ಸಂತ ಪೇತ್ರರ ಬಸಿಲಿಕಾದ ಕ್ರಿಸ್ತ ಜನನದ ಆಚರಣೆಗಳಲ್ಲಿ ನಂಬಿಕೆಯ ಮಾತೆ
ನಿರೀಕ್ಷೆಯ ಜ್ಯೂಬಿಲಿಯ ಅಂತ್ಯವು ಕನ್ಯಾ ಮರಿಯಮ್ಮನ ದೃಷ್ಟಿಯಡಿಯಲ್ಲಿ ನಡೆಯಲಿದೆ. ಕ್ರಿಸ್ತ ಜನನದ ಕಾಲದ ಪ್ರತಿಯೊಂದು ದೈವಾರಾಧನ ವಿಧಿಯಲ್ಲಿ, ನಮ್ಮ ನಂಬಿಕೆಯ ಮಾತೆಯ ಮರದ ಪ್ರತಿಮೆ ಸೈಂಟ್ ಪೀಟರ್ ಬಸಿಲಿಕಾದಲ್ಲಿ ಉಪಸ್ಥಿತವಿರಲಿದೆ. ಈ ಪ್ರತಿಮೆ ದಕ್ಷಿಣ ಇಟಲಿಯ ಸಾಲೆರ್ಣೊ ಪ್ರಾಂತ್ಯದಲ್ಲಿರುವ ಸಾನ್ ಮಾರ್ಕೊ ದಿ ಕ್ಯಾಸ್ಟೆಲ್ಲಾಬಾತೆ ಪ್ರದೇಶದ ಸೈಂಟ್ ಮಾರ್ಕ್ ದಿ ಎವಾಂಜಲಿಸ್ಟ್ ಬಂದಿದೆ.
ನಮ್ಮ ನಂಬಿಕೆಯ ಮಾತೆಯ ಪ್ರತಿಮೆ ಡಿಸೆಂಬರ್ 22, ಸೋಮವಾರ ವಾಟಿಕನ್‌ಗೆ ಆಗಮಿಸಿ, ಅಲ್ಟಾರ್ ಆಫ್ ದ ಕನ್‌ಫೆಶನ್ ಸಮೀಪದಲ್ಲಿ ಸ್ಥಾಪಿಸಲಾಗುತ್ತದೆ. ಕರ್ತನ ಮೂರು ರಾಜರ ಹಬ್ಬವಾದ ಜನವರಿ 6ರ ನಂತರ, ಆ ಪ್ರತಿಮೆ ಮತ್ತೆ ತನ್ನ ಮೂಲ ಧರ್ಮಕೇಂದ್ರಕ್ಕೆ ಮರಳಲಿದೆ. ನಮ್ಮ ನಂಬಿಕೆಯ ಮಾತೆಯು ಕೈಗಳಲ್ಲಿ ಬಾಲ ಯೇಸುವನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಅವರ ಬಲಗೈಯಲ್ಲಿ, ಭೂಮಿಯಲ್ಲಿ ದೃಢವಾಗಿ ನೆಲೆಯೂರಿರುವ ಬಂಗಾರದ ಲಂಗರ್ ಇರುವುದು ಗಮನಾರ್ಹ.
ಈ ಪ್ರತಿಮೆ, ಅದೇ ಸಾಲೆರ್ಣೊ ಪ್ರಾಂತ್ಯದ ಬತ್ತಿಪಾಗ್ಲಿಯಾ ಪಟ್ಟಣದಲ್ಲಿ ಇರುವ ನಮ್ಮ ನಂಬಿಕೆಯ ಮಾತೆಯ ಸನ್ನಿಧಿ ದೇವಾಲಯದಲ್ಲಿರುವ ಒಂದು ಪ್ರಸಿದ್ಧ ಪ್ರತಿಮೆಯನ್ನು ನೆನಪಿಸುತ್ತದೆ. ಆ ಪ್ರತಿಮೆಯನ್ನು 2024ರಲ್ಲಿ ಜ್ಯೂಬಿಲಿಯ ಉದ್ಘಾಟನೆಗಾಗಿ ವಾಟಿಕನ್‌ಗೆ ತರಲಾಗಿತ್ತು.
