ಪೋರ್ಚುಗೀಸ್ ಸೇನೆಯ ಸದಸ್ಯರನ್ನು ಸ್ವಾಗತಿಸುತ್ತಿರುವ ಜಗದ್ಗುರು XIVನೇ ಲಿಯೋರವರು. ಪೋರ್ಚುಗೀಸ್ ಸೇನೆಯ ಸದಸ್ಯರನ್ನು ಸ್ವಾಗತಿಸುತ್ತಿರುವ ಜಗದ್ಗುರು XIVನೇ ಲಿಯೋರವರು.  (ANSA)

ಜಗದ್ಗುರುಗಳು ಪೋರ್ಚುಗೀಸ್ ಸೈನಿಕರಿಗೆ: ಪ್ರಭುವಿನಲ್ಲಿ ಬಲಿಷ್ಠರಾಗಿರಿ ಮತ್ತು ನಾಗರಿಕರನ್ನು ರಕ್ಷಿಸಿರಿ.

ಜಗದ್ಗುರು XIVನೇ ಲಿಯೋರವರು ಪೋರ್ಚುಗಲ್‌ನ ಮಿಲಿಟರಿ ಆರ್ಡಿನರಿಯೇಟ್‌ನ ಸದಸ್ಯರೊಂದಿಗೆ ನಡೆದ ಭೇಟಿಯಲ್ಲಿ ಇತ್ತೀಚೆಗೆ ನಿಧನರಾದ ಇಬ್ಬರು ಯುವ ಪೋರ್ಚುಗೀಸ್ ಸೈನಿಕರನ್ನು ಸ್ಮರಿಸಿದರು. ತಮ್ಮ ದೇಶ, ಕಾನೂನಿನ ಆಳ್ವಿಕೆ ಹಾಗೂ ಸಹನಾಗರಿಕರ ಜೀವ ಮತ್ತು ಭದ್ರತೆಯನ್ನು ರಕ್ಷಿಸುವ ಸಂದರ್ಭದಲ್ಲಿ, “ಪ್ರಭುವಿನಲ್ಲಿ ಬಲಿಷ್ಠರಾಗಿರಿ” ಎಂದು ಅವರು ಸಭಿಕರಿಗೆ ಪ್ರೋತ್ಸಾಹ ನೀಡಿದರು.

ವ್ಯಾಟಿಕನ್ ವರದಿ

ಪೋರ್ಚುಗಲ್‌ನ ಮಿಲಿಟರಿ ಆರ್ಡಿನರಿಯೇಟ್‌ನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ತಮ್ಮ ಕರ್ತವ್ಯಗಳನ್ನು ವಿನಯದಿಂದ ನೆರವೇರಿಸಲು ಪ್ರಭುವಿನಲ್ಲಿ ಬಲವನ್ನು ಕಂಡುಕೊಳ್ಳುವಂತೆ ಕರೆ ನೀಡಿದರು. ಮಾನವರು ಸ್ವಾವಲಂಬಿಗಳಲ್ಲ, ದೇವರ ಅನುಗ್ರಹ ಮತ್ತು ಶಕ್ತಿಯ ಅಗತ್ಯ ಸದಾ ಇದೆ ಎಂಬುದನ್ನು ಅರಿತುಕೊಂಡು ತಮ್ಮ ಸೇವೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು. ದೇಶದ ಸಾರ್ವಭೌಮತ್ವ, ಕಾನೂನಿನ ಆಳ್ವಿಕೆ, ನಾಗರಿಕರ ಭದ್ರತೆ ಮತ್ತು ಅವರ ಜೀವವನ್ನು ರಕ್ಷಿಸುವುದು ಅವರ ಮಹತ್ತರ ಜವಾಬ್ದಾರಿಯಾಗಿದೆ ಎಂದು ಜಗದ್ಗುರುಗಳು ತಿಳಿಸಿದರು.

