ಹುಡುಕಿ

Chiusura della Porta Santa di San Paolo fuori le Mura a Roma Chiusura della Porta Santa di San Paolo fuori le Mura a Roma  (ANSA)

ಸಂತ ಪೌಲರ ಬಸಿಲಿಕಾದಲ್ಲಿ ಕಾರ್ಡಿನಲ್ ಹಾರ್ವಿ ಪವಿತ್ರ ಬಾಗಿಲನ್ನು ಮುಚ್ಚಿದರು

ಸಂತ ಪೌಲರ ಬಸಿಲಿಕಾದಲ್ಲಿ ಆಚರಿಸಲಾದ ಪವಿತ್ರ ಬಲಿ ಪೂಜೆಯ ಸಂದರ್ಭದಲ್ಲಿ ನೀಡಿದ ತಮ್ಮ ಉಪದೇಶದಲ್ಲಿ, ಕಾರ್ಡಿನಲ್ ಜೇಮ್ಸ್ ಹಾರ್ವಿರವರು ಜುಬಿಲಿಯ ಕೇಂದ್ರ ವಿಷಯವನ್ನು ಮತ್ತೊಮ್ಮೆ ದೃಢಪಡಿಸಿದರು. ಇತಿಹಾಸದ ನಡುವೆ ಸಾಗುವಾಗಲೂ ಸರಳ ಭಾವನಾತ್ಮಕ ಆಶಾವಾದಕ್ಕೆ ಒಳಗಾಗದೇ ಇರುವ, ದೇವರ ಮೇಲಿನ ನಂಬಿಕೆಯೊಂದಿಗೆ ಬೆಳೆದ ವಿಶ್ವಾಸಪೂರ್ಣ ನಿರೀಕ್ಷೆಯಾಗಿದೆ.

ಇಂದಿನ ಜಗತ್ತು ಅನುಭವಿಸುತ್ತಿರುವ ಯುದ್ಧಗಳು, ಸಂಕಷ್ಟಗಳು, ಅನ್ಯಾಯಗಳು ಹಾಗೂ ಗೊಂದಲಗಳನ್ನು ಕ್ರೈಸ್ತ ನಿರೀಕ್ಷೆ ನಿರ್ಲಕ್ಷಿಸುವುದಿಲ್ಲ ಎಂದು, ಸಂತ ಪೌಲರ ಬಸಿಲಿಕಾದ ಪ್ರಧಾನ ಯಾಜಕರಾದ ಕಾರ್ಡಿನಲ್ ಜೇಮ್ಸ್ ಮೈಕಲ್ ಹಾರ್ವಿ, ಅವರು ಡಿಸೆಂಬರ್ 28, ಭಾನುವಾರ ಬೆಳಿಗ್ಗೆ ನಡೆದ ಪವಿತ್ರ ಬಾಗಿಲಿನ ಮುಚ್ಚುವ ವಿಧಿವಿಧಾನವನ್ನು ಒಳಗೊಂಡ ಬಲಿಪೂಜೆಯ ಆಚರಣೆಯಲ್ಲಿನ ತಮ್ಮ ಉಪದೇಶದಲ್ಲಿ ಹೇಳಿದರು.

ಸ್ವಂತ ಮಿತಿಗಳು ಮತ್ತು ಅಪೂರ್ಣತೆಗಳ ವಾಸ್ತವದಿಂದ, ಇಂದಿನ ಗಾಯಗೊಂಡ ಸಾಮೂಹಿಕ ಇತಿಹಾಸದಿಂದ ತಪ್ಪಿಸಿಕೊಳ್ಳಲು ಓಡುವುದು ಒಂದೆಡೆಯಾದರೆ ಮತ್ತೊಂದೆಡೆ, ತಮ್ಮದೇ ಆಂತರಿಕ ಕಾರಾಗೃಹಗಳಲ್ಲಿ ಬಂಧಿತರಾಗಿ ಉಳಿದುಕೊಂಡು, ನಿರಾಶೆಯನ್ನು ಅಭ್ಯಾಸವನ್ನಾಗಿ ಮಾಡಿಕೊಂಡು ಅದು ಗಾಯವಾಗಿ ಮಾರ್ಪಡುವಂತೆ ಬಿಡುವುದು  ಇವು ಪವಿತ್ರ ಬಾಗಿಲಿನ ತೆರೆಯುವಿಕೆ ಮತ್ತು ಮುಚ್ಚುವಿಕೆಯಂತೆ, ಪರಸ್ಪರ ವಿರುದ್ಧವಾದರೂ ಪರಸ್ಪರ ಪೂರಕವಾದ ಎರಡು ಚಲನೆಗಳಾಗಿವೆ.

