ರಿಮಿನಿಯಲ್ಲಿ ಜಗದ್ಗುರು XIVನೇ ಲಿಯೋರವರ ಪವಿತ್ರ ಬಲಿಪೂಜೆ: ‘ಪ್ರತಿಯೊಂದು ಹಂತದಲ್ಲಿಯೂ ಅಧಿಕಾರವೆಂದರೆ ಸೇವೆ’.
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಶನಿವಾರ ಸಂಜೆ ಇಟಲಿಯ ಬಂದರು ನಗರವಾದ ರಿಮಿನಿಯಲ್ಲಿ ಸಾಮಾನ್ಯ ಕಾಲದ 21ನೇ ಭಾನುವಾರದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇದರೊಂದಿಗೆ ಸ್ಯಾನ್ ಮರಿನೊ ಗಣರಾಜ್ಯದಲ್ಲಿ ಆರಂಭಗೊಂಡು, “ಜನರ ನಡುವಿನ ಸ್ನೇಹಕ್ಕಾಗಿ ಸಭೆ”ಯಲ್ಲಿ ಭಾಗವಹಿಸಿದ್ದವರೊಂದಿಗಿನ ಭೇಟಿಯನ್ನೂ ಒಳಗೊಂಡಿದ್ದ ತಮ್ಮ ಒಂದು ದಿನದ ಪಶುಪಾಲನಾ ಭೇಟಿಯನ್ನು ಅವರು ಮುಕ್ತಾಯಗೊಳಿಸಿದರು.
ಜಗದ್ಗುರುಗಳು ತಮ್ಮ ಧರ್ಮೋಪದೇಶವನ್ನು, ಅಂದಿನ ಸುವಾರ್ತೆಯಲ್ಲಿ ವಿವರಿಸಲಾದಂತೆ, ಯೇಸುವೇ ಕ್ರಿಸ್ತನು, ಮೆಸ್ಸೀಯನು ಎಂದು ಸಂತ ಪೇತ್ರನು ಮಾಡಿದ ವಿಶ್ವಾಸದ ಘೋಷಣೆಯನ್ನು ಸ್ಮರಿಸುವ ಮೂಲಕ ಆರಂಭಿಸಿದರು.
“ಯೇಸು ಕ್ರಿಸ್ತನು, ತಂದೆಯ ಶಾಶ್ವತ ಪುತ್ರನು, ಪವಿತ್ರಗೊಳಿಸಲ್ಪಟ್ಟು ಲೋಕಕ್ಕೆ ‘ಅನೇಕರ ವಿಮೋಚನೆಗಾಗಿ ತನ್ನ ಜೀವವನ್ನು ಅರ್ಪಿಸಲು ಮತ್ತು ಸೇವೆ ಮಾಡಲು’ ಕಳುಹಿಸಲ್ಪಟ್ಟ ಮೆಸ್ಸೀಯನೆಂದು ನಾವು ನಂಬಿರುವುದರಿಂದ”ಎಂದು ಹೇಳಿದರು.
ಪೇತ್ರನ ಮಾತುಗಳಲ್ಲಿ, “ನಮ್ಮನ್ನು ಸಂತೋಷ ಮತ್ತು ನಿರೀಕ್ಷೆಯಿಂದ ತುಂಬಿಸುವ ಸತ್ಯವನ್ನು ನಾವು ಗುರುತಿಸುತ್ತೇವೆ, ಜೀವನದತ್ತ ಕೊಂಡೊಯ್ಯುವ ಮಾರ್ಗವನ್ನೂ ಕಂಡುಕೊಳ್ಳುತ್ತೇವೆ ಅದು ಮಾನವಕುಲದ ಸೇವೆಗೆ ತನ್ನನ್ನೇ ಸಮರ್ಪಿಸಿಕೊಳ್ಳುವ ದೇವರ ಮಾರ್ಗವಾಗಿದೆ,” ಎಂದು ಅವರು ಮುಂದುವರಿಸಿದರು.
ಯೇಸು ಪೇತ್ರನಿಗೆ ರಾಜ್ಯದ ಕೀಲಿಗಳನ್ನು ಹಸ್ತಾಂತರಿಸಿದ ಘಟನೆಯನ್ನು ಇದೇ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು ಎಂದು ಜಗದ್ಗುರು ಲಿಯೋರವರು ವಿವರಿಸಿದರು. ಈ ಕ್ರಿಯೆಯು ಧರ್ಮ ಸಭೆಯಲ್ಲಿ ಅಧಿಕಾರವೆಂದರೆ ಸೇವೆ ಎಂಬುದನ್ನು ನಮಗೆ ತೋರಿಸುತ್ತದೆ.
