ಹುಡುಕಿ

Advent Sermon Advent Sermon  (ANSA)

ಪಾಸೋಲಿನಿ: ದೇವರನ್ನು ಅರಿಯುವ ಪ್ರಯಾಣದಲ್ಲಿ ಧರ್ಮ ಸಭೆಯ ಭೇಟಿಗೆ ಅವಕಾಶ ನೀಡಲಿ

ರಕ್ಷಣೆಯ ವಿಶ್ವವ್ಯಾಪಕತೆ: ಷರತ್ತುಗಳಿಲ್ಲದ ನಿರೀಕ್ಷೆ ಎಂಬುದು ಜಗದ್ಗುರುಗಳ ಸಮ್ಮುಖದಲ್ಲಿ VI ನೇ ಪಾಲ್ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ನೀಡಲಾದ ಆಗಮನ ಕಾಲದ ಮೂರನೆ ವಾರದ ಧ್ಯಾನದ ವಿಷಯವಾಗಿತ್ತು. ತಮ್ಮ ಉಪದೇಶದಲ್ಲಿ, ಜಗದ್ಗುರುಗಳ ಗೃಹದ ಪ್ರವಚನಕಾರರಾದ ವಂ.ಸ್ವಾಮಿ ರೊಬೆರ್ಟೊ ಪಾಸೋಲಿನಿ ಅವರು, ಅಜ್ಞಾತದತ್ತ ಧೈರ್ಯದಿಂದ ತೆರೆದುಕೊಳ್ಳಲು ಸಿದ್ಧರಾದ ಜ್ಞಾನಿಗಳ ಮನೋಭಾವದ ಮೇಲೆ ಗಮನ ಹರಿಸಿದರು.

ಯೇಸು ಕ್ರಿಸ್ತನ ಆಗಮನವನ್ನು ಸ್ವಾಗತಿಸಬೇಕಾದ, ವಿಸ್ತರಿಸಬೇಕಾದ ಮತ್ತು ಜಗತ್ತಿಗೆ ಅರ್ಪಿಸಬೇಕಾದ ಬೆಳಕಾಗಿ ಗುರುತಿಸುವುದೇ ಕ್ರಿಸ್ಮಸ್ ಹಾಗೂ ಜ್ಯೂಬಿಲಿ ನಮಗೆ ನೀಡುವ ಸವಾಲುಎಂದು ಜಗದ್ಗುರುಗಳ ಗೃಹದ ಪ್ರವಚನಕಾರರಾದ ವಂ.ಸ್ವಾಮಿ ರೊಬೆರ್ಟೊ ಪಾಸೋಲಿನಿ ಅವರು ಹೇಳಿದರು.

ಡಿಸೆಂಬರ್ 19 ರಂದು, ಜಗದ್ಗುರು XIVನೇ ಲಿಯೋರವರು ಮತ್ತು ರೋಮನ್ ಕ್ಯೂರಿಯಾ ಸದಸ್ಯರ ಸಮ್ಮುಖದಲ್ಲಿ IV ನೇಪಾಲ್  ಸಭಾಂಗಣದಲ್ಲಿ ನೀಡಿದ ತಮ್ಮ  ಆಗಮನ ಕಾಲದ ಮೂರನೇ ವಾರದ ಧ್ಯಾನದ ಆರಂಭದಲ್ಲೇ ಅವರು ಈ ವಿಚಾರವನ್ನು ಒತ್ತಿ ಹೇಳಿದರು.ರಕ್ಷಣೆಯ ವಿಶ್ವವ್ಯಾಪಕತೆ ಬಹಿರಂಗಗೊಳಿಸುವ ಬೆಳಕು ಈ ಧ್ಯಾನದ ವಿಷಯವಾಗಿತ್ತು.

