ಮಹಾಧಮಾ೯ಧ್ಯಕ್ಷ ಗ್ಯಾಲ್ಗರ್: ಶಾಂತಿಯತ್ತ ಹೊಸ ಬದ್ಧತೆಯ ಅಗತ್ಯ
ವ್ಯಾಟಿಕನ್ ನ್ಯೂಸ್
ವಿದೇಶಿ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳಿಗಾಗಿ ಪವಿತ್ರ ಪೀಠದ ಕಾರ್ಯದರ್ಶಿಯಾಗಿರುವ ಮಹಾಧಮಾ೯ಧ್ಯಕ್ಷರಾದ ಪಾಲ್ ರಿಚರ್ಡ್ ಗ್ಯಾಲ್ಗರ್ ರವರು ಗುರುವಾರ ವಿಯೆನ್ನಾದಲ್ಲಿ ನಡೆದ ಓಎಸ್‌ಸಿಇ ಸಚಿವ ಮಂಡಳಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ಸಭೆ ಹೆಲ್ಸಿಂಕಿಯ ಅಂತಿಮ ಒಪ್ಪಂದ 50ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಿತು.
ಯೂರೋಪ್, ಮಧ್ಯ ಏಷ್ಯಾ ಮತ್ತು ಅಮೇರಿಕಾ ಸೇರಿದಂತೆ 57 ದೇಶಗಳನ್ನು ಹೊಂದಿರುವ ಓಎಸ್‌ಸಿಇ ಜಗತ್ತಿನ ಅತಿದೊಡ್ಡ ಪ್ರಾದೇಶಿಕ ಭದ್ರತಾ ಸಂಸ್ಥೆಯಾಗಿದೆ.
ಫಿನ್‌ಲ್ಯಾಂಡ್ ವಿದೇಶಾಂಗ ಸಚಿವೆ ಹಾಗೂ ಓಎಸ್‌ಸಿಇ ಅಧ್ಯಕ್ಷೆಯಾಗಿರುವ ಎಲಿನಾ ವಾಲ್ಟೊನೇನ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘರ್ಷಗಳನ್ನು ತಡೆಗಟ್ಟುವ ಹಾಗೂ ಪರಿಹರಿಸುವ ಸಂಸ್ಥೆಯ ಮೂಲ ಧ್ಯೇಯದತ್ತ ಹೊಸದಾಗಿ ಹಾಗೂ ಸೃಜನಾತ್ಮಕವಾಗಿ ಬದ್ಧತೆಯನ್ನು ತೋರಬೇಕೆಂದು ಕರೆ ನೀಡಿದರು. ಅವರು ಓಎಸ್‌ಸಿಇ ದೇಶಗಳು “ಹೆಲ್ಸಿಂಕಿಯ ಸ್ಪೂರ್ತಿ” ಎಂದೇ ಗುರುತಿಸಲ್ಪಟ್ಟಿರುವ ತೆರೆದ ಮನಸ್ಸು, ಸಂವಾದ ಮತ್ತು ಹಂಚಿಕೊಂಡ ಹೊಣೆಗಾರಿಕೆಯ ಮನೋಭಾವವನ್ನು ಮರುಸ್ಥಾಪಿಸಬೇಕೆಂದು ಒತ್ತಿಹೇಳಿದರು.
ಉಕ್ರೇನ್ ಸಂಘರ್ಷದ ಬಗ್ಗೆ ಚಿಂತನೆ
ಗ್ಯಾಲ್ಗರ್ ರವರು ಯೂರೋಪಿನಲ್ಲಿ ಹೆಚ್ಚುತ್ತಿರುವ ವಿಭಜನೆಗಳು, ವಿಶ್ವಾಸದ ಕುಸಿತ ಮತ್ತು ಸಂಘರ್ಷಗಳ ಮರುದಹನ ಕುರಿತು ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಗಂಭೀರ ಚಿಂತನೆಯನ್ನೂ ತೋರುತ, ಎಲ್ಲ ಪಕ್ಷಗಳೂ ನೈಜ ಸಂವಾದಕ್ಕೆ ಮರಳಿ, ದಾಳಿಗಳನ್ನು ನಿಲ್ಲಿಸಿ, ನ್ಯಾಯಸಮ್ಮತವಾದ ಮತ್ತು ದೀರ್ಘಕಾಲದ ಶಾಂತಿಗೆ ಕೆಲಸ ಮಾಡಬೇಕೆಂದು ಹೇಳಿದರು.
ಅವರು ಇತ್ತೀಚೆಗೆ ಟರ್ಕಿ ಮತ್ತು ಲೆಬನಾನ್ ಭೇಟಿಗಳ ವೇಳೆ ಜಗದ್ಗುರು XIVನೇ ಲಿಯೋ ರವರು ನೀಡಿದ ಸಂದೇಶಗಳನ್ನು ನೆನಪಿಗೆ ತಂದು, “ಸಂವಾದವು ದುರ್ಬಲತೆಯಲ್ಲ ಅದು ಸೌಹಾರ್ದತೆ ಮತ್ತು ಶಾಶ್ವತ ಸ್ಥಿರತೆಯತ್ತ ಹೊತ್ತೊಯ್ಯುವ ಅಗತ್ಯ ಮಾರ್ಗ” ಎಂದು ಗಮನಿಸಿದರು.
