊರೆತ ವರ ಎಂದು ಹೇಳುವ ಅವರು, ಈ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ದೊರೆತಿರುವುದಕ್ಕೆ ತೀವ್ರ ವಿನಯಭಾವನೆ ವ್ಯಕ್ತಪಡಿಸಿದರು.
ನಾನು ಶುಭವಾರ್ತೆಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿದೆ. ಸಂಕಷ್ಟದಲ್ಲಿರುವವರೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ದುಃಖವು ಮನುಷ್ಯನನ್ನು ದೇವರ ಹತ್ತಿರಕ್ಕೆ ಕರೆದೊಯ್ಯುತ್ತದೆ ಎಂದು ಹೇಳಿದರು.
ಬಡವರಲ್ಲಿಯೇ ದೇವರನ್ನು ನೋಡುವುದು
ಪತ್ರಿಕಾಗೋಷ್ಠಿಯ ನಂತರ ವ್ಯಾಟಿಕನ್ ನ್ಯೂಸ್‌ನ ವಂ.ಸ್ವಾಮಿ ಫೆಲಿಪೆ ಹೆರೇರಾ ಅವರೊಂದಿಗೆ ಮಾತನಾಡಿದ ಬುಬ್ಲೇ, ಈ ಸಂಗೀತ ಕಚೇರಿಯಲ್ಲಿ ಹಾಡುವುದು ಸೇವೆಯಾಗಿ ಇರುವ ಗೌರವ ಎಂದು ಹೇಳಿದರು. ತನ್ನ ಜೀವನದಲ್ಲಿ ನಂಬಿಕೆ ಸದಾ ಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹಂಚಿಕೊಂಡರು.
ನೀವು ನಂಬಿಕೆಯನ್ನು ಹರಡುವ ಕಾರ್ಯದ ಭಾಗವಾಗಿದ್ದೀರಿ ಎಂದು ತಿಳಿಯುವುದು ಸುಂದರ ಅನುಭವ ಎಂದು ಅವರು ಹೇಳಿದರು. ಸಂಗೀತ ಕ್ಷೇತ್ರದಲ್ಲಿಯೂ ತನ್ನ ನಂಬಿಕೆ ಜೀವನದ ಕೇಂದ್ರವಾಗಿರುವುದು ಒಂದು ಆಶೀರ್ವಾದವೇ ಆಗಿದ್ದು, ದೇವರಿಗೆ ತನ್ನ ಬಗ್ಗೆ ಒಂದು ಯೋಜನೆ ಇದೆ ಎಂಬ ವಿಶ್ವಾಸ ನೀಡುತ್ತದೆ ಎಂದು ಬುಬ್ಲೇ ಹೇಳಿದರು. ಅದನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಕಷ್ಟವಾದರೂ, ನೀವು ಈಗಿರುವ ಸ್ಥಳಕ್ಕೆ ಒಂದು ಕಾರಣವಿರುವುದು ಖಚಿತ ಎಂದು ಅವರು ಸ್ಪಷ್ಟಪಡಿಸಿದರು.
ಈ ಕಾರ್ಯಕ್ರಮವು ತನ್ನ ನಾಲ್ಕು ಮಕ್ಕಳಿಗೆ ಕಲಿಕೆಯಾಗಬಹುದು ಎಂದು ಹೇಳುತ್ತಾ, ಬೀದಿಯಲ್ಲಿ ನಿರಾಶ್ರಿತರನ್ನು ಕಂಡಾಗ, ಅವರೆಲ್ಲರಲ್ಲಿಯೂ ದೇವರನ್ನು ಕಾಣಬಹುದೆಂದು ಮಕ್ಕಳಿಗೆ ಹೇಳುತ್ತೇನೆ ಎಂದು ಬುಬ್ಲೇ ವಿವರಿಸಿದರು. ಈ ಕಾರ್ಯಕ್ರಮವು ಇತರ ಸಂಗೀತ ಕಾರ್ಯಕ್ರಮಗಳಿಗಿಂತ ಭಿನ್ನವಾದರೂ, ತಾನು ಪ್ರತಿಯೊಬ್ಬರೊಂದಿಗೆ ಹೊಂದುವಂತೆ ಇಲ್ಲಿಯ ಬಡ ಜನರೊಂದಿಗೆ ಕೂಡ ಆಧ್ಯಾತ್ಮಿಕ ಬಂಧವನ್ನು ಹೊಂದುವುದಾಗಿ ಅವರು ಹೇಳಿದರು. ನನ್ನ ಸಂತೋಷವೆಂದರೆ ಜನರೊಂದಿಗೆ ಹೊಂದುವ ನಿಜವಾದ, ಆಧ್ಯಾತ್ಮಿಕ ಸಂಪರ್ಕ. ಅವರು ಸುಂದರ ಆತ್ಮಗಳು, ಎಂದು ಹೇಳಿದರು. ಪ್ರತಿ ಪ್ರದರ್ಶನ ಮಾಡುವ ಮುನ್ನ ಈ ಬಾರಿ ಕೂಡ ಅವರು ಸಣ್ಣ ಪ್ರಾರ್ಥನೆ ಮಾಡುವುದಾಗಿ ಹೇಳಿದರು. ನನಗೆ ಈ ಸುಂದರ ಆತ್ಮಗಳೊಂದಿಗೆ ಸಂಪರ್ಕ ಸಾಧಿಸುವ ಶಕ್ತಿಯನ್ನು ನೀಡಿದಕ್ಕಾಗಿ ಧನ್ಯವಾದಗಳು ದೇವರೆ ಎಂದು ಪ್ರಾರ್ಥಿಸಿದರು.