ಆದರೆ ಈ ಎರಡರ ಮಧ್ಯೆ, ಕ್ಷೀಣಿಸದ ಕರುಣೆಯ ಸ್ಮರಣೆಯೆಂದರೆ ಈಗಾಗಲೇ ನೀಡಲ್ಪಟ್ಟ ರಕ್ಷಣೆಯ ನೆನಪು ಉಳಿದಿದೆ ಎಂದು ಅದು ಇತಿಹಾಸಕ್ಕೆ ಪ್ರವೇಶಿಸಿದಾಗ ಒಣಗದೇ ಮೊಳೆಯುವ ಬೀಜವಾಗಿ ಪರಿಣಮಿಸುತ್ತದೆ ಎಂದು ಕಾರ್ಡಿನಲ್ ರವರು ಸೂಚಿಸಿದ ಅರ್ಥವಾಗಿತ್ತು.

ಶಾಂತಿ ಮತ್ತು ಏಕೈಕ ನಿರೀಕ್ಷೆ

ಬಸಿಲಿಕಾದ ಕ್ವಾಡ್ರಿಪೋರ್ಟಿಕೊ ಮಧ್ಯಭಾಗದಲ್ಲಿರುವ ಸಂತ ಪೌಲರ ಪ್ರತಿಮೆಯ ಮೇಲೆ ಹೊಳೆಯುತ್ತಿದ್ದ ಸೂರ್ಯನ ಕಿರಣಗಳು, ಲಿಟರ್ಜಿಗಾಗಿ ಸೇರಿದ್ದ ವಿಶ್ವಾಸಿಗಳನ್ನು ತಾಪಮಾನದ ತೀವ್ರ ಚಳಿಯಿಂದ ರಕ್ಷಿಸಿದವು.

ಬಸಿಲಿಕಾದ ಮುಖಭಾಗದ ಬಲಭಾಗದಲ್ಲಿರುವ ಪವಿತ್ರ ಬಾಗಿಲಿನ ಮೇಲಿನ ಶಿಲುಬೆಯ ಕೆಳಗೆ   “ಏಕೈಕ ನಿರೀಕ್ಷೆ” ಎಂಬ ಲಿಪಿ ಅಂಕಿತವಾಗಿದೆ. ಪವಿತ್ರ ಬಲಿ ಪೂಜೆಯ ವೇಳೆ ಅಮೆರಿಕಾದ ಕಾರ್ಡಿನಲ್ ನೆನಪಿಸಿದಂತೆ, ಆ “ಏಕೈಕ ನಿರೀಕ್ಷೆ” ಕ್ರಿಸ್ತನ ಶಿಲುಬೆಯಲ್ಲಿದೆ. ಅದು ಸ್ವಾರ್ಥರಹಿತ ಆತ್ಮದಾನದಿಂದ ಉದ್ಭವಿಸುವ, ಮತ್ತು ಪುನರುತ್ಥಾನದ ಹೊಸ ಜೀವನದಲ್ಲಿ ಅರಳುವ ಒಂದು ಪಾಸ್ಕ ಆಶಯವಾಗಿದೆ.

ಪವಿತ್ರ ವರ್ಷವಿಡೀ ತೀರ್ಥಯಾತ್ರಿಕರನ್ನು ಜೊತೆಗೂಡಿಸಿದ್ದ ಪವಿತ್ರ ಬಾಗಿಲಿನ ಮೇಲಿನ ಮತ್ತೊಂದು ಲಿಪಿಯೆಂದರೆ "ಸಂತ ಪೌಲರ ಈ ಪವಿತ್ರ ಮಂದಿರಕ್ಕೆ ಬರುವ ಎಲ್ಲರಿಗೂ ಶಾಂತಿಯ ದಾನವೂ ಶಾಶ್ವತ ರಕ್ಷಣೆಯೂ ದೊರೆಯಲಿ” ಎಂಬುದಾಗಿದೆ. ಇದು ಯುದ್ಧಗಳು, ಸಂಕಷ್ಟಗಳು, ಅನ್ಯಾಯಗಳು ಮತ್ತು ಗೊಂದಲಗಳಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ ಶಾಂತಿಯ ವರ ನಿಜವಾಗಿಯೂ ಹರಡಲಿ ಎಂಬ ಸ್ಥಿರ ನಿರೀಕ್ಷೆಯ ಸಂಕೇತವಾಗಿದೆ.

