ಅಸ್ಸಿಸಿಗೆ ಜಗದ್ಗುರುಗಳು ಭೇಟಿ ನೀಡಿದಕ್ಕಾಗಿ ಕೃತಜ್ಞತೆ: “ಇಂದು ನಾವು ಧರ್ಮ ಸಭೆಯ ಭಾಗವಾಗಿದ್ದೇವೆ ಎಂಬ ಭಾವನೆ ಮೂಡುತ್ತಿದೆ”.
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಅಸ್ಸಿಸಿ ಭೇಟಿಯು “ಒಂದು ಅಪ್ಪುಗೆಯಾಗಿತ್ತು”; “ಪೇತ್ರನ ಉತ್ತರಾಧಿಕಾರಿಯು ದೇವಜನರೊಂದಿಗೆ ಜೊತೆಯಾಗಿ ನಡೆದು, ಅವರ ನಿರೀಕ್ಷೆಗಳು ಮತ್ತು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದರ ಸಂಕೇತವಾಗಿತ್ತು.” ಅಸ್ಸಿಸಿಯ ಸಾಂತಾ ಮರಿಯಾ ದೆಗ್ಲಿ ಅಂಜೆಲಿ ಬಸಿಲಿಕಾದಲ್ಲಿ ಜಗದ್ಗುರುಗಳು ಅರ್ಪಿಸಿದ ಪವಿತ್ರ ಬಲಿಪೂಜೆಯ ಸಮಾರೋಪದಲ್ಲಿ, ಅಂತಿಮ ಆಶೀರ್ವಾದಕ್ಕೂ ಮುನ್ನ ಯುವಕ ಫ್ರಾನ್ಸೆಸ್ಕೊ ವರೋನೆ ರವರು ಈ ಮಾತುಗಳೊಂದಿಗೆ ಜಗದ್ಗರುಗಳನ್ನುದ್ದೇಶಿಸಿ, ಅಸ್ಸಿಸಿಗೆ ಭೇಟಿ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಜಗದ್ಗುರುಗಳ ಉಪಸ್ಥಿತಿಯು ಯುವಜನರಿಗೆ “ಒಳ್ಳೆಯದನ್ನು ಆಯ್ಕೆಮಾಡಲು ಮತ್ತು ಸುವಾರ್ತೆಯು ಇಂದಿಗೂ ಮಾನವ ಹೃದಯವನ್ನು ಪರಿವರ್ತಿಸಬಲ್ಲದು ಎಂಬುದನ್ನು ನಂಬಲು” ಭಯಪಡಬಾರದು ಎಂಬ ಧೈರ್ಯವನ್ನು ನೀಡುತ್ತದೆ ಎಂದು ವರೋನೆ ಹೇಳಿದರು.
ಅನೇಕ ಯುವಕ-ಯುವತಿಯರು ಅನುಭವಿಸುತ್ತಿರುವ “ವಿಭಜನೆಯ ನೋವು ಮತ್ತು ಏಕಾಂಗಿತನದ ಭಯಕ್ಕೆ” ವರೋನೆ ಧ್ವನಿಯಾದರು. ಇದೇ ಕಾರಣಕ್ಕಾಗಿ ಅಸ್ಸಿಸಿಯವರು ಅನುಭವವು ತಮಗೆ ಆಳವಾದ ರೂಪಾಂತರವನ್ನು ನೀಡಿದೆ ಎಂದು ಅವರು ಹೇಳಿದರು. ಅಸ್ಸಿಸಿಯ ಬಡವರೆಂದು ಕರೆಯಲ್ಪಡುವ ಸಂತ ಫ್ರಾನ್ಸಿಸ್ ರವರ ನಗರದಲ್ಲಿ, ಯುವಜನರು “ಯೇಸು ನಮ್ಮನ್ನು ಒಗ್ಗೂಡಿಸುತ್ತಾನೆ, ನಾವು ಒಂಟಿಯಲ್ಲ” ಎಂಬ ಸತ್ಯವನ್ನು ನೇರವಾಗಿ ಅನುಭವಿಸಲು ಸಾಧ್ಯವಾಯಿತು. ಇದು ಜಗದ್ಗುರು ಲಿಯೋರವರ ಬಿಷಪ್ ಧ್ಯೇಯವಾಕ್ಯವಾದ “ಆ ಒಬ್ಬನಲ್ಲಿ ನಾವು ಒಂದಾಗಿದ್ದೇವೆ” — ಎಂಬುದನ್ನೇ ಪ್ರತಿಧ್ವನಿಸುತ್ತದೆ.
