ಜಗದ್ಗುರುಗಳು ನೈಟ್ಸ್ ಆಫ್ ಕೊಲಂಬಸ್‌ಗೆ: ವಿಭಜನೆಯ ಯುಗದಲ್ಲಿ ಸೌಹಾರ್ದತೆಯ ಪ್ರವಾದಿಗಳಾಗಿರಿ.
ವ್ಯಾಟಿಕನ್ ವರದಿ
ಆಗಸ್ಟ್ 4ರಂದು ಕೊಲೊರಾಡೊದ ಡೆನ್ವರ್‌ನಲ್ಲಿ ನಡೆಯುತ್ತಿರುವ ಆ ಸಂಘಟನೆಯ 144ನೇ ಸುಪ್ರೀಂ ಸಮಾವೇಶದ ಭಾಗವಹಿಸುವವರನ್ನುದ್ದೇಶಿಸಿ ನೀಡಿದ ವಿಡಿಯೋ ಸಂದೇಶದಲ್ಲಿ ಜಗದ್ಗುರುಗಳು ಈ ಕರೆ ನೀಡಿದರು.
ಪ್ರತ್ಯಕ್ಷವಾಗಿ ಹಾಗೂ ಆನ್‌ಲೈನ್ ಮೂಲಕ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಎಲ್ಲರನ್ನು ಅಭಿನಂದಿಸಿದ ಜಗದ್ಗುರು ಲಿಯೋರವರು, “ಒಬ್ಬನಲ್ಲಿ, ನಾವೆಲ್ಲರೂ ಒಂದಾಗಿದ್ದೇವೆ” ಎಂಬ ಸಮಾವೇಶದ ಧ್ಯೇಯವಾಕ್ಯವನ್ನು ಹಾಗೂ ನೈಟ್ಸ್ ಆಫ್ ಕೊಲಂಬಸ್‌ನ ಎರಡು ಮೂಲಭೂತ ತತ್ವಗಳಾದ ಏಕತೆ ಮತ್ತು ದಾನಧರ್ಮದ ಗುಣಗಳನ್ನು ಕುರಿತು ಚಿಂತನೆ ಹಂಚಿಕೊಂಡರು.
ಏಕತೆಯನ್ನು ಬೆಳೆಸಬೇಕು
ಕೊನೆಯ ಭೋಜನದ ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರು “ಎಲ್ಲರೂ ಒಂದಾಗಿರಲಿ” ಎಂದು ಮಾಡಿದ ಪ್ರಾರ್ಥನೆಯನ್ನು ಸ್ಮರಿಸಿದ ಜಗದ್ಗುರುಗಳು, ಏಕತೆಯು ಪ್ರತಿಯೊಂದು ಪೀಳಿಗೆಯ ವಿಶ್ವಾಸಿಗಳಿಗೆ ವಹಿಸಲ್ಪಟ್ಟಿರುವ ಒಂದು ವರವಾಗಿದೆ ಎಂದು ಒತ್ತಿಹೇಳಿದರು.
“ಏಕತೆಯನ್ನು ಕಾಪಾಡಿಕೊಳ್ಳುವುದು ಅನೇಕ ಬಾರಿ ಸುಲಭವಲ್ಲ, ಅದನ್ನು ಸಹಜವಾಗಿ ದೊರೆಯುವ ಸಂಗತಿ ಎಂದು ಪರಿಗಣಿಸಲಾಗುವುದಿಲ್ಲ. ಪ್ರಾಮಾಣಿಕ ಮತ್ತು ವಿನಯಪೂರ್ವಕ ಸಂವಾದದ ಮೂಲಕ ಅದನ್ನು ಸಕ್ರಿಯವಾಗಿ ಬೆಳೆಸಬೇಕು,” ಎಂದು ಅವರು ಹೇಳಿದರು.
