ಹುಡುಕಿ

ITALY-VATICAN-POPE-HEALTH-JUBILEE ITALY-VATICAN-POPE-HEALTH-JUBILEE  (AFP or licensors)

ವಿಶೇಷ ಸ್ಥಳೀಯ ಧರ್ಮಸಭೆಗಳಲ್ಲಿ ಜುಬಿಲಿ ವರ್ಷದ ಸಮಾಪ್ತಿ

2025ರ ಜುಬಿಲಿಯನ್ನು ಘೋಷಿಸುವ ಅಧಿವೇಶನ ಪತ್ರಿಕೆಗೆ ಅನುಗುಣವಾಗಿ, ಪವಿತ್ರ ಕುಟುಂಬದ ಹಬ್ಬವಾದ ಭಾನುವಾರ, ಡಿಸೆಂಬರ್ 28ರಂದು, ಪವಿತ್ರ ವರ್ಷವು ಸ್ಥಳೀಯ (ವಿಶೇಷ) ಚರ್ಚುಗಳಲ್ಲಿ ಸಮಾಪ್ತಿಗೊಳ್ಳುತ್ತದೆ.

ಸ್ಥಳೀಯ ಚರ್ಚುಗಳಲ್ಲಿ ಜುಬಿಲಿ ವರ್ಷದ ಭವ್ಯ ಉದ್ಘಾಟನೆ 2024ರ ಡಿಸೆಂಬರ್ 29ರಂದು, ಭಾನುವಾರ ನಡೆಯಿತು. ರೋಮಿಗೆ ತೀರ್ಥಯಾತ್ರೆ ಮಾಡಿದ ವಿಶ್ವಾಸಿಗಳು ಪಡೆದಂತೆಯೇ, ತಮ್ಮ ತಮ್ಮ ಧರ್ಮಪ್ರಾಂತ್ಯಗಳ ವ್ಯಾಪ್ತಿಯಲ್ಲಿ ಜುಬಿಲಿ ಅನುಗ್ರಹಗಳನ್ನು  ಪಡೆಯಲು ಸಾಧ್ಯವಾಗುವಂತೆ ಧರ್ಮಾದ್ಯಕ್ಷರು ನಿರ್ದಿಷ್ಟ ಧರ್ಮಸಭೆಗಳು ಅಥವಾ ಆರಾಧನಾ ಮಂದಿರಗಳನ್ನು ನೇಮಕ ಮಾಡಿದರು.

ನಿರೀಕ್ಷೆಯ ತೀರ್ಥಯಾತ್ರಿಕರು

ಜುಬಿಲಿ 2025ರ ಧ್ಯೇಯವಾಕ್ಯವೆನೆಂದರೆ ನಿರೀಕ್ಷೆಯ ತೀರ್ಥಯಾತ್ರಿಕರು. ಜುಬಿಲಿ ವರ್ಷದ ಘೋಷಣಾ ಪತ್ರಿಕೆಯಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಎಲ್ಲರೂ ನಿರೀಕ್ಷೆಯನ್ನು ಹೊಂದಿರಬೇಕೆಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.ಅದೇನೆಂದರೆ ಪ್ರತಿ ವ್ಯಕ್ತಿಯ ಹೃದಯದಲ್ಲಿ ನಿರೀಕ್ಷೆ ವಾಸಿಸುತ್ತಿದೆ  ಅದು ಬರುವ ಒಳಿತಿನ ಆಸೆ ಮತ್ತು ನಿರೀಕ್ಷೆಯಾಗಿದೆ, ಭವಿಷ್ಯ ಏನು ತರುವುದೆಂದು ನಮಗೆ ತಿಳಿದಿಲ್ಲದಿದ್ದರೂ ಸಹ ನಾವು ಅನೇಕ ಬಾರಿ ಭವಿಷ್ಯದತ್ತ ಸಂಶಯ ಮತ್ತು ನಿರಾಶೆಯಿಂದ ನೋಡುವ, ಯಾವುದೂ ತಮಗೆ ಸಂತೋಷ ತರಲಾರದೆಂದು ಭಾವಿಸುವ ನಿರುತ್ಸಾಹ ಜನರನ್ನು ಭೇಟಿಯಾಗುತ್ತೇವೆ ಎಂದು ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ, ಜುಬಿಲಿ ಪ್ರತಿಯೊಬ್ಬರಲ್ಲೂ ನಿರೀಕ್ಷೆಯನ್ನು ಮರುಜಾಗೃತಿಗೊಳಿಸುವ ಅವಕಾಶವಾಗಿರಲಿ ಎಂಬ ತಮ್ಮ ಆಸೆಯನ್ನು ಜಗದ್ಗುರು ಫ್ರಾನ್ಸಿಸ್ ರವರು ವ್ಯಕ್ತಪಡಿಸಿದರು.

