Pope Leo XIV visits Rimini

‘ಬ್ಲೂ ಲೂ’ ಮರಿನಿ: ಬ್ಲೂಸ್ ಸಂಗೀತ, ಸಹೋದರತ್ವ ಮತ್ತು ಕುಟುಂಬದ ಪರಂಪರೆ.

ರಿಮಿನಿ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರಿಗೆ ಚಿತ್ರದ ಪ್ರಸಿದ್ಧ ರೇ-ಬ್ಯಾನ್ ಸನ್‌ಗ್ಲಾಸ್‌ಗಳ ಜೋಡಿಯನ್ನು ಉಡುಗೊರೆಯಾಗಿ ನೀಡುವ ಮೊದಲು, ‘ಬ್ಲೂ ಲೂ’ ಮರಿನಿ ಸಂಗೀತ, ಕುಟುಂಬ ಮತ್ತು ‘ದಿ ಬ್ಲೂಸ್ ಬ್ರದರ್ಸ್’ ಚಿತ್ರದ ಕುರಿತು ತಮ್ಮ ನೆನಪುಗಳು ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.

ವ್ಯಾಟಿಕನ್ ವರದಿ

‘ಬ್ಲೂ ಲೂ’ ಮರಿನಿ ತಮ್ಮ ಪತ್ನಿ ಕಾರ್ಮೆನ್ ಅವರೊಂದಿಗೆ ರಿಮಿನಿ ಸಭೆಯಲ್ಲಿರುವ ವ್ಯಾಟಿಕನ್ ರೇಡಿಯೋ ಸ್ಟುಡಿಯೋಗೆ ಆಗಮಿಸುತ್ತಾರೆ. ಅವರ ಕೈಯಲ್ಲಿ ರೇ-ಬ್ಯಾನ್ ಕನ್ನಡಕದ ಕೇಸ್ ಇದೆ. ಆದರೆ ಅದರೊಳಗಿರುವ ಕನ್ನಡಕ ಅವರಿಗಾಗಿ ಅಲ್ಲ. “ಇವು ಜಗದ್ಗುರುಗಳಿಗಾಗಿ,” ಎಂದು ಅವರು ಹೇಳುತ್ತಾರೆ. ಅವುಗಳ ಮೇಲೆ “ಪಾಪಾ ಕೂಲ್” ಎಂಬ ಪದಗಳನ್ನು ಕೆತ್ತಿಸಲು ಸಮಯ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರು ಹೇಳುತ್ತಾರೆ.

ಇದು ಚಿಕಾಗೋದಲ್ಲಿ ಯುವ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರ ಛಾಯಾಚಿತ್ರದಲ್ಲಿ ಕಾಣುವ ಅದೇ ಮಾದರಿಯ ಕನ್ನಡಕ. ಆಗ ಭವಿಷ್ಯದ ಜಗದ್ಗುರುಗಳು ಇನ್ನೂ ಗುರುವಿದ್ಯಾಥಿ೯ ಮಂದಿರದ ವಿದ್ಯಾರ್ಥಿಯಾಗಿದ್ದರು. ಆ ಚಿತ್ರದಲ್ಲಿ ಅವರು ‘ದಿ ಬ್ಲೂಸ್ ಬ್ರದರ್ಸ್’ ಚಿತ್ರದ ಪಾತ್ರವೊಂದರಂತೆ ಕಪ್ಪು ಸೂಟ್, ಕಪ್ಪು ಟೋಪಿ ಮತ್ತು ಸನ್‌ಗ್ಲಾಸ್ ಧರಿಸಿದ್ದರು. ಲೂ ಅವರು ಎಂದಾದರೂ ಜಗದ್ಗುರುಗಳಂತೆ ವೇಷ ಧರಿಸಿದ್ದಾರೆಯೇ ಎಂದು ನಾವು ಕೇಳುವುದಿಲ್ಲ; ಅಥವಾ ಜಗದ್ಗುರು ಲಿಯೋರವರು ಲೂ ರವರನ್ನು ಭೇಟಿಯಾಗಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನೂ ಕೇಳುವುದಿಲ್ಲ. ಆದರೆ ನಮ್ಮ ಬಳಿ ಆ ಛಾಯಾಚಿತ್ರವಿದೆ, ಮತ್ತು ಲೂ ರವರ ಮಾತುಗಳೂ ಇವೆ.

