ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಎಬೋಲಾ ಪೀಡಿತರಿಗೆ ಅಂತರರಾಷ್ಟ್ರೀಯ ನೆರವು ನೀಡುವಂತೆ ಜಗದ್ಗುರುಗಳ ಮನವಿ.
ವ್ಯಾಟಿಕನ್ ವರದಿ
ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ಮುಂದುವರಿದಿರುವ ಎಬೋಲಾ ವೈರಸ್‌ನ ಏಕಾಏಕಿ ಹರಡುವಿಕೆಯನ್ನು ಸ್ಮರಿಸಿದರು.
“ನನ್ನ ಪ್ರಾರ್ಥನೆಗಳಲ್ಲಿ ನಾನು ಆಗಾಗ್ಗೆ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸ್ಮರಿಸುತ್ತೇನೆ. ವಿಶೇಷವಾಗಿ, ಎಬೋಲಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಕಾರಣದಿಂದ, ಅದು ದುರದೃಷ್ಟವಶಾತ್ ಅನೇಕ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ,” ಎಂದು ಅವರು ಹೇಳಿದರು.
ಈ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಅಂತರರಾಷ್ಟ್ರೀಯ ಸಮುದಾಯವು ಸ್ಪಂದಿಸುವಂತೆ ಜಗದ್ಗುರುಗಳು ಮನವಿ ಮಾಡಿದರು.
“ಅನೇಕ ಮಾನವ ಜೀವಗಳನ್ನು ಉಳಿಸುವ ಸಲುವಾಗಿ, ತಡೆಗಟ್ಟುವ ಪ್ರಯತ್ನಗಳಲ್ಲಿ ಸ್ಥಳೀಯ ಸಮುದಾಯಗಳನ್ನೂ ಒಳಗೊಂಡಿರುವಂತೆ ಅಂತರರಾಷ್ಟ್ರೀಯ ಸಮುದಾಯವು ಸ್ಪಂದಿಸಬೇಕೆಂದು ನಾನು ಪ್ರೋತ್ಸಾಹಿಸುತ್ತೇನೆ,” ಎಂದು ಜಗದ್ಗುರುಗಳು ಹೇಳಿದರು.
ಪ್ರಸ್ತುತ ಬುಂಡಿಬುಗ್ಯೊ ಎಬೋಲಾ ವೈರಸ್ ತಳಿಯ 5,300 ದೃಢಪಟ್ಟ ಪ್ರಕರಣಗಳಲ್ಲಿ 2,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ತಳಿಗೆ ಸದ್ಯಕ್ಕೆ ಅನುಮೋದಿತ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ.
ಡಿಆರ್ಸಿ ಮತ್ತು ಉಗಾಂಡಾದಲ್ಲಿ ಪ್ರಕರಣಗಳು ವರದಿಯಾದ ಬಳಿಕ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) 2026ರ ಮೇ ತಿಂಗಳಲ್ಲಿ ಈ ಸೋಂಕಿನ ಹರಡುವಿಕೆಯನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿತು.
ಇತರ ಎಬೋಲಾ ತಳಿಗಳ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿರುವ ಎರ್ವೆಬೋ ಲಸಿಕೆಯ 16,000ಕ್ಕೂ ಹೆಚ್ಚು ಡೋಸ್‌ಗಳನ್ನು ದೇಶವು ಸ್ವೀಕರಿಸಿದೆ ಎಂದು ಡಿಆರ್ಸಿ ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಆದರೆ, ಸೋಂಕು ಹೆಚ್ಚು ಕೇಂದ್ರೀಕೃತವಾಗಿರುವ ಪ್ರಮುಖ ನಗರಗಳ ಮೇಲೆ ನಿಯಂತ್ರಣ ಹೊಂದಿರುವ ಸಶಸ್ತ್ರ ಗುಂಪುಗಳು ಮತ್ತು ಸರ್ಕಾರಿ ಪಡೆಗಳ ನಡುವಿನ ಸಶಸ್ತ್ರ ಸಂಘರ್ಷದಿಂದ ವೈರಸ್ ಹರಡುವಿಕೆಯನ್ನು ತಡೆಯುವ ಪ್ರಯತ್ನಗಳಿಗೆ ಅಡ್ಡಿಯಾಗಿದೆ.
ಮಧ್ಯ ಆಫ್ರಿಕಾ ಗಣರಾಜ್ಯದ ಗಣಿಗಾರಿಕೆ ದುರಂತದ ಸಂತ್ರಸ್ತರಿಗಾಗಿ ಪ್ರಾರ್ಥನೆ
ಇದೇ ಸಂದರ್ಭದಲ್ಲಿ, ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಸಂಭವಿಸಿದ ಗಣಿಗಾರಿಕೆ ದುರಂತದ ಸಂತ್ರಸ್ತರಿಗಾಗಿ ಜಗದ್ಗುರು XIVನೇ ಲಿಯೋರವರು ಪ್ರಾರ್ಥಿಸಿದರು.
“ಮಧ್ಯ ಆಫ್ರಿಕಾ ಗಣರಾಜ್ಯದ ಜನರೊಂದಿಗೂ ನಾನು ಆತ್ಮೀಯವಾಗಿ ನಿಂತಿದ್ದೇನೆ. ಜಾಂಬೊಯೆ ಗಣಿಯೊಂದರಲ್ಲಿ ಸಂಭವಿಸಿದ ಕುಸಿತದಲ್ಲಿ ಮೃತಪಟ್ಟವರಿಗಾಗಿ ಅವರು ದುಃಖಿಸುತ್ತಿದ್ದಾರೆ,” ಎಂದು ಜಗದ್ಗುರುಗಳು ಹೇಳಿದರು. “ತಮ್ಮ ಪ್ರಾಣ ಕಳೆದುಕೊಂಡವರನ್ನು ಪ್ರಭು ತನ್ನ ಬಳಿಗೆ ಸ್ವೀಕರಿಸಲಿ ಗಣಿಗಾರಿಕೆ ಸ್ಥಳಗಳಲ್ಲಿ ಸುರಕ್ಷತೆ ಮತ್ತು ಕಾನೂನುಬದ್ಧತೆಯನ್ನು ಖಚಿತಪಡಿಸುವ ಪ್ರಯತ್ನಗಳಿಗೆ ಅವರು ಬಲ ನೀಡಲಿ.”
ಆಗಸ್ಟ್ 18ರಂದು ಜಾಂಬೊಯೆಯಲ್ಲಿರುವ ತೆರೆದ ಗಣಿಗಾರಿಕಾ ಚಿನ್ನದ ಗಣಿಯಲ್ಲಿ ಭೂಕುಸಿತ ಸಂಭವಿಸಿ 100ಕ್ಕೂ ಹೆಚ್ಚು ಜನರು ಮೃತಪಟ್ಟರು.
ಈ ಘಟನೆ ಸಂಭವಿಸುವ ಮೊದಲೇ ಆ ಗಣಿಗಾರಿಕಾ ಸ್ಥಳವನ್ನು ಮುಚ್ಚಲಾಗಿತ್ತು ಎಂದು ಸರ್ಕಾರ ತಿಳಿಸಿದೆ.
