ಹುಡುಕಿ

ಅಸ್ಸಿಸಿಗೆ ಆಗಮಿಸಿದ ಜಗದ್ಗುರು XIVನೇ ಲಿಯೋರವರು ಯುವಜನರನ್ನು ಭೇಟಿಯಾಗಿ ಶುಭಾಶಯ ಕೋರಿದರು. ಅಸ್ಸಿಸಿಗೆ ಆಗಮಿಸಿದ ಜಗದ್ಗುರು XIVನೇ ಲಿಯೋರವರು ಯುವಜನರನ್ನು ಭೇಟಿಯಾಗಿ ಶುಭಾಶಯ ಕೋರಿದರು.  (ANSA)

ಅಸ್ಸಿಸಿಯಲ್ಲಿ ಜಗದ್ಗುರುಗಳು: ವಿಭಜನೆಯಲ್ಲ, ಪ್ರೀತಿಯ ನಾಗರಿಕತೆಯನ್ನು ನಿರ್ಮಿಸೋಣ.

ತಮ್ಮ ಪ್ರೇಷಿತರ ಭೇಟಿಯ ಮೊದಲ ತಂಗುದಾಣವಾದ ಸಾಂತಾ ಮರಿಯಾ ದೆಗ್ಲಿ ಅಂಜೆಲಿಯಲ್ಲಿ, ಜಗದ್ಗುರುಗಳು ಯುವಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸುವಾರ್ತೆಯ ಆಮೂಲಾಗ್ರತೆಯು “ಮೂಲಭೂತವಾದಕ್ಕೆ ವಿರುದ್ಧವಾದುದು,ಅದು ನಮ್ಮನ್ನು ಕುರುಡರನ್ನಾಗಿಯೂ ಹಿಂಸಾತ್ಮಕರನ್ನಾಗಿಯೂ ಮಾಡುವುದಿಲ್ಲ, ಬದಲಾಗಿ ಸಂವೇದನಾಶೀಲರನ್ನಾಗಿ ಮತ್ತು ಜಾಗರೂಕರನ್ನಾಗಿ ಮಾಡುತ್ತದೆ,” ಹಾಗೂ ಎಲ್ಲರನ್ನೂ ಸ್ವಾಗತಿಸುವ ಮನೋಭಾವವನ್ನು ಬೆಳೆಸುತ್ತದೆ ಎಂದು ವಿವರಿಸಿದರು.

ವ್ಯಾಟಿಕನ್ ವರದಿ

ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಆಧ್ಯಾತ್ಮಿಕ ಪರಂಪರೆಯನ್ನು ಇಂದಿನ ಕಾಲದಲ್ಲಿ ಹೇಗೆ ಬದುಕಬಹುದು? ದಬ್ಬಾಳಿಕೆ, ಭೌತಿಕಾಸಕ್ತಿ ಮತ್ತು ಗ್ರಾಹಕ ಸಂಸ್ಕೃತಿಯಿಂದ ರೂಪುಗೊಳ್ಳುತ್ತಿರುವ ಜಗತ್ತಿನಲ್ಲಿ ಸೇವೆ ಮತ್ತು ಸ್ವಾಗತದ ಮನೋಭಾವವನ್ನು ಹೇಗೆ ಬೆಳೆಸಿಕೊಳ್ಳಬಹುದು? ಸಂಕಷ್ಟಗಳು ಮತ್ತು ವೈರುಧ್ಯಗಳಿಂದ ಬಳಲುತ್ತಿರುವ ಧರ್ಮ ಸಭೆಯ ಮೇಲೆ ನಾವು ಹೇಗೆ ವಿಶ್ವಾಸವಿಡಬಹುದು? ಅಸ್ಸಿಸಿಯ ಸಾಂತಾ ಮರಿಯಾ ದೆಗ್ಲಿ ಅಂಜೆಲಿಯಲ್ಲಿ ಜಗದ್ಗುರು XIVನೇ ಲಿಯೋರವರನ್ನು ಭೇಟಿಯಾದ ಮೂವರು ಯುವಕರು ಇಂತಹ ಮಹತ್ವದ ಪ್ರಶ್ನೆಗಳನ್ನು ಕೇಳಿದರು.

