Christmas tree and Nativity scene in St. Peter's Square at the Vatican Christmas tree and Nativity scene in St. Peter's Square at the Vatican 

ಸಂತ ಪೇತ್ರರ ಚೌಕದಲ್ಲಿ ವ್ಯಾಟಿಕನ್ ಕ್ರಿಸ್‌ಮಸ್ ಮರ ಮತ್ತು ಕ್ರಿಸ್ತಜನನದ ಗೋದಲಿಗಳ ಉದ್ಘಾಟನೆ

ಸಂತ ಪೇತ್ರರ ಚೌಕದಲ್ಲಿ ವ್ಯಾಟಿಕನ್ ಕ್ರಿಸ್‌ಮಸ್ ಮರ ಮತ್ತು ಕ್ರಿಸ್ತಜನನ ಗೋದಲಿಗಳ ದೃಶ್ಯವನ್ನು ದೀಪ ಬೆಳಗಿಸಿ ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸಮಾರಂಭದಲ್ಲಿ ವ್ಯಾಟಿಕನ್ ನಗರ ರಾಜ್ಯ ಪ್ರಾಂತ್ಯದ ಅಧ್ಯಕ್ಷೆ ಸಿಸ್ಟರ್ ರಾಫೆಲ್ಲಾ ಪೆಟ್ರಿನಿ ಅವರು ಭಾಗವಹಿಸಿದ್ದರು. ಜೊತೆಗೆ ಕ್ರಿಸ್‌ಮಸ್ ಅಂಶಗಳನ್ನು ದೇಣಿಗೆಯಾಗಿ ನೀಡಿದ ಧರ್ಮಪ್ರಾಂತ್ಯಗಳ ಇಟಲಿಯ ನಾಗರಿಕ ಹಾಗೂ ಧಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವ್ಯಾಟಿಕನ್‌ನ ಕ್ರಿಸ್‌ಮಸ್ ಮರ ಮತ್ತು ಕ್ರಿಸ್ತಜನನ ಗೋದಲಿಗಳ ದೃಶ್ಯವನ್ನು ಸೋಮವಾರ, ಡಿಸೆಂಬರ್ 15 ರಂದು, ಸಂತ. ಪೇತ್ರರ ಚೌಕದಲ್ಲಿ ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ವ್ಯಾಟಿಕನ್ ನಗರ ರಾಜ್ಯ ಪ್ರಾಂತ್ಯದ ಅಧ್ಯಕ್ಷೆ ಸಿಸ್ಟರ್ ರಾಫೆಲ್ಲಾ ಪೆಟ್ರಿನಿ ಅವರು ನೆರವೇರಿಸಿದರು. ಅವರು ಮಾತನಾಡುತ್ತಾ ಹೀಗೆ ಹೇಳಿದರು ಇಂದು, ಜಗತ್ತನ್ನು ಅಪ್ಪಿಕೊಳ್ಳುವ ಈ ಚೌಕದಲ್ಲಿ, ಕ್ರಿಸ್ತಜನನದ ಗೋದಲಿಗಳ ದೃಶ್ಯ ಮತ್ತು ಕ್ರಿಸ್‌ಮಸ್ ಮರವು ಕೇವಲ ಕ್ರಿಸ್‌ಮಸ್ ಅಲಂಕಾರಗಳಲ್ಲ ಅವು ಸಂಯೋಗದ ಸಂಕೇತಗಳು, ಶಾಂತಿಗೆ ಕರೆ ನೀಡುವ ಸೂಚನೆಗಳು, ಸೃಷ್ಟಿಯ ಸಂರಕ್ಷಣೆಯ ಜವಾಬ್ದಾರಿಯನ್ನು ನೆನಪಿಸುವ ಗುರುತುಗಳು ಹಾಗೂ ವಿಶ್ವವ್ಯಾಪಿ ಸಹೋದರತ್ವಕ್ಕೆ ಆಹ್ವಾನಗಳಾಗಿವೆ. ಈ ಮೌಲ್ಯಗಳನ್ನು ಸಂತ ಫ್ರಾನ್ಸಿಸ್ ಎಲ್ಲಕ್ಕಿಂತ ಮೇಲಾಗಿ ಇಟ್ಟಿದ್ದರು ಮತ್ತು ಅವು ಅವರ ಧಾರ್ಮಿಕ ವಚ೯ಸ್ಸಿನ  ಗುರುತಾಗಿದ್ದವು.