ಆದ್ದರಿಂದ, ಕ್ರಿಸ್ತನು ಬಯಸಿದ ಸೌಹಾರ್ದತೆಗೆ ಸಾಕ್ಷಿಗಳಾಗುವಂತೆ ಜಗದ್ಗುರು ಲಿಯೋರವರು ನೈಟ್ಸ್ ಸದಸ್ಯರನ್ನು ಪ್ರೋತ್ಸಾಹಿಸಿದರು. ಈ ಪ್ರಯತ್ನವು ಮೊದಲು ಅವರ ಕುಟುಂಬಗಳು ಮತ್ತು ಧರ್ಮಸಭೆಗಳಲ್ಲಿ ಆರಂಭವಾಗಿ, ನಂತರ ಅವರು ವಾಸಿಸುವ ಹಾಗೂ ಸೇವೆ ಸಲ್ಲಿಸುವ ವಿಶಾಲ ಸಮುದಾಯಗಳಿಗೂ ವಿಸ್ತರಿಸಬೇಕು ಎಂದು ಅವರು ಹೇಳಿದರು.
“ವಿಭಜನೆ ಮತ್ತು ಕಟುವಾದ ವಾಗ್ಮಿತೆಯಿಂದ ಅತಿಯಾಗಿ ಗುರುತಿಸಲ್ಪಡುವ ಈ ಯುಗದಲ್ಲಿ, ಸೇತುವೆಗಳನ್ನು ನಿರ್ಮಿಸಲು ಮತ್ತು ಸಾಧ್ಯವಾದ ಎಲ್ಲೆಡೆ ಪರಸ್ಪರ ವಿರೋಧಿ ನಿಲುವುಗಳ ನಡುವೆ ಸಮನ್ವಯವನ್ನು ತರಲು ಶ್ರಮಿಸುವ ಸೌಹಾರ್ದತೆಯ ಪ್ರವಾದಿಗಳ ಅಗತ್ಯ ಬಹಳಷ್ಟಿದೆ,” ಎಂದು ಅವರು ಹೇಳಿದರು.
ದಾನಧರ್ಮವು ಸಹಭಾಗಿತ್ವವನ್ನು ಬಲಪಡಿಸುತ್ತದೆ
ದಾನಧರ್ಮದ ಕುರಿತು ಮಾತನಾಡಿದ ಪವಿತ್ರ ಪಿತೃ, ಅಗತ್ಯದಲ್ಲಿರುವವರ ಪರವಾಗಿ ಕೈಗೊಳ್ಳುವ ಸೇವಾ ಕಾರ್ಯಗಳು ಸ್ವತಃ ಏಕತೆಯತ್ತ ಸಾಗುವ ಮಾರ್ಗವಾಗಬಹುದು ಎಂದು ಹೇಳಿದರು.
“ಅಗತ್ಯದಲ್ಲಿರುವವರಿಗೆ ನೆರವಾಗಲು ನಾವು ಕೈಚಾಚಿದಾಗ, ನೆರವು ನೀಡುವವರು ಮತ್ತು ಸ್ವೀಕರಿಸುವವರ ನಡುವೆ ಮಾತ್ರವಲ್ಲದೆ, ತಮ್ಮ ಸಹೋದರ ಸಹೋದರಿಯರಿಗೆ ನೆರವಾಗಲು ಒಟ್ಟಾಗಿ ಕಾರ್ಯನಿರ್ವಹಿಸುವವರ ನಡುವೆಯೂ ಒಂದು ರೀತಿಯ ಸೌಹಾರ್ದತೆ ಬೆಳೆಯುತ್ತದೆ,” ಎಂದು ಅವರು ಹೇಳಿದರು.
“ಹೀಗೆ, ದಾನಧರ್ಮವು ಮಾನವ ದುಃಖಕ್ಕೆ ನೀಡುವ ಪ್ರತಿಕ್ರಿಯೆ ಮಾತ್ರವಾಗಿರದೆ, ಭ್ರಾತೃತ್ವವನ್ನು ಬೆಳೆಸುವ ಮತ್ತು ಕ್ರೈಸ್ತ ಜೀವನದ ಹೃದಯಭಾಗದಲ್ಲಿರುವ ಸಹಭಾಗಿತ್ವವನ್ನು ಬಲಪಡಿಸುವ ಶಕ್ತಿಶಾಲಿ ಸಾಧನವೂ ಆಗುತ್ತದೆ.”