ನಮ್ಮ ನಂಬಿಕೆಯ ಮಾತೆಯ ಈ ಪ್ರತಿಮೆಯನ್ನು ಸ್ಟುಫ್ಲೆಸ್ಸರ್ ಕಾರ್ಯಾಗಾರವು 1954ರಲ್ಲಿ ನಿರ್ಮಿಸಿತು. ಜಗದ್ಗುರು XII ನೇ ಪಿಯಸ್ ರವರು ಘೋಷಿಸಿದ್ದ ಮರಿಯಮ್ಮನ ವರ್ಷದ ಸ್ಮರಣಾರ್ಥವಾಗಿ ಇದನ್ನು ರೂಪಿಸಲಾಯಿತು. ಪ್ರತಿಮೆ ಪೂರ್ಣಗೊಂಡ ನಂತರ, ಸಾನ್ ಮಾರ್ಕೊ ದಿ ಕ್ಯಾಸ್ಟೆಲ್ಲಾಬಾತೆ ಪ್ರದೇಶದ ಕುಟುಂಬಗಳು, ಅದನ್ನು ದೇವಾಲಯದಲ್ಲಿ ಸ್ಥಾಪಿಸುವ ಮೊದಲು ತಮ್ಮ ಮನೆಗಳಲ್ಲಿ ಸ್ವಾಗತಿಸಿದರು. ಇತ್ತೀಚೆಗೆ ಈ ಪ್ರತಿಮೆಯನ್ನು ಜ್ಯೂಬಿಲಿಗಾಗಿ ಪುನಃಸ್ಥಾಪನೆ ಮಾಡಲಾಗಿದ್ದು, ಪವಿತ್ರ ವರ್ಷದ ಆರಂಭದಲ್ಲಿ ಮತ್ತೆ ತನ್ನ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಬೇಸಿಗೆ ಪ್ರವಾಸಿಗರಿಗೂ ಪ್ರಿಯವಾದ ಮಾತೆ
1.45 ಮೀಟರ್ ಎತ್ತರದ ಈ ಮರದ ಪ್ರತಿಮೆ, ಸ್ಥಳೀಯ ಸುಮಾರು 1,300 ನಿವಾಸಿಗಳಲ್ಲಿ ಆಳವಾದ ಭಕ್ತಿಯನ್ನು ಹೊಂದಿದೆ. ಬೇಸಿಗೆಕಾಲದಲ್ಲಿ ಸಾನ್ ಮಾರ್ಕೊ ಗ್ರಾಮಕ್ಕೆ ಆಗಮಿಸುವ ಅನೇಕ ಪ್ರವಾಸಿಗರೂ ಸಹ ಈ ಮಾತೆಯ ಮೇಲಿನ ಭಕ್ತಿಯಿಂದ ತುಂಬಿರುತ್ತಾರೆ.
ನಮ್ಮ ನಂಬಿಕೆಯ ಕನ್ಯಾ ಮರಿಯಮ್ಮನ ಹಬ್ಬವನ್ನು ಪ್ರತಿ ವರ್ಷ ಆಗಸ್ಟ್ ತಿಂಗಳ ಕೊನೆಯ ಭಾನುವಾರ ಆಚರಿಸಲಾಗುತ್ತದೆ. ಇದು ವಲ್ಲೊ ದೆಲ್ಲಾ ಲೂಕಾನಿಯಾ ಧರ್ಮಪ್ರಾಂತ್ಯದಲ್ಲಿ ನಮ್ಮ ನಂಬಿಕೆಯ ಮಾತೆಗೆ ಸಮರ್ಪಿತ ಏಕೈಕ ಮರಿಯಮ್ಮನವರ ಹಬ್ಬವಾಗಿದೆ.
