ಅಸ್ಸಿಸಿಯಲ್ಲಿ ಯುವಜನರು “ಮಹತ್ತರವಾದ ಕನಸುಗಳನ್ನು” ಕಾಣುವಂತೆ ಜಗದ್ಗುರುಗಳು ಪ್ರೋತ್ಸಾಹಿಸಲಿದ್ದಾರೆ.
ವ್ಯಾಟಿಕನ್ ವರದಿ
ಆಗಸ್ಟ್ 6ರಂದು ಅಸ್ಸಿಸಿಗೆ ಜಗದ್ಗುರು XIVನೇ ಲಿಯೋರವರು ಪಶುಪಾಲನಾ ಭೇಟಿಯೊಂದಿಗೆ, ಯುವಜನರಿಗಾಗಿ ನಡೆದ ನಾಲ್ಕು ದಿನಗಳ ಭೇಟಿಗಳು, ಕಾರ್ಯಾಗಾರಗಳು ಮತ್ತು ವಿಚಾರ ಹಂಚಿಕೆಯ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿವೆ. ಜಗದ್ಗುರುಗಳು ಯುವಜನರ ಪ್ರಶ್ನೆಗಳಿಗೆ ಉತ್ತರಿಸಿ, ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಟೊರ್ವೆರ್ಗಾಟಾದಲ್ಲಿ ನಡೆದ ಯುವಜನರ ಮಹಾಜುಬಿಲಿಯ ಸಂದರ್ಭದಲ್ಲಿ ಒಂದು ವರ್ಷದ ಹಿಂದೆ ನೀಡಿದ ಸಂದೇಶದಂತೆಯೇ, ಸಾಧಾರಣ ಅಥವಾ ಮಧ್ಯಮ ಮಟ್ಟದ ಜೀವನಕ್ಕೆ ತೃಪ್ತಿಪಟ್ಟುಕೊಳ್ಳದೆ, ಮಹತ್ತರವಾದ ಕನಸುಗಳನ್ನು ಕಾಣುವಂತೆ ಅವರು ಯುವಜನರನ್ನು ಪ್ರೇರೇಪಿಸಲಿದ್ದಾರೆ.
ಸಂತ ಫ್ರಾನ್ಸಿಸ್ ರವರ ನಗರವಾದ ಅಸ್ಸಿಸಿಯಲ್ಲಿ ಆಗಸ್ಟ್ 3ರಿಂದ 6ರವರೆಗೆ ನಡೆಯಲಿರುವ “ಗೋ! ಫ್ರಾನ್ಸಿಸ್ಕನ್ ಯುವಜನ ಸಭೆ”ನಲ್ಲಿ 18ರಿಂದ 33 ವರ್ಷ ವಯಸ್ಸಿನ ಸುಮಾರು 2,150 ಯುವಜನರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಫ್ರೈಯರ್ ಲೂಕಾ ದೆ ಪಾಸ್ಕ್ವಾಲೆ ರವರ ಪ್ರಕಾರ, ಇಂದಿನ ಅನೇಕ ಯುವಜನರಲ್ಲಿ ಜೀವನದ ಬಗ್ಗೆ ಆಳವಾದ ಆಸೆಗಳು ಕ್ಷೀಣಿಸಿವೆ, ಕೆಲವರು ತಮ್ಮ ಭವಿಷ್ಯದ ಕನಸು ಕಾಣುವುದನ್ನೇ ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜೀವನದ ಪೂರ್ಣತೆಯ ಕುರಿತು ಮಾತನಾಡಬಲ್ಲ ಜಗದ್ಗುರುಗಳ ಮಾತುಗಳನ್ನು ಕೇಳುವುದು ಅತ್ಯಂತ ಮಹತ್ವದ್ದಾಗಿದೆ. ಜೊತೆಗೆ, “ಪವಿತ್ರ ಅಶಾಂತಿ”ಯ ಮಾದರಿಯಾದ ಸಂತ ಫ್ರಾನ್ಸಿಸ್ ರವರು ಇಂದಿನ ಯುವಜನರಿಗೂ ಸಮಕಾಲೀನ ವ್ಯಕ್ತಿಯಂತೆ ಮಾತನಾಡಬಲ್ಲರು.