ಆಗಸ್ಟ್ 21ರಂದು ರಸ್ತೆಬದಿಯಲ್ಲಿ ಟೈರ್ ಪಂಕ್ಚರ್ ಆದ ಟ್ರಕ್ ಚಾಲಕನಿಗೆ ನೆರವಾಗುತ್ತಿದ್ದಾಗ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಇಬ್ಬರು ಯುವ ಸೈನಿಕರನ್ನು ಜಗದ್ಗುರುಗಳು ವಿಶೇಷವಾಗಿ ಸ್ಮರಿಸಿದರು. “ಉತ್ತಮ ಸಮಾರ್ಯನಂತೆ” ಉದಾರ ಮನಸ್ಸಿನಿಂದ ಸಹಾಯ ಮಾಡಲು ನಿಂತಿದ್ದಾಗ ಅವರು ತಮ್ಮ ಜೀವಗಳನ್ನು ಕಳೆದುಕೊಂಡರು ಎಂದು ಜಗದ್ಗುರುಗಳು ಹೇಳಿದರು. ಮೃತ ಸೈನಿಕರು ಮತ್ತು ಅವರ ಕುಟುಂಬಗಳನ್ನು ಪ್ರಭುವಿನ ಕೃಪೆಗೆ ಒಪ್ಪಿಸುವುದಾಗಿ ಅವರು ತಿಳಿಸಿದರು.

ಮಿಲಿಟರಿ ಆರ್ಡಿನರಿಯೇಟ್‌ನ ಸದಸ್ಯರು ಅದರ ವಿವಿಧ ವಾರ್ಷಿಕೋತ್ಸವಗಳನ್ನು ಆಚರಿಸಲು ರೋಮಿಗೆ ಆಗಮಿಸಿದ್ದರು. 1966ರಲ್ಲಿ ವಿಕಾರಿಯೇಟ್ ಸ್ಥಾಪನೆಯಾಗಿ 60 ವರ್ಷಗಳು, 1981ರಲ್ಲಿ ಮಿಲಿಟರಿ ಆರ್ಡಿನರಿಯೇಟ್ ಆಗಿ ಉನ್ನತಿಗೇರಿದ 45 ವರ್ಷಗಳು ಮತ್ತು ಅದರ ಮೊದಲ ಬಿಷಪ್ ನೇಮಕಗೊಂಡು 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಿತು. ಕ್ರೈಸ್ತ ಸೈನಿಕರು ಈ ತೀರ್ಥಯಾತ್ರೆಯನ್ನು ತಮ್ಮ ವೈಯಕ್ತಿಕ ನವೀಕರಣ ಮತ್ತು ನಂಬಿಕೆಯನ್ನು ಬಲಪಡಿಸಿಕೊಳ್ಳುವ ಅವಕಾಶವನ್ನಾಗಿ ಬಳಸಿಕೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದರು.

ಸಂತ ಪೌಲನ ಎಫೆಸಿಯರಿಗೆ ಬರೆದ ಪತ್ರದ ಮಾತುಗಳನ್ನು ನೆನಪಿಸಿದ ಜಗದ್ಗುರುಗಳು, “ಪ್ರಭುವಿನಲ್ಲಿ ನಿಮ್ಮ ಬಲವನ್ನು ಪಡೆದುಕೊಳ್ಳಿರಿ” ಮತ್ತು ಸತ್ಯ, ನೀತಿ ಹಾಗೂ ಶಾಂತಿಯ ಸುವಾರ್ತೆಯ ಸಿದ್ಧತೆಯಿಂದ ದೃಢವಾಗಿ ನಿಲ್ಲಿರಿ ಎಂದು ಕರೆ ನೀಡಿದರು. ಕಫರ್ನಹೂಮಿನ ಶತಾಧಿಪತಿಯ ಉದಾಹರಣೆಯನ್ನು ನೀಡಿದ ಅವರು, ಅಧಿಕಾರ ಮತ್ತು ಜವಾಬ್ದಾರಿ ಹೊಂದಿದ್ದರೂ ಆತ ತನ್ನ ಜೀವನದಲ್ಲಿ ದೇವರ ಅಗತ್ಯವನ್ನು ಅರಿತುಕೊಂಡಿದ್ದನು ಎಂದು ಹೇಳಿದರು. ವಿಧೇಯತೆ, ಶಿಸ್ತು, ಆತ್ಮನಿಗ್ರಹ, ನಿಷ್ಠೆ, ಸಹೋದರತ್ವ, ಸಮರ್ಪಣೆ, ಜವಾಬ್ದಾರಿ ಮತ್ತು ಧೈರ್ಯ ಇವುಗಳ ಜೊತೆಗೆ ವಿನಯವೂ ಅತ್ಯಗತ್ಯವೆಂದು ಜಗದ್ಗುರುಗಳು ಒತ್ತಿಹೇಳಿದರು.

