ಜಗದ್ಗುರು ಲಿಯೋರವರು: ‘ಸೆಯೂಟಾದಲ್ಲಿನ ಆತಂಕಕಾರಿ ಪರಿಸ್ಥಿತಿಯನ್ನು ನಾನು ಕಳವಳದಿಂದ ಗಮನಿಸುತ್ತಿದ್ದೇನೆ’.
ವ್ಯಾಟಿಕನ್ ವರದಿ
“ಸೆಯೂಟಾದಲ್ಲಿನ ಆತಂಕಕಾರಿ ಪರಿಸ್ಥಿತಿಯನ್ನು ನಾನು ಕಳವಳದಿಂದ ಗಮನಿಸುತ್ತಿದ್ದೇನೆ. ಆಫ್ರಿಕಾದ ಮಾತೆಯ ಮಧ್ಯಸ್ಥಿಕೆಯ ಮೂಲಕ, ಶಾಂತಿ, ಸ್ಥಿರತೆ ಮತ್ತು ನ್ಯಾಯದ ಪರಿಹಾರಗಳು ಕಂಡುಬರಲೆಂದು ದೇವರನ್ನು ಪ್ರಾರ್ಥಿಸುತ್ತೇನೆ.”
ಭಾನುವಾರ ವ್ಯಾಟಿಕನ್‌ನಲ್ಲಿ ತ್ರಿಕಾಲ ಪ್ರಾರ್ಥನೆಯನ್ನು ನೆರವೇರಿಸಿದ ಬಳಿಕ, ಜಗದ್ಗುರು XIVನೇ ಲಿಯೋರವರು ಸ್ಪ್ಯಾನಿಷ್ ಭಾಷೆಯಲ್ಲಿ ಈ ಮನವಿಯನ್ನು ಮಾಡಿದರು.
ಉತ್ತರ ಆಫ್ರಿಕಾದ ಕರಾವಳಿಯಲ್ಲಿ, ಮೊರೊಕ್ಕೊದ ಗಡಿಗೆ ಹೊಂದಿಕೊಂಡಿರುವ ಸ್ಪೇನ್‌ನ ಸ್ವಾಯತ್ತ ನಗರವಾದ ಸೆಯೂಟಾ, ತೀವ್ರವಾದ ವಲಸೆ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ, ಮೊರೊಕ್ಕೊದಿಂದ ಸೆಯೂಟಾ ಪ್ರದೇಶಕ್ಕೆ ಪ್ರವೇಶಿಸಲು ಹತ್ತಾರು ಸಾವಿರ ಜನರು ಪ್ರಯತ್ನಿಸಿದ್ದಾರೆ. ಇದರಿಂದ ವಲಸಿಗರ ಸ್ವಾಗತ ಮತ್ತು ಆಶ್ರಯ ಸೌಲಭ್ಯಗಳ ಮೇಲೆ ಭಾರೀ ಒತ್ತಡ ಉಂಟಾಗಿದ್ದು, ಸ್ಪೇನ್ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲು ಮುಂದಾಗಿದೆ.
ಈ ಬಿಕ್ಕಟ್ಟಿನ ನಡುವೆ, ಸಮುದ್ರದ ಮೂಲಕ ಅಪಾಯಕಾರಿ ರೀತಿಯಲ್ಲಿ ಗಡಿ ದಾಟಲು ನಡೆದ ಪ್ರಯತ್ನಗಳಲ್ಲಿ ಕನಿಷ್ಠ 67 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಯಿಟರ್ಸ್ ವರದಿ ಪ್ರಕಾರ, ಮೃತಪಟ್ಟವರಲ್ಲಿ ಬಹುತೇಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಅಥವಾ ಅಸ್ತವ್ಯಸ್ತವಾಗಿ ಗಡಿ ದಾಟುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಮೃತಪಟ್ಟಿದ್ದಾರೆ.
ಯುದ್ಧಗಳು ಕೊನೆಗೊಳ್ಳಲೆಂದು ಪ್ರಾರ್ಥನೆ
ನಂತರ ಜಗದ್ಗುರುಗಳು ಯುದ್ಧಗಳಿಂದ ಸಂಕಷ್ಟ ಅನುಭವಿಸುತ್ತಿರುವ ಎಲ್ಲರ ಕಡೆಗೆ ತಮ್ಮ ಗಮನ ಹರಿಸಿದರು.
“ಶಾಂತಿಗಾಗಿ ನಾವು ಪ್ರಾರ್ಥಿಸುವುದನ್ನು ಮುಂದುವರಿಸೋಣ. ವಿಶ್ವದಾದ್ಯಂತ ಯುದ್ಧಗಳು ಕೊನೆಗೊಳ್ಳಲಿ ಮತ್ತು ಸಂಘರ್ಷಗಳಿಗೆ ರಾಜತಾಂತ್ರಿಕ ಪರಿಹಾರಗಳು ಕಂಡುಬರಲಿ” ಎಂದು ಅವರು ಹೇಳಿದರು.
ವಿಶೇಷವಾಗಿ ಯುದ್ಧದ ಬಲಿಪಶುಗಳನ್ನು, ಅದರಲ್ಲೂ “ಅತ್ಯಂತ ದುರ್ಬಲರು ಮತ್ತು ಅಸಹಾಯಕರನ್ನು” ಸ್ಮರಿಸಿದ ಅವರು, ಮಕ್ಕಳು, ವೃದ್ಧರು ಮತ್ತು ರೋಗಿಗಳಿಗಾಗಿ ಪ್ರಾರ್ಥಿಸಿದರು.
