ಹುಡುಕಿ

ಆರ್ಚ್ಬಿಷಪ್ ಅರ್ನಾಲ್ಡೊ ಕ್ಯಾಟಲಾನ್, ರುವಾಂಡಾದ ಪ್ರೇಷಿತರ ರಾಯಭಾರಿ, ಜಗದ್ಗುರುಗಳ ಸಂದೇಶವನ್ನು ಓದುತ್ತಾರೆ. ಆರ್ಚ್ಬಿಷಪ್ ಅರ್ನಾಲ್ಡೊ ಕ್ಯಾಟಲಾನ್, ರುವಾಂಡಾದ ಪ್ರೇಷಿತರ ರಾಯಭಾರಿ, ಜಗದ್ಗುರುಗಳ ಸಂದೇಶವನ್ನು ಓದುತ್ತಾರೆ. 

ಜಗದ್ಗುರುಗಳು: ಡಿಜಿಟಲ್ ಸಂವಹನವು ಸತ್ಯ ಮತ್ತು ಮಾನವ ಘನತೆಗೆ ಸೇವೆ ಸಲ್ಲಿಸಬೇಕು

ಕಿಗಾಲಿಯಲ್ಲಿ ನಡೆಯುತ್ತಿರುವ SIGNIS ವಿಶ್ವ ಸಮ್ಮೇಳನದಲ್ಲಿ ಸಮಾವೇಶಗೊಂಡಿರುವ ಕಥೋಲಿಕ ಸಂವಹನಕಾರರಿಗೆ ಜಗದ್ಗುರು XIVನೇ ಲಿಯೋರವರು, ಸತ್ಯ, ಮಾನವ ಘನತೆ, ಶಾಂತಿ ಮತ್ತು ಸೃಷ್ಟಿಯ ಸಂರಕ್ಷಣೆಯಲ್ಲಿ ಬೇರೂರಿರುವ ಡಿಜಿಟಲ್ ಸಂವಹನವನ್ನು ಉತ್ತೇಜಿಸುವಂತೆ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರುಗಳು ಕಥೋಲಿಕ ಸಂವಹನಕಾರರಿಗೆ, ಸತ್ಯದ ಅನ್ವೇಷಣೆ ಮತ್ತು ಮಾನವ ಘನತೆಯ ಗೌರವದಿಂದ ಪ್ರೇರಿತವಾದ ಡಿಜಿಟಲ್ ಸಾಧನಗಳು ಹಾಗೂ ಕಾರ್ಯತಂತ್ರಗಳನ್ನು ಉತ್ತೇಜಿಸುವಂತೆ ಕರೆ ನೀಡಿದ್ದಾರೆ.

ಪ್ರಸ್ತುತ ರುವಾಂಡಾದ ಕಿಗಾಲಿಯಲ್ಲಿ ನಡೆಯುತ್ತಿರುವ SIGNIS ವಿಶ್ವ ಸಮ್ಮೇಳನದ ಭಾಗವಹಿಸುವವರನ್ನುದ್ದೇಶಿಸಿ ಕಳುಹಿಸಿದ ಸಂದೇಶದಲ್ಲಿ ಜಗದ್ಗುರುಗಳು ಈ ಮನವಿಯನ್ನು ಮಾಡಿದ್ದಾರೆ. ಜಗದ್ಗುರುಗಳ ಪರವಾಗಿ ಈ ಸಂದೇಶಕ್ಕೆ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಸಹಿ ಹಾಕಿದ್ದಾರೆ.

ಜಗದ್ಗುರುಗಳು ಸಮ್ಮೇಳನದಲ್ಲಿ ಸಮಾವೇಶಗೊಂಡಿರುವ ಎಲ್ಲರಿಗೂ ಆತ್ಮೀಯ ಶುಭಾಶಯಗಳನ್ನು ಕಳುಹಿಸಿ, ತಮ್ಮ ಆಧ್ಯಾತ್ಮಿಕ ಸಾನ್ನಿಧ್ಯವನ್ನು ಅವರಿಗೆ ಭರವಸೆ ನೀಡಿದರು. ಸಂವಹನ ವೇದಿಕೆಗಳು ಇಡೀ ಮಾನವ ಕುಟುಂಬದ ಸಾಮಾನ್ಯ ಒಳಿತನ್ನು ಮುನ್ನಡೆಸುವಂತೆ ಮಾಡುವ ಪ್ರಯತ್ನಗಳಿಗೆ ತಮ್ಮ ಚರ್ಚೆಗಳು “ಹೊಸ ವೇಗ”ವನ್ನು ನೀಡಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಂಸ್ಕೃತಿ ಮತ್ತು ಮನಸ್ಸಾಕ್ಷಿಯನ್ನು ರೂಪಿಸುವುದು

ಡಿಜಿಟಲ್ ಯುಗದ ವಾಸ್ತವಿಕತೆಗಳನ್ನು ಕುರಿತು ಚಿಂತಿಸುವ ಸಂದೇಶವು, ಇಂದಿನ ಜೀವನದ ಬಹುಪಾಲು ಈಗ ಡಿಜಿಟಲ್ ತಂತ್ರಜ್ಞಾನ ಮತ್ತು ಅಂತರ್ಜಾಲದಿಂದ ಪ್ರಭಾವಿತವಾಗಿದೆ ಎಂಬುದನ್ನು ಸೂಚಿಸುತ್ತದೆ.

