ಹುಡುಕಿ

ಜುಬಿಲಿಯ ಪರಂಪರೆಯ ಸಮೀಪತೆ – ಸಂತ ಜಾನ್ ಲ್ಯಾಟರನ್ ಪವಿತ್ರ ಬಾಗಿಲಿನ ಮುಚ್ಚುವಿಕೆಯಲ್ಲಿ ಕಾರ್ಡಿನಲ್ ಹೇಳಿಕೆ

ರೋಮಿನ ಶ್ರೇಷ್ಠ ಗುರುಗಳು ಮತ್ತು ಸಂತ ಜಾನ್ ಲ್ಯಾಟರನ್ ಮಹಾ ಬಸಿಲಿಕಾದ ಪ್ರಧಾನ ಯಾಜಕ ಕಾರ್ಡಿನಲ್ ಬಾಲ್ದಸಾರೆ ರೇಯ್ನಾ ಅವರು ಪವಿತ್ರ ಬಾಗಿಲಿನ ಮುಚ್ಚುವಿಕೆಯ ವಿಧಿಯನ್ನು ಹಾಗೂ ನಂತರದ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಿದರು. ಸಹೋದರತ್ವ, ನ್ಯಾಯ, ಸತ್ಯ ಮತ್ತು ಶಾಂತಿ ಇಲ್ಲದ ಸ್ಥಳಗಳಲ್ಲಿ ದೇವರ ಸಾನ್ನಿಧ್ಯವನ್ನು ವ್ಯಕ್ತಪಡಿಸುವಂತೆ ಅವರು ಭಕ್ತರನ್ನು ಆಹ್ವಾನಿಸಿದರು.

ಇಂದು ಪವಿತ್ರ ಬಾಗಿಲನ್ನು ಮುಚ್ಚುವ ಮೂಲಕ, ದೇವರು ನಮಗೆ ತೋರಿಸಿದ ಪ್ರೀತಿಯ ಎಲ್ಲ ಗುರುತುಗಳಿಗಾಗಿ ನಾವು ತಂದೆಗೆ ಕೃತಜ್ಞತೆಯ ಸ್ತುತಿಗೀತೆಯನ್ನು ಅರ್ಪಿಸುತ್ತೇವೆ. ಜೊತೆಗೆ, ಅವರ ಕರುಣೆ ಮತ್ತು ಶಾಂತಿಯ ಅಪ್ಪುಗೆಯು ಎಲ್ಲ ಜನಾಂಗಗಳಿಗೆ ಸದಾ ತೆರೆಯಲ್ಪಟ್ಟಿದೆ ಎಂಬ ಅರಿವು ಮತ್ತು ಆಶೆಯನ್ನು ನಮ್ಮ ಹೃದಯಗಳಲ್ಲಿ ಕಾಯ್ದುಕೊಳ್ಳುತ್ತೇವೆ, ಎಂದು ರೋಮಿನ ಶ್ರೇಷ್ಠ ಗುರುಗಳು ಹಾಗೂ ಸಂತ ಜಾನ್ ಲ್ಯಾಟರನ್ ಬಸಿಲಿಕಾದ ಪ್ರಧಾನ ಯಾಜಕರಾದ ಕಾರ್ಡಿನಲ್ ಬಾಲ್ದಸಾರೆ ರೇಯ್ನಾ ಹೇಳಿದರು.

ಈ ಪ್ರಾರ್ಥನೆಯು ಶನಿವಾರ, ಡಿಸೆಂಬರ್ 27ರ ಬೆಳಿಗ್ಗೆ, ಸಂತ ಜಾನ್ ಲ್ಯಾಟರನ್ ಬಸಿಲಿಕಾದ ಅಂಗಳದಲ್ಲಿ ಪ್ರತಿಧ್ವನಿಸಿತು. ಅಂದು ಅವರು ಪವಿತ್ರ ಬಾಗಿಲಿನ ಮುಚ್ಚುವಿಕೆಯ ಘನ ವಿಧಿಯನ್ನು ಅಧ್ಯಕ್ಷತೆ ವಹಿಸಿ ನೆರವೇರಿಸಿದರು.