ಜಗದ್ಗುರುಡಳು ಆಗಮಿಸುವುದನ್ನು ಕಾಯುತ್ತಾ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮರಿನಿ, 1980ರಲ್ಲಿ ಬಿಡುಗಡೆಯಾದ ‘ದಿ ಬ್ಲೂಸ್ ಬ್ರದರ್ಸ್’ ಚಿತ್ರದ ಚಿತ್ರೀಕರಣದ ಅನುಭವಗಳನ್ನು ಹಾಗೂ ಅದರ ನಂತರ ಸಾಗಿದ ತಮ್ಮ ಅದ್ಭುತ ಸಂಗೀತಯಾನದ ನೆನಪುಗಳನ್ನು ಹಂಚಿಕೊಂಡರು. ಆ ಪ್ರಯಾಣದ ಅವಧಿಯಲ್ಲೇ ಅವರು ಕಾರ್ಮೆನ್ ರವರನ್ನು ಭೇಟಿಯಾದರು. “ಅವಳು ನನ್ನ ಜೀವನದ ಅತ್ಯುತ್ತಮ ಭಾಗ,” ಎಂದು ಅವರು ಹೇಳುತ್ತಾರೆ. “ಅವಳನ್ನು ಭೇಟಿಯಾದ ನಂತರ ಎಲ್ಲವೂ ಇನ್ನಷ್ಟು ಉತ್ತಮವಾಗುತ್ತಲೇ ಹೋಯಿತು.”

ಆದರೆ ‘ದಿ ಬ್ಲೂಸ್ ಬ್ರದರ್ಸ್’ ಚಿತ್ರವೇ ಲೂ ಮರಿನಿ ಅವರ ಸಂಪೂರ್ಣ ಪರಿಚಯವಲ್ಲ. ತಮ್ಮ ದೀರ್ಘ ವೃತ್ತಿಜೀವನದಲ್ಲಿ ಈ ಸ್ಯಾಕ್ಸೋಫೋನ್ ವಾದಕರು ನಮ್ಮ ಕಾಲದ ಅನೇಕ ಶ್ರೇಷ್ಠ ಸಂಗೀತಗಾರರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. “ಅವರೆಲ್ಲರೂ ನನ್ನ ಗುರುಗಳಾಗಿದ್ದರು,” ಎಂದು ಅವರು ಹೇಳುತ್ತಾರೆ.

ಆದರೆ ಅವರ ಅತ್ಯಂತ ಶ್ರೇಷ್ಠ ಗುರು ಬೇರೆಯವರೇ ಆಗಿದ್ದರು ನಮ್ಮಲ್ಲಿ ಬಹುತೇಕರು ಲೂ ರವರ ನೆನಪುಗಳ ಮೂಲಕ, ಮತ್ತು ಸ್ವಲ್ಪ ಮಟ್ಟಿಗೆ ಅವರ ಸಂಗೀತದ ಮೂಲಕ ಮಾತ್ರ ಪರಿಚಯಿಸಿಕೊಂಡಿರುವ ವ್ಯಕ್ತಿ: ಅವರ ತಂದೆ. ತಮ್ಮ ತಂದೆಯೇ ತನ್ನ ಅತ್ಯಂತ ಶ್ರೇಷ್ಠ ಗುರು ಎಂದು ಲೂ ರವರು ವಿವರಿಸುತ್ತಾರೆ. ತಾನು ಹತ್ತು ವರ್ಷದವನಾಗಿದ್ದಾಗ ಮೊದಲ ಕ್ಲಾರಿನೆಟ್ ಅನ್ನು ನೀಡಿದವರು ಅವರೇ; ಅದನ್ನು ಹೇಗೆ ನುಡಿಸಬೇಕು ಎಂದು ಕಲಿಸಿದವರೂ, ತಾನು ಬೆಳೆದುಬರುತ್ತಿದ್ದಾಗ ತನ್ನೊಂದಿಗೆ ಸಂಗೀತಯಾನದಲ್ಲಿ ಹೆಜ್ಜೆ ಹಾಕಿದವರೂ ಅವರೇ. ಮತ್ತೊಂದೆಡೆ, ತಮ್ಮ ತಾಯಿಯೊಂದಿಗೆ ತಾವು ಮನಸಾರೆ ಹಾಡುತ್ತಿದ್ದೆ ಎಂದು ಅವರು ಹೇಳುತ್ತಾರೆ.

ಹೀಗಾಗಿ, ತಮ್ಮ ಜೀವನದ ಯಾವುದೇ ಒಂದು ಕ್ಷಣಕ್ಕೆ ಮತ್ತೆ ತೆರಳಿ, ಇನ್ನೊಂದು ಹಾಡನ್ನು ಯಾರೊಂದಿಗಾದರೂ ನುಡಿಸುವ ಅವಕಾಶ ದೊರೆತರೆ ಎಲ್ಲಿಗೆ ಹೋಗುತ್ತೀರಿ, ಯಾರೊಂದಿಗೆ ನುಡಿಸುತ್ತೀರಿ? ಎಂದು ಲೂ ರವರನ್ನು ಕೇಳಿದಾಗ, ಅವರ ಉತ್ತರ ಮತ್ತೆ ಅವರ ತಂದೆಯ ಬಳಿಯೇ ಮರಳುತ್ತದೆ.

