ಕಾರ್ಡಿನಲ್ ಪ್ಯಾರೊಲಿನ್: ಕಾಬೊ ಡೆಲ್ಗಾಡೊ ಸಂಘರ್ಷದಲ್ಲಿ ಬಲಿಯಾದವರನ್ನು ನಾವು ಮರೆಯಬಾರದು
ಇತ್ತೀಚೆಗೆ ಮೊಜಾಂಬಿಕ್‌ಗೆ ಭೇಟಿ ನೀಡಿ ಮರಳಿದ ನಂತರ ವ್ಯಾಟಿಕನ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಕಾಬೊ ಡೆಲ್ಗಾಡೊ ಸಂಘರ್ಷವು ಮರೆಯಲ್ಪಟ್ಟ ಸಂಘರ್ಷಗಳ ಪಟ್ಟಿಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೇತ್ರೊ ಪ್ಯಾರೊಲಿನ್ ಹೇಳಿದ್ದಾರೆ. ಮಹಾಶಯರೆ, ನೀವು ಅಲ್ಲಿ ಕಂಡ ವಾಸ್ತವ್ಯವೇನು? ದೇಶವು ಎದುರಿಸುತ್ತಿರುವ ಕಷ್ಟಗಳು ಯಾವುವು? ಮತ್ತು ನೀವು ಕಂಡ ಆಶಾ ಸಂಕೇತಗಳು ಯಾವುವು? ಡಿಸೆಂಬರ್ 5ರಿಂದ 10ರವರೆಗೆ ನಾನು ಮೊಜಾಂಬಿಕ್‌ಗೆ ಮಾಡಿದ ಭೇಟಿ, 2019ರ ಸೆಪ್ಟೆಂಬರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ಪ್ರೇಷಿತರ ಭೇಟಿ ವೇಳೆ ಅನುಭವಿಸಿದ ಸಂತೋಷ ಮತ್ತು ಭಾವನೆಗಳನ್ನು ಮತ್ತೆ ನೆನಪಿಸಿತು. ನಿಸ್ಸಂದೇಹವಾಗಿ, ಆರು ವರ್ಷಗಳ ನಂತರ ಅನೇಕ ವಿಷಯಗಳು ಬದಲಾಗಿವೆ. ಆದರೆ ಬದಲಾಗದಿರುವುದು ಜನರ ಆತಿಥ್ಯ. ಅದು ಆಫ್ರಿಕಾದ ವಿಶೇಷ ಆಕರ್ಷಣೆ ಅದನ್ನು ತಕ್ಷಣವೇ ಅನುಭವಿಸಬಹುದು.
ಈ ಪ್ರಯಾಣಕ್ಕೆ ಮೂರು ಉದ್ದೇಶಗಳಿದ್ದವು:
ಪವಿತ್ರ ಪೀಠ ಮತ್ತು ಮೊಜಾಂಬಿಕ್ ನಡುವಿನ ರಾಜತಾಂತ್ರಿಕ ಸಂಬಂಧಗಳ 30ನೇ ವಾರ್ಷಿಕೋತ್ಸವದ ಆಚರಣೆ.
ರಾಷ್ಟ್ರೀಯ ಯುವ ದಿನಾಚರಣೆಯ ಸಮಾರೋಪ.
ಮತ್ತು ಕಾಬೊ ಡೆಲ್ಗಾಡೊಗೆ ಭೇಟಿ.
ಡಿಸೆಂಬರ್ 5ರಂದು ಮಾಪುಟೊದಲ್ಲಿರುವ ಪ್ರೇಷಿತರ ರಾಯಭಾರಿಗಳ 30ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಸಮಾರಂಭ ನಡೆಯಿತು. ಗಣರಾಜ್ಯದ ಅಧ್ಯಕ್ಷರಾದ ಮಾನ್ಯ ಡೇನಿಯಲ್ ಫ್ರಾನ್ಸಿಸ್ಕೋ ಚಾಪೊ, ಮಾಜಿ ಅಧ್ಯಕ್ಷ ಜೋಕ್ವಿಂ ಚಿಸ್ಸಾನೋ, ಹಾಗೂ ಸರ್ಕಾರ ಮತ್ತು ವಿರೋಧ ಪಕ್ಷದ ಪ್ರತಿನಿಧಿಗಳ ಉಪಸ್ಥಿತಿ, ಮೊಜಾಂಬಿಕ್‌ಗೆ ಶಾಂತಿ ಅಗತ್ಯವೆಂಬುದನ್ನು ನೆನಪಿಸುವ ಅವಕಾಶವನ್ನು ನನಗೆ ನೀಡಿತು.
ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳ ನಂತರ ಉಂಟಾದ ಗಂಭೀರ ಸಾಮಾಜಿಕ ಅಶಾಂತಿ ಮತ್ತು ಹಿಂಸಾಚಾರದ ಬಳಿಕ, ದೇಶವು ಈಗ ಶಾಂತ ಸ್ಥಿತಿಗೆ ಮರಳಿದೆ. ಆದರೂ, ಶಾಂತಿಯುತ ಸಹವಾಸವನ್ನು ಬಲಪಡಿಸಲು ಮತ್ತು ಸಂಸ್ಥಾತ್ಮಕ ಸುಧಾರಣೆಗಳನ್ನು ಉತ್ತೇಜಿಸಲು ಸಮಾವೇಶಾತ್ಮಕ ರಾಷ್ಟ್ರೀಯ ಸಂವಾದ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇದು ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆ, ವಿಶೇಷವಾಗಿ ದೇಶದ ಬಹುಸಂಖ್ಯೆಯಾದ ಯುವಜನತೆಗೆ ಆಸೆ ನೀಡುವ ದೃಷ್ಟಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯ ಸಮಾರೋಪ ಉಮ್ಮಸ್ಸಿನಲ್ಲಿ ಅವರ ಉತ್ಸಾಹವನ್ನು ನಾನು ನೇರವಾಗಿ ಅನುಭವಿಸಿದೆ.
2017ರಿಂದ ಉತ್ತರ ಮೊಜಾಂಬಿಕ್‌ನಲ್ಲಿ ನಡೆಯುತ್ತಿರುವ ಜಿಹಾದಿ ಬಂಡಾಯದ ಬಲಿಗಳಾದ ಸ್ಥಳಾಂತರಿತ ಸಮುದಾಯಗಳನ್ನು ನೀವು ಕಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಭೇಟಿಯಾದಿರಿ. ಅಲ್ಲಿ ನೀವು ಕಂಡ ಪರಿಸ್ಥಿತಿ ಹೇಗಿತ್ತು? ಅವರು ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ?
ಜಿಹಾದಿ ಭಯೋತ್ಪಾದಕ ಹಿಂಸೆಯಿಂದ ನರಳುತ್ತಿರುವ ಜನತೆಗೆ ವಿಶ್ವ ಧರ್ಮ ಹಾಗೂ ಜಗದ್ಗುರುಗಳ ಸಮೀಪತೆ ಮತ್ತು ಐಕ್ಯತೆಯನ್ನು ವ್ಯಕ್ತಪಡಿಸಲು ನಾನು ಎರಡು ದಿನಗಳನ್ನು ಕಾಬೊ ಡೆಲ್ಗಾಡೊದಲ್ಲಿ ಕಳೆದೆ. 2023ರ ಎರಡನೇ ಅರ್ಧದಿಂದ ಸಂಪೂರ್ಣ ಕಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಹರಡಿರುವ ಶಸ್ತ್ರಸಜ್ಜಿತ ಗುಂಪುಗಳ ದಾಳಿಗಳು, ನಾಂಪುಲಾ ಮತ್ತು ನಿಯಾಸ್ಸಾ ಪ್ರಾಂತ್ಯಗಳಿಗೂ ತಲುಪಿವೆ. 2022ರ ಸೆಪ್ಟೆಂಬರ್ 6ರಂದು, ಇಟಾಲಿಯನ್ ಕಾಂಬೋನಿ ಮಿಷನರಿ ಸಿಸ್ಟರ್ ಮರಿಯಾ ಡೆ ಕೊಪ್ಪಿ ಅವರನ್ನು ನಾಂಪುಲಾ ಪ್ರಾಂತ್ಯದ ನಕಾಲಾ ಧರ್ಮಕ್ಷೇತ್ರದ ಚಿಪೇನೆ ಮಿಷನ್‌ನಲ್ಲಿ ಹತ್ಯೆ ಮಾಡಲಾಯಿತು.