ಕ್ಯಾಪುಚಿನ್ ಫ್ರಯರ್ ಅವರು ರಕ್ಷಣೆಯ ವಿಶ್ವವ್ಯಾಪಕ ಪ್ರಕಟನೆ ಕುರಿತು ಚಿಂತನೆ ನೀಡಿದರು. ಕ್ರಿಸ್ತನು ನಿಜವಾದ ಬೆಳಕು ಆತನು ಮಾನವ ಅನುಭವದ ಸಂಪೂರ್ಣ ಸಂಕೀರ್ಣತೆಯನ್ನು ಪ್ರಕಾಶಮಾನಗೊಳಿಸಲು, ಸ್ಪಷ್ಟಗೊಳಿಸಲು ಮತ್ತು ಮಾರ್ಗದರ್ಶನ ನೀಡಲು ಸಮರ್ಥನಾಗಿದ್ದಾನೆ. ಆತನು ಮಾನವನ ಪ್ರಶ್ನೆಗಳು, ಆಸೆಗಳು ಮತ್ತು ಹುಡುಕಾಟಗಳನ್ನು ಅಳಿಸಿಹಾಕುವುದಿಲ್ಲ, ಅವುಗಳನ್ನು ಜೋಡಿಸಿ, ಶುದ್ಧಗೊಳಿಸಿ, ಇನ್ನಷ್ಟು ಪೂರ್ಣ ಅರ್ಥದತ್ತ ನಡೆಸುತ್ತಾನೆ.

ಆದರೆ ಜಗತ್ತು ಈ ಬೆಳಕನ್ನು ಸ್ವೀಕರಿಸಲಿಲ್ಲ, ಏಕೆಂದರೆ ಮಾನವರು ಬೆಳಕಿಗಿಂತ ಅಂಧಕಾರವನ್ನೇ ಹೆಚ್ಚು ಪ್ರೀತಿಸಿದರು. ಸಮಸ್ಯೆ ಎಂದರೆ, ಈ ಬೆಳಕನ್ನು ಸ್ವಾಗತಿಸಲು ನಮ್ಮಲ್ಲಿರುವ ಸಿದ್ಧತೆ ಎಂದು ವಂ.ಸ್ವಾಮಿ ಪಾಸೋಲಿನಿ ವಿವರಿಸಿದರು. ಈ ಬೆಳಕು ಅಗತ್ಯವೂ ಸುಂದರವೂ ಆಗಿದೆ. ಆದರೆ ಅದೇ ಸಮಯದಲ್ಲಿ ಅದು ಬೇಡಿಕೆಯನ್ನೂ ನೀಡುತ್ತದೆ ನಟನೆಗಳನ್ನು ಬಹಿರಂಗಪಡಿಸುತ್ತದೆ,  ನಾವು ನೋಡಲು ಇಚ್ಛಿಸದ ಸತ್ಯಗಳನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತದೆ. ಆದ್ದರಿಂದ ನಾವು ಅನೇಕ ಬಾರಿ ಅದನ್ನು ತಪ್ಪಿಸಿಕೊಳ್ಳುತ್ತೇವೆ. ಆದರೆ ಯೇಸು ದುಷ್ಟತನ ಮಾಡುವವರನ್ನು ಸತ್ಪ್ರವೃತ್ತಿಯವರೊಂದಿಗೆ ಹೋಲಿಸುವುದಿಲ್ಲ, ಬದಲಾಗಿ ದುಷ್ಟತನ ಮಾಡುವವರನ್ನು ಸತ್ಯವನ್ನು ಆಚರಿಸುವವರೊಂದಿಗೆ ಹೋಲಿಸುತ್ತಾನೆ ಎಂದು ಅವರು ಹೇಳಿದರು.

ಇದರ ಅರ್ಥ ಅವತಾರದ ಬೆಳಕನ್ನು ಸ್ವಾಗತಿಸಲು ಈಗಾಗಲೇ ಒಳ್ಳೆಯವರಾಗಿರಬೇಕು ಅಥವಾ ಪರಿಪೂರ್ಣರಾಗಿರಬೇಕು ಎಂಬ ಅಗತ್ಯವಿಲ್ಲ. ಬದಲಾಗಿ ನಮ್ಮ ಜೀವನದಲ್ಲಿ ಸತ್ಯವನ್ನು ಆಚರಿಸಲು ಆರಂಭಿಸಬೇಕು ಮರೆಮಾಚುವುದನ್ನು ನಿಲ್ಲಿಸಿ, ನಾವು ಯಾರು ಎಂಬುದನ್ನು ತೋರಿಸಿಕೊಳ್ಳಲು ಒಪ್ಪಿಕೊಳ್ಳಬೇಕು. ಏಕೆಂದರೆ ದೇವರಿಗೆ ಮೇಲ್ಮೈಯಲ್ಲಿನ ಒಳ್ಳೆಯತನಕ್ಕಿಂತ ನಮ್ಮ ಸತ್ಯವೇ ಹೆಚ್ಚು ಮುಖ್ಯ.