ಜಗದ್ಗುರು ಬಸಿಲಿಕಾಗಳಲ್ಲಿ ಪವಿತ್ರ ಬಾಗಿಲಿನ ಮುಚ್ಚುವಿಕೆ

ರೋಮಿನ ಜಗದ್ಗುರು ಬಸಿಲಿಕಾಗಳಲ್ಲಿ ಪವಿತ್ರ ಬಾಗಿಲುಗಳನ್ನು ಮುಚ್ಚುವುದು ಪವಿತ್ರ ವರ್ಷದ ಅಂತಿಮ ದಿನಗಳ ದೃಶ್ಯ ಚಿಹ್ನೆಯಾಗಿದೆ. ಕ್ರಿಸ್‌ಮಸ್ ದಿನ, ಕಾರ್ಡಿನಲ್ ರೋಲಾಂಡಾಸ್ ಮಾಕ್ರಿಕಾಸ್ ರವರು ಸಂತ ಮೇರಿ ಮೇಜರ್ ಬಸಿಲಿಕಾದ ಪವಿತ್ರ ಬಾಗಿಲಿನ ಮುಚ್ಚುವ ವಿಧಿವಿಧಾನವನ್ನು ಅಧ್ಯಕ್ಷತೆ ವಹಿಸಿ ನೆರವೇರಿಸಿದರು.

ದೇವರ ಹೃದಯ ಸದಾ ತೆರೆದೆಯೇ ಇರುತ್ತದೆ ಎಂದು ಲಿಬೇರಿಯನ್ ಬಸಿಲಿಕಾದ ಪ್ರಧಾನ ಯಾಜಕರು ಒತ್ತಿ ಹೇಳಿದರು. ಅವರು ಜನರನ್ನು ದೇವರ ವಾಕ್ಯವನ್ನು ಕೇಳಲು, ಇತರರನ್ನು ಸ್ವೀಕರಿಸಲು ಹಾಗೂ ಕ್ಷಮೆಯನ್ನು ಅಭ್ಯಾಸಿಸಲು ತಮ್ಮನ್ನು ತೆರೆಯುವಂತೆ ಆಹ್ವಾನಿಸಿದರು.

ನಿರೀಕ್ಷೆಯು ಪ್ರಾರ್ಥನೆ ಮತ್ತು ಬಡವರತ್ತ ಕಾಳಜಿಯ ರೂಪದಲ್ಲಿ ವ್ಯಕ್ತವಾಗಬೇಕಾದ ಬೆಳಕು ಎಂದು ಹೇಳಿದ ಕಾರ್ಡಿನಲ್ ಮಾಕ್ರಿಕಾಸ್, ನಮ್ಮ ಕೈಗಳಲ್ಲಿ ಸುವಾರ್ತೆಯನ್ನೂ, ನಮ್ಮ ಹೃದಯಗಳಲ್ಲಿ ಸಹೋದರ ಸಹೋದರಿಯರನ್ನೂ ಹೊತ್ತಿರುವ ಧರ್ಮಸಭೆಯಾಗಿರಬೇಕು ಎಂದು ಹೇಳಿದರು.