ಈ ಸಂಘರ್ಷದಿಂದ ಅಪಾರ ಪ್ರಮಾಣದ ಜನರು ಸ್ಥಳಾಂತರಗೊಂಡಿದ್ದರು. 2023ರ ಅಂತ್ಯದ ವೇಳೆಗೆ ಸುಮಾರು 7,65,000 ಜನರು ಸ್ಥಳಾಂತರಿತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಾಂತ್ಯದಾದ್ಯಂತ ಅನೇಕ ಶಿಬಿರಗಳಿವೆ. ಕೆಲವರನ್ನು ಸ್ಥಳೀಯ ಕುಟುಂಬಗಳು ಆಶ್ರಯಕ್ಕೆ ತೆಗೆದುಕೊಂಡಿವೆ.
ಡಿಸೆಂಬರ್ 9ರಂದು ನಾನು ನಮಿನಾವೆ ಶಿಬಿರಕ್ಕೆ ಭೇಟಿ ನೀಡಿದೆ. ಅಲ್ಲಿ ಸುಮಾರು 9,200 ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಸುಮಾರು 3,700 ಮಕ್ಕಳು ಇನ್ನೂ ಹೆಚ್ಚಿನವರು ಆಗಮಿಸುತ್ತಿದ್ದಾರೆ. ಅವರು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕೆಲವು ದಾನಸಂಸ್ಥೆಗಳ ಸಹಾಯವಿದ್ದರೂ, ಆಹಾರ, ಔಷಧಿ ಮತ್ತು ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ಇದಕ್ಕಿಂತಲೂ ದುಃಖಕರವಾಗಿ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಭವಿಸಿದ ಸೈಕ್ಲೋನ್ ಚಿಡೊ, ದುರ್ಬಲ ವಸ್ತುಗಳಿಂದ ನಿರ್ಮಿತ ಮನೆಗಳನ್ನು ಭಾರೀ ಹಾನಿಗೊಳಿಸಿದೆ.
ಅಲ್ಲಿ ಇರುವ ಮಕ್ಕಳು ಹಾಗೆಯೇ ಈ ಪ್ರದೇಶದ ಇತರ ಶಿಬಿರಗಳಲ್ಲಿ ಇರುವ ಲಕ್ಷಾಂತರ ಮಕ್ಕಳು ಶಿಕ್ಷಣದ ಸಮರ್ಪಕ ಅವಕಾಶವಿಲ್ಲದೆ ತಮ್ಮ ಭವಿಷ್ಯವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಸಾರಿಗೆ ಸೌಲಭ್ಯಗಳಿಲ್ಲದ ಕಾರಣ, ಯುವಕರು ಸಮೀಪದ ನಗರಗಳಿಗೆ ಹೋಗಿ ಸಣ್ಣ ಕೆಲಸಗಳನ್ನೂ ಹುಡುಕಲಾಗದೇ, ತೆರೆಯಲಾದ ಕಾರಾಗೃಹದಲ್ಲಿರುವಂತೆ ನಮಗೆ ಅನಿಸುತ್ತದೆ. ಅದು ಅತ್ಯಂತ ನೋವಿನ ಅನುಭವವಾಗಿತ್ತು. ಆ ಮುಖಗಳಲ್ಲಿ ಅಪಾರ ದುಃಖ, ಆಳವಾದ ನೋವು ಮತ್ತು ಉತ್ತರವೇ ಇಲ್ಲದ ಅನೇಕ ಪ್ರಶ್ನೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು.
ಟಾಂಜಾನಿಯಾ ಗಡಿಗೆ ಹೊಂದಿಕೊಂಡಿರುವ ಕಾಬೊ ಡೆಲ್ಗಾಡೊದಿಂದ ಈ ಸಂಘರ್ಷವು ದಕ್ಷಿಣದತ್ತ ವಿಸ್ತರಿಸಿ ನಾಂಪುಲಾ ಪ್ರಾಂತ್ಯವನ್ನೂ ತಲುಪಿದೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗದವರ ಹತ್ಯೆಗಳ ಕುರಿತು ವರದಿಗಳಿವೆ. ಈ ದುರಂತದ ಕಾರಣಗಳು ಯಾವುವು?