ಪವಿತ್ರ ಬಾಗಿಲಿನ ಮುಚ್ಚುವಿಕೆ

ಮುಚ್ಚುವ ವಿಧಿವಿಧಾನವು ಆಳವಾದ ಧನಾತ್ಮಕ ಮೌನದಿಂದ ಗುರುತಿಸಲ್ಪಟ್ಟಿತು. ಆ ಮೌನವು ಕಾರ್ಡಿನಲ್ ಹಾರ್ವಿಯವರನ್ನು ಪವಿತ್ರ ಬಾಗಿಲಿನತ್ತ ಕರೆದುಕೊಂಡು ಹೋಯಿತು. ಆ ಬಾಗಿಲಿನ ಮೂರು ಫಲಕಗಳು, ಸಂತ ಜಾನ್ II ನೇ ಪೌಲರವರ ಮನವಿಯಂತೆ, ಪವಿತ್ರ ವರ್ಷ 2000ಕ್ಕೆ ನಡೆದ ಮೂರು ವರ್ಷದ ಸಿದ್ಧತೆಯನ್ನು ಸ್ಮರಿಸುತ್ತವೆ. ಕರುಣೆಯಿಂದ ಸಮೃದ್ಧರಾದ ತಂದೆಗೆ, ಸುವಾರ್ತಾ ಕಾರ್ಯದ ಪ್ರಧಾನ ಕಾರ್ಯಕರ್ತರಾದ ಪವಿತ್ರ ಆತ್ಮನಿಗೆ, ಹಾಗೂ ವಿಮೋಚಕರಾದ ಪುತ್ರನಿಗೆ ಅರ್ಪಿತವಾದವು. ಕಾರ್ಡಿನಲ್ ರವರು ಬಾಗಿಲಿನ ಮುಂದೆ ಮೊಣಕಾಲೂರಿ , ಕೆಲ ಕ್ಷಣ ಪ್ರಾರ್ಥನಾತ್ಮಕ ಧ್ಯಾನದಲ್ಲಿ ತೊಡಗಿದ ನಂತರ, ಪವಿತ್ರ ಬಾಗಿಲನ್ನು ಮುಚ್ಚಿದರು.

ಜೀವನದ ಹೋರಾಟದಲ್ಲಿ ನಿರೀಕ್ಷೆ

ಒಂದು ಅಂತ್ಯವು ಯಾವಾಗಲೂ ಕಾಲದ ಒಂದು ಕ್ಷಣ ಮಾತ್ರ, , ಆದರೆ ದೇವರ ಕರುಣೆ ಸದಾಕಾಲ ತೆರೆದೆಯೇ ಇರುತ್ತದೆ ಎಂದು ತಮ್ಮ ಉಪದೇಶದಲ್ಲಿ ಕಾರ್ಡಿನಲ್ ಅವರು ಒತ್ತಿ ಹೇಳಿದರು ಆದ್ದರಿಂದ ಪವಿತ್ರ ವರ್ಷದ ಪ್ರೇರಣೆಯಿಂದ ಹುಟ್ಟಿದ ಮನಃಪರಿವರ್ತನೆ ಮತ್ತು ನಿರೀಕ್ಷೆಯ ಪಥದಲ್ಲಿ ಮುಂದುವರಿಯುವಂತೆ ಆಹ್ವಾನ ನೀಡಲಾಗಿದೆ. ಸಂತ ಪೌಲರ ಸ್ಮರಣೆಗೆ ಸಮರ್ಪಿತವಾದ ಈ ಧರ್ಮ ಸಭೆಯಲ್ಲಿ, ರೋಮನ್ನರಿಗೆ ಬರೆದ ಪತ್ರಿಕೆಯ ವಾಕ್ಯಗಳು ವಿಶೇಷವಾಗಿ ಗಂಭೀರವಾಗಿ ಪ್ರತಿಧ್ವನಿಸುತ್ತವೆ. ನಿರೀಕ್ಷೆ ನಿರಾಶೆಗೊಳಿಸುವುದಿಲ್ಲ — ಈ ವಾಕ್ಯವೇ ಸಂಪೂರ್ಣ ಜುಬಿಲಿಯೊಂದಿಗೆ ಸಾಗಿತ್ತು.