ಕ್ರಿಸ್ತನ ಬೆಳಕಿನಲ್ಲಿ ಬದುಕುವ ಸಮುದಾಯವಾದ 

ಧರ್ಮ ಸಭೆ ಇದರ ಅರ್ಥ, ಇನ್ನಷ್ಟು ಸತ್ಯದತ್ತ ಒಂದು ಪ್ರಯಾಣವನ್ನು ಆರಂಭಿಸುವುದು.ಇದು ನೈತಿಕ ಶುದ್ಧತೆಯನ್ನು ಪ್ರದರ್ಶಿಸುವುದಾಗಲಿ ಅಥವಾ ನಿರ್ದೋಷ ಸಮಂಜಸತೆಯನ್ನು ಹಕ್ಕುಪಡಿಸಿಕೊಳ್ಳುವಾಗಲಿ ಅಲ್ಲ,ಬದಲಾಗಿ ಪ್ರಾಮಾಣಿಕತೆಯಿಂದ ತನ್ನನ್ನು ತಾನು ಮಂಡಿಸುವುದು,ತನ್ನ ಪ್ರತಿರೋಧ ಮತ್ತು ನಾಜೂಕೂತನವನ್ನು ಒಪ್ಪಿಕೊಳ್ಳುವುದು.

ಜಗತ್ತು ದೋಷರಹಿತ ಸಂಸ್ಥೆಯ ಚಿತ್ರವನ್ನಾಗಲಿ ಅಥವಾ ಏನು ಮಾಡಬೇಕು ಎಂದು ಹೇಳುವ ಮತ್ತೊಂದು ಉಪದೇಶವನ್ನಾಗಲಿ ನಿರೀಕ್ಷಿಸುವುದಿಲ್ಲ, ಆದರೆ ತನ್ನ ಅಪೂರ್ಣತೆಗಳು ಮತ್ತು ವೈರುಧ್ಯಗಳ ನಡುವೆಯೂ ಕ್ರಿಸ್ತನ ಬೆಳಕಿನಲ್ಲಿ ನಿಜವಾಗಿ ಬದುಕುವ, ತಾನು ಯಾರು ಎಂಬುದನ್ನು ತೋರಿಸಲು ಭಯಪಡದ ಸಮುದಾಯವನ್ನು ಎದುರುನೋಡುತ್ತದೆ.

ಜ್ಞಾನಿಗಳ ಪಥ

ಜ್ಞಾನಿಗಳು ಕರ್ತನ ಮಾರ್ಗದಲ್ಲಿ ನಡೆಯುವ ಮೂಲಕ ಪ್ರಾಮಾಣಿಕತೆಯ ಒಂದು ವಿಶಿಷ್ಟ ಮಾದರಿಯನ್ನು ತೋರಿಸಿದರು. ಅವರು ದೂರದಿಂದ ಪ್ರಯಾಣ ಆರಂಭಿಸಿದರು. ಇದು “ಕ್ರಿಸ್ತನ ಜನನದ ಬೆಳಕನ್ನು ಸ್ವೀಕರಿಸಲು ಸ್ವಲ್ಪ ದೂರ ಅಗತ್ಯ ಎಂಬುದನ್ನು ತೋರಿಸುತ್ತದೆ ಅದರ ಮೂಲಕ ನಾವು ವಸ್ತುಗಳನ್ನು ಇನ್ನಷ್ಟು ಸ್ವತಂತ್ರ, ಆಳವಾದ ಮತ್ತು ಆಶ್ಚರ್ಯಕ್ಕೆ ತೆರೆದ ದೃಷ್ಟಿಯಿಂದ ನೋಡಬಹುದು.

ವಾಸ್ತವವನ್ನು ತುಂಬಾ ಹತ್ತಿರದಿಂದ ನೋಡುವ ಅಭ್ಯಾಸವು ನಮ್ಮನ್ನು ಊಹಿಸಲ್ಪಟ್ಟ ತೀರ್ಪುಗಳು ಮತ್ತು ಗಟ್ಟಿಯಾದ ವ್ಯಾಖ್ಯಾನಗಳ ಕೈದಿಗಳನ್ನಾಗಿ ಮಾಡಬಹುದು.