2017ಕ್ಕೂ ಮುನ್ನವೇ, ಟಾಂಜಾನಿಯಾದಿಂದ ಬಂದ ಅಥವಾ ಆ ದೇಶದ ಮೂಲಕ ಸಂಚರಿಸಿದ ಕೆಲ ಇಸ್ಲಾಂ ಅನುಯಾಯಿ ಚಟುವಟಿಕೆಗಳಿಂದ ಕಾಬೊ ಡೆಲ್ಗಾಡೊದ ಕೆಲವು ಪ್ರದೇಶಗಳಲ್ಲಿ ಅತಿವಾದದ ಲಕ್ಷಣಗಳು ಕಾಣಿಸಿಕೊಂಡಿದ್ದವು. 2017ರಲ್ಲಿ ಆರಂಭವಾದ ಹಿಂಸಾಚಾರ 2020ರಿಂದ ಮತ್ತಷ್ಟು ತೀವ್ರಗೊಂಡಿತು.
ಮುಖ್ಯವಾಗಿ ಹದಿಹರೆಯ ಮತ್ತು ಯುವಕರಿಂದ ಕೂಡಿರುವ ಶಸ್ತ್ರಸಜ್ಜಿತ ಗುಂಪುಗಳು – ಅಹ್ಲು ಸುನ್ನಾ ವ ಜಮಾ ಎಂಬ ಹೆಸರಿನಲ್ಲಿ, ಇಸ್ಲಾಮ್ ಧರ್ಮದ ರಾಜ್ಯಕ್ಕೆ ಸಂಬಂಧಪಟ್ಟ – ಜಿಹಾದಿ ತತ್ವಶಾಸ್ತ್ರದಿಂದ ಪ್ರೇರಿತವಾಗಿದ್ದು, ಖಲಿಫೇಟ್ ಸ್ಥಾಪನೆಯ ಕನಸು ಕಾಣುತ್ತಿವೆ. ಕ್ರೈಸ್ತರ ಹತ್ಯೆಗಳ ಘಟನೆಗಳು ನಡೆದಿವೆ ಮತ್ತು ಮುಂದುವರಿದಿವೆ.
ಈ ಸಂಘರ್ಷದ ಮೂಲ ಕಾರಣಗಳು ಸಂಕೀರ್ಣ ಮತ್ತು ಅನೇಕವಾಗಿದ್ದರೂ, ಧರ್ಮವನ್ನು ಕೆಲವರು ದುರುಪಯೋಗಪಡಿಸುತ್ತಿರುವುದನ್ನು ನಾವು ಮರೆಯಬಾರದು. ಶತಮಾನಗಳ ಕಾಲ ಮೊಜಾಂಬಿಕ್‌ನಲ್ಲಿ ಕ್ರೈಸ್ತಧರ್ಮ ಮತ್ತು ಇಸ್ಲಾಂ ಧರ್ಮ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಗೌರವದಿಂದ ಸಹಬಾಳ್ವೆ ನಡೆಸಿವೆ.
ಇಂದು ಕಾಬೊ ಡೆಲ್ಗಾಡೊದಲ್ಲಿ, ಬಡತನ, ನಿರುದ್ಯೋಗ, ಸ್ಥಳೀಯ ಸಂಪನ್ಮೂಲಗಳ ಶೋಷಣೆಯಿಂದ ಉಂಟಾದ ಅಸಮಾಧಾನ, ಜಾತಿ ಮತ್ತು ರಾಜಕೀಯ ಉದ್ವೇಗಗಳನ್ನು ಭಯೋತ್ಪಾದಕರು ದುರುಪಯೋಗಪಡಿಸಿಕೊಂಡು ಯುವಕರನ್ನು ಸೆಳೆಯುತ್ತಿದ್ದಾರೆ.
