ಹುಡುಕಿ

ಮಾರ್ಸೊಡೆಟೊ ಫೆಡರೇಶನ್ ಸದಸ್ಯರನ್ನು ಜಗದ್ಗುರು ಲಿಯೋರವರು ಸ್ವಾಗತಿಸಿದರು. ಮಾರ್ಸೊಡೆಟೊ ಫೆಡರೇಶನ್ ಸದಸ್ಯರನ್ನು ಜಗದ್ಗುರು ಲಿಯೋರವರು ಸ್ವಾಗತಿಸಿದರು.  (ANSA)

ಜಗದ್ಗುರುಗಳು ಸ್ಪೇನಿನ ಸ್ವಯಂಸೇವಾ ಸಂಸ್ಥೆಗೆ: ಪ್ರತಿಯೊಬ್ಬ ವ್ಯಕ್ತಿಯ ಮುಖದಲ್ಲೂ ನೀವು ಕ್ರಿಸ್ತನನ್ನು ಕಂಡುಕೊಳ್ಳುತ್ತೀರಿ.

ಬೌದ್ಧಿಕ ಅಂಗವೈಕಲ್ಯ ಮತ್ತು ಸೆರೆಬ್ರಲ್ ಪಾಲ್ಸಿ ಹೊಂದಿರುವವರನ್ನು ಬೆಂಬಲಿಸುವ ಸ್ಪೇನಿನ ಸರ್ಕಾರೇತರ ಸಂಸ್ಥೆಯಾದ ಮಾರ್ಸೊಡೆಟೊ ಫೆಡರೇಶನ್‌ನ ಸದಸ್ಯರನ್ನು ಭೇಟಿಯಾದ ಜಗದ್ಗುರು XIVನೇ ಲಿಯೋರವರು, “ಅತ್ಯಂತ ದುರ್ಬಲರು ಮತ್ತು ಅಸಹಾಯಕರ ಜೀವನದಲ್ಲಿ” ಕ್ರಿಸ್ತನನ್ನು ಕಾಣುವುದರಿಂದ “ಮಾನವೀಯ ಹಾಗೂ ಕ್ರೈಸ್ತ ಸಮಾಜವಾಗಿ ನಾವು ಬೆಳೆಯಲು” ಸಾಧ್ಯವಾಗುತ್ತದೆ ಎಂದು ನೆನಪಿಸಿದರು.

ವ್ಯಾಟಿಕನ್ ವರದಿ

ಆಗಸ್ಟ್ 24ರ ಬೆಳಗ್ಗೆ ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಸ್ಪೇನಿನ ಟೊಲೆಡೊದಲ್ಲಿ ಬೌದ್ಧಿಕ ಅಂಗವೈಕಲ್ಯ ಮತ್ತು ಸೆರೆಬ್ರಲ್ ಪಾಲ್ಸಿ ಹೊಂದಿರುವವರನ್ನು ಬೆಂಬಲಿಸುವ ಸಂಸ್ಥೆಯಾದ ಮಾರ್ಸೊಡೆಟೊ ಫೆಡರೇಶನ್‌ನ ಸದಸ್ಯರನ್ನು ಭೇಟಿಯಾದರು.

1980ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ತನ್ನ 45 ವರ್ಷಗಳ ಸೇವಾ ಪಯಣವನ್ನು ಸ್ಮರಿಸುವ ಸಲುವಾಗಿ ತೀರ್ಥಯಾತ್ರೆಯಾಗಿ ರೋಮಿಗೆ ಆಗಮಿಸಿತ್ತು.

