ಹುಡುಕಿ

cardinale Lazarus You Heung-sik cardinale Lazarus You Heung-sik 

ಕಾರ್ಡಿನಲ್ ಯು ಹ್ಯೂಂಗ್-ಸಿಖ್: ಜಗದ್ಗುರು ಪಾದ್ರಿಗಳನ್ನು ಸಹೋದರತ್ವಕ್ಕೆ ಆಹ್ವಾನಿಸುತ್ತಾರೆ.

ವ್ಯಾಟಿಕನ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಧರ್ಮಗುರುಗಳ ಪ್ರಾಂತ್ಯದ ಆಡಳಿತಾಧಿಕಾರಿ ಕಾರ್ಡಿನಲ್ ಲಾಜರಸ್ ಯು ಹ್ಯೂಂಗ್-ಸಿಕ್ ರವರು, ಯಾಜಕ ಸೇವೆಯ ಕುರಿತಾಗಿ ಜಗದ್ಗುರು XIVನೇ ಲಿಯೋ ರವರು ಬರೆದ ಪ್ರೇಷಿತರ ಪತ್ರವು ಕ್ರಿಸ್ತನಿಗೆ, ಅವರ ವಾಕ್ಯಕ್ಕೆ ಮತ್ತು ಧರ್ಮಸಭೆಗೆ ನಿಷ್ಠವಾಗಿರುವ ಯಾಜಕತನದ ಸೌಂದರ್ಯವನ್ನು ಸಂರಕ್ಷಿಸುವ, ಪ್ರಕಟಿಸುವ ಮತ್ತು ಉತ್ತೇಜಿಸುವ ಮಾರ್ಗವನ್ನು ಸೂಚಿಸುತ್ತದೆ ಎಂದು ವಿವರಿಸುತ್ತಾರೆ.

ಗುರುಗಳ ಸೇವೆಯ ಕುರಿತು ಪ್ರೇಷಿತರ ಪತ್ರದ ಬಗ್ಗೆ ಜಗದ್ಗುರುಗಳ ಆಹ್ವಾನ

ಜಗದ್ಗುರು XIVನೇ ಲಿಯೋರವರ ಪ್ರೇಷಿತರ ಪತ್ರ ಭವಿಷ್ಯವನ್ನು ಹುಟ್ಟುಹಾಕುವ ನಿಷ್ಠೆ ಯಾಜಕರು ಧರ್ಮಸಭೆಯ  ಧ್ಯೇಯದಲ್ಲಿ ಅನಿವಾರ್ಯ ಸೇವೆಯಾಗಿದೆ ಎಂದು ಒತ್ತಿ ಹೇಳುತ್ತದೆ ಎಂದು ಧರ್ಮಗುರುಗಳ ಪ್ರಾಂತ್ಯದ ಆಡಳಿತಾಧಿಕಾರಿ ಕಾರ್ಡಿನಲ್ ಲಾಜರಸ್ ಯು ಹ್ಯೂಂಗ್-ಸಿಕ್ ತಿಳಿಸಿದ್ದಾರೆ.

ವ್ಯಾಟಿಕನ್ ಮಾಧ್ಯಮಗಳಿಗೆ ನೀಡಿದ ಈ ಸಂದರ್ಶನದಲ್ಲಿ, ಜಗದ್ಗುರುಗಳು ಯಾಜಕತನದ ಸೌಂದರ್ಯವನ್ನು ಸಂರಕ್ಷಿಸಲು, ಪ್ರಕಟಿಸಲು ಮತ್ತು ಉತ್ತೇಜಿಸಲು ಮಾರ್ಗವನ್ನು ತೋರಿಸುತ್ತಾರೆ ಎಂದು ಅವರು ಹೇಳುತ್ತಾರೆ. ಈ ಪತ್ರವು ಸುವಾರ್ತೆಯ ತೀವ್ರ ಆಹ್ವಾನವನ್ನು ಮೃದುವಾಗಿಸುವ ಅಥವಾ ಕುಗ್ಗಿಸುವ ಧರ್ಮಾಧಿಕಾರಿಗಳ ಶೈಲಿಗಳನ್ನು ತಿರಸ್ಕರಿಸಿ, ಭಯವಿಲ್ಲದೆ ಸುವಾರ್ತೆಯನ್ನು ಘೋಷಿಸುವುದಕ್ಕೆ ಕರೆ ನೀಡುತ್ತದೆ.