ಅವರ ಗೌರವಕ್ಕಾಗಿ ನಡೆಯುವ ಮೂರು ದಿನಗಳ ತ್ರಿದುವಂ ಸಂದರ್ಭದಲ್ಲಿ, ಮೊದಲು ಹತ್ತೊಂಬತ್ತನೇ ಶತಮಾನದ ಕ್ಯಾನ್ವಾಸ್ ಚಿತ್ರವೊಂದನ್ನು (1950ರ ದಶಕದಲ್ಲಿ ತಯಾರಿಸಲಾದ ಮರದ ಪ್ರತಿಮೆಗೆ ಪ್ರೇರಣೆಯಾದ ಚಿತ್ರ) ಮೆರವಣಿಗೆಯಲ್ಲಿ ಹೊತ್ತೊಯ್ಯಲಾಗುತ್ತದೆ. ನಂತರ ಆ ಚಿತ್ರವನ್ನು ಬಂದರಿನವರೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಸ್ಥಳೀಯ ಮೀನುಗಾರರು, ತಮ್ಮನ್ನು ಮರಿಯಮ್ಮನವರಿಗೆ ಒಪ್ಪಿಸುವ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.
ಪರಿಧಿಯ ಹೃದಯದಿಂದ
ನಮ್ಮ ನಂಬಿಕೆಯ ಮಾತೆ ಪರಿಧಿಯಿಂದ ಬಂದಿದ್ದಾರೆ—ಅಂದರೆ ಚಿಲೆಂತೋ ಮತ್ತು ವಲ್ಲೊ ದಿ ದಿಯಾನೋ ರಾಷ್ಟ್ರೀಯ ಉದ್ಯಾನವನಗಳ ನಡುವೆ ಇರುವ ಪ್ರದೇಶದಿಂದ. ಜನಸಂಖ್ಯೆ ಕಡಿಮೆಯಾಗುತ್ತಿರುವ ಈ ಪ್ರದೇಶದಲ್ಲಿ, ಮೂಲಭೂತ ಸೇವೆಗಳೂ ಸಹ ಯಾವಾಗಲೂ ಲಭ್ಯವಿರುವುದಿಲ್ಲ.
ಒಂದು ವರ್ಷ ಹಿಂದೆ, ಆಗ ಸೈಂಟ್ ಮಾರ್ಕ್ ದಿ ಎವಾಂಜಲಿಸ್ಟ್ ಧರ್ಮ ಕೇಂದ್ರದ ಪಾದ್ರಿಯಾಗಿದ್ದ ವಂ.ಸ್ವಾಮಿ ಪಾಸ್ಕ್ವಾಲೆ ಗರ್ಜಿಯೋನೆ (ಈಗ ಆ ಧರ್ಮ ಕೇಂದ್ರವನ್ನು ವಂ.ಸ್ವಾಮಿ ಫ್ರಾನ್ಚೆಸ್ಕೊ ಜಿಯೋರ್ಡಾನೊ ಅವರು ಮುನ್ನಡೆಸುತ್ತಿದ್ದಾರೆ), ಇಟಲಿಯ ಒಳನಾಡಿನ ಅನೇಕ ಸಮುದಾಯಗಳ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ, ನಮ್ಮ ನಿರೀಕ್ಷೆಯ ಮಾತೆಯನ್ನು ವಾಟಿಕನ್‌ಗೆ ತರಲು ಪ್ರಸ್ತಾಪಿಸಿದರು.
ಈ ಪ್ರದೇಶಗಳಲ್ಲಿ ಏಕಾಂತತೆಯ ಅನುಭವ ತೀವ್ರವಾಗಿದೆ. ಜನಸಂಖ್ಯೆ ವೃದ್ಧಾಪ್ಯದತ್ತ ಸಾಗುತ್ತಿದೆ, ಅಸಮಾನತೆಗಳು ಹೆಚ್ಚುತ್ತಿವೆ.
ಕನ್ಯಾ ಮರಿಯಮ್ಮನವರು ಈ ಸಂಕಷ್ಟಗಳ ಭಾರವನ್ನು ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ನಮ್ಮ ನಂಬಿಕೆಯ ಮಾತೆ, ಚಿಕ್ಕವರಿಗಾಗಿ ನಂಬಿಕೆಯ ಚಿಹ್ನೆಯಾಗಿ ನಿಂತು, ತನ್ನ ತಾಯಿಯ ಸಂರಕ್ಷಣೆಯಲ್ಲಿ ಅವರಿಗೆ ಸಾಂತ್ವನ ಮತ್ತು ಪ್ರೀತಿಯನ್ನು ನೀಡುತ್ತಾರೆ.