ಇವು ಕೇವಲ ಒಂದು ಧ್ಯೇಯವಾಕ್ಯ ಮಾತ್ರವಲ್ಲ,ಅವು ನಿಜವಾದ ವಿಶ್ವಾಸ ಘೋಷಣೆಯಾಗಿವೆ. ಅನ್ಯಜನರ ಪ್ರೇಷಿತರ ಸಂತ ಪೌಲರು, ಕಾರಾಗೃಹ, ಹಿಂಸೆ ಹಾಗೂ ಸ್ಪಷ್ಟವಾದ ವಿಫಲತೆಗಳನ್ನು ಅನುಭವಿಸಿದ್ದರೂ, ಜೀವನದ ಕಷ್ಟಸಾಧ್ಯ ಹೋರಾಟವನ್ನು ಅರಿತವರಾಗಿ ಈ ಮಾತುಗಳನ್ನು ಇತಿಹಾಸಕ್ಕೆ ಒಪ್ಪಿಸಿದರು. ಆದರೂ ನಿರೀಕ್ಷೆ ಕುಸಿಯುವುದಿಲ್ಲ, ಏಕೆಂದರೆ ಅದು ಮಾನವೀಯ ದುರ್ಬಲ ಸಾಮರ್ಥ್ಯಗಳ ಮೇಲೆ ಅಲ್ಲ, ದೇವರ ನಿಷ್ಠಾವಂತ ಪ್ರೀತಿಯ ಮೇಲೆ ನೆಲೆಯಾಗಿದೆ.

ಕರುಣೆಯ ಆವರಣಕ್ಕೆ ಪ್ರವೇಶ

ಪವಿತ್ರ ಬಾಗಿಲು ಕೇವಲ ಭೌತಿಕ ಗಡಿಯಷ್ಟೇ ಅಲ್ಲ ಅದು ಹೃದಯವನ್ನು ಭಾರಗೊಳಿಸುವುದನ್ನೆಲ್ಲ ಹಿಂದೆ ಬಿಟ್ಟು ಕರುಣೆಯ ಆವರಣಕ್ಕೆ ಪ್ರವೇಶಿಸುವ ಒಂದು ದಾಟುವಿಕೆಯಾಗಿದೆ.ಅದನ್ನು ದಾಟುವುದು ಎಂದರೆ, ಎಲ್ಲಾ ಸ್ವಯಂಪೂರ್ಣತೆಯ ಭ್ರಮೆಗಳನ್ನು ತ್ಯಜಿಸಿ, ನಮ್ಮ ಜೀವನಕ್ಕೆ ಸಂಪೂರ್ಣ ಅರ್ಥ ನೀಡಬಲ್ಲ ಒಬ್ಬನೇ ದೇವರ ಕೈಯಲ್ಲಿ ವಿನಮ್ರವಾಗಿ ನಮ್ಮನ್ನು ಒಪ್ಪಿಸುವುದಾಗಿದೆ ಎಂದು ಪ್ರಧಾನ ಯಾಜಕರು ಹೇಳಿದರು.

ಈ ದಾಟುವಿಕೆ ಪ್ರಾಯಶ್ಚಿತ್ತಯಾತ್ರೆಯೊಂದಿಗೂ ಸಂಬಂಧಿಸಿದೆ ಅದು “ ಸಾಮ್ಯತೆಗೆ ಮರಳುವ ಸ್ಥಳ, ತಂದೆಯ ಮನೆಗೆ ಮರಳುವ ಸಂಕೇತ ಈ ಸಂಕೇತವು ವರ್ಷಗಳಾದರೂ ತನ್ನ ಶಕ್ತಿಯನ್ನು ಕಳೆದುಕೊಂಡಿಲ್ಲ. ದೇವರು ಮಾನವನಿಗೆ ಬಾಗಿಲನ್ನು ಎಂದಿಗೂ ಮುಚ್ಚುವುದಿಲ್ಲ, ಅದನ್ನು ದಾಟಬೇಕಾದ ಕರೆಯು ಮಾನವನಿಗೇ ಇದೆ.