ಕಾರ್ಡಿನಲ್ ಲಾಜರಸ್ ಯು ಹ್ಯೂಂಗ್-ಸಿಕ್ ಅವರೊಂದಿಗೆ ಸಂದರ್ಶನ

ಕ್ರಿಸ್ಮಸ್‌ಗೆ ಕೆಲವೇ ದಿನಗಳ ಮೊದಲು ಜಗದ್ಗುರು XIVನೇ ಲಿಯೋರವರು ಗುರು ಸೇವೆಯ ಕುರಿತ ಈ ಪ್ರೇಷಿತರ ಪತ್ರವನ್ನು ಪ್ರಕಟಿಸಿ ನಮಗೆ ಅಚ್ಚರಿ ಮೂಡಿಸಿದ್ದಾರೆ. ಈ ಪತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮೊದಲು, ದ್ವಿತೀಯ ವ್ಯಾಟಿಕನ್ ಮಹಾಸಭೆಯ ಒಪ್ತಾತಮ್ ತೊಷಿಯುಸ್  ಮತ್ತು ಪ್ರೆಸ್ಬೆತೆರೊಮ್ ಔರ್ ದಿನಿಸ್  ಎಂಬ ಆದೇಶಗಳ 60ನೇ ವಾರ್ಷಿಕೋತ್ಸವವನ್ನು ಆಚರಿಸುವ ನಿರ್ಧಾರಕ್ಕಾಗಿ ಜಗದ್ಗುರುಗಳಿಗೆ ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಈ ಎರಡೂ ದಾಖಲೆಗಳು ವಿಭಿನ್ನ ದೃಷ್ಟಿಕೋನಗಳಿಂದ ಯಾಜಕರ ಜೀವನ, ಅವರ ರೂಪಣೆ ಮತ್ತು ಅಭಿಷಿಕ್ತ ಸೇವೆಯ ಕುರಿತು ಚರ್ಚಿಸುತ್ತವೆ.

ಇಂದಿನ ಕಾಲದಲ್ಲಿ, ಯಾಜಕಸೇವೆ ಕಳೆದುಹೋಗುತ್ತಿರುವ ಹಳೆಯ ಯುಗದ ಅವಶೇಷವೆಂದು ಅಥವಾ ನೋವಿನ ಹಗರಣಗಳ ಹಿನ್ನೆಲೆಯಲ್ಲಿ ತನ್ನ ಆಕರ್ಷಣೆ, ಸೌಂದರ್ಯ ಮತ್ತು ಪ್ರಸ್ತುತತೆಯನ್ನು ಕಳೆದುಕೊಂಡ ಕರೆಯೆಂದು ನೋಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ಪತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ನಾನು ನಂಬುತ್ತೇನೆ.

ಈ ಪ್ರೇಷಿತ ಪತ್ರವು ದೇವರ ಪವಿತ್ರ ಜನರೆಲ್ಲರಿಗೂ ಯಾಜಕ ಸೇವೆಯು ಅದ್ಭುತವಾದ ವರ, ಅತ್ಯಂತ ಮಹತ್ವದ ಜವಾಬ್ದಾರಿ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಯೇಸು ಕ್ರಿಸ್ತನು ಇಚ್ಛಿಸಿದಂತೆ ಧರ್ಮ ಸಭೆಯ ಧ್ಯೇಯದಲ್ಲಿ ಅವಿಭಾಜ್ಯ ಸೇವೆಯಾಗಿದೆ ಎಂಬುದನ್ನು ನೆನಪಿಸುತ್ತದೆ.

ಭವಿಷ್ಯವನ್ನು ಹುಟ್ಟುಹಾಕುವ ನಿಷ್ಠೆ – ಧರ್ಮಸಭೆಯ ಧ್ಯೇಯದಲ್ಲಿ ಯಾಜಕ ಸೇವೆಯು ಭವಿಷ್ಯಕ್ಕೆ ಜಗದ್ಗರು ನೀಡುವ ಮುಖ್ಯ ಸೂಚನೆಗಳು ಯಾವುವು?

ಈ ಪ್ರಶ್ನೆಗೆ ಉತ್ತರವನ್ನು ಶೀರ್ಷಿಕೆಯಲ್ಲೇ ಕಾಣಬಹುದು,ನಿಷ್ಠೆಯಿಲ್ಲದೆ ಭವಿಷ್ಯವಿಲ್ಲ. ವಿಶೇಷವಾಗಿ ಪಾಶ್ಚಾತ್ಯ ಜಗತ್ತಿನಲ್ಲಿ, ನಿಷ್ಠೆಯನ್ನು ಸ್ಥಿರತೆಯಿಲ್ಲದ, ಹಳೆಯ ಕಾಲದ ಜನರಿಗೆ ಸೇರಿದ ಮೌಲ್ಯವೆಂದು ಕಾಣಲಾಗುತ್ತದೆ. ಆದರೆ ಇದು ಸತ್ಯಕ್ಕೆ ದೂರವಾದ ಕಲ್ಪನೆ ಎಂದರು.

