ITALY-VATICAN-RELIGION-POPE-ANGELUS

ಪೆರುವಿನ ಯುವಜನರಿಗೆ ಜಗದ್ಗುರು ಲಿಯೋರವರು: ಕ್ರಿಸ್ತನ ‘ಉಪ್ಪು ಮತ್ತು ಬೆಳಕು’ ಆಗಿರಿ.

ಪೆರುವಿನ ರಾಷ್ಟ್ರೀಯ ಯುವಜನ ದಿನ 2026ರಲ್ಲಿ ಭಾಗವಹಿಸುತ್ತಿರುವ ಯುವಜನರನ್ನುದ್ದೇಶಿಸಿ ನೀಡಿದ ವಿಡಿಯೋ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು, ಇಂದು ಅನೇಕ ಜನರಿಗೆ “ಕ್ರಿಸ್ತನನ್ನು ಪ್ರೀತಿಸುವ ಯುವಜನರು ನೀಡಬಲ್ಲ ಸಂತೋಷಭರಿತ ಮತ್ತು ಇತರರಲ್ಲೂ ಸಂತೋಷವನ್ನು ಮೂಡಿಸುವ ಸಾಕ್ಷ್ಯ”ದ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ.ಈ ರಾಷ್ಟ್ರೀಯ ಯುವಜನ ದಿನವು ಜುಲೈ 30ರಿಂದ ಆಗಸ್ಟ್ 2ರವರೆಗೆ ಪೆರುವಿನ ಚುಲುಕಾನಾಸ್ ನಗರದಲ್ಲಿ ನಡೆಯುತ್ತಿದೆ.

ವ್ಯಾಟಿಕನ್ ವರದಿ 

“ಅನೇಕ ಸಂಕಷ್ಟದಲ್ಲಿರುವ ಹೃದಯಗಳಲ್ಲಿ ನಿರೀಕ್ಷೆಯ ಕಿಡಿಯನ್ನು ಮತ್ತೆ ಹೊತ್ತಿಸಲು ದೇವರ ಸಾಧನಗಳಾಗುವುದಕ್ಕೆ ಹೆದರಬೇಡಿ.”

ಈ ಮಾತುಗಳೊಂದಿಗೆ ಜಗದ್ಗುರು XIVನೇ ಲಿಯೋರವರು ಪೆರುವಿನ ರಾಷ್ಟ್ರೀಯ ಯುವಜನ ದಿನ  2026ರಲ್ಲಿ ಭಾಗವಹಿಸುತ್ತಿರುವ ಯುವಜನರನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವು ಜುಲೈ 30ರಿಂದ ಆಗಸ್ಟ್ 2ರವರೆಗೆ, ಪಿಯುರಾ ಪ್ರದೇಶದ ಚುಲುಕಾನಾಸ್ ನಗರದಲ್ಲಿ ನಡೆಯುತ್ತಿದೆ.

ಭಾಗವಹಿಸುವವರ ಯೇಸು ಕ್ರಿಸ್ತನೊಂದಿಗಿನ ವೈಯಕ್ತಿಕ ಸಂಬಂಧವನ್ನು ಗಟ್ಟಿಗೊಳಿಸುವುದು ಹಾಗೂ ಸಹಭಾಗಿತ್ವದಲ್ಲಿ ಐಕ್ಯವಾಗಿರುವ, ಸಿನಡಲ್ ಮತ್ತು ಮಿಷನರಿ ಧರ್ಮ ಸಭೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಧರ್ಮ ಸಭೆಯ ಜೀವನವನ್ನು ನವೀಕರಿಸಿ ಬಲಪಡಿಸುವ ಕಾರ್ಯಕ್ರಮ

ತಮ್ಮ ವಿಡಿಯೋ ಸಂದೇಶದಲ್ಲಿ ಪವಿತ್ರ ಪಿತೃಗಳು, ಈ ಕಾರ್ಯಕ್ರಮಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಅಪಾರ ಉತ್ಸಾಹದಿಂದ ಸಿದ್ಧತೆ ನಡೆಸಿದ ಪೆರುವಿನಾದ್ಯಂತದ 4,000ಕ್ಕೂ ಹೆಚ್ಚು ಭಾಗವಹಿಸುವವರಿಗೆ ಯುವಜನರು, ಬಿಷಪ್‌ಗಳು, ಧರ್ಮಗುರುಗಳು ಹಾಗೂ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಸೇರಿದಂತೆ ಧನ್ಯವಾದ ಸಲ್ಲಿಸಿದರು.