ಇದು ಚರ್ಚ್ ಜೀವನದ ಕೇಂದ್ರದಲ್ಲಿರುವವರಿಗೂ, ಅದರ ಹೊಣೆಗಾರಿಕೆಗಳನ್ನು ಹೊತ್ತವರಿಗೂ ಸಂಭವಿಸಬಹುದು. ಏಕೆಂದರೆ ಪಾತ್ರಗಳು, ರಚನೆಗಳು, ನಿರ್ಧಾರಗಳು ಮತ್ತು ತುರ್ತುಪರಿಸ್ಥಿತಿಗಳೊಂದಿಗೆ ದಿನನಿತ್ಯದ ಪರಿಚಯವು, ಕಾಲಕ್ರಮೇಣ ನಮ್ಮ ದೃಷ್ಟಿಯನ್ನು ಕುಗ್ಗಿಸಬಹುದು.ಇದರಿಂದ ದೇವರು ಜಗತ್ತಿನ ಜೀವನದಲ್ಲಿ ತನ್ನನ್ನು ತಾನು ವ್ಯಕ್ತಪಡಿಸುವ ಹೊಸ ಸಂಕೇತಗಳನ್ನು ಗುರುತಿಸಲು ವಿಫಲರಾಗುವ ಅಪಾಯವಿದೆ.

ದೇವರ ಅಪ್ರತೀಕ್ಷಿತ ಮಾರ್ಗಗಳು

ಕ್ರಿಸ್ತನ ಜನನದ ಬೆಳಕು ಜಗತ್ತಿಗೆ ಪ್ರವೇಶಿಸಿದೆ ಎಂಬುದನ್ನು ಆಚರಿಸಿದರೆ, ಮೂರು ರಾಜರು ಈ ಬೆಳಕು ತನ್ನನ್ನು ಒತ್ತಾಯಪೂರ್ವಕವಾಗಿ ಹೇರಿಕೊಳ್ಳುವುದಿಲ್ಲ ಅದು ಗುರುತಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂಬುದನ್ನು ಒತ್ತಿ ಹೇಳುತ್ತಾರೆ.

ಇದು ಇನ್ನೂ ಅಂಧಕಾರ ಮತ್ತು ಹುಡುಕಾಟಗಳಿಂದ ಗುರುತಿಸಲ್ಪಟ್ಟ ಇತಿಹಾಸದೊಳಗೆ ತಾನೇ ತನ್ನನ್ನು ವ್ಯಕ್ತಪಡಿಸುವ ಬೆಳಕು ಚಲಿಸಲು ಸಿದ್ಧರಾಗಿರುವವರಿಗೆ ತನ್ನನ್ನು ಅರ್ಪಿಸುವ ಉಪಸ್ಥಿತಿ.

ಎಲ್ಲರೂ ಅದನ್ನು ಒಂದೇ ಸಮಯದಲ್ಲಿ ಅಥವಾ ಒಂದೇ ರೀತಿಯಲ್ಲಿ ಕಾಣುವುದಿಲ್ಲ. ಕ್ರಿಸ್ತನ ಬೆಳಕು, ತಮ್ಮನ್ನು ತಾವು ಮೀರಿ ಹೊರಟು, ಪ್ರಯಾಣಕ್ಕೆ ಸಿದ್ಧರಾಗಿ, ಹುಡುಕುವವರಿಗೆ ಮಾತ್ರ ಎದುರಾಗುತ್ತದೆ. ಇದು ಧಮ೯ಸಭೆಯ ಪ್ರಯಾಣಕ್ಕೂ ಅನ್ವಯಿಸುತ್ತದೆ. ಎಲ್ಲಾ ಸತ್ಯವೂ ತಕ್ಷಣವೇ ಸ್ಪಷ್ಟವಾಗುವುದಿಲ್ಲ ಎಲ್ಲ ಸುವಾರ್ತೆಯೂ ತಕ್ಷಣ ಪರಿಣಾಮಕಾರಿಯಾಗುವುದಿಲ್ಲ. ಕೆಲವೊಮ್ಮೆ ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು ಅದನ್ನು ಅನುಸರಿಸಬೇಕಾಗುತ್ತದೆ.

ಕುಳಿತೇ ಇರುವ ಪ್ರಲೋಭನೆ

ಜ್ಞಾನಿಗಳ ಕಥೆಯಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ ವಿಚಾರಣೆ ಮಾಡುವ ಮನೋಭಾವ. ಕ್ರಿಸ್ತನನ್ನು ಹುಡುಕುವ ಪ್ರಯಾಣಕ್ಕೆ ಹೊರಟು ಹೋಗುವುದನ್ನು ನಿರಾಕರಿಸಿ ಸ್ಥಿರವಾಗಿ ಕುಳಿತೇ ಇರುವುದು, ಭರವಸೆಯಂತೆಯೇ ಕಾಣಿಸುತ್ತದೆ, ಆದರೆ ಒಳಗಿನ ಜಡತೆಯಾಗಿ ಮಾರ್ಪಡುವ ಸ್ಥಿತಿಗೆ ನಮ್ಮನ್ನು ಕರೆದೊಯ್ಯಬಹುದು. ಇದು ನಿಧಾನವಾಗಿ ನಮ್ಮನ್ನು ಪ್ರತ್ಯೇಕಗೊಳಿಸುತ್ತದೆ.