ಬಿಷಪ್‌ಗಳು ಮತ್ತು ಗುರುಗಳು ಮಾತ್ರವಲ್ಲ, ಪ್ರತಿಯೊಬ್ಬ ದೀಕ್ಷಾಸ್ನಾನ ಪಡೆದ ಕ್ರೈಸ್ತನೂ ಪಾಪ ಮತ್ತು ಅದರ ಪರಿಣಾಮಗಳಿಂದ ಬಂಧಿತರಾಗಿರುವವರನ್ನು ಅಪ್ಪಿಕೊಳ್ಳಲು, ಮತ್ತೆ ಒಂದಾಗಿಸಲು, ಸ್ವಾಗತಿಸಲು, ಮುಕ್ತಗೊಳಿಸಲು, ಕ್ಷಮಿಸಲು ಮತ್ತು ವಿಮೋಚಿಸಲು ಕರೆಯಲ್ಪಟ್ಟಿದ್ದಾನೆ ಎಂದು ಅವರು ಹೇಳಿದರು.
ಅನ್ಯಾಯದ ಮೇಲ್ವಿಚಾರಕನನ್ನು ಸ್ಥಾನದಿಂದ ತೆಗೆದುಹಾಕಿ, ಅವನ ಬದಲಿಗೆ ನೀತಿವಂತ ಎಲ್ಯಾಕೀಮನನ್ನು ನೇಮಿಸಿದ ಕುರಿತು ಹೇಳುವ ಹಳೆಯ ಒಡಂಬಡಿಕೆಯ ವಾಚನವನ್ನು ಉಲ್ಲೇಖಿಸಿದ ಜಗದ್ಗುರುಗಳು, ಅದರಿಂದ ಈ ಪಾಠವನ್ನು ನೀಡಿದರು: “ನಾವು ಹೊಂದಿರುವುದೆಲ್ಲವೂ ಮತ್ತು ನಾವು ಆಗಿರುವುದೆಲ್ಲವೂ ದೇವರು ನಮಗೆ ನೀಡಿದ ಕೊಡುಗೆ. ಆದ್ದರಿಂದ, ಅವರ ಕೈಗಳಲ್ಲಿ ನಾವು ಪರಸ್ಪರ ನ್ಯಾಯದಲ್ಲಿ ರಕ್ಷಣೆಯ ಸಾಧನಗಳಾಗಬೇಕು.”
ಎರಡನೇ ವಾಚನದಲ್ಲಿ ಸಂತ ಪೌಲರು ಉಲ್ಲೇಖಿಸುವ ದೇವರ ಯೋಜನೆಗಳ “ಅಗಮ್ಯತೆಯ” ಕುರಿತು ಜಗದ್ಗುರು ಲಿಯೋರವರು ವಿವರಿಸಿದರು. ಆ ಯೋಜನೆಗಳು ಅವುಗಳ ಹಿಂದಿರುವ ತರ್ಕದಿಂದಾಗಿ ಸಂಕೀರ್ಣವಾಗಿಲ್ಲ ಬದಲಾಗಿ “ನಮ್ಮ ಸಾಮರ್ಥ್ಯ ಮತ್ತು ನಿರೀಕ್ಷೆಗಳನ್ನು ಮೀರಿಸುವ, ನಿರಸ್ತ್ರಗೊಳಿಸುವಷ್ಟು ಅಪಾರವಾದ ಅವರ ಪ್ರೀತಿಯ” ಕಾರಣದಿಂದ ಅವು ನಮಗೆ ಅಗಮ್ಯವಾಗಿವೆ ಎಂದು ಹೇಳಿದರು.
