ಜಗದ್ಗುರು ಲಿಯೋರವರು ನವೆಂಬರ್‌ನಲ್ಲಿ ಉರುಗ್ವೆ, ಅರ್ಜೆಂಟಿನಾ ಮತ್ತು ಪೆರು ದೇಶಗಳಿಗೆ ಭೇಟಿ ನೀಡಲಿದ್ದಾರೆ
ವ್ಯಾಟಿಕನ್ ವರದಿ
ಪವಿತ್ರ ಪಿತೃಗಳು ನವೆಂಬರ್ 6ರಿಂದ 8ರವರೆಗೆ ಮೊಂಟೆವಿಡಿಯೊ, ಪೈಸಾಂಡು ಮತ್ತು ಫ್ಲೋರಿಡಾ ನಗರಗಳಿಗೆ; ನವೆಂಬರ್ 8ರಿಂದ 11ರವರೆಗೆ ಬ್ಯೂನಸ್ ಐರಿಸ್, ಕೊರ್ಡೊಬಾ ಮತ್ತು ಲುಹಾನ್ ನಗರಗಳಿಗೆ; ಹಾಗೂ ನವೆಂಬರ್ 11ರಿಂದ 17ರವರೆಗೆ ಲಿಮಾ, ಚಿಕ್ಲಾಯೊ, ಕುಸ್ಕೊ ಮತ್ತು ಪುಕಾಲ್ಪಾ ನಗರಗಳಿಗೆ ಭೇಟಿ ನೀಡಲಿದ್ದಾರೆ.
ಕಥೋಲಿಕರು ಒಟ್ಟು ಜನಸಂಖ್ಯೆಯ ಕೇವಲ 36 ಪ್ರತಿಶತದಷ್ಟಿರುವ ಉರುಗ್ವೆ, ಇಡೀ ಲ್ಯಾಟಿನ್ ಅಮೆರಿಕಾದಲ್ಲೇ ಅತಿ ಕಡಿಮೆ ಸಂಖ್ಯೆಯ ಕಥೋಲಿಕರನ್ನು ಹೊಂದಿರುವ ದೇಶವಾಗಿದೆ. ಮತ್ತೊಂದೆಡೆ, ಅರ್ಜೆಂಟಿನಾ ಜಗದ್ಗುರು ಲಿಯೋರವರ ಪೂರ್ವಾಧಿಕಾರಿಯಾಗಿದ್ದ ಜಗದ್ಗುರು ಫ್ರಾನ್ಸಿಸ್ ರವರ ತಾಯ್ನಾಡು. ಬ್ಯೂನಸ್ ಐರಿಸ್‌ನಲ್ಲಿ ಜನಿಸಿದ್ದ ದಿವಂಗತ ಜಗದ್ಗುರು ಫ್ರಾನ್ಸಿಸ್ ರವರು ತಮ್ಮ 12 ವರ್ಷಗಳ ಜಗದ್ಗುರು ಪದವಿಯ ಅವಧಿಯಲ್ಲಿ ಅರ್ಜೆಂಟಿನಾಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.
ಇನ್ನು ಪೆರು ದೇಶವು ಜಗದ್ಗುರು ಲಿಯೋರವರಿಗೆ ಬಹಳ ಪರಿಚಿತವಾದ ದೇಶವಾಗಿದೆ. ಅವರು 1980ರ ದಶಕದಲ್ಲಿ ಮಿಷನರಿಯಾಗಿ ಮೊದಲ ಬಾರಿಗೆ ಅಲ್ಲಿಗೆ ತೆರಳಿದರು. ನಂತರ ಅಲ್ಲಿಯೇ ಬಿಷಪ್ ಆಗಿ ಸೇವೆ ಸಲ್ಲಿಸುವುದರ ಜೊತೆಗೆ ಪೆರುವಿನ ಪೌರತ್ವವನ್ನೂ ಪಡೆದರು.
ಹನ್ನೊಂದು ದಿನಗಳ ಅವಧಿಯಲ್ಲಿ ಹತ್ತು ನಗರಗಳಿಗೆ ಭೇಟಿ ನೀಡಲಿರುವ ಈ ಲ್ಯಾಟಿನ್ ಅಮೆರಿಕಾದ ಯಾತ್ರೆಯು ಜಗದ್ಗುರು ಲಿಯೋರವರ ಆರನೇ ಅಂತರರಾಷ್ಟ್ರೀಯ ಯಾತ್ರೆಯಾಗಲಿದೆ. ಈ ಯಾತ್ರೆಯ ವಿವರವಾದ ಕಾರ್ಯಕ್ರಮವನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು.
