ಕಾರ್ಡಿನಲ್ ಸಿಮೋನಿಗೆ ಜಗದ್ಗುರುಗಳು: ಯಾವುದೇ ಕಾರಾಗೃಹವೂ ಒಬ್ಬ ವ್ಯಕ್ತಿಯನ್ನು ದೇವರ ಪ್ರೀತಿಯಿಂದ ಬೇರ್ಪಡಿಸಲಾರದು.
ವ್ಯಾಟಿಕನ್ ವರದಿ
“ಸುವಾರ್ತೆಯಿಂದ ಬೆಳಗಿಸಲ್ಪಟ್ಟ ಮನಸ್ಸಾಕ್ಷಿಯನ್ನು ಬಂಧಿಸುವಷ್ಟು ಬಲವಾದ ಯಾವುದೇ ಸರಪಳಿಯಿಲ್ಲ; ಕರ್ತನು ತನ್ನ ಮಕ್ಕಳಿಗಾಗಿ ಸಿದ್ಧಪಡಿಸುವ ಉದಯವನ್ನು ತಡೆಯುವಷ್ಟು ದೀರ್ಘವಾದ ಯಾವುದೇ ರಾತ್ರಿಯಿಲ್ಲ, ಒಬ್ಬ ವ್ಯಕ್ತಿಯನ್ನು ದೇವರ ಪ್ರೀತಿಯಿಂದ ಬೇರ್ಪಡಿಸುವಷ್ಟು ಆಳವಾದ ಯಾವುದೇ ಕಾರಾಗೃಹವಿಲ್ಲ.”
ಸಂತ ಪೌಲರು ರೋಮನ್ನರಿಗೆ ಬರೆದ ಪತ್ರದಲ್ಲಿ (8:35–39) ವ್ಯಕ್ತಪಡಿಸಿದ ಸಂದೇಶವನ್ನು ಪ್ರತಿಧ್ವನಿಸುವ ಈ ಮಾತುಗಳೊಂದಿಗೆ ಜಗದ್ಗುರು XIVನೇ ಲಿಯೋರವರು ಅಲ್ಬೇನಿಯಾದ ಕಾರ್ಡಿನಲ್ ಅರ್ನೆಸ್ಟ್ ಸಿಮೋನಿ ಹಾಗೂ ಜುಲೈ 31ರ ಶುಕ್ರವಾರ ಬೆಳಿಗ್ಗೆ ಕಾರ್ಡಿನಲ್ ಅವರ ಅಧ್ಯಕ್ಷತೆಯಲ್ಲಿ ಅಲ್ಬೇನಿಯಾದ ಸ್ಪಾಚ್‌ನ ಹಿಂದಿನ ಕಾರಾಗೃಹ ಶಿಬಿರದಲ್ಲಿ ನಡೆದ ದಿವ್ಯಬಲಿಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂದ್ದೇಶಿಸಿ ಸಂದೇಶ ನೀಡಿದರು. ಅಲ್ಲಿ ಸಂಕಷ್ಟ ಅನುಭವಿಸಿದವರು ಹಾಗೂ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಈ ದಿವ್ಯಬಲಿಪೂಜೆ ನೆರವೇರಿಸಲಾಯಿತು.
ಅನೇಕರು ಅನ್ಯಾಯದ ಶಿಲುಬೆಯನ್ನು ಹೊತ್ತ ಸ್ಥಳ
“ಅಲ್ಬೇನಿಯಾದ ಜನರ ಸ್ಮರಣೆಯಲ್ಲಿ ಆಳವಾಗಿ ಅಚ್ಚೊತ್ತಿರುವ ಆ ಸ್ಥಳವು, ರಾಷ್ಟ್ರದ ಇತಿಹಾಸದಲ್ಲಿನ ಅತ್ಯಂತ ನೋವಿನ ಅಧ್ಯಾಯಗಳಲ್ಲಿ ಒಂದಾಗಿ ಇಂದಿಗೂ ಉಳಿದಿದೆ. ಸ್ಪಾಚ್ ಅನೇಕರು ಅನ್ಯಾಯದ ಭಾರವಾದ ಶಿಲುಬೆಯನ್ನು ಹೊತ್ತ ಸ್ಥಳವಾಗಿತ್ತು” ಎಂದು ಜಗದ್ಗುರುಗಳು ತಮ್ಮ ಸಂದೇಶದಲ್ಲಿ ಬರೆದಿದ್ದಾರೆ. ದಿವ್ಯಬಲಿಪೂಜೆಯ ಸಮಾರೋಪದಲ್ಲಿ ಈ ಸಂದೇಶವನ್ನು ವಾಚಿಸಲಾಯಿತು.