ಧರ್ಮಸಭೆಯ ಭವಿಷ್ಯವು ಯಾವಾಗಲೂ ಇತಿಹಾಸ ಮತ್ತು ಪರಂಪರೆಯಿಂದ ಪೋಷಿತವಾದ ವರ್ತಮಾನದಲ್ಲಿಯೇ ನಿರ್ಮಾಣವಾಗುತ್ತದೆ. ನಿಷ್ಠೆ ಎಂದರೆ ಪವಿತ್ರಾತ್ಮನ ಸೃಜನಶೀಲತೆಗೆ ಬಾಗಿಲು ಮುಚ್ಚುವುದು ಅಲ್ಲ ಬದಲಾಗಿ, ಪ್ರತಿಯೊಬ್ಬ ಅಭಿಷಿಕ್ತ ಸೇವಕನು ಧರ್ಮಸಭೆಯ ಮೂಲಕ ದೇವರು ನೀಡಿದ ಕರೆಯ ಮತ್ತು ಧ್ಯೇಯದೊಂದಿಗೆ ಆಂತರಿಕವಾಗಿ ನಿರಂತರವಾಗಿ ಐಕ್ಯವಾಗಿರುವುದಾಗಿದೆ.

ನಿಷ್ಠೆಯೇ ಪ್ರೀತಿಯ ಅಳತೆಯಾಗಿದೆ. ಸ್ವಾರ್ಥಕೇಂದ್ರಿತವಾಗಿರದ ನಿಜವಾದ ಪ್ರೀತಿ ದೇವರ ವಾಕ್ಯದಿಂದ ಪೋಷಿತವಾಗುತ್ತದೆ. ಸಣ್ಣ ಹಾಗೂ ದೊಡ್ಡ ನಿಷ್ಠೆಯ ಕ್ರಿಯೆಗಳಲ್ಲಿ ಬದುಕುತ್ತದೆ. ಈ ಕಾರಣದಿಂದಲೇ ಕ್ರಿಸ್ತನಿಗೆ, ಅವರ ವಾಕ್ಯಕ್ಕೆ ಮತ್ತು ಧರ್ಮಸಭೆಗೆ ನಿಷ್ಠವಾಗಿರುವ ಯಾಜಕ ಸೇವೆಯ ಸೌಂದರ್ಯವನ್ನು ಸಂರಕ್ಷಿಸಲು, ಪ್ರಕಟಿಸಲು ಮತ್ತು ಉತ್ತೇಜಿಸಲು ಈ ಪತ್ರ ನಮಗೆ ದಾರಿ ತೋರಿಸುತ್ತದೆ.

ಯಾಜಕ ಜೀವನದ ವಿವಿಧ ಅಂಶಗಳನ್ನು ನಿಷ್ಠೆಯ ದೃಷ್ಟಿಕೋನದಿಂದ ಈ ಪತ್ರ ಪರಿಶೀಲಿಸುತ್ತದೆ. ಇವುಗಳಲ್ಲಿ ಯಾವುದು ಜಗದ್ಗುರುಗಳ ಹೃದಯಕ್ಕೆ ಅತ್ಯಂತ ಸಮೀಪದಲ್ಲಿದೆ ಎಂದು ನೀವು ಭಾವಿಸುತ್ತೀರಿ?

ಯಾಜಕರ ಜೀವನದಲ್ಲಿ ಸಮಾಗಮ ಮತ್ತು ಧರ್ಮಾಧ್ಯಕ್ಷರ ಆಲೋಚನಾ ಸಭೆಯ ಪರಿಣಾಮಕಾರಿ ಅನುಷ್ಠಾನವು ಜಗದ್ಗುರುಗಳಿಗೆ ವಿಶೇಷ ಕಾಳಜಿಯ ವಿಷಯವೆಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಯಾವುದೇ ಗುರುವು ಒಂಟಿಯಾಗಿ ಬದುಕಲು ಅಥವಾ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಎಲ್ಲರೂ ಧರ್ಮ ಸಭೆಯ ಸಮಾಗಮದಲ್ಲಿ ಸೇರಿಕೊಂಡು, ಇತರ ಅಭಿಷಿಕ್ತ ಸೇವಕರೊಂದಿಗೆ ಹಾಗೂ ದೇವರ ಪವಿತ್ರ ಜನರೊಂದಿಗೆ ಒಂದೇ ಧ್ಯೇಯದಲ್ಲಿ ಬದುಕುತ್ತಾರೆ.