ಕಾರ್ಡಿನಲ್ ಮೌನವಾಗಿ ಮೆಟ್ಟಿಲೇರಿದರು. ಬಳಿಕ ಬಾಗಿಲಿನ ಅಂಚಿನಲ್ಲಿ ಮೊಣಕಾಲೂರಿ ಪ್ರಾರ್ಥಿಸಿದರು. ನಂತರ ಎದ್ದು, ಗೌರವದ ಸಂಕೇತವಾಗಿ ತಲೆಬಾಗಿ ಭಾರೀ ಬಾಗಿಲನ್ನು ಮುಚ್ಚಿದರು. ಅನೇಕ ಭಕ್ತರು ಆ ನಂತರ ಬಾಗಿಲಿನ ಅಂಚಿನ ಬಳಿ ಬಂದು, ಪ್ರಾರ್ಥನೆ ಮತ್ತು ಧ್ಯಾನದ ಸಂಕೇತವಾಗಿ ತಮ್ಮ ಕೈಗಳನ್ನು ಅದರ ಮೇಲೆ ಇಟ್ಟರು.

ರೋಮ್ ನಗರದ ಬೀದಿಗಳ ಮೂಲಕ ಕರ್ತನನ್ನು ಹೊತ್ತುಕೊಂಡು ಹೋಗುವುದು

ಅದೇ ಪವಿತ್ರ ಬಾಗಿಲು ಡಿಸೆಂಬರ್ 29, 2024ರಂದು ಪವಿತ್ರ ಕುಟುಂಬದ ಹಬ್ಬದಂದು ತೆರೆಯಲ್ಪಟ್ಟಿತ್ತು. ಅದರ ಮುಚ್ಚುವಿಕೆ ಸಂತ ಜಾನ್ ಅಪೋಸ್ತಲ ಮತ್ತು ಸುವಾರ್ತಿಕರ ಹಬ್ಬದಂದು ನಡೆಯಿತು. ಅವರು ಯೇಸುವಿನ ಅತ್ಯಂತ ಸಮೀಪದ ಸ್ನೇಹಿತರಾದ ಶಿಷ್ಯರು ಎಂದು ಕಾರ್ಡಿನಲ್ ಅವರು ನಂತರದ ಬಲಿಪೂಜೆಯಲ್ಲಿ ಹೇಳಿದರು.

ಸಂತ ಜಾನ್ ಯೇಸುವಿನೊಂದಿಗೆ ನಡೆದರು, ಅವರ ಧ್ವನಿಯನ್ನು ಕೇಳಿದರು, ಅವರ ಹೃದಯದ ಮೌನ ಭಾಷೆಯನ್ನೂ ಆಲಿಸಿದರು, ಯೇಸುವಿನ ಎದೆಯ ಮೇಲೆ ತಮ್ಮ ಕಿವಿಯನ್ನು ನೆಲೆಗೊಳಿಸಿದರು ಎಂದು ಶ್ರೇಷ್ಠ ಗುರುಗಳು ವಿವರಿಸಿದರು.

ಈ ಉದಾಹರಣೆಯನ್ನು ಅನುಸರಿಸಿ, ಅಲ್ಲಿ ಹಾಜರಿದ್ದ ಎಲ್ಲ ಭಕ್ತರು ರೋಮಿನ ಪುರಸಭಾಧ್ಯಕ್ಷ ರೊಬೆರ್ಟೊ ಗುಆಲ್ತಿಯೇರಿ ಮತ್ತು ಪ್ರಿಫೆಕ್ಟ್ ಲಾಂಬೆರ್ಟೋ ಜಿಯನ್ನಿ ಸೇರಿದಂತೆ ದೇವರ ಕರುಣೆಯ ಸೇವಕರಾಗಬೇಕು ಎಂದು ಕಾರ್ಡಿನಲ್ ಆಹ್ವಾನಿಸಿದರು. ನಿರೀಕ್ಷೆಯನ್ನು ಕಳೆದುಕೊಂಡ ಅನೇಕ ಜನರು ಇರುವ ನಗರದಲ್ಲಿ ಕರ್ತನು ತನ್ನ ಕಾರ್ಯವನ್ನು ನೆರವೇರಿಸಲಿ ಎಂಬುದು ಅವರ ಆಶಯವಾಗಿತ್ತು.