ಪವಿತ್ರ ಪಿತೃಗಳು, “ಆ ಪರ್ವತಗಳ ನಡುವೆ ಸಂಕಷ್ಟ ಅನುಭವಿಸಿ ಪ್ರಾಣ ಕಳೆದುಕೊಂಡವರ ರಕ್ತವು ಆ ನೆಲವನ್ನು ತೋಯಿಸಿದೆ,ಇದರಿಂದ ಆ ನೆಲವು ನಿಷ್ಠೆ, ಧೈರ್ಯ ಮತ್ತು ನಿರೀಕ್ಷೆಗೆ ಮೌನ ಸಾಕ್ಷಿಯಾಗಿ ಪರಿಣಮಿಸಿದೆ” ಎಂದು ಸ್ಮರಿಸಿದರು.
ಕಮ್ಯುನಿಸ್ಟ್ ಆಡಳಿತದ ಹಿಂಸಾಚಾರಕ್ಕೆ ಸಾಕ್ಷಿ
ಈಗ 97 ವರ್ಷ ವಯಸ್ಸಿನ ಕಾರ್ಡಿನಲ್ ಸಿಮೋನಿ ಅವರು ತಮ್ಮ 18 ವರ್ಷಗಳ ಸೆರೆವಾಸದ ಬಹುಪಾಲು ಅವಧಿಯನ್ನು ಕಳೆದಿದ್ದ ಆ ಶಿಬಿರಕ್ಕೆ ಮರಳಿದ್ದರು. “ಮರಣದ ಸಂಕೇತವಾಗಿದ್ದ ಶಿಲುಬೆಯನ್ನು ಜೀವದ ವಾಗ್ದಾನವಾಗಿ ಪರಿವರ್ತಿಸಿದ ಕ್ರಿಸ್ತನ ಬಲಿದಾನವನ್ನು ಆಚರಿಸಲು” ಅವರು ಅಲ್ಲಿಗೆ ಮರಳಿದ್ದರು ಎಂದು ಜಗದ್ಗುರು ಲಿಯೋರವರು ಬರೆದಿದ್ದಾರೆ.
ಕಾರ್ಡಿನಲ್ ಸಿಮೋನಿರವರು ಕಮ್ಯುನಿಸ್ಟ್ ಆಡಳಿತದ ಹಿಂಸಾಚಾರವನ್ನು ಸ್ವತಃ ಅನುಭವಿಸಿದ್ದರು. ಆರಂಭದಲ್ಲಿ ಅವರನ್ನು “ಜನರ ಶತ್ರು” ಎಂದು ಪರಿಗಣಿಸಿ ಮರಣದಂಡನೆ ವಿಧಿಸಲಾಗಿತ್ತು. ನಂತರ ಆ ಶಿಕ್ಷೆಯನ್ನು ವಿವಿಧ ಬಲವಂತದ ದುಡಿಮೆ ಶಿಬಿರಗಳಲ್ಲಿ ಸೆರೆವಾಸಕ್ಕೆ ಪರಿವರ್ತಿಸಲಾಯಿತು. ಅಲ್ಲಿ ಅವರು ಹಲವು ವರ್ಷಗಳ ಕಾಲ ಬಲವಂತದ ದುಡಿಮೆಯನ್ನು ಅನುಭವಿಸಿದರು.
“ಪ್ರತಿ ಬಾರಿ ದಿವ್ಯಬಲಿಪೂಜೆ ನೆರವೇರಿಸಿದಾಗಲೂ ನನ್ನ ಜೀವವನ್ನು ಪಣಕ್ಕಿಟ್ಟಿದ್ದೆ”
ಕಾರ್ಡಿನಲ್ ಸಿಮೋನಿಯವರು ತಮ್ಮ ಸೆರೆವಾಸದ ಅವಧಿಯಲ್ಲಿ ಲ್ಯಾಟಿನ್ ಭಾಷೆಯಲ್ಲಿ ತಮ್ಮ ನೆನಪಿನ ಆಧಾರದಲ್ಲಿ ದಿವ್ಯಬಲಿಪೂಜೆಯನ್ನು ನೆರವೇರಿಸುತ್ತಿದ್ದೆ ಎಂದು ಸ್ಮರಿಸಿದರು. “ಪ್ರತಿ ಬಾರಿಯೂ ನನ್ನ ಜೀವವನ್ನು ಪಣಕ್ಕಿಡುತ್ತಿದ್ದೆ” ಎಂದು ಅವರು ಹೇಳಿದರು. ಅವರು ಗುಪ್ತವಾಗಿ ಪಾಪಸ್ವೀಕಾರಗಳನ್ನು ಆಲಿಸುತ್ತಿದ್ದರು ಹಾಗೂ ಪವಿತ್ರ ಪ್ರಸಾದವನ್ನೂ ವಿತರಿಸುತ್ತಿದ್ದರು.
