ಹುಡುಕಿ

++ Parolin ++ Parolin  (ANSA)

ಕಾರ್ಡಿನಲ್ ಪ್ಯಾರೋಲಿನ್: ರೋಗಪೀಡಿತ ಮಕ್ಕಳನ್ನು ಆಹ್ವಾನಿಸುವ ಪ್ರತೀ ಕ್ಷಣದಲ್ಲೂ ಕ್ರಿಸ್ತನು ಜನಿಸುತ್ತಾರೆ

ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ಅವರು ಬಾಂಬಿನೊ ಜೆಸು ಮಕ್ಕಳ ಆಸ್ಪತ್ರೆಯನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು, ರೋಗಪೀಡಿತ ಮಕ್ಕಳಿಗೂ ಅವರ ಕುಟುಂಬಗಳಿಗೂ ಕಾಳಜಿ ಮತ್ತು ಸೇವೆ ಸಲ್ಲಿಸುವ ಪ್ರತೀ ಕ್ಷಣದಲ್ಲೂ ಯೇಸು ಕ್ರಿಸ್ತನು ಹಾಜರಿರುತ್ತಾನೆ ಎಂದು ಒತ್ತಿ ಹೇಳಿದರು.

ಈ ಆಸ್ಪತ್ರೆ ಕ್ರಿಸ್‌ಮಸ್ ಆಸ್ಪತ್ರೆ ಎಂದು ಕರೆಯಲ್ಪಡುವುದು ಕೇವಲ ಇದಕ್ಕೆ ‘ಬಾಂಬಿನೊ ಜೆಸು’ (ಅಂದರೆ ‘ಮಗು ಯೇಸು’) ಎಂಬ ಹೆಸರು ಇರುವುದರಿಂದ ಮಾತ್ರವಲ್ಲ, ಆದರೆ ಅತಿ ಸಣ್ಣವರನ್ನು ನಾವು ಸ್ವೀಕರಿಸುವ ಪ್ರತೀ ಬಾರಿ ಯೇಸು ಇಲ್ಲಿ ಜನಿಸುತ್ತಾರೆ ಎಂದು ಕಾರ್ಡಿನಲ್ ಪ್ಯಾರೋಲಿನ್ ಅವರು ಆಸ್ಪತ್ರೆಯ ಸಿಬ್ಬಂದಿ, ಆಡಳಿತಾಧಿಕಾರಿಗಳು ಮತ್ತು ರೋಗಿಗಳಿಗೆ ಹೇಳಿದರು.

ಆಸ್ಪತ್ರೆಯ ದೇವಾಲಯದಲ್ಲಿ ನಡೆದ ಚಿಂತನಾ ಕ್ಷಣದಲ್ಲಿ, ನಾನು ಜಗದ್ಗುರುಗಳ ವಂದನೆಗಳನ್ನೂ ಅವರ ಹಾರ್ದಿಕ ಕ್ರಿಸ್‌ಮಸ್ ಶುಭಾಶಯಗಳನ್ನೂ ನಿಮಗೆ ತರುತ್ತಿದ್ದೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವೈದ್ಯರು, ನರ್ಸ್‌ಗಳು, ಸ್ವಯಂಸೇವಕರು, ರೋಗಿಗಳು ಮತ್ತು ಅವರ ಕುಟುಂಬಗಳು, ಆಸ್ಪತ್ರೆಯ ನಿರ್ದೇಶಕರ ಮಂಡಳಿ ಹಾಗೂ ಬಾಂಬಿನೊ ಜೆಸು ಫೌಂಡೇಶನ್ ಸದಸ್ಯರು ಮತ್ತು ಧಾರ್ಮಿಕ ಸಿಬ್ಬಂದಿ ಉಪಸ್ಥಿತರಿದ್ದರು. ಸಂಪ್ರದಾಯದಂತೆ, ಕಾರ್ಡಿನಲ್ ಅವರು ಆಸ್ಪತ್ರೆಯ ಸಂಪೂರ್ಣ ಸಮುದಾಯಕ್ಕೆ ಕ್ರಿಸ್‌ಮಸ್ ಶುಭಾಶಯಗಳನ್ನು ಅರ್ಪಿಸಿದರು.

ವ್ಯಾಟಿಕನ್‌ಗೆ ಸಮೀಪದಲ್ಲಿರುವ ಈ ಆಸ್ಪತ್ರೆಗೆ ಆಗಮಿಸಿದಾಗ, ಕಾರ್ಡಿನಲ್ ಅವರನ್ನು ಆಸ್ಪತ್ರೆಯ ಅಧ್ಯಕ್ಷ ತಿಜಿಯಾನೋ ಓನೆಸ್ತಿ, ಡಚೆಸ್ ಮಾರಿಯಾ ಗ್ರಾಜಿಯಾ ಸಲ್ವಿಯಾತಿ, ಹಾಗೂ ಮಹಾಪ್ರಬಂಧಕ, ವೈದ್ಯಕೀಯ ಮತ್ತು ವೈಜ್ಞಾನಿಕ ನಿರ್ದೇಶಕರಾದ ಆಂಟೋನಿಯೋ ಪೆರ್ನೊ, ಮಸ್ಸಿಮಿಲಿಯಾನೋ ರಾಪೋನಿ ಮತ್ತು ಆಂದ್ರಿಯಾ ಓನೆಟ್ಟಿ ಮುಡಾ ಅವರು ಸ್ವಾಗತಿಸಿದರು.