“ಈ ಉಪಕ್ರಮಕ್ಕೆ ಸ್ಪಂದಿಸಿದ್ದಕ್ಕಾಗಿ ನಾನು ಹೃದಯಪೂರ್ವಕವಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಜಗದ್ಗುರುಗಳು ಹೇಳಿದರು. ಇದು “ಧಮ೯ಸಭೆಯ ಜೀವನವನ್ನು ನವೀಕರಿಸಿ ಬಲಪಡಿಸುವ” ಒಂದು ಕಾರ್ಯಕ್ರಮವಾಗಿದೆ ಎಂದು ಅವರು ವಿವರಿಸಿದರು.

ಧೈರ್ಯಶಾಲಿಗಳಾಗಿ ಸಾಕ್ಷ್ಯ ನೀಡಿ

ಯುವಜನರು ಮತ್ತು ಸಾಮಾನ್ಯ ವಿಶ್ವಾಸಿಗಳಿಗಾಗಿ ಇರುವ ಎಪಿಸ್ಕೋಪಲ್ ಆಯೋಗವು ಚುಲುಕಾನಾಸ್ ಧರ್ಮಪ್ರಾಂತದೊಂದಿಗೆ ಸೇರಿ ಆಯೋಜಿಸಿರುವ ಈ ರಾಷ್ಟ್ರೀಯ ಯುವಜನ ದಿನದ ಧ್ಯೇಯವಾಕ್ಯವನ್ನು ಕುರಿತು ಮಾತನಾಡಿದ ಜಗದ್ಗುರುಗಳು, ಕ್ರಿಸ್ತನಲ್ಲಿ ಐಕ್ಯವಾಗಿ ಬದುಕುವುದು ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗುವಂತೆ ಯುವಜನರನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಘೋಷವಾಕ್ಯವಾದ “ಧೈರ್ಯಶಾಲಿಗಳಾಗಿರಿ, ಕ್ರಿಸ್ತನು ಜೀವಂತನಾಗಿದ್ದಾನೆ” ಎಂಬ ಮಾತುಗಳನ್ನು ಅವರು ಸ್ಮರಿಸಿದರು.

“ನಮ್ಮ ನಡುವೆ ಪ್ರಭುವಿನ ಜೀವಂತ ಸಾನ್ನಿಧ್ಯವಿದೆ ಎಂಬ ನಿಶ್ಚಯವೇ ನಮ್ಮನ್ನು ಧೈರ್ಯಶಾಲಿಗಳಾಗುವಂತೆ ಪ್ರೇರೇಪಿಸುವ ಅಂತರಂಗದ ಅಗ್ನಿಯಾಗಿದೆ” ಎಂದು ಜಗದ್ಗುರು ಲಿಯೋರವರು ಹೇಳಿದರು.

ಯುವಜನರು “ವ್ಯಕ್ತಿವಾದದ ಸೌಕರ್ಯದ” ಗಡಿಯನ್ನು ಮೀರಿ, “ನಂಬಿಕೆಯಲ್ಲಿ ಸಹೋದರ-ಸಹೋದರಿಯರ ಸಮುದಾಯದ” ಭಾಗವಾಗಬೇಕು, “ನಿಜವಾದ ಸ್ನೇಹದ ಬಂಧಗಳನ್ನು” ಬೆಳೆಸಬೇಕು ಮತ್ತು “ಕ್ರಿಸ್ತನಲ್ಲಿ ಐಕ್ಯವಾಗಿ ಬದುಕುವುದು ಸಾಧ್ಯ” ಎಂಬುದಕ್ಕೆ ಸಾಕ್ಷಿಯಾಗಬೇಕು ಎಂದು ಅವರು ಪ್ರೋತ್ಸಾಹಿಸಿದರು.