ಸ್ಥಳೀಯ ಮುಸ್ಲಿಂ ಜನಸಂಖ್ಯೆ – ಕಾಬೊ ಡೆಲ್ಗಾಡೊದಲ್ಲಿ ಬಹುಸಂಖ್ಯೆಯವರು ಧರ್ಮದ ದುರುಪಯೋಗವನ್ನು ವಿರೋಧಿಸುತ್ತಿದ್ದಾರೆ. ಆದರೂ ಅವರೊಳಗೇ ಜಿಹಾದಿ ಚಳವಳಿಗೆ ಸಹಾನುಭೂತಿ ಹೆಚ್ಚುತ್ತಿದೆ. ಮಸೀದಿಗಳಲ್ಲಿಯೂ ನಿಧಾನವಾಗಿ ಅತಿವಾದದ ಪ್ರಕ್ರಿಯೆ ನಡೆಯುತ್ತಿದೆ. ಕ್ರೈಸ್ತರು ಮತ್ತು ಕೆಲವು ಮುಸ್ಲಿಮರು ಭಯ ಮತ್ತು ನೋವಿನಲ್ಲಿ ಬದುಕುತ್ತಿದ್ದಾರೆ. ನಮ್ಮ ಕೆಲವು ಕಥೋಲಿಕ ವಿಶ್ವಾಸಿಗಳು ಯೇಸು ಕ್ರಿಸ್ತನಲ್ಲಿ ತಮ್ಮ ನಂಬಿಕೆಯನ್ನು ತ್ಯಜಿಸದೇ ಮರಣವನ್ನು ಎದುರಿಸಿದ್ದಾರೆ.
ಜನತೆಗೆ ಸಹಾಯ ಮಾಡಲು ಧರ್ಮಸಭೆ ಏನು ಮಾಡುತ್ತಿದೆ?
ಪೆಂಬಾ ಧರ್ಮಕ್ಷೇತ್ರದ ಗ್ರಾಮೀಣ ಸಾಕ್ಷಿಗಳು ನನಗೆ ಆಳವಾಗಿ ಸ್ಪರ್ಶಿಸಿದವು. ತಮ್ಮ ಧರ್ಮ ಕೇಂದ್ರಗಳನ್ನು ತೊರೆಯಬೇಕಾದ ಕೆಲವು ಯಾಜಕರು ಸ್ಥಳಾಂತರಿತ ಕುರುಬರಾಗಿ ತಮ್ಮ ಜನರೊಂದಿಗೆ ಸಾಗುತ್ತಿದ್ದಾರೆ. ಅಸುರಕ್ಷಿತ ಪರಿಸ್ಥಿತಿಯಲ್ಲಿದ್ದರೂ, ಕೆಲವು ಧಾರ್ಮಿಕ ಸಮುದಾಯಗಳು ಓಡಿ ಹೋಗುವ ಬದಲು, ತಮಗಿಂತ ಹೆಚ್ಚು ಕಷ್ಟದಲ್ಲಿರುವವರಿಗೆ ತಮ್ಮ ಬಾಗಿಲುಗಳನ್ನು ತೆರೆದಿವೆ. ಸ್ಥಳೀಯ ಧರ್ಮ ಸಭೆಯು ದುಃಖಿತ ಜನರನ್ನು ಕೈಬಿಟ್ಟಿಲ್ಲ ಈ ಸಾಕ್ಷ್ಯಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದೆ.
ಇದಲ್ಲದೆ, ಅನೇಕ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸಲು ವ್ಯಾಪಕ ಮಾನವೀಯ ಸಹಾಯ ಕಾರ್ಯಗಳು ನಡೆಯುತ್ತಿವೆ. ಧರ್ಮ ಸಭೆ, ಯುನೈಟೆಡ್ ನೇಷನ್ಸ್ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಸಹಕರಿಸಿ, ಸ್ಥಳಾಂತರಿತರಿಗೆ ಆಹಾರ, ಬಟ್ಟೆ ಮತ್ತು ಸುರಕ್ಷಿತ ಆಶ್ರಯ ಒದಗಿಸಲು ಶ್ರಮಿಸುತ್ತಿದೆ. ಪೆಂಬಾ ಧರ್ಮಕ್ಷೇತ್ರದ ದಾನದ ಪರಿಣಾಮಕಾರಿ ಸೇವೆ ವಿಶೇಷ ಪ್ರಶಂಸೆಗೆ ಅರ್ಹವಾಗಿದೆ. ಶಾಂತಿ ಮತ್ತು ಧಾರ್ಮಿಕ ಸೌಹಾರ್ದವನ್ನು ಉತ್ತೇಜಿಸುವ ಪ್ರಯತ್ನಗಳೂ ನಡೆಯುತ್ತಿವೆ. ಪೆಂಬಾದಲ್ಲಿ, ಮುಸ್ಲಿಂ ಪ್ರತಿನಿಧಿಗಳು ಮತ್ತು ಇತರ ಧರ್ಮಗಳ ಸದಸ್ಯರೊಂದಿಗೆ ನಡೆದ ಅಂತರಧರ್ಮೀಯ ಸಭೆಯಲ್ಲಿ ನಾನು ಭಾಗವಹಿಸಿದೆ.