ಈಗಾಗಲೇ ನೀಡಲ್ಪಟ್ಟ ರಕ್ಷಣೆಯ ನಿರೀಕ್ಷೆ

ನಿರೀಕ್ಷೆಯೊಂದಿಗೆ ವಿಶ್ವಾಸ ಮತ್ತು ಪ್ರೀತಿಯನ್ನೂ ಜಗದ್ಗುರು ಫ್ರಾನ್ಸಿಸ್ ರವರು ಕ್ರೈಸ್ತ ಜೀವನದ ಹೃದಯವೆಂದು ವಿವರಿಸಿದ್ದಾರೆ. 2025ರ ಜುಬಿಲಿಗೆ ಸಂಬಂಧಿಸಿದ ಈ ಗುಣವು, ಕಾರ್ಡಿನಲ್ ಹಾರ್ವಿರವರ ಪ್ರಕಾರ, ಯಾವುದೇ ಸರಳ ಆಶಾವಾದ ಅಥವಾ ವಾಸ್ತವದಿಂದ ತಪ್ಪಿಸಿಕೊಳ್ಳುವಿಕೆಗಿಂತ ಬಹಳ ಮೀರಿದುದಾಗಿದೆ. ಅವರು 2025ರ ಜನವರಿ 5ರಂದು ಪವಿತ್ರ ಬಾಗಿಲಿನ ಉದ್ಘಾಟನೆಯ ಸಂದರ್ಭದಲ್ಲಿ ನೆನಪಿಸಿದಂತೆ, ನಿರೀಕ್ಷೆ ಎಂದರೆ “ಖಾಲಿ ಪದ” ಅಥವಾ “ಎಲ್ಲವೂ ಚೆನ್ನಾಗಿರಲಿ ಎಂಬ ಅಸ್ಪಷ್ಟ ಆಸೆ” ಅಲ್ಲ. ಬದಲಾಗಿನಿಜವಾದ ನಿರೀಕ್ಷೆ ಎಂದರೆ, ಈಗಾಗಲೇ ನೀಡಲ್ಪಟ್ಟಿದ್ದರೂ ಇನ್ನೂ ಪೂರ್ಣತೆಯತ್ತ ಸಾಗುತ್ತಿರುವ ರಕ್ಷಣೆಯನ್ನು ವಿಶ್ವಾಸಪೂರ್ಣವಾಗಿ ಕಾಯುವುದು ಕ್ರಿಸ್ತನ ಮೇಲೆ ದೃಷ್ಟಿಯನ್ನು ಸ್ಥಿರಗೊಳಿಸಿ ಮಾನವ ಇತಿಹಾಸದ ಪಥದಲ್ಲಿ ಸಾಗುತ್ತಾ, ನೋವನ್ನು ಎದುರಿಸುವಾಗಲೂ ಕೊನೆಯ ಮಾತು ಜೀವನ ಮತ್ತು ರಕ್ಷಣೆಯದ್ದೇ ಎಂಬ ದೃಢ ನಂಬಿಕೆಯಲ್ಲಿ ಬದುಕುವುದು.ಆಳಕ್ಕೆ ಇಳಿಯುವ ಧೈರ್ಯ ಬಂಧನಗಳಿಂದ ಮುಕ್ತವಾಗಿ

ಇವು ಯಾವುದೂ ಅಸ್ಪಷ್ಟ ಆದರ್ಶಗಳಲ್ಲ,ಅವು ಹೃದಯದ ಪರಿವರ್ತನೆ ಹಾಗೂ ಪಶ್ಚಾತ್ತಾಪ ಸಂಸ್ಕಾರದಲ್ಲಿ ಅನುಭವಿಸುವ ಕ್ಷಮೆಯ ವಿಮೋಚಕ ಅನುಭವದ ಮೂಲಕ ವ್ಯಕ್ತವಾಗುತ್ತವೆ ಎಂದರು. ಜಗದ್ಗುರು ಫ್ರಾನ್ಸಿಸ್ ರವರು ಈ ಅಂಶವನ್ನು ಬಲವಾಗಿ ಒತ್ತಿ ಹೇಳಿದ್ದಾರೆ. ಅವರ ಉತ್ತರಾಧಿಕಾರಿಯಾದ ಜಗದ್ಗುರು XIVನೇ ಲಿಯೋರವರು ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ ಎಂದು ಕಾರ್ಡಿನಲ್ ಹಾರ್ವಿ ಹೇಳಿದರು.