ಅನುಪಸ್ಥಿತಿಯ ಭಾರ

ಕ್ರೈಸ್ತ ನಂಬಿಕೆಯನ್ನು ಘೋಷಿಸುವಾಗ, ಭಾರ, ನೋವು ಮತ್ತು ಅನ್ಯಾಯಗಳನ್ನು ಅನುಭವಿಸುವವರ ಬಗ್ಗೆ ಕಾಳಜಿ ವಹಿಸದೇ ಇರಲು ಸಾಧ್ಯವಿಲ್ಲ ಎಂದು ಕಾರ್ಡಿನಲ್ ಎಚ್ಚರಿಸಿದರು. ಇಂಥವರು ತಮ್ಮ ಜೀವನದಲ್ಲಿ ಅನುಭವಿಸುವುದು ಕೇವಲ “ಅನುಪಸ್ಥಿತಿ” ಮಾತ್ರ ಎಂದು ಅವರು ಹೇಳಿದರು.

ಅವರು ಈ ಅನುಪಸ್ಥಿತಿಯನ್ನು ವಿವಿಧ ರೂಪಗಳಲ್ಲಿ ವಿವರಿಸಿದರು:

ಪರಿಧಿ ಮತ್ತು ಕೇಂದ್ರದ ನಡುವೆ ಇರುವ ಅಂತರದಿಂದ ಹುಟ್ಟುವ ಐಕ್ಯತೆಯ ಕೊರತೆ ಆರ್ಥಿಕ ಹಾಗೂ ಅಸ್ತಿತ್ವದ ದುಃಖಗಳತ್ತ ಗಮನದ ಕೊರತೆ ಸಹೋದರತ್ವದ ಕೊರತೆ  ಇದರಿಂದ ನಾವು ಯಾಜಕರ ಮಧ್ಯೆಯೂ ಒಂಟಿಯಾಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಕುಟುಂಬಗಳು ಚೂರಾಗುತ್ತವೆ, ಸಂಬಂಧಗಳು ದುರ್ಬಲಗೊಳ್ಳುತ್ತವೆ, ಪೀಳಿಗೆಗಳ ನಡುವೆ ಸಂಘರ್ಷ ಉಂಟಾಗುತ್ತದೆ, ಮತ್ತು ವ್ಯಸನಗಳು ಬಂಧನಗಳಾಗುತ್ತವೆ.

ಅವರು ನ್ಯಾಯದ ಕೊರತೆಯನ್ನೂ ಉಲ್ಲೇಖಿಸಿದರು – ರಾಜಕೀಯದ ಉನ್ನತ ಕರ್ತವ್ಯವೆಂದರೆ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸಲು ಅಡೆತಡೆಗಳನ್ನು ತೆಗೆದುಹಾಕುವುದು. ಕೆಲಸ, ನ್ಯಾಯಸಮ್ಮತ ವೇತನ, ವಾಸಸ್ಥಳ, ಮತ್ತು ದುರ್ಬಲರ ರಕ್ಷಣೆ ಹಾಗೂ ಆರೈಕೆ – ಇವೆಲ್ಲವು ಮಾನವ ಗೌರವದ ಅವಿಭಾಜ್ಯ ಅಂಶಗಳು ಎಂದು ಹೇಳಿದರು.

ನಗರವನ್ನು ಬದಲಾಯಿಸಲು ಜಡತೆಯನ್ನು ಮೀರಿಸುವುದು

ಅನೇಕ ಜನರ ಹೃದಯಗಳು ದೃಷ್ಟಿ ಮತ್ತು ಚಿಂತನೆಯ ಕೊರತೆಯಿಂದ ಭಾರವಾಗಿವೆ ಎಂದು ಕಾರ್ಡಿನಲ್ ಹೇಳಿದರು. ಭಾವನೆಗಳು ಮಂಕಾಗಿವೆ, ತೀರ್ಪುಗಳು ಮೇಲ್ಮೈಯಾಗಿವೆ, ಮಾಹಿತಿ ಸತ್ಯದ ಹುಡುಕಾಟದಿಂದ ದೂರವಾಗಿದೆ, ಮತ್ತು ಸಂಸ್ಕೃತಿಗೆ ವಿಶ್ವಾಸಾರ್ಹ ಶಿಕ್ಷಕರು ಇಲ್ಲದಂತಾಗಿದೆ.