ನಾವು ಏನು ಮಾಡಬಹುದು?
ಮೊದಲನೆಯದಾಗಿ, ಕಾಬೊ ಡೆಲ್ಗಾಡೊದಲ್ಲಿರುವ ನಮ್ಮ ಸಹೋದರ-ಸಹೋದರಿಯರನ್ನು ಮರೆಯಬಾರದು. ಅಂತರರಾಷ್ಟ್ರೀಯ ಸಮುದಾಯ – ವಿಶೇಷವಾಗಿ ದಕ್ಷಿಣ ಆಫ್ರಿಕಾ ಅಭಿವೃದ್ಧಿ ಸಮುದಾಯ ರುವಾಂಡಾ ಪಡೆಗಳೊಂದಿಗೆ ಸೇರಿ ಕೆಲವು ನಗರಗಳಲ್ಲಿ ಭದ್ರತೆಯನ್ನು ಪುನಃಸ್ಥಾಪಿಸಿದೆ. ಆದರೂ, ಈ ಸಂಘರ್ಷವು ಮರೆಯಲ್ಪಟ್ಟ ಸಂಘರ್ಷವಾಗುವ ಅಪಾಯವಿದೆ ಎಂಬ ಭಾವನೆ ನನಗಿದೆ.
ಈ ಕಾರಣದಿಂದಲೇ, ನನ್ನ ಭೇಟಿಯ ಸಮಯದಲ್ಲಿ ನಾನು ಈ ವಿಷಯವನ್ನು ಹಲವಾರು ಬಾರಿ ಉಲ್ಲೇಖಿಸಿದೆ. ಜಗತ್ತಿನ ಹೆಚ್ಚಿನ ಗಮನ ಮತ್ತು ಭಾಗವಹಿಸುವಿಕೆಗೆ ಇದು ಸಹಕಾರಿಯಾಗಲಿ ಎಂದು ನಾನು ಆಶಿಸುತ್ತೇನೆ. ಕ್ರೈಸ್ತರಾದ ನಾವು ಪ್ರಾರ್ಥನೆ ಮತ್ತು ಸಹೋದರತ್ವದ ದಾನ ಎಂಬ ಆಯುಧಗಳನ್ನು ಹೊಂದಿದ್ದೇವೆ. ಕಾಬೊ ಡೆಲ್ಗಾಡೊದ ಸ್ಥಳಾಂತರಿತಗಳಿಗಾಗಿ ಪ್ರಾರ್ಥಿಸುವುದು ಮತ್ತು ಸಹಾಯ ಕಾರ್ಯಗಳಿಗೆ ಬೆಂಬಲ ನೀಡುವುದು, ಅವರಿಗೆ ಏಕಾಂಗಿ ಅನುಭವವಾಗದಂತೆ ಮಾಡುತ್ತದೆ; ಜೊತೆಗೆ ನಮಗೂ ಕ್ರಿಸ್ಮಸ್ ಅನ್ನು ಅರ್ಥಪೂರ್ಣವಾಗಿ ಬದುಕುವ ಮಾರ್ಗವಾಗುತ್ತದೆ. ಬೆತ್ಲೆಹೇಮಿನಲ್ಲಿ ಜನಿಸಿದ ಶಾಂತಿಯ ರಾಜಕುಮಾರನು, ಪ್ರಿಯ ಮೊಜಾಂಬಿಕ್ ಭೂಮಿಗೆ ಶಾಂತಿಯನ್ನು ನೀಡಲಿ ಎಂದರು.