ಅವರು ಮುಂದುವರೆಸಿ, ಮುಂದಿನ ವರ್ಷ ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಮರಣದ 800ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ ಎಂದು ನೆನಪಿಸಿದರು. 1223ರಲ್ಲಿ ಕ್ರಿಸ್ತಜನನದ ಗೋದಲಿಗಳ ದೃಶ್ಯದ ಪರಂಪರೆಯನ್ನು ಪ್ರಾರಂಭಿಸಿದವರು ಸಂತ ಫ್ರಾನ್ಸಿಸ್ ರವರಾಗಿದ್ದರು. ಕ್ರಿಸ್‌ಮಸ್ ಅಂಶಗಳನ್ನು ದೇಣಿಗೆಯಾಗಿ ನೀಡಿದ ಧರ್ಮಪ್ರಾಂತ್ಯಗಳ ಧಾರ್ಮಿಕ ಮತ್ತು ನಾಗರಿಕ ಪ್ರತಿನಿಧಿಗಳು ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು ಮತ್ತು ದಿನದ ಮೊದಲಾರ್ಧದಲ್ಲಿ ಜಗದ್ಗುರು XIVನೇ ಲಿಯೋ ರವರನ್ನು ಭೇಟಿ ಮಾಡುವ ಅವಕಾಶವೂ ಅವರಿಗೆ ಲಭಿಸಿತ್ತು. ಸಿಡ್ನಿ ದಾಳಿಯ ಬಲಿಪಶುಗಳಿಗಾಗಿ ಜಗದ್ಗುರುಗಳ ಪ್ರಾರ್ಥನೆ. ಯಹೂದಿ ವಿರೋಧಿ ಹಿಂಸೆ ಇನ್ನು ಸಾಕು.

15/12/2025 ವ್ಯಾಟಿಕನ್ ಜೆಂಡಾರ್ಮರಿಯ ಬ್ಯಾಂಡ್ ಹಾಗೂ ವಿವಿಧ ಧರ್ಮಪ್ರಾಂತ್ಯಗಳ ಗಾಯನ ತಂಡಗಳು ಮತ್ತು ವಾದ್ಯವೃಂದಗಳ ಪರಂಪರೆ ಕ್ರಿಸ್‌ಮಸ್ ಹಾಡುಗಳು ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಕ್ರಿಸ್ತಜನನದ ಗೋದಲಿಗಳ ದೃಶ್ಯ ಮತ್ತು ಕ್ರಿಸ್‌ಮಸ್ ಮರವು ಕ್ರಿಸ್‌ಮಸ್ ಕಾಲದ ಅಂತ್ಯವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರುತ್ತದೆ. ಈ ಅವಧಿಯ ಅಂತ್ಯವು ಕರ್ತನ ದೀಕ್ಷಾಸ್ನಾನದ ಹಬ್ಬದೊಂದಿಗೆ, ಅಂದರೆ 2026ರ ಜನವರಿ 11ರಂದು, ಭಾನುವಾರ ಮುಕ್ತಾಯಗೊಳ್ಳುತ್ತದೆ.

ದಕ್ಷಿಣ ಇಟಲಿಯ ನೋಚೆರಾ ಇನ್ಫೆರಿಯೋರೆ–ಸಾರ್ನೋ ಧರ್ಮಪ್ರಾಂತ್ಯವು ಕ್ರಿಸ್ತಜನನದ ಗೋದಲಿಗಳ ದೃಶ್ಯವನ್ನು ರೂಪಿಸಿದ್ದು, ಆ ಧರ್ಮಪ್ರಾಂತ್ಯವನ್ನು ಧರ್ಮಾಧ್ಯಕ್ಷ ಜ್ಯೂಸೆಪ್ಪೆ ಜುಡಿಚೆ ಪ್ರತಿನಿಧಿಸಿದ್ದರು. ಉತ್ತರ ಇಟಲಿಯ ಬೊಲ್ಜಾನೊ ಬ್ರೆಸ್ಸಾನೋನೆ ಧರ್ಮಪ್ರಾಂತ್ಯದಿಂದ ಕ್ರಿಸ್‌ಮಸ್ ಮರವನ್ನು ತರಲಾಗಿದ್ದು, ಧರ್ಮಾಧ್ಯಕ್ಷ ಇವೊ ಮುಸರ್ ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಾಂತ್ಯದ ಕಾರ್ಯದರ್ಶಿ ಜನರಲ್‌ಗಳಾದ ಧರ್ಮಾಧ್ಯಕ್ಷ ಎಮಿಲಿಯೋ ನಪ್ಪಾ ಮತ್ತು ಜ್ಯೂಸೆಪ್ಪೆ ಪುಗ್ಲಿಸಿ ಅಲಿಬ್ರಾಂಡಿ ಅವರೂ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕ್ರಿಸ್ತಜನನದ ಗೋದಲಿಗಳ ದೃಶ್ಯ