ಸ್ವಯಂಸಂಬಂಧಿತತೆ ಮತ್ತು ಏಕಾಂತತೆ ಎಂಬ ಯಾಜಕನ ಜೀವನದ ಸಾಮಾನ್ಯ ಪ್ರಲೋಭನೆಗಳಿಗೆ ಸಹೋದರತ್ವದ ಸಂಬಂಧಗಳು ಔಷಧಿಯಾಗಿದೆ. ಧರ್ಮಾಧ್ಯಕ್ಷರೊಂದಿಗೆ ಸಹೋದರತ್ವದ ಸಂಬಂಧ, ಇತರ ಯಾಜಕರು ಮತ್ತು ಉಪಯಾಜಕರೊಂದಿಗೆ ಪ್ರಾಮಾಣಿಕ ಸಂಬಂಧಗಳು, ಮತ್ತು ಸಾಮಾನ್ಯ ವಿಶ್ವಾಸಿಗಳೊಂದಿಗೆ ಸಹಜವಾಬ್ದಾರಿಯ ಸಂಬಂಧಗಳು ಯಾಜಕ ಜೀವನಕ್ಕೆ ಅತಿರಿಕ್ತವಲ್ಲ; ಅವು ಅವನ ಕರೆಯನ್ನು ಪೂರ್ಣವಾಗಿ ಬದುಕಲು ಸಹಾಯಕವಾಗುತ್ತವೆ.

ಸೀನೊಡಾಲಿಟಿಯನ್ನು ಸಂಪೂರ್ಣವಾಗಿ ಬದುಕುವ ಧರ್ಮ ಸಭೆ ಎಂದರೆ ಪಾತ್ರಗಳನ್ನು ಹಂಚುವ ಅಥವಾ ಪ್ರಜಾಪ್ರಭುತ್ವದ ರೀತಿಯಲ್ಲಿ ಕಾರ್ಯನಿರ್ವಹಿಸುವ ಧರ್ಮಸಭೆ ಅಲ್ಲ ಬದಲಾಗಿ ಪ್ರತಿಯೊಬ್ಬರ ವಿಶೇಷತೆಯನ್ನು ಗೌರವಿಸಿ, ದೇವರ ರಾಜ್ಯದ ಬೆಳವಣಿಗೆಗಾಗಿ ಸಹಜವಾಬ್ದಾರಿಯನ್ನು ಹಂಚಿಕೊಳ್ಳುವ ಧರ್ಮ ಸಭೆ ಆಗಿದೆ.

ಪತ್ರವು ಕರೆಯನ್ನು ದೇವರ ವರವೆಂದು ಹೇಳುತ್ತದೆ ಮತ್ತು ಧರ್ಮಸಭೆಯಲ್ಲಿ ಹೊಸ ವೃತ್ತಿ ಪಂಚಶತ್ತಮ ಹಬ್ಬಕ್ಕಾಗಿ ಕರೆ ನೀಡುತ್ತದೆ. ವೃತ್ತಿಗಳ ಸಂಕಷ್ಟಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

ವಾಸ್ತವವಾಗಿ, ಸಂಪೂರ್ಣ ಧರ್ಮ ಸಭೆಯ ವೃತ್ತಿ ಸಂಕಷ್ಟದಲ್ಲಿಲ್ಲ ಬದಲಾಗಿ, ಧರ್ಮನಿರಪೇಕ್ಷತೆ ಎಲ್ಲ ಹಂತಗಳನ್ನೂ ಆವರಿಸಿರುವ ಕೆಲವು ಪ್ರದೇಶಗಳು ಮಾತ್ರ ಈ ಸಂಕಷ್ಟವನ್ನು ಅನುಭವಿಸುತ್ತಿವೆ.

ಇದು ಕೇವಲ ಯಾಜಕ ವೃತ್ತಿಗೆ ಮಾತ್ರ ಸೀಮಿತವಲ್ಲ; ಎಲ್ಲ ವೃತ್ತಿಗಳೂ ಸಂಕಷ್ಟದಲ್ಲಿವೆ. ತಾತ್ಕಾಲಿಕ ಸಂಬಂಧಗಳನ್ನು ಉತ್ತೇಜಿಸಿ, ಶಾಶ್ವತ ನಿಷ್ಠೆಯನ್ನು ತಿರಸ್ಕರಿಸುವ ಜಗತ್ತು ಜನರನ್ನು ತಮ್ಮ ಕರೆಯನ್ನು ಹುಡುಕುವುದರಿಂದಲೂ, ಅದರಲ್ಲಿ ಸ್ಥಿರವಾಗಿ ಮುಂದುವರಿಯುವುದರಿಂದಲೂ ದೂರವಿರುತ್ತದೆ.