ಇದು ಹೆರೋದನಲ್ಲೂ ಕಂಡುಬರುತ್ತದೆ. ಅವನು ಪ್ರಶ್ನಿಸುತ್ತಾನೆ, ಲೆಕ್ಕ ಹಾಕುತ್ತಾನೆ, ಯೋಜನೆ ಮಾಡುತ್ತಾನೆ ಆದರೆ ಬೆತ್ಲೆಹೆಮೀಗೆ ಹೊರಟು ಹೋಗುವುದಿಲ್ಲ. ಅವನು ನಿಜವಾದ ತೊಡಗಿಸಿಕೊಳ್ಳುವಿಕೆಯಿಂದ ಬರುವ ಅಪಾಯವನ್ನು ಒಪ್ಪಿಕೊಳ್ಳುವುದಿಲ್ಲ.

ಧರ್ಮಸಭೆಯಲ್ಲಿಯೂ, ಬೋಧನೆಯನ್ನು ಚೆನ್ನಾಗಿ ತಿಳಿದಿದ್ದರೂ, ಪರಂಪರೆಯನ್ನು ಕಾಪಾಡಿದರೂ, ಧರ್ಮಾಚರಣೆಗಳನ್ನು ನಿಖರವಾಗಿ ಮಾಡಿದರೂ, ನಾವು ಸ್ಥಿರವಾಗಿಯೇ ಉಳಿಯಬಹುದು. ಜೆರೂಸಲೇಮಿನ ಶಾಸ್ತ್ರಿಗಳಂತೆ, ಕರ್ತನು ಎಲ್ಲಿ ಇರುವನೆಂಬುದನ್ನು ತಿಳಿದಿದ್ದರೂ ಪರಿಧಿಗಳಲ್ಲಿ, ಬಡವರ ನಡುವೆ, ಇತಿಹಾಸದ ಗಾಯಗಳಲ್ಲಿ ಅತ್ತ ಸಾಗುವ ಧೈರ್ಯ ನಮಗೆ ಕೊರತೆಯಾಗಬಹುದು.

ಎದ್ದು ನಿಲ್ಲುವ ಧೈರ್ಯ

ದೇವರನ್ನು ಎದುರುಗೊಳ್ಳಲು ಮೊದಲ ಹೆಜ್ಜೆ ಎಂದರೆ ಯಾವಾಗಲೂ ಎದ್ದು ನಿಲ್ಲುವುದು ಎಂದು ವಂ.ಸ್ವಾಮಿ ಪಾಸೋಲಿನಿ ಒತ್ತಿ ಹೇಳಿದರು.

ನಮ್ಮ ಒಳಗಿನ ಆಶ್ರಯಗಳನ್ನು, ಭದ್ರತೆಗಳನ್ನು, ಸ್ಥಿರ ದೃಷ್ಟಿಕೋನಗಳನ್ನು ಬಿಟ್ಟು ಹೊರಟು ಹೋಗುವುದು—ಇದಕ್ಕೆ ಧೈರ್ಯ ಬೇಕು. ಜ್ಞಾನಿಗಳಂತೆ, ಭರವಸೆಗಳಿಲ್ಲದ ದೂರಗಳನ್ನು ದಾಟಿ, ಮಂಕಾದರೂ ಸಾಕಾಗುವ ಸಂಕೇತದ ಬೆಳಕಿನ ಮೇಲೆ ನಂಬಿಕೆ ಇಟ್ಟು ಸಾಗುವುದು ಇದೇ ನಿರೀಕ್ಷೆ. ಅವರು ಜ್ಞಾನಿಗಳ ವಿನಯವನ್ನೂ ಉಲ್ಲೇಖಿಸಿದರು ಬೆತ್ಲೆಹೇಮಿಗೆ ತಲುಪಿದ ಮೇಲೆ ಅವರು ಶಿಶುವನ್ನು ಆರಾಧಿಸಿದರು. ಎದ್ದು ನಿಲ್ಲುವುದು ಮತ್ತು ನಂತರ ಮೊಣಕಾಲೂರಿಸುವುದು ಇದೇ ನಂಬಿಕೆಯ ಚಲನೆ.