ಫೆಡರೇಶನ್‌ನ ಸೇವೆಯು “ನಿಸ್ಸಂದೇಹವಾಗಿ ಕಠಿಣವಾದ ಕಾರ್ಯವಾಗಿದ್ದು, ಯಾರ ಕಣ್ಣಿಗೂ ಕಾಣದ, ಗುಪ್ತವಾಗಿ ನಡೆಯುವ ಅನೇಕ ಪರಿಶ್ರಮಗಳನ್ನು ಒಳಗೊಂಡಿದೆ, ಅದಕ್ಕೆ ಪ್ರತಿಫಲ ನೀಡಬಲ್ಲವರು ದೇವರು ಮಾತ್ರ” ಎಂದು ಜಗದ್ಗುರುಗಳು ಹೇಳಿದರು.

ಆದರೆ, ಪ್ರತಿಯೊಬ್ಬ ವ್ಯಕ್ತಿಯ ಮುಖದಲ್ಲಿ “ಯೇಸು ಕ್ರಿಸ್ತನನ್ನೇ” ಕಾಣುವುದು ಈ ಸೇವೆಯನ್ನು “ಆಳವಾದ ಸಂತೃಪ್ತಿ ನೀಡುವ” ಧ್ಯೇಯವನ್ನಾಗಿ ಮಾಡುತ್ತದೆ ಎಂದು ಅವರು ಒತ್ತಿಹೇಳಿದರು. ಮಾರ್ಸೊಡೆಟೊ ಫೆಡರೇಶನ್‌ನ ಸದಸ್ಯರು ತಮ್ಮ ಸೇವೆಯ ಮೂಲಕ ಸುವಾರ್ತೆಯ ಈ ಸಂದೇಶಕ್ಕೆ ಸಾಕ್ಷಿಗಳಾಗಿದ್ದಾರೆ ಎಂದು ಜಗದ್ಗುರುಗಳು ತಿಳಿಸಿದರು: “ನನ್ನ ಈ ಅತಿ ಚಿಕ್ಕ ಸಹೋದರ ಸಹೋದರಿಯರಲ್ಲಿ ಒಬ್ಬರಿಗೆ ನೀವು ಏನು ಮಾಡಿದಿರೋ, ಅದನ್ನು ನನಗೇ ಮಾಡಿದಿರಿ” (ಮತ್ತಾಯ 25:40).

ಅತ್ಯಂತ ದುರ್ಬಲರು ಮತ್ತು ಅಸಹಾಯಕರ ಜೀವನದಲ್ಲಿ ನಮ್ಮನ್ನು ಸವಾಲಿಗೆ ಒಳಪಡಿಸುವ ಕ್ರಿಸ್ತನ ನೋಟವನ್ನು ಗುರುತಿಸುವುದು “ಮಾನವೀಯ ಹಾಗೂ ಕ್ರೈಸ್ತ ಸಮಾಜವಾಗಿ ನಾವು ಬೆಳೆಯಲು ಸಹಾಯ ಮಾಡುತ್ತದೆ” ಎಂದು ಜಗದ್ಗುರುಗಳು ಹೇಳಿದರು.

ಯಾರೂ ಬೆಂಬಲವಿಲ್ಲದೆ ಉಳಿಯಬಾರದು

ಒಗ್ಗಟ್ಟು, ಮಾನವ ಘನತೆಯ ರಕ್ಷಣೆ ಮತ್ತು ಸಂಪೂರ್ಣ ಒಳಗೊಳ್ಳುವಿಕೆ—ಇವು ಬೌದ್ಧಿಕ ಅಂಗವೈಕಲ್ಯ ಮತ್ತು ಸೆರೆಬ್ರಲ್ ಪಾಲ್ಸಿ ಹೊಂದಿರುವವರೊಂದಿಗೆ ಕೆಲಸ ಮಾಡುವಾಗ ಫೆಡರೇಶನ್‌ನ ಕಾರ್ಯವಿಧಾನವನ್ನು ಗುರುತಿಸುವ ಪ್ರಮುಖ ಮೌಲ್ಯಗಳಾಗಿವೆ.