ನಿರೀಕ್ಷೆಯ ಕಿಡಿಯನ್ನು ಮತ್ತೆ ಹೊತ್ತಿಸಲು ದೇವರ ಸಾಧನಗಳಾಗಿರಿ

ಈ ದಿನಗಳಲ್ಲಿ ಪ್ರಭು ತಮ್ಮ ಮೇಲೆ ಸುರಿಸಲು ಬಯಸುವ ವರಗಳನ್ನು ಸ್ವೀಕರಿಸಲು ತಮ್ಮ ಹೃದಯಗಳನ್ನು ತೆರೆದಿಡುವಂತೆ ಜಗದ್ಗುರು XIVನೇ ಲಿಯೋರವರು ಯುವಜನರನ್ನು ಆಹ್ವಾನಿಸಿದರು.

“ಅನೇಕ, ಅನೇಕ ಸಂಕಷ್ಟದಲ್ಲಿರುವ ಹೃದಯಗಳಲ್ಲಿ ನಿರೀಕ್ಷೆಯ ಕಿಡಿಯನ್ನು ಮತ್ತೆ ಹೊತ್ತಿಸಲು ದೇವರ ಸಾಧನಗಳಾಗುವುದಕ್ಕೆ ಹೆದರಬೇಡಿ” ಎಂದು ಅವರು ಹೇಳಿದರು.

ಈ ಸಮಾಗಮದ ಅನುಭವವನ್ನು ತಮ್ಮೊಳಗೇ ಇಟ್ಟುಕೊಳ್ಳಬಾರದು ಎಂದೂ ಅವರು ಯುವಜನರನ್ನು ಒತ್ತಾಯಿಸಿದರು.

“ಅದು ನಿಮ್ಮ ಮೊಬೈಲ್‌ಗಳಲ್ಲಿರುವ ಛಾಯಾಚಿತ್ರಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಡಿಯೋಗಳಲ್ಲಿ ಮಾತ್ರ ಉಳಿದುಬಿಡದಿರಲಿ” ಎಂದು ಅವರು ಹೇಳಿದರು.

ಬದಲಾಗಿ, ತಮ್ಮ ಜೀವನದ ಸಾಕ್ಷ್ಯದ ಮೂಲಕ ಆ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು. ಇಂದು ಅನೇಕ ಜನರಿಗೆ “ಕ್ರಿಸ್ತನನ್ನು ಪ್ರೀತಿಸುವ ಯುವಜನರು ನೀಡಬಲ್ಲ ಸಂತೋಷಭರಿತ ಮತ್ತು ಇತರರಲ್ಲೂ ಸಂತೋಷವನ್ನು ಮೂಡಿಸುವ ಸಾಕ್ಷ್ಯದ” ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

ಪೆರುವಿನಲ್ಲಿ ಕ್ರಿಸ್ತನ ಉಪ್ಪು ಮತ್ತು ಬೆಳಕಾಗಿರಿ

ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡುವ ಮೊದಲು, ರಾಷ್ಟ್ರೀಯ ಯುವಜನ ದಿನದಲ್ಲಿ ಭಾಗವಹಿಸುತ್ತಿರುವ ಎಲ್ಲರನ್ನು ಸುವಾರ್ತಾ ಸಾರಣೆಯ ಮಾತೆ ಮೇರಿಯ ಮಾತೃಪ್ರಾರ್ಥನಾ ಮಧ್ಯಸ್ಥಿಕೆಗೆ ಪವಿತ್ರ ಪಿತೃಗಳು ಒಪ್ಪಿಸಿದರು.

“ಅವರು ನಿಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸಲಿ” ಎಂದು ಜಗದ್ಗುರುಗಳು ಪ್ರಾರ್ಥಿಸಿದರು. “ಈ ಪ್ರೀತಿಯ ಪೆರು ದೇಶದಲ್ಲಿ ನೀವು ಕ್ರಿಸ್ತನ ‘ಉಪ್ಪು ಮತ್ತು ಬೆಳಕು’ ಆಗುವಂತೆ ಅವರು ನಿಮಗಾಗಿ ಪ್ರಾರ್ಥಿಸಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ!”

01 ಆಗಸ್ಟ್ 2026, 11:01