ಆಗಸ್ಟ್ 6ರಂದು ಬೆಳಿಗ್ಗೆ ಜಗದ್ಗುರುಗಳು ಸಂತ ಮೇರಿ ಆಫ್ ದ ಏಂಜಲ್ಸ್ ಬಸಿಲಿಕಾದಲ್ಲಿರುವ ಪೊರ್ಝಿಯುಂಕೊಲಾ ಪುಟ್ಟ ಪ್ರಾರ್ಥನಾ ಮಂದಿರದಲ್ಲಿ ವೈಯಕ್ತಿಕವಾಗಿ ಪ್ರಾರ್ಥಿಸಲಿದ್ದಾರೆ. ಬಳಿಕ ಯುವಜನರನ್ನು ಭೇಟಿಯಾಗಿ, ಯುರೋಪಿನ ವಿವಿಧ ಭಾಗಗಳಿಂದ ಬಂದ ಮೂವರು ಯುವಜನರು ಕೇಳುವ ಮೂರು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ನಂತರ ಫ್ರಾನ್ಸಿಸ್ಕನ್ ಕುಟುಂಬಗಳೊಂದಿಗೆ ಖಾಸಗಿ ಭೇಟಿ ನಡೆಸಿ, ಪ್ರಭುವಿನ ರೂಪಾಂತರದ ಮಹೋತ್ಸವದ ದಿನದಂದು ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ “ಫ್ರಾನ್ಸಿಸ್ಕನ್ ವಿಶ್ವ ಯುವಜನರ ದಿನ”ದಂತೆಯೇ ಅಸ್ಸಿಸಿಯಲ್ಲಿ ಸಾವಿರಾರು ಯುವಜನರು ಒಂದಾಗಲಿದ್ದಾರೆ.
ಜಗದ್ಗುರುಗಳು ಭೇಟಿಗೆ ಮುನ್ನ ಯುವಜನರು ಶಾಂತಿ, ಕ್ಷಮೆ ಮತ್ತು ದೈವಿಕ ಕರೆಯ ಕುರಿತು ವಿವಿಧ ಕಾರ್ಯಾಗಾರಗಳಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 4ರಂದು ಅವರು ಮುಖ್ಯವಾಗಿ ಕೇಳುವ ಮೂಲಕ ಕಲಿಯಲಿದ್ದು, ಆಗಸ್ಟ್ 5ರಂದು ಹೆಚ್ಚು ಸಕ್ರಿಯವಾದ ಕಾರ್ಯಾಗಾರಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ. ಈ ಚರ್ಚೆಗಳಿಂದ ಹೊರಹೊಮ್ಮುವ ವಿಚಾರಗಳನ್ನು ಸಂಗ್ರಹಿಸಿ, ಯುವಜನರು ತಮ್ಮ ಸ್ಥಳೀಯ ಸಮುದಾಯಗಳಲ್ಲಿ ಹಾಗೂ ಯುರೋಪಿನಾದ್ಯಂತ ಅನುಷ್ಠಾನಗೊಳಿಸಬಹುದಾದ ಒಂದು “ಮಿಷನರಿ ಚಾರ್ಟರ್” ಅನ್ನು ಸಿದ್ಧಪಡಿಸಲಾಗುವುದು. ಕಾರ್ಯಕ್ರಮದ ಸಂದರ್ಭದಲ್ಲಿ ನಿರಂತರ ಯೂಕರಿಸ್ಟಿಕ್ ಆರಾಧನೆ ಮತ್ತು ಎರಡು ಪ್ರದರ್ಶನಗಳಿಗೂ ಅವಕಾಶವಿರಲಿದೆ.
