ಹೊಣೆಗಾರಿಕೆಯ ಸಮಯ.
ವ್ಯಾಟಿಕನ್ ವರದಿ
“ಮನಸ್ಸುಗಳನ್ನು, ಮಾತುಗಳನ್ನು ಮತ್ತು ರಾಷ್ಟ್ರಗಳನ್ನು ಮರುಶಸ್ತ್ರೀಕರಣದತ್ತ ಕೊಂಡೊಯ್ಯುವ ಸುಳ್ಳು ವಾಸ್ತವಿಕತೆಯ ವಿರುದ್ಧ, ಇಂದು ಕಥೋಲಿಕ ಸಂಸ್ಕೃತಿಯು ಕರುಣೆಯ ನೈಜ ವಾಸ್ತವಿಕತೆಯನ್ನು ಮುಂದಿಡಬೇಕು. ಅಲ್ಲಿ ಯಾರೂ ಶತ್ರುಗಳಾಗಿರಲು ಸಾಧ್ಯವಿಲ್ಲ ಪ್ರತಿಯೊಬ್ಬರೂ ನಮ್ಮ ವಿರೋಧಿಗಳೂ ಸಹ ಕಣ್ಣಿಗೆ ಕಣ್ಣಿಟ್ಟು ಸತ್ಯದಲ್ಲಿ ಭೇಟಿಯಾಗಬೇಕಾದ ಸಹೋದರರು ಮತ್ತು ಸಹೋದರಿಯರು.”
ರಿಮಿನಿ ಸಭೆಯಲ್ಲಿ ಭಾಗವಹಿಸಿದ್ದವರನ್ನುದ್ದೇಶಿಸಿ, ವಿಶೇಷವಾಗಿ ಬೇಸಿಗೆಯ ಅಂತ್ಯದ ಈ ಮಹತ್ವದ ಸಮಾವೇಶಕ್ಕೆ ಜೀವ ತುಂಬುತ್ತಿರುವ ಸಾವಿರಾರು ಯುವಜನರನ್ನು ಉದ್ದೇಶಿಸಿ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ಹೇಳಿದರು. ಕಮ್ಯುನಿಯನ್ ಅಂಡ್ ಲಿಬರೇಶನ್ ಚಳವಳಿಯ ಅನುಭವದಿಂದ ಹುಟ್ಟಿಕೊಂಡಿರುವ ಈ ಸಭೆಯಲ್ಲಿ ಜಗದ್ಗುರುಗಳು ಆಡಿದ ಮಾತುಗಳು ಕೇವಲ ಸಂದರ್ಭಕ್ಕೆ ತಕ್ಕ ಮಾತುಗಳಾಗಿರಲಿಲ್ಲ, ಅವು ಒಂದು ಸ್ಪಷ್ಟವಾದ ಆಹ್ವಾನವಾಗಿದ್ದವು ಎಲ್ಲಕ್ಕಿಂತ ಮುಖ್ಯವಾಗಿ, ನಾವು ಇಂದು ಬದುಕುತ್ತಿರುವ ವಾಸ್ತವಿಕತೆಯನ್ನು ಎದುರುನೋಡುವ ಆಹ್ವಾನ.
ಈಗಾಗಲೇ 44 ವರ್ಷಗಳ ಹಿಂದೆ, ಸಂತ ದ್ವಿತೀಯ ಜಾನ್ ಪಾಲ್ ರವರು ರಿಮಿನಿ ಸಭೆಯಲ್ಲಿ ಮಾತನಾಡುವಾಗ, ತಾವೇ “ಜಗತ್ತಿನ ಇತಿಹಾಸದ ನಾಟಕೀಯ ಕ್ಷಣಗಳು” ಎಂದು ಕರೆದಿದ್ದ ಸಂದರ್ಭದಲ್ಲಿ “ಭೇಟಿ” ಮತ್ತು “ಜನರ ನಡುವಿನ ಸ್ನೇಹ”ದಂತಹ ಪದಗಳ ಸೌಂದರ್ಯವನ್ನು ಒತ್ತಿಹೇಳಿದ್ದರು. ಇಂದು ಅಂತರರಾಷ್ಟ್ರೀಯ ಪರಿಸ್ಥಿತಿ ಅಂದಿಗಿಂತಲೂ ಹೆಚ್ಚು ಅನಿಶ್ಚಿತ ಮತ್ತು ಅಪಾಯಕಾರಿಯಾಗಿದೆ ಹೆಚ್ಚುತ್ತಿರುವ ಸಂಘರ್ಷಗಳು, ನಾಗರಿಕರು ಮತ್ತು ಮಕ್ಕಳ ನಿರಂತರ ಹತ್ಯಾಕಾಂಡಗಳು ಗಾಜಾ ಮತ್ತು ಉಕ್ರೇನ್‌ನ್ನು ನೆನಪಿಸಿಕೊಂಡರೆ ಸಾಕು ಮತ್ತು ಅನೇಕ ರಾಷ್ಟ್ರಗಳು ತಮ್ಮ ಮರುಶಸ್ತ್ರೀಕರಣಕ್ಕಾಗಿ ಇನ್ನಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಿವೆ. ಈ ಎಲ್ಲದರ ನಡುವೆ, ರಿಮಿನಿ ಸಭೆಯ ಕರೆಯನ್ನು ಜಗದ್ಗುರುಗಳು ನೆನಪಿಸಿದರು. ಈ ಸಭೆ “ಒಂದು ರೀತಿಯ ಪ್ರತ್ಯೇಕ ದ್ವೀಪ”ವಾಗಿರದೆ, ಭೇಟಿಗಳು ಮತ್ತು ಸಂವಾದಗಳ “ಸಂಗಮಸ್ಥಳ”ವಾಗಿರಬೇಕು. ಇದೇ ಹೊಣೆಗಾರಿಕೆಯ ಸಮಯ ಎಂದು ಜಗದ್ಗುರು ಲಿಯೋರವರು ಹೇಳಿದರು.