ಕ್ರಿಸ್ತಜನನದ ನಿಜವಾದ ಬೆಳಕು

ದೇವರು ನಮ್ಮ ಅಂತರಂಗದಲ್ಲಿ ವಾಸಿಸಲು ಆಯ್ದಿದ್ದರೆ, ಪ್ರತಿಯೊಂದು ಮಾನವ ಜೀವನದಲ್ಲಿಯೂ ಒಂದು ಬೆಳಕು, ಒಂದು ಕರೆಯು, ಒಂದು ಅಳಿಸಲಾರದ ಮೌಲ್ಯ ಇದೆ. ನಾವು ಕೇವಲ ಬದುಕುಳಿಯಲು ಅಥವಾ ಸಮಯ ಕಳೆಯಲು ಬಂದಿಲ್ಲ.ದೇವರ ಮಕ್ಕಳಾದ ಮಹತ್ತರ ಜೀವನವನ್ನು ಸಾಧಿಸಲು ಬಂದಿದ್ದೇವೆ. ಆದ್ದರಿಂದ ಧಮ೯ಸಭೆಯ ಕರ್ತವ್ಯವೆಂದರೆ, ಕ್ರಿಸ್ತನ ಬೆಳಕನ್ನು ಜಗತ್ತಿಗೆ ಅರ್ಪಿಸುವುದು ಅದನ್ನು ಹೇರಲು ಅಲ್ಲ, ರಕ್ಷಿಸಿಕೊಳ್ಳಲು ಅಲ್ಲ, ಬದಲಾಗಿ ಒಂದು ಉಪಸ್ಥಿತಿಯಾಗಿ ನೀಡಲು.

ಸುವಾರ್ತಿಕರಣ ಎಂದರೆ ಕೊರತೆಯೊಂದನ್ನು ತುಂಬಿಸುವುದು ಎಂದು ನಾವು ಅನೇಕ ಬಾರಿ ಭಾವಿಸುತ್ತೇವೆ, ಆದರೆ ಮೂರು ರಾಜರು ಮತ್ತೊಂದು ಮಾರ್ಗವನ್ನು ತೋರಿಸುತ್ತರೆ  ಜನರೊಳಗೇ ಈಗಾಗಲೇ ಇರುವ ಬೆಳಕನ್ನು ಗುರುತಿಸಲು ಅವರಿಗೆ ಸಹಾಯ ಮಾಡುವುದು.

ಹೀಗಾಗಿ ಧರ್ಮ ಸಭೆಯ ವಿಶ್ವವ್ಯಾಪಕತೆ ಎಂದರೆ, ಕ್ರಿಸ್ತನನ್ನು ಕಾಪಾಡಿ ಎಲ್ಲರಿಗೂ ಅರ್ಪಿಸುವುದು, ಏಕೆಂದರೆ ಸೌಂದರ್ಯ, ಸತ್ಯ ಮತ್ತು ಒಳ್ಳೆಯತನವು ಪ್ರತಿಯೊಬ್ಬರಲ್ಲಿಯೂ ಈಗಾಗಲೇ ಅಸ್ತಿತ್ವದಲ್ಲಿದೆ. ನಿಷ್ಕರ್ಷವಾಗಿ, ಜಗದ್ಗುರು ಗೃಹದ ಪ್ರವಚನಕಾರರ ಪ್ರಕಾರ, ಕ್ರಿಸ್ತ ಜನನ ನಿಜವಾದ ಬೆಳಕು ಪ್ರತಿಯೊಬ್ಬರನ್ನು ಪ್ರಕಾಶಮಾನಗೊಳಿಸುತ್ತದೆ, ಏಕೆಂದರೆ ಅದು ಪ್ರತಿಯೊಬ್ಬನಿಗೂ ತನ್ನದೇ ಆದ ಸತ್ಯವನ್ನು, ತನ್ನ ಕರೆಯನ್ನು ಮತ್ತು ದೇವರ ಸಾದೃಶ್ಯವನ್ನು ಬಹಿರಂಗಪಡಿಸಲು ಸಮರ್ಥವಾಗಿದೆ.”

19 ಡಿಸೆಂಬರ್ 2025, 15:03