ಸಂತ ಫ್ರಾನ್ಸಿಸ್ ರವರ ಸರಳತೆ, ಧೈರ್ಯ, ಸೃಷ್ಟಿಯ ಕಾಳಜಿ, ಕ್ರಿಸ್ತನೊಂದಿಗಿನ ಆಳವಾದ ಸಂಬಂಧ, ಬಡವರು ಮತ್ತು ದುರ್ಬಲರ ಮೇಲಿನ ಕರುಣೆ ಹಾಗೂ ಸಹೋದರತ್ವದ ಸಂದೇಶಗಳು ಇಂದಿನ ಯುವಜನರನ್ನು ಆಕರ್ಷಿಸುತ್ತವೆ. ಫ್ರೈಯರ್ ಲೂಕಾ ಹೇಳುವಂತೆ, ಫ್ರಾನ್ಸಿಸ್ ಎಂದಿಗೂ ಜೀವನ ನೀಡಿದ್ದಷ್ಟಕ್ಕೆ ತೃಪ್ತಿಪಟ್ಟುಕೊಂಡವರಲ್ಲ, ಅವರು ಸದಾ ದೊಡ್ಡ ಕನಸುಗಳನ್ನು ಕಂಡು ಇನ್ನಷ್ಟು ದೂರ ಸಾಗಲು ಧೈರ್ಯಪಟ್ಟರು. ಅದಕ್ಕಾಗಿಯೇ ಯುವಜನರಿಗೆ ಅವರು ಕೇಳುವ ಪ್ರಮುಖ ಪ್ರಶ್ನೆ: “ನಿಮ್ಮ ಕನಸು ಏನು? ನಿಮ್ಮ ಹೃದಯದಲ್ಲಿರುವ ಅತ್ಯಂತ ದೊಡ್ಡ ಆಶೆ ಯಾವುದು?” ಅನೇಕ ಯುವಜನರಿಗೆ ಇದಕ್ಕೆ ಉತ್ತರಿಸಲಾಗದಿರುವುದು ವಿಷಾದಕರವಾದರೂ, ಫ್ರಾನ್ಸಿಸ್ ಅವರ ಜೀವನವು ಎಂದಿಗೂ ಕೈಬಿಡದೆ ಮುಂದೆ ಸಾಗುವ ಧೈರ್ಯವನ್ನು ಕಲಿಸುತ್ತದೆ.
ಇಂದಿನ ವೈಯಕ್ತಿಕತೆಯಿಂದ ಕೂಡಿದ ಸಮಾಜದಲ್ಲಿ, ಸೃಷ್ಟಿಯ ಸಂರಕ್ಷಣೆ, ಪರಸ್ಪರ ಗೌರವ, ಸಹೋದರತ್ವ ಮತ್ತು ಜೀವನದ ಆಳವಾದ ಅರ್ಥದ ಹುಡುಕಾಟದಂತಹ ವಿಷಯಗಳ ಮೂಲಕ ಸಂತ ಫ್ರಾನ್ಸಿಸ್ ಇಂದಿಗೂ ಪ್ರಸ್ತುತವಾಗಿದ್ದಾರೆ. ಅವರ “ಸೂರ್ಯ ಸಹೋದರನ ಗೀತೆ”ಯನ್ನು ಕೇವಲ ಪರಿಸರಗೀತೆ ಎಂದು ಅರ್ಥೈಸುವುದು ತಪ್ಪು, ಅದು ಮೂಲತಃ ದೇವರಿಗೆ ಸಲ್ಲಿಸಿದ ಸ್ತುತಿಗೀತೆ. ಸೃಷ್ಟಿಯಲ್ಲಿರುವ ದೇವರ ಗುರುತನ್ನು ಕಂಡ ಫ್ರಾನ್ಸಿಸ್ ರವರು, ಸೃಷ್ಟಿಗಳ ಮೂಲಕ ದೇವರನ್ನು ಅರಿಯಲು ಪ್ರಯತ್ನಿಸಿದರು. ಆದ್ದರಿಂದ, ಇಂದಿನ ಯುರೋಪಿನ ಯುವಜನರೊಳಗಿನ ಆಳವಾದ ಅರ್ಥದ ಹುಡುಕಾಟಕ್ಕೆ ಸಂತ ಫ್ರಾನ್ಸಿಸ್ ರವರು ದಾರಿದೀಪವಾಗಬಹುದು. ಧಾರ್ಮಿಕ ಗಡಿಗಳನ್ನು ಮೀರಿ ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಅಪ್ಪಿಕೊಳ್ಳುವ ಸ್ನೇಹಿತನಂತೆ, ಅವರು ಯುವಜನರನ್ನು ತಮ್ಮ ಪ್ರಶ್ನೆಗಳನ್ನು ಮುಂದುವರಿಸಿ, ಜೀವನದ ನಿಜವಾದ ಗುರಿಯನ್ನು ಹುಡುಕುವಂತೆ ಪ್ರೇರೇಪಿಸಬಹುದು.