ಇದಕ್ಕೆ ಜೊತೆಗೆ, ಬಲಿಷ್ಠರ ತರ್ಕ ಆಳುವ ಜಗತ್ತಿನಲ್ಲಿ ಶಾಂತಿಯ ಕೊರತೆ ಇದೆ ಎಂದು ಅವರು ಹೇಳಿದರು. ಈ ಎಲ್ಲವು ದೇವರನ್ನು ಮೌನಗೊಳಿಸುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ. ಆದ್ದರಿಂದ, ಎಲ್ಲ ರೀತಿಯ ಜಡತೆಯನ್ನು ವಿರೋಧಿಸಿ, ಕರ್ತನನ್ನು ಭೇಟಿಯಾಗುವಂತೆ ಮತ್ತು ರೋಮ್ ನಗರವು ತನ್ನ ಸಾಮಾಜಿಕ ಹಾಗೂ ಅಸ್ತಿತ್ವದ ಎಲ್ಲ ಸ್ಥಳಗಳಲ್ಲಿ ರೂಪಾಂತರಗೊಳ್ಳುವಂತೆ ಅವರು ಭಕ್ತರನ್ನು ಪ್ರೇರೇಪಿಸಿದರು.

ಎಲ್ಲರನ್ನೂ ಸಹೋದರ-ಸಹೋದರಿಯರಾಗಿ ಗುರುತಿಸುವುದು

ಹೃದಯಗಳ ಮೇಲೆ ಭಾರವಿರುವ ಯಾತ್ರಿಕರು ರೋಮ್‌ನ ಬೀದಿಗಳಲ್ಲಿ ನಡೆದ ಹೆಜ್ಜೆಗಳ ಗುರುತುಗಳು ಇದೇ ಈ ಆಶೆಯ ಸಂಕೇತ ಎಂದು ಕಾರ್ಡಿನಲ್ ಹೇಳಿದರು. ಅವರು ಪವಿತ್ರ ಬಾಗಿಲಿನ ಮೇಲೆ ಕೈ ಇಟ್ಟು, ದೇವರ ಕರುಣೆಗಾಗಿ ಬೇಡಿಕೊಂಡರು.

ಜೂಬಿಲಿಯು ಪ್ರತಿಯೊಬ್ಬ ವಿಶ್ವಾಸಿಗೆ ಬಿಟ್ಟಿರುವ ಪಾಠವೇ ಇದು: ಅಚ್ಚರಿಗಳ ದೇವರ ಸಮೀಪತೆಯ ವ್ಯಾಪಕ ಸಂಸ್ಕಾರ ಎಂಬುದು. ಪವಿತ್ರ ಬಾಗಿಲು ಈಗ ಮುಚ್ಚಿದರೂ, ಪುನರುತ್ಥಾನಿ ಕರ್ತನು ಅದರ ಮೂಲಕವೇ ಹಾದುಹೋಗುತ್ತಾನೆ ಮತ್ತು ಕರುಣೆಯನ್ನು ನೀಡಲು ಹಾಗೂ ಹುಡುಕಲು ಸದಾ ಬಾಗಿಲು ತಟ್ಟುತ್ತಾನೆ ಎಂದು ಅವರು ಹೇಳಿದರು.

ಅಂತಿಮವಾಗಿ, ಕಾಲಾಂತ್ಯದಲ್ಲಿ ನಾವು ಪ್ರೀತಿಯಿಂದಲೇ ತೀರ್ಪು ಪಡೆಯುತ್ತೇವೆ  ಶತ್ರುಗಳೆಂದು ನಾವು ಭಾವಿಸುವವರನ್ನೂ ಸಹೋದರ-ಸಹೋದರಿಯರಾಗಿ ಗುರುತಿಸುವ ನಮ್ಮ ಸಾಮರ್ಥ್ಯದಿಂದ ಎಂದು ಅವರು ಒತ್ತಿ ಹೇಳಿದರು.