ಕ್ರಿಸ್ತನಲ್ಲಿ “ಯಾರೂ ಅಪರಿಚಿತರಲ್ಲ, ಯಾರೂ ಹೊರಗಿಡಲ್ಪಟ್ಟವರಲ್ಲ”; ಬದಲಾಗಿ ಎಲ್ಲರೂ “ನಿಜವಾದ ಸಹೋದರ ಸಹೋದರಿಯರು. ಇದು ಕೇವಲ ಆಕಸ್ಮಿಕವಲ್ಲ, ನಾವು ಒಂದೇ ತಂದೆಯ ಮಕ್ಕಳು ಎಂಬ ಕಾರಣದಿಂದಲೇ” ಎಂದು ವರೋನೆ ಹೇಳಿದರು.
ಸುವಾರ್ತೆಯನ್ನು ಆಯ್ಕೆಮಾಡುವ ಧೈರ್ಯ
ಕೊನೆಯಲ್ಲಿ, ವರೋನೆ ಜಗದ್ಗುರುಗಳಲ್ಲಿ ಒಂದು ವಿಶೇಷ ಕೊಡುಗೆಯನ್ನು—“ಮಕ್ಕಳು ತಮ್ಮ ತಂದೆಯಿಂದ ಕೇಳುವಂತಹ” ಒಂದು ಕೊಡುಗೆಯನ್ನು—ಕೋರಿದರು: “ನಮಗಾಗಿ ಪ್ರಾರ್ಥಿಸುವುದನ್ನು ಮರೆಯಬೇಡಿ” ಎಂದು ಅವರು ವಿನಂತಿಸಿದರು.
“ನಾವು ಕ್ರಿಸ್ತನನ್ನು ಆಯ್ಕೆಮಾಡುವ ಧೈರ್ಯವನ್ನು ಎಂದಿಗೂ ಕಳೆದುಕೊಳ್ಳದಂತೆ ಪ್ರಾರ್ಥಿಸಿ. ಜಗತ್ತಿನ ಗದ್ದಲದ ನಡುವೆ ಅವರ ಧ್ವನಿಯನ್ನು ಗುರುತಿಸಲು ನಮಗೆ ಸಾಧ್ಯವಾಗಲಿ. ನಮ್ಮ ಯೌವನವು ಸೇವೆಗೆ ಸಮರ್ಪಿತವಾದ ಜೀವನವಾಗಲಿ” ಎಂದು ವರೋನೆ ಜಗದ್ಗರುಗಳನ್ನು ಕೇಳಿಕೊಂಡರು.
“ಪವಿತ್ರ ಪಿತಾಮಹರೇ, ಧನ್ಯವಾದಗಳು. ಏಕೆಂದರೆ ಇಂದು ನೀವು ನಾವು ಧರ್ಮ ಸಭೆಯ ಭಾಗವಾಗಿದ್ದೇವೆ ಎಂಬ ಅನುಭವವನ್ನು ನಮಗೆ ನೀಡಿದ್ದೀರಿ” ಎಂದು ಆ ಯುವಕ ತನ್ನ ಮಾತುಗಳನ್ನು ಮುಕ್ತಾಯಗೊಳಿಸಿದರು.