ತಮ್ಮ “ಭವ್ಯ ಮಾನವೀಯತೆ” ಎಂಬ ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, ಆನ್‌ಲೈನ್ ಸಂವಹನವು ಕೇವಲ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಸಾಧನವಲ್ಲ ಎಂದು ಸ್ಮರಿಸಿದರು. ಅದು ಸಂಸ್ಕೃತಿಯನ್ನು ನಿರ್ಮಿಸುವುದರ ಜೊತೆಗೆ, ಜನರು ಜಗತ್ತನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ರೂಪಿಸುತ್ತದೆ ಮತ್ತು ಸಾಮೂಹಿಕ ಮನಸ್ಸಾಕ್ಷಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ.

ಈ ಹಿನ್ನೆಲೆಯಲ್ಲಿ, “ಸಾಂಸ್ಕೃತಿಕ ಸಾಮರಸ್ಯ ಮತ್ತು ಪರಿಸರದ ಸುಸ್ಥಿತಿಗಾಗಿ ಡಿಜಿಟಲ್ ಸಂವಹನ” ಎಂಬ ಸಮ್ಮೇಳನದ ವಿಷಯವನ್ನು ಮುಂದುವರಿಸಲು ಪ್ರಾಯೋಗಿಕ ಮಾರ್ಗಗಳನ್ನು ಅನ್ವೇಷಿಸುವಂತೆ ಪವಿತ್ರ ಪಿತಾಮಹರು ಭಾಗವಹಿಸುವವರನ್ನು ಪ್ರೋತ್ಸಾಹಿಸಿದರು.

ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಗೌರವದಲ್ಲಿ ಬೇರೂರಿರುವ ಮತ್ತು ಸತ್ಯದಿಂದ ಮಾರ್ಗದರ್ಶಿಸಲ್ಪಡುವ ಸಂವಹನ ಕಾರ್ಯತಂತ್ರಗಳು ಹಾಗೂ ಸಾಧನಗಳಿಗೆ ತಮ್ಮ ಚಿಂತನೆಗಳು ದಾರಿ ಮಾಡಿಕೊಡಲಿ ಎಂದು ಅವರು ಆಶಿಸಿದರು.

ಸಹಭಾಗಿತ್ವ, ಶಾಂತಿ ಮತ್ತು ಸೃಷ್ಟಿಯ ಸಂರಕ್ಷಣೆ

ಇಂತಹ ವಿಧಾನವು ಸಹಭಾಗಿತ್ವ ಮತ್ತು ಶಾಂತಿಯ ಸುವಾರ್ತಾ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಂಸ್ಕೃತಿಯನ್ನು ನಿರ್ಮಿಸಲು ನೆರವಾಗಬಹುದು. ಅದೇ ವೇಳೆ, ಪರಿಸರದ ಬಗ್ಗೆ ಜವಾಬ್ದಾರಿಯುತವಾದ ಸಂರಕ್ಷಣಾ ಮನೋಭಾವವನ್ನು ಬೆಳೆಸಲು ಸಹ ಇದು ಪ್ರೇರಣೆ ನೀಡಬಹುದು ಎಂದು ಸಂದೇಶದಲ್ಲಿ ಮುಂದುವರಿಸಲಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸಿರುವ ಎಲ್ಲರನ್ನೂ ಧಮ೯ಸಭೆಯ ತಾಯಿ ಮೇರಿ ಅವರ ಮಧ್ಯಸ್ಥಿಕೆಗೆ ಜಗದ್ಗುರು ಲಿಯೋರವರು ಒಪ್ಪಿಸಿದರು. ಅವರ ಕಾರ್ಯವು ಶಾಶ್ವತ ಫಲವನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಭರವಸೆ ನೀಡಿದರು.

ಕೊನೆಯಲ್ಲಿ, “ಪ್ರಭುವಿನಲ್ಲಿ ಜ್ಞಾನ ಮತ್ತು ಶಕ್ತಿಯ” ಭರವಸೆಯಾಗಿ ತಮ್ಮ ಪ್ರೇಷಿತರ ಆಶೀರ್ವಾದವನ್ನು ಜಗದ್ಗುರುಗಳು ನೀಡಿದರು.

04 ಆಗಸ್ಟ್ 2026, 20:37