ಸಿನೋಡಾಲಿಟಿಯ ಪ್ರಯೋಗಾಲಯವಾಗಿ ರೋಮ್ ಚರ್ಚ್

ಈಗ ಆರಂಭವಾಗುತ್ತಿರುವ ಹೊಸ ಕಾಲದಲ್ಲಿ, ರೋಮ್ ಧರ್ಮಪ್ರಾಂತ್ಯವು ಕರ್ತನ ಸಾನ್ನಿಧ್ಯವನ್ನು ತೋರಿಸುವ ಸ್ಥಳವಾಗಬೇಕು ಎಂದು ಕಾರ್ಡಿನಲ್ ಆಹ್ವಾನಿಸಿದರು. ಯಾರನ್ನೂ ಮರೆತಿಲ್ಲದೆ, ಪರಸ್ಪರ ಸಮೀಪವಾಗುವುದರ ಮೂಲಕ ದೇವರ ಸಮೀಪತೆಯನ್ನು ಸಾಕ್ಷ್ಯಪಡಿಸಬೇಕು ಎಂದು ಹೇಳಿದರು.

ಸೆಪ್ಟೆಂಬರ್ 19ರಂದು ಜಗದ್ಗುರು XIVನೇ ಲಿಯೋ ಅವರು ರೋಮ್ ಧರ್ಮಪ್ರಾಂತ್ಯಕ್ಕೆ ನೀಡಿದ ಸಂದೇಶವನ್ನು ಉಲ್ಲೇಖಿಸಿ, ಈ ರೀತಿಯಿಂದಲೇ ಚರ್ಚ್ ಮತ್ತು ನಗರವು ಸಿನೋಡಾಲಿಟಿಯ ಪ್ರಯೋಗಾಲಯವಾಗಿ ಸುವಾರ್ತೆಯನ್ನು ಜೀವಂತಗೊಳಿಸಬಹುದು ಎಂದು ಅವರು ಹೇಳಿದರು.

ಜೂಬಿಲಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ

ಅಂತಿಮ ಆಶೀರ್ವಾದದ ಮೊದಲು, ಜೂಬಿಲಿ ವರ್ಷದ ಅವಧಿಯಲ್ಲಿ ಸೇವೆ ಸಲ್ಲಿಸಿದ ಎಲ್ಲರಿಗೂ ಕಾರ್ಡಿನಲ್ ಧನ್ಯವಾದ ಹೇಳಿದರು. ಜಗದ್ಗುರುಗಳು ಸಮೀಪತೆಯನ್ನು  ಸ್ಮರಿಸಿದರು. ಜೂಬಿಲಿಯ ಆಯೋಜಕರಾದ ಸುವಾರ್ತೀಕರಣದ ಡಿಕಾಸ್ಟರಿಯ ಪ್ರಿಫೆಕ್ಟ್ ಆರ್ಚ್‌ಬಿಷಪ್ ರಿನೋ ಫಿಸಿಕೇಲ್ಲ ಅವರನ್ನು ವಿಶೇಷವಾಗಿ ವಂದಿಸಿದರು.

ಸಾರ್ವಜನಿಕ ಮತ್ತು ಸೈನಿಕ ಅಧಿಕಾರಿಗಳಿಗೆ, ಹಾಗೂ ಯಾತ್ರಿಕರೊಂದಿಗೆ ದಾನ ಮತ್ತು ಆತಿಥ್ಯ ಪಾಲಿಸಿದ ಧರ್ಮಪ್ರಾಂತ್ಯದ ಭಕ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಪವಿತ್ರ ಬಾಗಿಲು

ಜೂಬಿಲಿಗಳ ಇತಿಹಾಸದಲ್ಲಿ, ಸಂತ ಜಾನ್ ಲ್ಯಾಟರನ್ ಬಸಿಲಿಕಾದ ಪವಿತ್ರ ಬಾಗಿಲು ಪೋರ್ಟಿಕೋನ ಬಲಭಾಗದಲ್ಲಿರುವುದು 1423ರ ಪವಿತ್ರ ವರ್ಷದಲ್ಲಿ ಮೊದಲ ಬಾರಿಗೆ ತೆರೆಯಲ್ಪಟ್ಟಿತು.

ಜಗದ್ಗುರು Vನೇ ಮಾರ್ಟಿನ್  ರವರು, ಕ್ರಿಸ್ತನೇ ನಿಜವಾದ ದ್ವಾರ ಎಂದು ಗುರುತಿಸಿ, ಆ ದ್ವಾರವನ್ನು ದಾಟುವುದು ಜೂಬಿಲಿ ಯಾತ್ರೆಯ ಪ್ರಮುಖ ಚಿಹ್ನೆಯಾಗಿ ರೂಪಿಸಿದರು. ಇದರಿಂದ ದೇವರ ಕೃಪೆಯ ವರ ದೊರೆಯುತ್ತದೆ.