ಆದಕಾರಣ, ಧರ್ಮ ಸಭೆ ಎಂದರೆ ನಾವು ಈ ಪರಿಸ್ಥಿತಿಗೆ ಶರಣಾಗಬಾರದು. ವಿವಾಹ ಜೀವನದಿಂದ ಹಿಡಿದು ಧಾರ್ಮಿಕ ಜೀವನ ಮತ್ತು ಅಭಿಷಿಕ್ತ ಸೇವೆಯವರೆಗೆ ಎಲ್ಲಾ ವೃತ್ತಿಗಳ ಸೌಂದರ್ಯ ಮತ್ತು ಪರಸ್ಪರಪೂರಕತೆಯನ್ನು ನಾವು ಘೋಷಿಸಬೇಕು. ಜಗದ್ಗುರು XIV ನೇ ಲಿಯೋರವರು ಸುವಾರ್ತೆಯ ತೀವ್ರ ಆಹ್ವಾನವನ್ನು ಕುಗ್ಗಿಸದೆ, ಭಯವಿಲ್ಲದೆ ಘೋಷಿಸುವ ಪಾಲನ ಶೈಲಿಗಳನ್ನು ಅಳವಡಿಸಿಕೊಳ್ಳಲು ನಮಗೆ ಆಹ್ವಾನಿಸುತ್ತಾರೆ.

ಪ್ರೇಷಿತರ  ಪತ್ರದ 25ನೇ ಅಂಶದಲ್ಲಿ ಯಾಜಕರ ಸಾಮಾಜಿಕ ಮಾಧ್ಯಮ ಬಳಕೆಯ ಕುರಿತು ಉಲ್ಲೇಖವಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈ ಅಂಶವು ನನಗೆ ಬಹಳ ಆಸಕ್ತಿದಾಯಕವಾಗಿ ತೋರಿತು. ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಯಾಜಕರು  ಸುವಾರ್ತೆಯನ್ನು ಬದುಕಲು ಮತ್ತು ಘೋಷಿಸಲು ಬಳಸಬೇಕಾದ ಸ್ಥಳಗಳಾಗಿವೆ.

ಆದರೆ, ಯಾಜಕರು  ತಮ್ಮನ್ನು ತೋರಿಸಿಕೊಳ್ಳದೆ, ಯೋಹಾನನ ದೀಕ್ಷಾಸ್ನಾನದ ಶೈಲಿಯಲ್ಲಿ ಕ್ರಿಸ್ತನ ಕಡೆಗೆ ಜನರನ್ನು ಸೂಚಿಸಬೇಕು ಎಂಬ ಆಹ್ವಾನವೂ ಈ ಪತ್ರದಲ್ಲಿದೆ. ಚಿತ್ರ ಮತ್ತು ಪ್ರಚಾರ ಮುಖ್ಯವಾಗಿರುವ ಈ ಮಾಧ್ಯಮಗಳಲ್ಲಿ ಇದು ಸವಾಲಿನ ವಿಷಯವಾಗಿದೆ.

ಆದ್ದರಿಂದ, ಈ ಹೊಸ ಸವಾಲುಗಳನ್ನು ವಿವೇಕಪೂರ್ಣವಾಗಿ ಎದುರಿಸಲು ಯಾಜಕರಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ರೂಪಣೆಯನ್ನು ನೀಡುವುದು ನಮ್ಮ ಡಿಕಾಸ್ಟರಿಯ ಮುಂದಿನ ಚಿಂತನೆಯ ವಿಷಯವಾಗಬೇಕು. ಭಯವಿಲ್ಲದೆ, ಮುಚ್ಚಿದ ಮನಸ್ಸಿಲ್ಲದೆ, ಆದರೆ ಉತ್ಸಾಹ ಮತ್ತು ಸುವಾರ್ತೆಯ ಸದಾ ಹೊಸ ಘೋಷಣೆಯ ಮೇಲಿನ ಪ್ರೀತಿಯಿಂದ, ಭವಿಷ್ಯವನ್ನು ಹುಟ್ಟುಹಾಕುವ ನಿಷ್ಠೆಯಲ್ಲಿ ಮುಂದುವರಿಯಬೇಕಾಗಿದೆ ಎಂದು ಸಂದಶ೯ನದಲ್ಲಿ ಉತ್ತರಿಸಿದರು.

23 ಡಿಸೆಂಬರ್ 2025, 18:57