ಬ್ಲೂಸ್ ಬ್ರದರ್ಸ್‌ನ ಸಹೋದರ

ನಂತರ, ಸಂತ ಆಗಸ್ಟಿನ್ ರವರಿಗೆ ಸಮರ್ಪಿತವಾದ ಪ್ರದರ್ಶನವನ್ನು ವೀಕ್ಷಿಸಲು ರಿಮಿನಿ ಸಭೆಯ ಪೆವಿಲಿಯನ್ C2ರ ದಾರಿಯಲ್ಲಿ ಜಗದ್ಗುರು ಲಿಯೋರವರು ನಡೆದು ಹೋಗುತ್ತಿದ್ದರು. ವ್ಯಾಟಿಕನ್ ನ್ಯೂಸ್‌ನ ಬೂತ್‌ ಕಡೆ ನೋಡಿದ ಅವರು, ಲೂ ರವರಿಗೆ ತಾನು ಮರಳಿ ಬರುವುದಾಗಿ ಸನ್ನೆ ಮಾಡಿದರು. ಮತ್ತು ಅವರು ನಿಜವಾಗಿಯೂ ಮರಳಿದರು.

ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಜಗದ್ಗುರುಗಳು ಲೂ ಮತ್ತು ಕಾರ್ಮೆನ್ ರವರನ್ನು ಭೇಟಿಯಾಗಲು ಹಿಂದಿರುಗಿದರು. ವಿನಿಮಯವೂ ಸರಳವಾಗಿತ್ತು, ‘ಬ್ಲೂಸ್ ಬ್ರದರ್ಸ್’ನ ರೇ-ಬ್ಯಾನ್ ಸನ್‌ಗ್ಲಾಸ್‌ಗಳ ಜೋಡಿಗೆ ಎರಡು ಜಪಮಾಲೆಗಳು ವರ್ಷಗಳ ಹಿಂದೆ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಧರಿಸಿದ್ದ ಅದೇ ರೀತಿಯ ಕನ್ನಡಕ. ಇದನ್ನು ಕಂಡು ಜಗದ್ಗುರುಗಳು ನಕ್ಕರು.

ಬ್ಲೂಸ್ ಸಂಗೀತ ಮತ್ತು ಅದರ ‘ಬ್ರದರ್ಸ್’ ತಮ್ಮ ಸಂಗೀತ, ಹಾಸ್ಯ ಹಾಗೂ ವಿಶಿಷ್ಟ ರೂಪದ ಮೂಲಕ ತಲೆಮಾರುಗಳ ಜನರಿಗೆ ಸಂತೋಷವನ್ನು ನೀಡಿದ್ದಾರೆ. ಕಾರು ಬೆನ್ನಟ್ಟುವ ದೃಶ್ಯಗಳು ಮತ್ತು ಹಾಸ್ಯದ ಆಚೆಗೆ ನೋಡಿದರೆ, ‘ದಿ ಬ್ಲೂಸ್ ಬ್ರದರ್ಸ್’ ನಿಜಕ್ಕೂ “ಬಹಳ ಹೃದಯಸ್ಪರ್ಶಿಯಾದ ಚಿತ್ರ” ಎಂದು ಮರಿನಿ ನೆನಪಿಸಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ಆ ಚಿತ್ರವನ್ನು ನೋಡಿರದ ಅವರು, ಕೆಲವೇ ತಿಂಗಳುಗಳ ಹಿಂದೆ ಕಾರ್ಮೆನ್ ರವರೊಂದಿಗೆ ಮತ್ತೊಮ್ಮೆ ಚಿತ್ರವನ್ನು ವೀಕ್ಷಿಸಿದ್ದರು.

ಜೀವನದ ಪಯಣದಲ್ಲಿ ನಮ್ಮೊಂದಿಗೆ ಸಾಗುವ ಸಂಗೀತವು, ಬ್ಲೂಸ್ ಸಂಗೀತ ಹುಟ್ಟಿಕೊಂಡ ದುಃಖ ಮತ್ತು ಅಂತಿಮವಾಗಿ ಅದು ನೀಡಬಲ್ಲ ಸಂತೋಷದ ನಡುವಿನ ಆಳವಾದ ಸಂಬಂಧವನ್ನು ನಮಗೆ ತೋರಿಸಬಹುದು. ಆ ಸಮತೋಲನವನ್ನು ಕಂಡುಕೊಳ್ಳುವುದು ಸುಲಭವಲ್ಲ, ಅಲ್ಲಿಗೆ ತಲುಪುವ ಪ್ರಯಾಣವೂ ತಕ್ಷಣವೇ ಸಾಧ್ಯವಾಗುವುದಿಲ್ಲ ಎಂದು ಲೂ ನೆನಪಿಸುತ್ತಾರೆ. ಆದರೆ ಕೊನೆಗೂ ನಾವು ಆ ಹಂತವನ್ನು ತಲುಪಿದಾಗ, ಅದರ ಅನುಭವ ಅದ್ಭುತವಾಗಿರುತ್ತದೆ.

22 ಆಗಸ್ಟ್ 2026, 19:23