ತಮ್ಮ ಪ್ರೇಷಿತರ ಭೇಟಿಯನ್ನು ಯುವಜನರೊಂದಿಗೆ ಸಂವಾದದಿಂದ ಆರಂಭಿಸಿದ ಜಗದ್ಗುರುಗಳು, ಧರ್ಮವನ್ನು ಎಂದಿಗೂ ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದು ಎಂದು ಸ್ಪಷ್ಟಪಡಿಸಿದರು. ನಾಯಕತ್ವವು ಜನರನ್ನು ನಿಯಂತ್ರಿಸುವುದಕ್ಕಿಂತ ಅವರನ್ನು ಮುಕ್ತಗೊಳಿಸುವ, ಜವಾಬ್ದಾರಿಯುತ ಮತ್ತು ಎಲ್ಲರನ್ನೂ ಒಳಗೊಂಡಿರುವಂತಿರಬೇಕು ಎಂದು ಹೇಳಿದರು. ಕ್ರೈಸ್ತ ಜೀವನವೆಂದರೆ ಕೇವಲ ಧರ್ಮ ಸಭೆಯ ಗೋಡೆಗಳೊಳಗೆ ಸೀಮಿತವಾಗಿರುವ ನಂಬಿಕೆಯಲ್ಲ, ಅದು ಸಮಾಜದ ನಡುವೆ ಪ್ರೀತಿ, ಶಾಂತಿ ಮತ್ತು ಸುವಾರ್ತೆಯ ಸಾಕ್ಷಿಯನ್ನು ನೀಡುವ ಜೀವನವಾಗಿದೆ.

ಕ್ರೊಯೇಷಿಯಾದ ಜಾಗ್ರೆಬ್‌ನ ಕರೋಲಿನಾ ಯುದ್ಧದ ಗಾಯಗಳ ನಡುವೆ ಕ್ರಿಸ್ತನ ನಿಷ್ಠಾವಂತ ಶಿಷ್ಯರಾಗಿ ಹೇಗೆ ಬದುಕಬೇಕು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಜಗದ್ಗುರುಗಳು, ಧರ್ಮ ಮತ್ತು ರಾಷ್ಟ್ರೀಯತೆಯ ಅಪಾಯಕಾರಿ ಮಿಶ್ರಣವು ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ನೆನಪಿಸಿದರು. ಆದ್ದರಿಂದ ಕ್ರೈಸ್ತರು ವಿಭಜನೆಯ ದಾರಿಯಲ್ಲಿ ಸಾಗದೆ, “ಪ್ರವಾಹದ ವಿರುದ್ಧ” ನಿಂತು ಹಳೆಯ ಗಾಯಗಳನ್ನು ಗುಣಪಡಿಸುವ ಹಾಗೂ ಸಮನ್ವಯವನ್ನು ಬೆಳೆಸುವ ಶಾಂತಿದೂತರಾಗಬೇಕು ಎಂದು ಕರೆ ನೀಡಿದರು.

ಸಂತ ಫ್ರಾನ್ಸಿಸ್ ಅವರ ಆಧ್ಯಾತ್ಮಿಕ ಮಕ್ಕಳಾಗುವುದೆಂದರೆ ಸುವಾರ್ತೆಯ ಆಮೂಲಾಗ್ರತೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಎಂದು ಜಗದ್ಗುರುಗಳು ಹೇಳಿದರು. ಸುವಾರ್ತೆಯ ಆಮೂಲಾಗ್ರತೆ ಮೂಲಭೂತವಾದಕ್ಕೆ ವಿರುದ್ಧವಾಗಿದೆ; ಅದು ಮನುಷ್ಯನನ್ನು ಕುರುಡನನ್ನಾಗಿಯೂ ಹಿಂಸಾತ್ಮಕನನ್ನಾಗಿಯೂ ಮಾಡುವುದಿಲ್ಲ, ಬದಲಾಗಿ ಸಂವೇದನಾಶೀಲ, ಜಾಗರೂಕ, ವಿನಮ್ರ ಮತ್ತು ಎಲ್ಲರನ್ನೂ ಸ್ವಾಗತಿಸುವವನನ್ನಾಗಿ ಮಾಡುತ್ತದೆ. ತಪ್ಪುಮಾಹಿತಿ ಮತ್ತು ಪೂರ್ವಾಗ್ರಹಗಳು ಭಯದ ಗೋಡೆಗಳನ್ನು ನಿರ್ಮಿಸಿದರೂ, ಕ್ರಿಸ್ತನು ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆದು, ಕೃತಕ ಗಡಿಗಳನ್ನು ದಾಟಿ ಇತರರನ್ನು ಸ್ವೀಕರಿಸಲು ಕಲಿಸುತ್ತಾನೆ.