ನಿರೀಕ್ಷೆ ಪೋಷಿತವಾಗುವುದು ಆಳಕ್ಕೆ ಇಳಿಯುವ ಧೈರ್ಯವನ್ನು ಕಂಡುಕೊಳ್ಳುವುದರಿಂದ  ವಾಸ್ತವದ ಮೇಲ್ಮೈಯ ಕೆಳಗೆ ತೋಡುವುದು ಮತ್ತು ನಿರಾಶೆಯ ಹೊದಿಕೆಯನ್ನು ಒಡೆಯುವುದರ ಮೂಲಕ ಇದು ನಾಜೂಕಾದ ಗುಣವಾದರೂ, ಜಗತ್ತನ್ನೇ ಬದಲಾಯಿಸುವ ಅಪಾರ ಶಕ್ತಿಯನ್ನು ಹೊಂದಿದೆ.

ಕಾರ್ಡಿನಲ್ ಅವರು ಸಂತ ಪೌಲರ ವ್ಯಕ್ತಿತ್ವವನ್ನು ಮತ್ತೊಮ್ಮೆ ಬೆಳಗಿಸಿದರು ತಮ್ಮ ಸ್ವಂತ ದುರ್ಬಲತೆಯನ್ನು ಅನುಭವಿಸಿದ ಬಳಿಕ, ಕೊರಿಂಥಿಯರಿಗೆ ಬರೆದ ಎರಡನೇ ಪತ್ರಿಕೆಯಲ್ಲಿ, ಕ್ರಿಸ್ತನೊಂದಿಗೆ ಹೊಂದಿದ ಸಂಬಂಧದಿಂದಲೇ ಆ ದುರ್ಬಲತೆಯಲ್ಲೇ ತಮ್ಮ ಶಕ್ತಿಯನ್ನಾಗಿ ಕಂಡುಕೊಂಡೆನೆಂದು ಪೌಲರು ಹೇಳುತ್ತಾರೆ.

ಫಿಲಿಪ್ಪಿ, ಜೆರೂಸಲೇಮ್, ಕೈಸರಿಯಾ, ರೋಮ್  ಎಲ್ಲೆಲ್ಲಿಯ ಕಾರಾಗೃಹಗಳಲ್ಲಿಯೂ ಬಂಧಿತರಾಗಿದ್ದರೂ, ಆ ಬಂಧನಗಳು ಅವರ ನಂಬಿಕೆ, ಸಾಂತ್ವನ ಮತ್ತು ನಿರೀಕ್ಷೆಯ ಆಸೆಯನ್ನು ನುಂಗಲಿಲ್ಲ. ಕ್ರಿಸ್ತನಲ್ಲಿ ಬದುಕುವವರ ಆಂತರಿಕ ಸ್ವಾತಂತ್ರ್ಯವನ್ನು ಯಾವ ಕಾರಾಗೃಹವೂ ನಾಶಮಾಡಲಾರದು.