ಈಗಿನ ಪವಿತ್ರ ಬಾಗಿಲು 2000ನೇ ಜೂಬಿಲಿಗಾಗಿ ಶಿಲ್ಪಿ ಫ್ಲೋರಿಯಾನೋ ಬೋದಿನಿ ಅವರಿಂದ ನಿರ್ಮಿತವಾಗಿದೆ. ಅದರಲ್ಲಿ ಧನ್ಯ ತಾಯಿ ಮರಿಯಮ್ಮ ಮತ್ತು ಬಾಲಯೇಸು, ಶಿಲುಬೆಯ ಮೇಲೆ ಕ್ರಿಸ್ತರು, ಹಾಗೂ ಸಂತ II ನೇ ಜಾನ್ ಪೌಲ್ ರ ಚಿಹ್ನೆ ಚಿತ್ರಿತವಾಗಿದೆ. ತಾಯಿ ಶಿಶುವನ್ನು ರಕ್ಷಿಸುತ್ತಾಳೆ; ಶಿಶು ಶಿಲುಬೆಯ ಕಡೆ ಕೈ ಚಾಚುತ್ತಾರೆ ತ್ಯಾಗದ ಮೂಲಕ ತನ್ನ ಶಾಶ್ವತ ದಿವ್ಯತೆಯನ್ನು ದೃಢಪಡಿಸುವ ಸಂಕೇತವಾಗಿದೆ ಎಂದರು.

ಇತರೆ ಮುಚ್ಚುವಿಕೆ ವಿಧಿಗಳು

ಸಂತ ಜಾನ್ ಲ್ಯಾಟರನ್ ಪವಿತ್ರ ಬಾಗಿಲು ಮುಚ್ಚಲ್ಪಟ್ಟದ್ದು ಜಗದ್ಗುರುಗಳ ಬಸಿಲಿಕಾಗಳಲ್ಲಿ ಎರಡನೆಯದು. ಡಿಸೆಂಬರ್ 25ರಂದು, ಕ್ರಿಸ್ತ ಜನನೋತ್ಸವದಂದು, ಸಂತ ಮೇರಿ ಮೇಜರ್ ಬಸಿಲಿಕಾದ ಪವಿತ್ರ ಬಾಗಿಲನ್ನು ಕಾರ್ಡಿನಲ್ ರೋಲಾಂಡಾಸ್ ಮಕ್ರಿಕಾಸ್ ಮುಚ್ಚಿದರು.

ಡಿಸೆಂಬರ್ 28ರಂದು, ಪವಿತ್ರ ಕುಟುಂಬದ ಹಬ್ಬದಂದು, ಸಂತ ಪೌಲ್ ಔಟ್‌ಸೈಡ್ ದ ವಾಲ್ಸ್ ಬಸಿಲಿಕಾದ ಪವಿತ್ರ ಬಾಗಿಲಿನ ಮುಚ್ಚುವಿಕೆಯ ಆಚರಣೆಯನ್ನು ಕಾರ್ಡಿನಲ್ ಜೇಮ್ಸ್ ಮೈಕಲ್ ಹಾರ್ವಿ ಅವರು ಅಧ್ಯಕ್ಷತೆ ವಹಿಸಿ ನೆರವೇರಿಸಲಿದ್ದಾರೆ.

ಕೊನೆಯದಾಗಿ, ಜನವರಿ 6ರಂದು ಕರ್ತನ ಪ್ರಕಟೋತ್ಸವದ (ಎಪಿಫನಿ) ಮಹೋತ್ಸವದಂದು  ಜಗದ್ಗುರು XIVನೇ ಲಿಯೋ  ರವರು ಸಂತ ಪೇತ್ರ ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚುವ ಮೂಲಕ ಜೂಬಿಲಿ 2025ಕ್ಕೆ ಅಧಿಕೃತ ಅಂತ್ಯವನ್ನು ಘೋಷಿಸುವರು.

27 ಡಿಸೆಂಬರ್ 2025, 19:05