ನಾವು ಅನುಕರಿಸಲು ಕರೆಯಲ್ಪಟ್ಟಿರುವ ಈ ದೈವಿಕ ಪ್ರೀತಿಯ ಪ್ರತಿಬಿಂಬವು ರೊಮಾಗ್ನಾ ಪ್ರದೇಶದ ಜನರ ಪ್ರಾಮಾಣಿಕತೆ, ಉದಾರತೆ ಮತ್ತು ದಯೆಯಲ್ಲಿ ಕಾಣಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ಈ ಪ್ರದೇಶವು ಪ್ರವಾಸಿಗರಿಗೆ ಕೇವಲ ವಿಶ್ರಾಂತಿ ಮತ್ತು ಮನರಂಜನೆಯ ಸ್ಥಳವಾಗಿರದೆ, “ಆಧ್ಯಾತ್ಮಿಕತೆಯ ದೃಷ್ಟಿಯಿಂದಲೂ ಸ್ವಾಗತಾರ್ಹ ಸ್ಥಳವಾಗಿರುವಂತೆ” ಮುಂದುವರಿಯುವಂತೆ ಅವರು ಜನರನ್ನು ಪ್ರೋತ್ಸಾಹಿಸಿದರು.
ಅಂತ್ಯಗೊಳ್ಳುತ್ತಿರುವ ಬೇಸಿಗೆ ರಜೆಯ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ವಿಶ್ರಾಂತಿಯ ಅವಧಿಯು “ಚದುರಿಕೆ ಮತ್ತು ವಿನಾಶಕ್ಕೆ” ಕಾರಣವಾಗದಂತೆ ಎಚ್ಚರಿಕೆ ನೀಡಿದರು. ಬದಲಾಗಿ, ನಮ್ಮ ಆತ್ಮದ ಆಳದಲ್ಲಿ ದೇವರೊಂದಿಗೆ ಮತ್ತು ಇತರರೊಂದಿಗೆ ನಿಜವಾದ ಭೇಟಿಯ ಮೂಲಕ ನಿಜವಾದ ವಿಶ್ರಾಂತಿಯನ್ನು ಕಂಡುಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳುವಂತೆ ಅವರು ವಿಶ್ವಾಸಿಗಳಿಗೆ ಕರೆ ನೀಡಿದರು.
ವ್ಯಕ್ತಿಗಳಾಗಿಯೂ ಸಂಸ್ಥೆಗಳಾಗಿಯೂ ಕ್ರೈಸ್ತ ಸಮುದಾಯವು ಆತಿಥ್ಯ, ಅಂತರ್ಮುಖ ಚಿಂತನೆ ಮತ್ತು “ಸಹಾಯ ಮಾಡಲು ಹಾಗೂ ದಾನಶೀಲತೆಯನ್ನು ತೋರಿಸಲು” ಸಿದ್ಧತೆಯ ಮೂಲಕ ಇಂತಹ ಅನುಭವವನ್ನು ಬೆಳೆಸಬೇಕು ಎಂದು ಅವರು ಹೇಳಿದರು. ಇದು ವಿಶ್ರಾಂತಿ ಮತ್ತು ಚೈತನ್ಯವನ್ನು ಹುಡುಕಿಕೊಂಡು ಬರುವವರೊಂದಿಗೆ ನಮ್ಮ ಸಂಬಂಧಕ್ಕೆ ಮಾತ್ರ ಅನ್ವಯಿಸುವುದಿಲ್ಲ “ದೇಹ ಮತ್ತು ಆತ್ಮದಲ್ಲಿ ಗಾಯಗೊಂಡು, ತಮ್ಮ ತಾಯ್ನಾಡಿನಿಂದ ದೂರವಾಗಿ ಆಶ್ರಯ, ಆಹಾರ ಮತ್ತು ನೆರವನ್ನು ಹುಡುಕುತ್ತಿರುವವರಿಗೂ” ಇದು ಅನ್ವಯಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಸ್ಥಳೀಯ ಬಿಷಪ್ ರವರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರು XIVನೇ ಲಿಯೋರವರು, ಪವಿತ್ರ ಬಲಿಪೂಜೆಯಲ್ಲಿ ಸೇರಿದ್ದ ವಿಶ್ವಾಸಿಗಳಿಗೆ ಪ್ರಾರ್ಥನೆ, ಏಕತೆ, ಆಲಿಸುವ ಮನೋಭಾವ, ಧೈರ್ಯ, ಸರಳತೆ ಮತ್ತು ಕೃತಜ್ಞತೆಯ ಮನೋಭಾವಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕೊನೆಯಲ್ಲಿ, ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸಿ, ಪೂಜ್ಯ ಕನ್ಯಾಮರಿಯಮ್ಮನವರ ಮತ್ತು ತಮ್ಮ ಆಶ್ರಯದಾತ ಸಂತರುಗಳ ಮಧ್ಯಸ್ಥಿಕೆಗೆ ಅವರನ್ನು ಒಪ್ಪಿಸಿದರು.