ಅತ್ಯಂತ ಮಹತ್ತರ ನಿರೀಕ್ಷೆ

ಜಗದ್ಗುರು XVI ನೇ ಬೆನೆಡಿಕ್ಟ್ ರವರು ತಮ್ಮ ಪರಿಕ್ರಮಿಕ ಪತ್ರಿಕೆಯನ್ನು ನಿರೀಕ್ಷೆಗೆ ಸಮರ್ಪಿಸಿದ್ದನ್ನು ಕಾರ್ಡಿನಲ್ ಪ್ರಧಾನ ಯಾಜಕರು ನೆನಪಿಸಿದರು. ಆ ಪತ್ರಿಕೆಯಲ್ಲಿ, ಮಾನವನ ಪಥವನ್ನು ಬೆಳಗಿಸಲು ಅವನಿಗೆ ಅನೇಕ ನಿರೀಕ್ಷೆಗಳು ಬೇಕು.ಅವು ಸಣ್ಣದಾಗಿರಲಿ ದೊಡ್ಡದಾಗಿರಲಿ  ಆದರೆ ಅವೆಲ್ಲವೂ ಒಂದೇ ಮಹಾ ನಿರೀಕ್ಷೆಯಲ್ಲಿ ಒಂದಾಗುತ್ತವೆ. ಅದೇ ದೇವರು ಸ್ವತಃ, ತಮ್ಮ ಮಾನವ ಮುಖದ ಮೂಲಕ ವ್ಯಕ್ತವಾದ, ಜೀವಂತ ಮತ್ತು ಸನ್ನಿಹಿತ ವಾಸ್ತವವಾಗಿ ಸಮಸ್ತ ಮಾನವ ಇತಿಹಾಸವನ್ನು ಆಲಿಂಗಿಸುವ ದೇವರಾಗಿದ್ದಾರೆ.

ಈ ಪ್ರೀತಿ ಅಪೂರ್ಣತೆ ಮತ್ತು ಮಿತಿಗಳಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿಯೂ ದೈನಂದಿನ ಜೀವನದಲ್ಲಿ ಸ್ಥೈರ್ಯವನ್ನು ಉಳಿಸುತ್ತದೆ, ಏಕೆಂದರೆ ಅದು ಮಾನವನು ಅಂತಿಮವಾಗಿ ಬಯಸುವುದಾದ ನಿಜವಾದ ಜೀವನದ ಜೀವನ ಅಸ್ತಿತ್ವವನ್ನು ಭರವಸೆಯನ್ನು ನೀಡುತ್ತದೆ.

ತೀರ್ಥಯಾತ್ರಿಕನ ಹೊಣೆಗಾರಿಕೆ

ಆದ್ದರಿಂದ ಪವಿತ್ರ ಬಾಗಿಲನ್ನು ದಾಟುವುದು, ಪಡೆದ ವರವನ್ನು ಸಾಕ್ಷಿಯಾಗಿ ಹೊತ್ತು ಮತ್ತೆ ಜಗತ್ತಿಗೆ ಮರಳುವ ಆಹ್ವಾನವಾಗುತ್ತದೆ.

ಇದು ಆಂತರಿಕವೂ ಆಗಿ ವಾಸ್ತವಿಕವೂ ಆಗಿರುವ ಒಂದು ಯಾತ್ರೆ ಸ್ವಂತ ಮಿತಿಗಳು ಮತ್ತು ನಮ್ಮ ದೃಷ್ಟಿಯ ಅಪೂರ್ಣತೆಯನ್ನು ಅಂಗೀಕರಿಸಿ, ಕರ್ತನ ಮಾರ್ಗದರ್ಶನಕ್ಕೆ ನಮ್ಮನ್ನು ಒಪ್ಪಿಸುವುದು. ಪ್ರಾರ್ಥನೆಯಂತೆ, ಇದು ಹಂತ ಹಂತವಾಗಿ ಸಾಗುವ ಪಥ, ಪ್ರತಿಯೊಂದು ಹೆಜ್ಜೆಯೂ ಸಾಕು ಎಂಬ ನಂಬಿಕೆಯಲ್ಲಿ ನಡೆಯುವ ಪ್ರಯಾಣ.

ಪ್ರತಿ ತೀರ್ಥಯಾತ್ರಿಕನೂ ತಾನು ಪಡೆದ ವರಕ್ಕೆ ನಂಬಿಕಾರ್ಹ ಸಾಕ್ಷಿಯಾಗುವ ಹೊಣೆಗಾರಿಕೆಯನ್ನು ಹೊತ್ತಿರುತ್ತಾನೆ ಎಂದು ಹಾರ್ವಿಯವರು ಒತ್ತಿ ಹೇಳಿದರು.ವಿಭಜನೆಗಳು ಮತ್ತು ಭಯಗಳಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ ದೇವರ ಸಾನ್ನಿಧ್ಯದ ವಿನಮ್ರನಾದ ಆದರೆ ಪ್ರಕಾಶಮಾನ ಸಂಕೇತವಾಗಲು