ಇಂದು ಕ್ರಿಸ್ತನನ್ನು ಅನುಸರಿಸುವುದು ಎಂದರೆ, ಇಪ್ಪತ್ತನೇ ಶತಮಾನದ ದುರಂತಗಳ ನಂತರ, ಕೆಟ್ಟದ್ದನ್ನು ಕೆಟ್ಟದ್ದರಿಂದ ಎದುರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು. ಏಕೈಕ ಉತ್ತರ ಕ್ರೈಸ್ತರ ಉತ್ತರ—ಪ್ರೀತಿ. ಶಿಲುಬೆಗೇರಿಸಲ್ಪಟ್ಟ ಮೆಸ್ಸೀಯನಲ್ಲಿ ವ್ಯಕ್ತವಾದ “ವಿಮೋಚನೆಯ ಮಾರ್ಗ”ವೇ ಅದು. ಆದ್ದರಿಂದ, ಇಂದು ತಾವು “ವಾಸ್ತವಿಕತೆ”ಯ ಹೆಸರಿನಲ್ಲಿ ಜಗದ್ಗುರುಗಳು ಹಿಂಜರಿಯದೆ ಅದನ್ನು “ಸುಳ್ಳು ವಾಸ್ತವಿಕತೆ” ಎಂದು ಕರೆದರು ಮನಸ್ಸುಗಳು, ಮಾತುಗಳು ಮತ್ತು ರಾಷ್ಟ್ರಗಳನ್ನು ಮರುಶಸ್ತ್ರೀಕರಣದತ್ತ ಕೊಂಡೊಯ್ಯುವವರ ವಿರುದ್ಧ ಕಥೋಲಿಕ ಸಂಸ್ಕೃತಿಯು ನೈಜ ವಾಸ್ತವಿಕತೆಯನ್ನು, ಅಂದರೆ ಕರುಣೆಯ ವಾಸ್ತವಿಕತೆಯನ್ನು, ಮುಂದಿಡಬೇಕು. ಆ ವಾಸ್ತವಿಕತೆಯಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಯೊಬ್ಬರೂ, ನಮ್ಮ ವಿರೋಧಿಗಳೂ ಸಹ, ಕಣ್ಣಿಗೆ ಕಣ್ಣಿಟ್ಟು ಸತ್ಯದಲ್ಲಿ ಭೇಟಿಯಾಗಬೇಕಾದ ಸಹೋದರರು ಮತ್ತು ಸಹೋದರಿಯರು.