ಅನಂತರ ಅವರು ಶ್ವಾಸಕೋಶ ಮತ್ತು ಸಿಸ್ಟಿಕ್ ಫೈಬ್ರೋಸಿಸ್ ವಿಭಾಗಕ್ಕೆ ಭೇಟಿ ನೀಡಿ, ವಿಭಾಗದ ಮುಖ್ಯಸ್ಥರಾದ ಡಾ. ರೆನಾಟೊ ಕುತ್ರೇರಾ ಅವರೊಂದಿಗೆ ರೋಗಿಗಳಿಗೂ ಅವರ ಕುಟುಂಬಗಳಿಗೂ ಶುಭಾಶಯಗಳನ್ನು ತಿಳಿಸಿದರು.

ಅತ್ಯುತ್ತಮ ಚಿಕಿತ್ಸೆಯ ಜೊತೆಗೆ ಮಾನವೀಯತೆ

ದೇವಾಲಯದಲ್ಲಿ ಮಾತನಾಡಿದ ಕಾರ್ಡಿನಲ್ ಪ್ಯಾರೋಲಿನ್, ವಾರ್ಡ್‌ನಲ್ಲಿ ಭೇಟಿಯಾದ ಒಬ್ಬ ಪೋಷಕರೊಂದಿಗೆ ನಡೆದ ಸಂಭಾಷಣೆಯನ್ನು ಹಂಚಿಕೊಂಡರು:

ಅವರು ನನಗೆ ಹೇಳಿದ್ದು: ಚಿಕಿತ್ಸೆಯ ಅರ್ಧ ಭಾಗ ವೈದ್ಯಕೀಯ ಆರೈಕೆಯಿಂದಾಗುತ್ತದೆ, ಉಳಿದ ಅರ್ಧವು ಕುಟುಂಬದ ವಾತಾವರಣ, ಸಮೀಪತೆ ಮತ್ತು ಪ್ರೀತಿಯಿಂದಾಗುತ್ತದೆ. ಬಾಂಬಿನೊ ಜೆಸು ಆಸ್ಪತ್ರೆಯ ಬಗ್ಗೆ ನನ್ನ ಆಶಯವೂ ಇದೇ ಕೇವಲ ಚಿಕಿತ್ಸೆಯಲ್ಲಿನ ಶ್ರೇಷ್ಠತೆಯಲ್ಲ, ಆದರೆ ಮಾನವೀಯ ಆಯಾಮವೂ ಇರಬೇಕು ಎಂದರು.

ನಂತರ ಕಾರ್ಡಿನಲ್ ಅವರು ಇಟಾಲಿಯನ್ ಕವಿ ಜಿಯೋವಾನ್ನಿ ಪಾಪಿನಿಯವರ ಮಾತುಗಳನ್ನು ಉಲ್ಲೇಖಿಸಿದರು. ಅವರು ಪ್ರಶ್ನಿಸುತ್ತಾರೆ: ಯೇಸು ನಮ್ಮ ಹೃದಯಗಳಲ್ಲಿ ಹೇಗೆ ಜನಿಸುತ್ತಾನೆ?

ಕಾರ್ಡಿನಲ್ ಹೇಳಿದರು: ಇದು ಅಸಾಧ್ಯವಲ್ಲ. ನೀವು ಯಾರಿಗಾದರೂ ಸಂತೋಷ ನೀಡಿದಾಗ ಅಥವಾ ಅವರ ನೋವನ್ನು ಕಡಿಮೆ ಮಾಡಿದಾಗ, ಆ ಕ್ಷಣವನ್ನು ಆನಂದಿಸಿರಿ. ಏಕೆಂದರೆ ಆ ಸಮಯದಲ್ಲೇ ರಕ್ಷಕನು ನಿಮ್ಮ ಹೃದಯದಲ್ಲಿ ಜನಿಸಿದ್ದಾನೆ. ನೀವು ಇನ್ನು ಒಬ್ಬರಲ್ಲ ಎಂದು ಹೇಳಿದರು.

ಕಾರ್ಡಿನಲ್ ಪ್ಯಾರೋಲಿನ್ ಅವರ ಮಾತಿನಲ್ಲಿ, ಬಾಂಬಿನೊ ಜೆಸು ಆಸ್ಪತ್ರೆಯಲ್ಲಿಯೂ ಇದೇ ಸತ್ಯ. ಮಕ್ಕಳಿಗೂ ಕುಟುಂಬಗಳಿಗೂ ಕಾಳಜಿ ತೋರಿಸುವ ಪ್ರತೀ ಬಾರಿ, ದಿನನಿತ್ಯದ ನಿಮ್ಮ ಸೇವೆಯನ್ನು ನಿಷ್ಠೆಯಿಂದ ನಿರ್ವಹಿಸುವ ಪ್ರತೀ ಬಾರಿ, ಯೇಸು ಮತ್ತೆ ಜನಿಸುತ್ತಾರೆ ಎಂಬುದಾಗಿ ಹೇಳಿದರು.

23 ಡಿಸೆಂಬರ್ 2025, 19:01