ಹೃದಯದ ತೆರೆದ ಬಾಗಿಲುಗಳು

ಇಂತಹ ಹೊಣೆಗಾರಿಕೆಯನ್ನು ಸಂತರು ಹೊತ್ತುಕೊಂಡಿದ್ದಾರೆ. ಇತಿಹಾಸದಲ್ಲಿ ಅವರಿಗೆ ಒಪ್ಪಿಸಲ್ಪಟ್ಟ ಸ್ಥಳಗಳಿಗೆ ನಿಷ್ಠರಾಗಿದ್ದು, ದೈನಂದಿನ ಜೀವನದ ನಿರೀಕ್ಷೆಯನ್ನು ಬದುಕಿದ್ದಾರೆ. ಇಂದಿನ ದೈವಾರಾಧನ ವಿಧಿಯಲ್ಲಿ ಸ್ಮರಿಸಲ್ಪಡುವ ಯೇಸು, ಮರಿಯ ಮತ್ತು ಜೋಸೇಫರ ಪವಿತ್ರ ಕುಟುಂಬದಂತೆ ಮೌನ ಶ್ರಮ, ಪರಸ್ಪರ ಕಾಳಜಿ ಮತ್ತು ಜೀವನದ ವಿವಿಧ ಪರಿಸ್ಥಿತಿಗಳಲ್ಲಿ ದೇವರ ಇಚ್ಛೆಯನ್ನು ಆಲಿಸುವ ಸಾಮಾನ್ಯ ಜೀವನವಾಗಿದೆ.

ಪ್ರೀತಿಯಿಂದ ಪುನರಾವರ್ತಿಸಲ್ಪಡುವ ಈ ಕ್ರಿಯೆಗಳು ಬೆಳಕಾಗಿ ಹೊಳೆಯುತ್ತವೆ, ಕತ್ತಲೆಯಲ್ಲಿಯೂ ತಾಳ್ಮೆಯಿಂದ ಮುಂದುವರಿಯುವ ನಂಬಿಕೆಯಿಂದ ಬೆಂಬಲಿತವಾಗಿವೆ. ಕಾರ್ಡಿನಲ್ ರವರು ಸಮಾಪ್ತಿಯಲ್ಲಿ ಹೀಗೆ ಹೇಳಿದರು. ಪವಿತ್ರ ಬಾಗಿಲು ಮುಚ್ಚಲ್ಪಡುವಾಗಲೂ, ನಮ್ಮ ಹೃದಯಗಳಲ್ಲಿ ವಿಶ್ವಾಸ, ಪ್ರೀತಿ ಮತ್ತು ನಿರೀಕ್ಷೆಯ ಬಾಗಿಲುಗಳು ತೆರೆದೆಯೇ ಇರಲಿ. ಧರ್ಮಪ್ರಚಾರದ ಬಾಗಿಲು ತೆರೆದೆಯೇ ಇರಲಿ, ಏಕೆಂದರೆ ಜಗತ್ತಿಗೆ ಕ್ರಿಸ್ತನ ಅಗತ್ಯವಿದೆ.

ಸಂತ ಪೌಲರ ಬಸಿಲಿಕಾದ ಪವಿತ್ರ ಬಾಗಿಲು ಮುಚ್ಚಲ್ಪಟ್ಟಿದ್ದು, ಇದು ಮುಚ್ಚಲ್ಪಟ್ಟ ಮೂರನೇ  ಬಸಿಲಿಕಾವಾಗಿದೆ. ಮೊದಲನೆಯದು ಕ್ರಿಸ್‌ಮಸ್ ದಿನ ಸಂತ ಮೇರಿ ಮೇಜರ್ ಬಸಿಲಿಕಾ; ನಂತರ ಡಿಸೆಂಬರ್ 27 ಶನಿವಾರ ಬೆಳಿಗ್ಗೆ ಸಂತ ಜಾನ್ ಲ್ಯಾಟರನ್ ಬಸಿಲಿಕಾವಾಗಿದೆ. ದೈವ ದರ್ಶನದ ಮಹೋತ್ಸವ, ಜನವರಿ 6ರಂದು, ಜಗದ್ಗುರು XIVನೇ ಲಿಯೋರವರು ಸಂತ ಪೇತ್ರ ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚಲಿದ್ದಾರೆ.

28 ಡಿಸೆಂಬರ್ 2025, 19:19