 ತಂತ್ರಜ್ಞಾನವು ಜನರನ್ನು ಪರಸ್ಪರ ಸಂಪರ್ಕಿಸುವುದರ ಜೊತೆಗೆ, ನೇರವಾಗಿ ಒಟ್ಟಾಗಿ ಬದುಕುವ ಅನುಭವವನ್ನೂ ಮರೆಸುತ್ತಿದೆ ಎಂದು ಜಗದ್ಗುರುಗಳು ಎಚ್ಚರಿಸಿದರು. ಧರ್ಮ ಸಭೆಯ ಎಲ್ಲರಿಗೂ ತೆರೆದಿರುವ ಮನೆ, ಪರಸ್ಪರ ಆಲಿಸುವ ಮತ್ತು ಸಹೋದರತ್ವದ ಸಂತೋಷವನ್ನು ಅನುಭವಿಸುವ ಸಮುದಾಯವಾಗಿರಬೇಕು. ಯುದ್ಧದ ಹಿಂಸೆ, ಕೂಗು ಮತ್ತು ಕ್ರೌರ್ಯಕ್ಕೆ ಮೌನವು ವಿರುದ್ಧವಾದುದು ಎಂದು ಹೇಳಿದ ಅವರು, ಯುವಕರು ಎಲ್ಲಿಗೆ ಹೋದರೂ ಒಟ್ಟಾಗಿ ಬದುಕುವ, ದೇವರ ಕುರಿತು ಮಾತನಾಡುವ ಮತ್ತು ಜೀವನದ ಸೌಂದರ್ಯ, ರಹಸ್ಯ ಹಾಗೂ ಗಂಭೀರತೆಯನ್ನು ಹಂಚಿಕೊಳ್ಳುವ ಸಾಕ್ಷಿಯಾಗಬೇಕು ಎಂದು ಕರೆ ನೀಡಿದರು.

ಬೊಲೊನಿಯಾದ ಜಿಯೋವನ್ನಿ, ದೇವರಿಗೆ ಜೀವನಪೂರ್ತಿ “ಹೌದು” ಎನ್ನುವುದು ಹೇಗೆ ಸಾಧ್ಯ ಎಂದು ಕೇಳಿದರು. ಅದಕ್ಕೆ ಜಗದ್ಗುರುಗಳು, “ಶಾಶ್ವತವಾದ ಒಂದು ನಿರ್ಧಾರವನ್ನು ಕೈಗೊಳ್ಳುವುದು ಬಹುಶಃ ಅತ್ಯಂತ ಕ್ರಾಂತಿಕಾರಿ ಕಾರ್ಯ” ಎಂದು ಹೇಳಿದರು. ನಿರಂತರವಾಗಿ ಹೊಸ ಅನುಭವಗಳು, ಸಂಬಂಧಗಳು ಮತ್ತು ವಸ್ತುಗಳನ್ನು ಹುಡುಕುವುದು ಒಳಗಿನ ಶೂನ್ಯತೆಯ ಲಕ್ಷಣವಾಗಬಹುದು; ಅದು ಇತರರನ್ನು ವಸ್ತುಗಳಂತೆ ಕಾಣುವಂತೆ ಕೂಡ ಮಾಡಬಹುದು. ನಿಜವಾದ ಪ್ರೀತಿ ಬಂಧಿಸುವುದಿಲ್ಲ; ಅದು ನಮ್ಮನ್ನು ವಿಶಾಲವಾದ ಜೀವನದತ್ತ ಕರೆದೊಯ್ಯುತ್ತದೆ. ಪ್ರತಿಯೊಂದು ದೈವಿಕ ಕರೆಯ ನಿಜವಾದ ಅರ್ಥವೂ ದೇವರೊಂದಿಗೆ ನಡೆಯುವ ಈ ಪಯಣವೇ ಆಗಿದೆ.