ಧಾರ್ಮಿಕ ಸ್ವಾತಂತ್ರ್ಯ ಮತ್ತು ಹೆಚ್ಚುತ್ತಿರುವ ಅಸಹಿಷ್ಣುತೆ
ಮಹಾಧಮಾ೯ಧ್ಯರು ಓಎಸ್‌ಸಿಇ ಪ್ರದೇಶದಲ್ಲಿ ಧರ್ಮ ಆಧಾರಿತ ಅಸಹಿಷ್ಣುತೆ ಮತ್ತು ಭೇದಭಾವ ಹೆಚ್ಚುತ್ತಿದೆಯೆಂದು ಹೇಳಿದರು ವಿಶೇಷವಾಗಿ ಯಹೂದಿಗಳ ವಿರುದ್ಧದ ದ್ವೇಷ, ಮತ್ತು ಕ್ರೈಸ್ತರು, ಮುಸ್ಲಿಮರು ಹಾಗೂ ಇತರೆ ಧರ್ಮೀಯರು ಎದುರಿಸುತ್ತಿರುವ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕ್ರೈಸ್ತರ ವಿರುದ್ಧದ ದ್ವೇಷಾಪರಾಧಗಳನ್ನು ತಡೆಗಟ್ಟಲು ಓಎಸ್‌ಸಿಇ ನೀಡಿರುವ ಮಾರ್ಗಸೂಚಿಗಳನ್ನು ಅವರು ಸ್ವಾಗತಿಸಿ, ಎಲ್ಲಾ ಧರ್ಮಗಳ ಮೇಲಿನ ಅಸಹಿಷ್ಣುತೆಯನ್ನು ಸಮನಾಗಿ ಎದುರಿಸುವ ನಿಲುವು ಅಗತ್ಯವಿದೆ ಎಂದರು.
ಹೆಲ್ಸಿಂಕಿಯ ಅಂತಿಮ ಒಪ್ಪಂದ ಸ್ಪಷ್ಟವಾಗಿ ದೃಢಪಡಿಸಿರುವ ಏಕೈಕ ಮೂಲಭೂತ ಮಾನವ ಹಕ್ಕು ಧಾರ್ಮಿಕ ಸ್ವಾತಂತ್ರ್ಯವಾಗಿದ್ದು, ಸಹಿಷ್ಣುತೆ ಮಾತ್ರ ಸಾಕಾಗುವುದಿಲ್ಲ, ನಿಜವಾದ ಸ್ವಾತಂತ್ರ್ಯವನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.
ವಲಸೆ, ಮಾನವನ ಕಳ್ಳಸಾಗಣೆ ಮತ್ತು ಮಾನವ ಘನತೆ
ವಲಸೆ ಕುರಿತು ಮಾತನಾಡುತ್ತ, ಗ್ಯಾಲ್ಗರ್ ರವರು ವಲಸಿಗರು, ಶರಣಾರ್ಥಿಗಳು ಮತ್ತು ಸ್ಥಳಾಂತರಗೊಂಡ ಜನರ ಮಾನವ ಘನತೆಯನ್ನು ರಕ್ಷಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಪ್ರತಿಯೊಬ್ಬರ ರಕ್ಷಣೆಗೂ, ಸಮಾಜದಲ್ಲಿ ಅರ್ಥಪೂರ್ಣವಾಗಿ ಸೇರಿಕೊಳ್ಳಲು ಅವಕಾಶಕ್ಕೂ ಹಕ್ಕುದಾರರು ಎಂದು ಒತ್ತಿಹೇಳಿದರು.
ಮಹಿಳೆ ಮತ್ತು ಮಕ್ಕಳ ಶೋಷಣೆ ಸೇರಿದಂತೆ ಮಾನವ ಕಳ್ಳಸಾಗಣೆಯ ವಿರುದ್ಧ ಓಎಸ್‌ಸಿಇ ಕೈಗೊಂಡಿರುವ ಕ್ರಮಗಳನ್ನು ಅವರು ಪ್ರಶಂಶಿಸಿದರು.
ಕಳ್ಳಸಾಗಣೆಗೆ ಸಂಬಂಧಿಸಿದ ಅನೇಕ ಅನೈತಿಕ ಆಚರಣೆಗಳನ್ನು, ಅದರಲ್ಲೂ ಬಾಡಿಗೆ ತಾಯ್ತನದ ದುರುಪಯೋಗ ಸೇರಿದಂತೆ, ರಾಷ್ಟ್ರಮಟ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯತೆಯ ಕ್ರಮಗಳ ಮೂಲಕ ಪ್ರಧಾನಿ ನಿರ್ಮೂಲಗೊಳಿಸಲು ಪವಿತ್ರ ಪೀಠ ನೀಡುತ್ತಿರುವ ಕರೆಗೆ ಅವರು ಪುನರುಚ್ಚರಿಸಿದರು.