ಆದ್ದರಿಂದ, ಮಾನವರ ನಡುವಿನ ಸಹಬಾಳ್ವೆಯನ್ನು ಅನುಮಾನದಿಂದ ಮುಕ್ತಗೊಳಿಸಲು, ಕೆಲಸವನ್ನು ಲಾಭದ ಆರಾಧನೆಯಿಂದ, ಹಾಗೂ ತಂತ್ರಜ್ಞಾನ ಮತ್ತು ಹಣಕಾಸನ್ನು ಮರಣದ ವ್ಯವಹಾರದಿಂದ ಮುಕ್ತಗೊಳಿಸಲು ಧೈರ್ಯದಿಂದ ಕಾರ್ಯನಿರ್ವಹಿಸುವ ಮುಂಚೂಣಿಗಾರರ ಅಗತ್ಯವಿದೆ. ಬಡತನ ಮತ್ತು ಅಸಮಾನತೆ, ಯುದ್ಧ ಹಾಗೂ ಪರಿಸರ ದುರಂತಗಳ “ಮೂಲದಲ್ಲಿರುವ ಅನ್ಯಾಯದ ಅಧಿಕಾರ ಸಂಬಂಧಗಳನ್ನು” ಬಹಿರಂಗಪಡಿಸುವಂತೆ ಜಗದ್ಗುರು ಲಿಯೋರವರು ಕರೆ ನೀಡಿದರು. ತಮ್ಮ ಪಾಂಟಿಫಿಕೇಟ್‌ನ ಮೊದಲ ದಿನದಿಂದಲೇ “ಶಸ್ತ್ರರಹಿತ ಮತ್ತು ನಿರಸ್ತ್ರೀಕರಣಗೊಳಿಸುವ ಶಾಂತಿ”ಯ ಕುರಿತು ಮಾತನಾಡುತ್ತಿರುವ ಪೇತ್ರನ ಉತ್ತರಾಧಿಕಾರಿಯ ಈ ಕರೆ ಅತ್ಯಂತ ಗಂಭೀರವಾದದ್ದು. ಆದ್ದರಿಂದ, ಕಥೋಲಿಕ ಸಾಮಾನ್ಯ ಭಕ್ತರ ಸಾಮಾಜಿಕ ಹಾಗೂ ರಾಜಕೀಯ ತೊಡಗಿಸಿಕೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡುವ ಪ್ರಮುಖ ಮಾನದಂಡವಾಗಿ ಇದನ್ನು ಪರಿಗಣಿಸಬೇಕು.
ಸಭೆಯ ಜನರು ಅಪಾಯವನ್ನು ಸ್ವೀಕರಿಸಿ, ತಮ್ಮನ್ನು ತಾವು ಪಣಕ್ಕಿಡಬೇಕು, ಮತ್ತು “ಅತಿಯಾದ ಸೀಮಿತವಾದ ಸೇರಿದ ಭಾವನೆಯನ್ನು ಮೀರಿ ತಮ್ಮ ಸಂಬಂಧಗಳನ್ನು ವಿಸ್ತರಿಸಬೇಕು” ಎಂದು ಜಗದ್ಗುರುಗಳು ನೀಡಿದ ಆಹ್ವಾನವೂ ವಿಶೇಷವಾಗಿ ಮಹತ್ವದ್ದಾಗಿದೆ. ಕಮ್ಯುನಿಯನ್ ಅಂಡ್ ಲಿಬರೇಶನ್ ಚಳವಳಿಗೆ ಸೇರಿದ ಗುಂಪುಗಳು ಮತ್ತು ಸಮುದಾಯಗಳು ಸಂಪೂರ್ಣ ವಾಸ್ತವಿಕತೆಯೊಳಗೆ ಧುಮುಕಲು ಒಂದು “ವಸಂತಪೀಠ”ದಂತಾಗಬೇಕು. ವಿಭಿನ್ನ ಸಂಸ್ಕೃತಿಗಳು, ಮನೋಭಾವಗಳು ಮತ್ತು ಹಿನ್ನೆಲೆಗಳ ಸಹೋದರ ಸಹೋದರಿಯರಿಂದ, ವಿಶೇಷವಾಗಿ ಅತ್ಯಂತ ಬಡವರಿಂದ, ತಮ್ಮನ್ನು ದೂರಮಾಡುವ ಯಾವುದೇ ಮನೋಭಾವವನ್ನು ಅವರು ತಿರಸ್ಕರಿಸಬೇಕು.
ಕೊನೆಯದಾಗಿ, ಪ್ರೀತಿಯಲ್ಲಿ ಯಾವುದೇ ಬಲವಂತ, ಬೋಧನೆ ಹೇರಿಕೆ ಅಥವಾ ಜನರನ್ನು ಸೆಳೆಯುವ ಉದ್ದೇಶಪೂರ್ವಕ ಪ್ರಯತ್ನಕ್ಕೆ ಸ್ಥಾನವಿಲ್ಲ ಎಂಬ ಜಗದ್ಗುರುಗಳು ನೆನಪಿಸುವಿಕೆಯನ್ನು ಒತ್ತಿಹೇಳುವುದು ಅಗತ್ಯ. ಏಕೆಂದರೆ ಪ್ರೀತಿ ಇರುವುದು ಸ್ವಾತಂತ್ರ್ಯದಲ್ಲಿ, ಜೀವಂತವಾದ ನೈಜ ಭೇಟಿಯಲ್ಲಿ ಮತ್ತು ತನ್ನನ್ನೇ ಉದಾರವಾಗಿ ಸಮರ್ಪಿಸಿಕೊಳ್ಳುವುದರಲ್ಲಿ ಮಾತ್ರ ಎಂದು ಹೇಳಿದರು.