ತಾತ್ಕಾಲಿಕವಾಗಿ ನಿರ್ಮಿಸಲಾದ ಒಲೆಗಳಲ್ಲಿ ಹಿಟ್ಟನ್ನು ಬೇಯಿಸಿ ರೊಟ್ಟಿಯನ್ನು ತಯಾರಿಸುತ್ತಿದ್ದೆವು, ದಿವ್ಯಬಲಿಪೂಜೆಗಾಗಿ ದ್ರಾಕ್ಷಿಯಿಂದ ಹಿಂಡಿದ ರಸವನ್ನು ಬಳಸುತ್ತಿದ್ದೆವು ಎಂದು ವಿವರಿಸಿದ ಅವರು, “ಅವರು ನನ್ನನ್ನು ಕಂಡುಹಿಡಿದಿದ್ದರೆ, ತಕ್ಷಣವೇ ನನ್ನನ್ನು ಗಲ್ಲಿಗೇರಿಸುತ್ತಿದ್ದರು” ಎಂದು ಹೇಳಿದರು.
ವಾಸ್ತವವಾಗಿ, ಶುಕ್ರವಾರದ ದಿವ್ಯಬಲಿಪೂಜೆಯ ಸಂದರ್ಭದಲ್ಲಿ, ಯುವ ಧರ್ಮಗುರುವಾಗಿದ್ದಾಗ ಗಣಿಗಳಲ್ಲಿ ಭೂಗತವಾಗಿ ಕೆಲಸ ಮಾಡಲು ಕಳುಹಿಸಲ್ಪಟ್ಟಾಗ ತಾವು ಧರಿಸಿದ್ದ ಗಣಿ ಕಾರ್ಮಿಕರ ಶಿರಸ್ತ್ರಾಣವನ್ನು ಕಾರ್ಡಿನಲ್ ಅವರು ಅಲ್ಲಿದ್ದವರಿಗೆ ತೋರಿಸಿದರು.
ಗುರುತು ಇಲ್ಲದ ಸಮಾಧಿಗಳಲ್ಲಿ ಹೂಳಲ್ಪಟ್ಟವರಿಗಾಗಿ ಜಗದ್ಗುರುಗಳ ಪ್ರಾರ್ಥನೆ
ಆ ಹಿಂಸಾಚಾರದ ವರ್ಷಗಳನ್ನು ಸ್ಮರಿಸುತ್ತಾ ಜಗದ್ಗುರು ಲಿಯೋ ರವರು ಹೀಗೆ ಬರೆದಿದ್ದಾರೆ:
“ಆ ಸ್ಥಳದಿಂದ ಸ್ವರ್ಗದತ್ತ ಎಷ್ಟು ಪ್ರಾರ್ಥನೆಗಳು ಏರಿರಬಹುದು? ಎಷ್ಟು ಬೇಡಿಕೆಗಳು ಮೌನವಾಗಿ ಪಿಸುಗುಟ್ಟಲ್ಪಟ್ಟಿರಬಹುದು? ಕಷ್ಟ ಮತ್ತು ಕೊರತೆಯ ಗುರುತು ಹೊತ್ತ ಎಷ್ಟು ಮುಖಗಳು ತಮ್ಮ ಅಂತಿಮ ನಿರೀಕ್ಷೆಯನ್ನು ಕರ್ತನಿಗೆ ಒಪ್ಪಿಸಿರಬಹುದು?”
ಈ ಪುರುಷರು ಮತ್ತು ಮಹಿಳೆಯರಲ್ಲಿ ಅನೇಕರು ಗುರುತು ಇಲ್ಲದ ಸಮಾಧಿಗಳಲ್ಲಿ ಹೂಳಲ್ಪಟ್ಟಿದ್ದರು. ಅವರಿಗಾಗಿ ಜಗದ್ಗುರುಗಳು ಪ್ರಾರ್ಥನೆಯಲ್ಲಿ ಒಂದಾದರು. ಅವರಿಗಾಗಿ ಶೋಕಿಸಲು ಅಥವಾ ಅವರ ಸ್ಮರಣಾರ್ಥ ಒಂದು ಹೂವನ್ನು ಅರ್ಪಿಸಲು ಕೂಡ ಯಾರಿಗೂ ಸಾಧ್ಯವಾಗಿರಲಿಲ್ಲ.
“ಅವರ ಸ್ಮರಣೆ ಜೀವಂತವಾಗಿರಲಿ,ಪ್ರತಿಯೊಬ್ಬ ಮಾನವನ ಉಲ್ಲಂಘಿಸಲಾಗದ ಘನತೆ, ಸ್ವಾತಂತ್ರ್ಯದ ಮೌಲ್ಯ ಮತ್ತು ಶಾಂತಿಗಾಗಿ ಬದ್ಧತೆಯನ್ನು ಹೊಸ ಪೀಳಿಗೆಗಳಿಗೆ ಸದಾ ನೆನಪಿಸುವ ನಿರಂತರ ಸಾಕ್ಷಿಯಾಗಿ ಅದು ಉಳಿಯಲಿ” ಎಂದು ಜಗದ್ಗುರುಗಳು ಪ್ರಾರ್ಥಿಸಿದರು.