ಡಿಸೆಂಬರ್ 27ರಂದು, ಪ್ರೇಷಿತರ ಹಾಗೂ ಸುವಾರ್ತಿಕರಾದ ಸಂತ ಜಾನ್ ಅವರ ಹಬ್ಬದಂದು, ಲ್ಯಾಟರನ್ ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚಲಾಯಿತು. ಮುಚ್ಚುವ ವಿಧಿವಿಧಾನವನ್ನು ಅಧ್ಯಕ್ಷತೆ ವಹಿಸಿದ ಕಾರ್ಡಿನಲ್ ವಿಕಾರ್ ಬಾಲ್ದಸಾರೆ ರೈನಾ, ರವರು ಹೇಳಿದರು: ಇಂದು ನಾವು ಪವಿತ್ರ ಬಾಗಿಲನ್ನು ಮುಚ್ಚುವಾಗ, ನಮಗಾಗಿ ದೇವರು ತೋರಿದ ಪ್ರೀತಿಯ ಎಲ್ಲಾ ಚಿಹ್ನೆಗಳಿಗಾಗಿ ತಂದೆಯಾದ ದೇವರಿಗೆ ಕೃತಜ್ಞತೆಯ ಸ್ತೋತ್ರವನ್ನು ಅರ್ಪಿಸುತ್ತೇವೆ. ಅದೇ ಸಮಯದಲ್ಲಿ, ಎಲ್ಲಾ ಜನಾಂಗಗಳಿಗೆ ತೆರೆದಿರುವ ಅರಿವು ಮತ್ತು ನಿರೀಕ್ಷೆಯನ್ನು ನಮ್ಮ ಹೃದಯಗಳಲ್ಲಿ ಉಳಿಸಿಕೊಂಡಿದ್ದೇವೆ. ಅದು ಅವರ ಮೇಲೆ ಹರಿದುಬರುವ ದೇವರ ಕರುಣೆ ಮತ್ತು ಶಾಂತಿಯ ಅಪ್ಪುಗೆಯಾಗಿದೆ.

ಸಂತ ಪೌಲರ ಬಸಿಲಿಕಾದಲ್ಲಿ ಪವಿತ್ರ ಕುಟುಂಬದ ಹಬ್ಬವಾದ ಭಾನುವಾರ, ಡಿಸೆಂಬರ್ 28ರಂದು, ಬಸಿಲಿಕಾದ ಪ್ರಧಾನ ಯಾಜಕರಾದ ಕಾರ್ಡಿನಲ್ ಜೇಮ್ಸ್ ಹಾರ್ವಿ, ಪವಿತ್ರ ಬಾಗಿಲಿನ ಮುಚ್ಚುವ ವಿಧಿವಿಧಾನವನ್ನು ಒಳಗೊಂಡ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು.

ದೈವದಶ೯ನ 2026: ಜುಬಿಲಿ ವರ್ಷದ ಅಂತ್ಯ

ವ್ಯಾಟಿಕನ್‌ನ ಸಂತ ಪೇತ್ರ ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚುವ ಮೂಲಕ ಜಗದ್ಗುರು XIVನೇ ಲಿಯೋರವರು ಸಾಮಾನ್ಯ ಜುಬಿಲಿ ವರ್ಷವನ್ನು ಅಧಿಕೃತವಾಗಿ ಸಮಾಪ್ತಿಗೊಳಿಸಲಿದ್ದಾರೆ. ಇದು 2026ರ ಜನವರಿ 6ರಂದು, ಕರ್ತನ ದೈವದಶ೯ನದ ಮಹೋತ್ಸವದಂದು ನಡೆಯಲಿದೆ. ಪವಿತ್ರ ಬಾಗಿಲಿನ ಮುಚ್ಚುವಿಕೆಯನ್ನು ಘೋಷಿಸುವ ಸಂದರ್ಭದಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಆಶಯವನ್ನು ಹೀಗೆ ವ್ಯಕ್ತಪಡಿಸಿದರು:

ಕ್ರೈಸ್ತ ನಿರೀಕ್ಷೆಯ ಬೆಳಕು ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯ ಜೀವನವನ್ನು ಪ್ರಕಾಶಮಾನಗೊಳಿಸಲಿ ಇದು ಎಲ್ಲರಿಗೂ ಉದ್ದೇಶಿಸಲಾದ ದೇವರ ಪ್ರೀತಿಯ ಸಂದೇಶವಾಗಿರಲಿ ಮತ್ತು ಧರ್ಮಸಭೆ ವಿಶ್ವದ ಎಲ್ಲ ಭಾಗಗಳಲ್ಲಿಯೂ ಈ ಸಂದೇಶಕ್ಕೆ ನಿಷ್ಠಾವಂತ ಸಾಕ್ಷಿಯಾಗಿರಲಿ ಎಂದರು.

28 ಡಿಸೆಂಬರ್ 2025, 19:12