“ಸಂಕಷ್ಟದಲ್ಲಿರುವವರಿಗೆ ಸಾಂತ್ವನ ನೀಡಲಿ ಮತ್ತು ನೆರವು ಹಾಗೂ ಸಮಾಧಾನವನ್ನು ಒದಗಿಸುವ ಎಲ್ಲರ ಸೇವಾಕಾರ್ಯಗಳನ್ನು ಆಶೀರ್ವದಿಸಲಿ” ಎಂದು ಜಗದ್ಗುರು ಲಿಯೋರವರು ಪ್ರಾರ್ಥಿಸಿದರು.
ಅಸ್ಸಿಸಿಯ ಕ್ಷಮಾದಾನ
ಕೊನೆಯದಾಗಿ, ಈ ವಾರಾಂತ್ಯದಲ್ಲಿ ಆಚರಿಸಲಾಗುತ್ತಿರುವ ಅಸ್ಸಿಸಿಯ ಕ್ಷಮಾದಾನವನ್ನು ಜಗದ್ಗುರುಗಳು ಸ್ಮರಿಸಿದರು. ಈ ಮಹಾನ್ ಆಧ್ಯಾತ್ಮಿಕ ವರಕ್ಕಾಗಿ ಕೃತಜ್ಞತೆ ಸಲ್ಲಿಸಿ, ಅದನ್ನು ಅಮೂಲ್ಯವಾಗಿ ಕಾಪಾಡಿಕೊಳ್ಳುವಂತೆ ಅವರು ವಿಶ್ವಾಸಿಗಳಿಗೆ ಕರೆ ನೀಡಿದರು.
ಅಸ್ಸಿಸಿಯ ಕ್ಷಮಾದಾನವು ಸಾಂಪ್ರದಾಯಿಕವಾಗಿ ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರೊಂದಿಗೆ ಸಂಬಂಧ ಹೊಂದಿರುವ ಪೂರ್ಣ ಕ್ಷಮಾದಾನವಾಗಿದೆ. ಪಾಪಸಮ್ಮಿಲನದ ಸಂಸ್ಕಾರ ಮತ್ತು ಪವಿತ್ರ ಪ್ರಸಾದವನ್ನು ಸ್ವೀಕರಿಸುವುದು, ಒಂದು ಧರ್ಮ ಕೇಂದ್ರದ ದೇವಾಲಯ ಅಥವಾ ಫ್ರಾನ್ಸಿಸ್ಕನ್ ಧರ್ಮ ಸಭೆಗೆ ಭೇಟಿ ನೀಡುವುದು, ವಿಶ್ವಾಸಪ್ರಮಾಣವನ್ನು ಪಠಿಸುವುದು, ಪ್ರಭುವಿನ ಪ್ರಾರ್ಥನೆಯನ್ನು ಸಲ್ಲಿಸುವುದು ಮತ್ತು ಜಗದ್ಗುರುಗಳು ಹಾಗೂ ಅವರ ಉದ್ದೇಶಗಳಿಗಾಗಿ ಪ್ರಾರ್ಥಿಸುವುದರ ಮೂಲಕ ಇದನ್ನು ಪಡೆಯಬಹುದು.
“ಅಸ್ಸಿಸಿಯ ಕ್ಷಮಾದಾನ”ದ ಪರಂಪರೆ 1216ನೇ ವರ್ಷಕ್ಕೆ ಹಿಂದಿರುಗುತ್ತದೆ. ಆ ಸಮಯದಲ್ಲಿ, ಇಟಲಿಯ ಅಸ್ಸಿಸಿ ಪಟ್ಟಣದಲ್ಲಿ ಸಂತ ಫ್ರಾನ್ಸಿಸ್ ನಿರ್ಮಿಸಿದ್ದ ಸಣ್ಣ ಪೊರ್ಜಿಯುಂಕೋಲಾ ಪ್ರಾರ್ಥನಾ ಮಂದಿರದಲ್ಲಿ, ಯೇಸು ಕ್ರಿಸ್ತ, ಕನ್ಯಾಮರಿ ಮತ್ತು ದೇವದೂತರು ಸಂತ ಫ್ರಾನ್ಸಿಸ್ ರವರಿಗೆ ಕಾಣಿಸಿಕೊಂಡರು.
ಆತ್ಮಗಳ ರಕ್ಷಣೆಗಾಗಿ ತಾನು ಏನು ಬಯಸುತ್ತಾನೆಂದು ಯೇಸು ಕೇಳಿದಾಗ, ಆ ಪ್ರಾರ್ಥನಾ ಮಂದಿರಕ್ಕೆ ಪ್ರವೇಶಿಸುವ ಎಲ್ಲರಿಗೂ ಸಂಪೂರ್ಣ ಕ್ಷಮಾದಾನವನ್ನು ದೇವರು ನೀಡುವಂತೆ ಸಂತ ಫ್ರಾನ್ಸಿಸ್ ವಿನಂತಿಸಿದರು.
ನಂತರ, ಆಗಸ್ಟ್ 1 ಅಥವಾ 2ರಂದು ಒಂದು ಧರ್ಮ ಕೇಂದ್ರದ ದೇವಾಲಯ ಅಥವಾ ಫ್ರಾನ್ಸಿಸ್ಕನ್ ಧರ್ಮ ಸಭೆಗೆ ಭೇಟಿ ನೀಡುವ ಯಾರಿಗಾದರೂ ಈ ಕ್ಷಮಾದಾನವನ್ನು ಪಡೆಯುವ ಅವಕಾಶವನ್ನು ವಿಸ್ತರಿಸಲಾಯಿತು.