ಅಂಚಿನಲ್ಲಿರುವವರಿಗೆ ಸೇವೆ
ನೈಟ್ಸ್ ಆಫ್ ಕೊಲಂಬಸ್ ಸಂಸ್ಥಾಪಕರಾದ ಧನ್ಯ ಮೈಕೆಲ್ ಮೆಕ್‌ಗಿವ್ನಿರವರು ಆರಂಭಿಸಿದ ಧ್ಯೇಯವನ್ನು ಸಂಸ್ಥೆ ಮುಂದುವರಿಸಿಕೊಂಡು ಬರುತ್ತಿರುವುದನ್ನು ಜಗದ್ಗುರು ಲಿಯೋರವರು ಪ್ರಶಂಸಿಸಿದರು.
ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಸಂಸ್ಥೆಯು “ಗರ್ಭದಲ್ಲಿರುವ ಶಿಶುಗಳಿಗೆ, ಗರ್ಭಿಣಿ ತಾಯಂದಿರಿಗೆ, ಹಿಂಸೆಗೆ ಒಳಗಾಗುತ್ತಿರುವ ಕ್ರೈಸ್ತರಿಗೆ, ಯುದ್ಧ ಮತ್ತು ಮಾನವ ಕಳ್ಳಸಾಗಣೆಯ ಬಲಿಪಶುಗಳಿಗೆ, ಬಡವರು ಮತ್ತು ದುರ್ಬಲರಿಗೆ ಹಾಗೂ ಸಮಾಜದ ಅಂಚಿನಲ್ಲಿ ಬದುಕುತ್ತಿರುವವರಿಗೆ” ಕ್ರಿಸ್ತನ ಪ್ರೀತಿಯನ್ನು ತೋರಿಸಲು ಶ್ರಮಿಸುತ್ತಿದೆ ಎಂದು ಅವರು ಗಮನಿಸಿದರು.
ಸ್ಥಳೀಯ ಕೌನ್ಸಿಲ್‌ಗಳು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಉಪಕ್ರಮಗಳ ಮೂಲಕ, “ಅಸಂಖ್ಯಾತ ಜನರು” ಸಂಸ್ಥೆಯ ಉದಾರತೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು.
“ನನ್ನ ಪರವಾಗಿ ಹೇಳುವುದಾದರೆ, ಕಡಿಮೆ ಸೌಲಭ್ಯ ಹೊಂದಿರುವವರಿಗಾಗಿ ನಿಮ್ಮ ಸಂಸ್ಥೆ ನಿರಂತರವಾಗಿ ತೋರುತ್ತಿರುವ ಉದಾರತೆಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಪ್ರಯತ್ನಗಳು ಇನ್ನೂ ಅನೇಕ ವರ್ಷಗಳವರೆಗೆ ಫಲಪ್ರದವಾಗುತ್ತಲೇ ಇರುತ್ತವೆ ಎಂಬ ವಿಶ್ವಾಸ ನನಗಿದೆ,” ಎಂದು ಜಗದ್ಗುರುಗಳು ಹೇಳಿದರು.
ತಮ್ಮ ಸಂದೇಶದ ಕೊನೆಯಲ್ಲಿ, ಸುಪ್ರೀಂ ಸಮಾವೇಶದ ಕಾರ್ಯಗಳನ್ನು ಧರ್ಮ ಸಭೆಯ ತಾಯಿ ಮೇರಿ ಮತ್ತು ಧನ್ಯ ಮೈಕೆಲ್ ಮೆಕ್‌ಗಿವ್ನಿರವರ ಮಧ್ಯಸ್ಥಿಕೆಗೆ ಜಗದ್ಗುರು ಲಿಯೋರವರು ಒಪ್ಪಿಸಿದರು. ಬಳಿಕ ನೈಟ್ಸ್ ಆಫ್ ಕೊಲಂಬಸ್‌ನ ಎಲ್ಲ ಸದಸ್ಯರು ಮತ್ತು ಅವರ ಕುಟುಂಬಗಳ ಮೇಲೆ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.