ನಲವತ್ತು ವರ್ಷಗಳಿಗೂ ಹಿಂದೆ ಫಾದರ್ ಮಾರ್ಸೆಲಿನೊ ಕಾಸಾಸ್ ಪುಯೆಂತೆ ಅವರು ಮಾರ್ಸೊಡೆಟೊ ಫೆಡರೇಶನ್ ಅನ್ನು ಸ್ಥಾಪಿಸಿದರು. “ಬೌದ್ಧಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಯನ್ನು ಒಳಗೊಂಡ ಯಾವುದೇ ಕುಟುಂಬವೂ ಎಂದಿಗೂ ಬೆಂಬಲವಿಲ್ಲದೆ ಉಳಿಯಬಾರದು” ಎಂಬ ಕನಸಿಗೆ ಅವರು ಅಡಿಪಾಯ ಹಾಕಿದರು, ಆ ಕನಸು ಇಂದು ಸಾಕಾರಗೊಂಡಿದೆ.

ಫೆಡರೇಶನ್ 2,600ಕ್ಕೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿದೆ. ಈ ಸೇವೆಯು ಈ ವರ್ಷದ ಜೂನ್‌ನಲ್ಲಿ ಸ್ಪೇನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಗದ್ಗುರುಗಳು ಉಲ್ಲೇಖಿಸಿದ್ದ ಸತ್ಯವನ್ನು ಕಾರ್ಯರೂಪಕ್ಕೆ ತರುತ್ತದೆ: “ಕ್ರಿಸ್ತನ ಪ್ರೀತಿಯು ನಮ್ಮ ಸಹೋದರ ಸಹೋದರಿಯರ ಕಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ” (2 ಕೊರಿಂಥ 5:14); ಮತ್ತು “ಅವರ ಪ್ರೇರಣೆಗೆ ನಾವು ನೀಡುವ ಪ್ರೀತಿ, ಕಾಳಜಿ ಮತ್ತು ಸೇವೆಯೇ ನಮ್ಮ ನಂಬಿಕೆಯ ಸಾಕ್ಷಿಯಾಗಿದೆ.”

ತಮ್ಮ ಸಂದೇಶದ ಕೊನೆಯಲ್ಲಿ ಜಗದ್ಗುರು XIVನೇ ಲಿಯೋರವರು ಮಾರ್ಸೊಡೆಟೊ ಫೆಡರೇಶನ್‌ನ ಸದಸ್ಯರನ್ನು ಮರಿಯಮ್ಮನವರ ರಕ್ಷಣೆಗೆ ಒಪ್ಪಿಸಿದರು ಮತ್ತು ಅವರ ನಿರಂತರ ಸೇವಾ ಕಾರ್ಯದಲ್ಲಿ ಮರಿಯಮ್ಮನವರ ಜೊತೆಯಾಗಿರಲಿ ಎಂದು ಪ್ರಾರ್ಥಿಸಿದರು.

“ಅತ್ಯಂತ ಕಷ್ಟದ ಕ್ಷಣಗಳಲ್ಲಿ ಅವಳು ನಿಮಗೆ ಧೈರ್ಯ ನೀಡಲಿ. ಸದಾ ನಿಮ್ಮ ದೃಷ್ಟಿಯನ್ನು ಪ್ರಭುವಿನ ಮೇಲೆ ನೆಟ್ಟಿರಲು ಅವಳು ನಿಮಗೆ ಸಹಾಯ ಮಾಡಲಿ. ಇದರಿಂದ ನಿಮ್ಮ ಫೆಡರೇಶನ್ ಧರ್ಮ ಸಭೆ ಮತ್ತು ಸಮಾಜ ಎರಡಕ್ಕೂ ನಿಜವಾದ ಮಾರ್ಗದರ್ಶಕ ಹಾಗೂ ಆಶ್ರಯಸ್ಥಾನವಾಗಿ ಮುಂದುವರಿಯಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ.”

24 ಆಗಸ್ಟ್ 2026, 17:35