ಕ್ರಿಸ್ತಜನನ ದೃಶ್ಯವನ್ನು 17 ಮೀಟರ್ × 12 ಮೀಟರ್ (56 ಅಡಿ × 39) ಅಡಿ ಗಾತ್ರದ ವೇದಿಕೆಯಲ್ಲಿ ಸ್ಥಾಪಿಸಲಾಗಿದ್ದು, ಅದರ ಎತ್ತರ 7.70 ಮೀಟರ್ (25 ಅಡಿ) ಆಗಿದೆ. ಇದರಲ್ಲಿ ಆಗ್ರೋ ನೋಚೆರಿನೋ ಸಾರ್ನೆಸೆ ಪ್ರದೇಶದ ಅನೇಕ ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಆ ಪ್ರದೇಶಕ್ಕೆ ಮಹತ್ವದ್ದಾದ ಕೆಲವು ಸಂತರ ಮತ್ತು ಧಾರ್ಮಿಕ ವ್ಯಕ್ತಿತ್ವಗಳಿಗೂ ಗೌರವ ಸೂಚಿಸಲಾಗಿದೆ. ಅವುಗಳಲ್ಲಿ ರೆಡೆಂಪ್ಟರಿಸ್ಟ್ ಸಂಘದ ಸ್ಥಾಪಕರಾದ ಸಂತ ಅಲ್ಫೋನ್ಸಸ್ ಲಿಗ್ವೋರಿ, ಹಾಗೂ ದೇವದಾಸರಾಗಿರುವ ವಂ.ಸ್ವಾಮಿ ಎನ್ರಿಕೊ ಸ್ಮಾಲ್ಡೋನೆ ಮತ್ತು ಅಲ್ಫೋನ್ಸೊ ರುಸ್ಸೊ ಸೇರಿದ್ದರು.

ಈ ದೃಶ್ಯದಲ್ಲಿ ಆ ಪ್ರದೇಶದ ಆಹಾರ ಮತ್ತು ದ್ರಾಕ್ಷಾರಸ ಪರಂಪರೆಯನ್ನು ಪ್ರತಿಬಿಂಬಿಸುವ ಸಂಕೇತಗಳನ್ನೂ ಒಳಗೊಂಡಿದೆ. ನೆಲದ ಹಾದಿಯಲ್ಲಿ ಪ್ರಾಚೀನ ರೋಮನ್ನರ ಕಲ್ಲು ರಸ್ತೆಗಳನ್ನು ತೋರಿಸಲಾಗಿದ್ದು, ಜೀವಂತ ಗಾತ್ರದ ಮೇಯಾಳುಗಳು ಮತ್ತು ಪ್ರಾಣಿಗಳ ಮೂರ್ತಿಗಳನ್ನು ಅದಕ್ಕೆ ಬಿಗಿಯಾಗಿ ಸ್ಥಾಪಿಸಲಾಗಿದೆ.

ಕ್ರಿಸ್‌ಮಸ್ ಮರ

ಕ್ರಿಸ್‌ಮಸ್ ಮರವು ಯುರೋಪಿಯನ್ ಸ್ಪ್ರೂಸ್ ಮರವಾಗಿದ್ದು, ಬೊಲ್ಜಾನೊ–ಬ್ರೆಸ್ಸಾನೋನೆ ಧರ್ಮಪ್ರಾಂತ್ಯದಿಂದ ತರಲಾಗಿದೆ. ಇದರ ಎತ್ತರ 25 ಮೀಟರ್ (82 ಅಡಿ) ಆಗಿದ್ದು, ಸುಮಾರು 8,000 ಕಿಲೋಗ್ರಾಂ (17,000 ಪೌಂಡ್ಗಳಿಗಿಂತ ಹೆಚ್ಚು) ತೂಕವಿದೆ. ಇದು ಉತ್ತರ ಇಟಲಿಯ ಲಾಗುಂಡೊ ಮತ್ತು ಉಲ್ಟಿಮೊ ಪಟ್ಟಣಗಳ ಮಹಾನಗರಗಳ ದೇಣಿಗೆಯಾಗಿದೆ. ಮುಖ್ಯ ಮರದ ಜೊತೆಗೆ, ಇನ್ನೂ 40 ಸಣ್ಣ ಮರಗಳನ್ನು ವ್ಯಾಟಿಕನ್‌ಗೆ ತರಲಾಗುತ್ತದೆ. ಅವುಗಳನ್ನು ಪವಿತ್ರ ಸಿಂಹಾಸನದ ಕಚೇರಿಗಳು, ಸಾರ್ವಜನಿಕ ಸ್ಥಳಗಳು ಮತ್ತು ಕಟ್ಟಡಗಳನ್ನು ಅಲಂಕರಿಸಲು ಬಳಸಲಾಗುತ್ತದೆ.

ಕ್ರಿಸ್‌ಮಸ್ ಅವಧಿ ಮುಗಿದ ನಂತರ, ಮರದ ಕೊಂಬೆಗಳಿಂದ ಅವಶ್ಯಕ ತೈಲಗಳನ್ನು ಹೊರತೆಗೆಯಲಾಗುತ್ತದೆ. ಉಳಿದ ಮರದ ಭಾಗವನ್ನು ಸೃಷ್ಟಿಯ ಗೌರವ ಮತ್ತು ಸಂರಕ್ಷಣೆಯ ತತ್ವದಂತೆ ಒಂದು ಸಂಘದ ಮೂಲಕ ಮರುಬಳಕೆ ಮಾಡಲಾಗುತ್ತದೆ.

18 ಡಿಸೆಂಬರ್ 2025, 17:23