ತಮ್ಮ ಸ್ವಂತ ಕರೆಯ ಕುರಿತು ಮಾತನಾಡಿದ ಜಗದ್ಗುರುಗಳು, ದೇವರು ಎಂದಿಗೂ ತಮ್ಮನ್ನು ಒಂಟಿಯಾಗಿ ಬಿಟ್ಟಿಲ್ಲ; ತಮ್ಮ ಪೌರೋಹಿತ್ಯ, ಆಗಸ್ಟೀನಿಯನ್ ಸಮುದಾಯದ ಸದಸ್ಯತ್ವ ಮತ್ತು ಮಿಷನರಿ ಜೀವನದ ಪಯಣದಲ್ಲಿ ದೇವರು ಸದಾ ಮಾರ್ಗದರ್ಶನ ನೀಡಿದ್ದಾನೆ ಎಂದು ಹೇಳಿದರು. ಪ್ರತಿದಿನವೂ ನಮ್ಮ ಆಯ್ಕೆಗಳನ್ನು ನವೀಕರಿಸಬೇಕು ಮತ್ತು ಪಾಪವು ನಮ್ಮ ವಿವೇಕವನ್ನು ಮಸುಕಾಗಿಸದಂತೆ ಜಾಗರೂಕರಾಗಿರಬೇಕು ಎಂದರು. ಅಂತಿಮವಾಗಿ, ದೇವರು ನೀಡಿದ ವಿಶೇಷ ಕರೆಯಾಗಿ ಪೋಪ್ ಆಗುವ ಜವಾಬ್ದಾರಿಗೂ ತಾವು “ಹೌದು” ಎಂದು ಹೇಳಬೇಕಾಯಿತು ಎಂದು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡರು.

ಸಿಸಿಲಿಯ 22 ವರ್ಷದ ಲುಯಿಜಿ, ಧರ್ಮ ಸಭೆಯೊಳಗಿನ ಹಗರಣಗಳು ಮತ್ತು ವೈಫಲ್ಯಗಳ ನಡುವೆಯೂ ಪೇತ್ರನ ಉತ್ತರಾಧಿಕಾರಿಯೊಂದಿಗೆ ಹೇಗೆ ಏಕತೆಯಲ್ಲಿ ಉಳಿಯಬಹುದು ಎಂದು ಕೇಳಿದರು. ಜಗದ್ಗುರುಗಳು, ಏಕತೆ ಯೇಸುವಿನ ಹೃದಯಕ್ಕೆ ಅತ್ಯಂತ ಸಮೀಪವಾದದ್ದು ಎಂದು ಹೇಳಿದರು. ಯೇಸುವಿನ ಸುತ್ತಲೂ ಪರಸ್ಪರ ಎಂದಿಗೂ ಭೇಟಿಯಾಗದ ಜನರೂ ಸಹೋದರ ಸಹೋದರಿಯರಾಗುತ್ತಾರೆ. ನಮ್ಮ ನಗರಗಳಲ್ಲಿರುವ ಅದೃಶ್ಯ ಗೋಡೆಗಳು, ಭೇದಭಾವ ಮತ್ತು ಅಸಮಾನತೆಗಳು ಪರಸ್ಪರರನ್ನು ಸಹೋದರ ಸಹೋದರಿಯರೆಂದು ಗುರುತಿಸಿದಾಗ ಕರಗಬಹುದು. ನಿಜವಾದ ಶಕ್ತಿ ಇತರರನ್ನು ಅವಮಾನಿಸುವುದಲ್ಲ, ಅವರನ್ನು ಎತ್ತಿಹಿಡಿಯುವುದಾಗಿದೆ. “ಹಿಡಿದುಕೊಳ್ಳುವುದಲ್ಲ, ಸ್ವೀಕರಿಸುವುದು; ಸ್ವಂತದಾಗಿಸಿಕೊಳ್ಳುವುದಲ್ಲ, ಮರಳಿ ನೀಡುವುದು” ಎಂಬ ದೇವರ ಜೀವನದ ಮಾರ್ಗವೇ ಧರ್ಮ ಸಭೆಯನ್ನು ಗುಣಪಡಿಸಿ, ಜನರು ಸ್ವಾತಂತ್ರ್ಯ ಮತ್ತು ರಕ್ಷಣೆಯನ್ನು ಅನುಭವಿಸುವ ಸಮುದಾಯವನ್ನಾಗಿ ಮಾಡುತ್ತದೆ. ಯೇಸುವಿನಂತೆ ಧರ್ಮ ಸಭೆ ಕೂಡ ಇತರರನ್ನು ಕೆಳಗಿಳಿಸುವ ಶಕ್ತಿಯಲ್ಲ, ಅವರನ್ನು ಮೇಲಕ್ಕೆತ್ತುವ ಪ್ರೀತಿಯ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು.

06 ಆಗಸ್ಟ್ 2026, 18:02