“ಒಬ್ಬ ವ್ಯಕ್ತಿಗೆ ಎಷ್ಟೇ ಅಧಿಕಾರವಿರಲಿ, ಎಷ್ಟೇ ಜವಾಬ್ದಾರಿಯಿರಲಿ, ಆತ ಎಷ್ಟೇ ನಿರ್ದೋಷಿಯಾಗಿರಲಿ, ಅವನು ಸದಾ ಅನಂತದ ಹಸಿವು ಮತ್ತು ನಿತ್ಯಜೀವದ ದಾಹವನ್ನು ಹೊಂದಿರುತ್ತಾನೆ,” ಎಂದು ಜಗದ್ಗುರುಗಳು ಹೇಳಿದರು. ಯೇಸು ಕ್ರಿಸ್ತನಲ್ಲಿ ಅನಂತತೆ ಮತ್ತು ನಿತ್ಯತ್ವವು ನಮಗೆ ದೊರೆಯುವ ದೇವರ ಕೊಡುಗೆಯಾಗಿದೆ ಎಂದು ಅವರು ತಿಳಿಸಿದರು. ಆದ್ದರಿಂದ ನಿಜವಾದ ಶಕ್ತಿ ಎಂದರೆ ಅಧಿಕಾರದಲ್ಲಲ್ಲ, ದೇವರ ಮೇಲಿನ ನಂಬಿಕೆ ಮತ್ತು ವಿನಯದಲ್ಲಿದೆ ಎಂದು ಅವರು ಸಾರಿದರು.

ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯ ಆಧ್ಯಾತ್ಮಿಕ ಬೆಳವಣಿಗೆಗೆ ಸೇವೆ ಸಲ್ಲಿಸುವ ಧರ್ಮಗುರುಗಳಿಗೆ ಜಗದ್ಗುರುಗಳು ವಿಶೇಷವಾಗಿ ಪ್ರೋತ್ಸಾಹ ನೀಡಿದರು. ಎಲ್ಲರನ್ನೂ ಸ್ವಾಗತಿಸಿ, ಅವರ ಮಾತುಗಳನ್ನು ಆಲಿಸಿ, ದೇವರ ವಾಕ್ಯವನ್ನು ಹಂಚಿಕೊಳ್ಳುತ್ತಾ, ಸಂಸ್ಕಾರಗಳ ಮೂಲಕ ಮತ್ತು ವೈಯಕ್ತಿಕ ಹಾಗೂ ಕುಟುಂಬದ ಜೊತೆಯಾಟದ ಮೂಲಕ ಕ್ರಿಸ್ತನ ಹೆಸರಿನಲ್ಲಿ ಸೇವೆ ಮುಂದುವರಿಸುವಂತೆ ಹೇಳಿದರು. “ಧಮ೯ಸಭೆ ಮತ್ತು ದೇಶದ ಮೇಲಿನ ನಿಮ್ಮ ಪ್ರೀತಿಯ ಸಾಕ್ಷಿಯು ಸಾಂತ್ವನ ನೀಡುವ ಮುಲಾಮಿನಂತಿದ್ದು, ಭರವಸೆಯನ್ನು ಉಂಟುಮಾಡುತ್ತದೆ,” ಎಂದು ಹೇಳಿದ ಜಗದ್ಗುರುಗಳು, ಫಾತಿಮಾ ಮಾತೆ ಎಲ್ಲರ ಸೇವಾ ಕಾರ್ಯಗಳಲ್ಲಿ ಜೊತೆಯಾಗಿರಲಿ ಎಂದು ಪ್ರಾರ್ಥಿಸಿದರು.

24 ಆಗಸ್ಟ್ 2026, 17:28