ಹುಡುಕಿ

ಜಗದ್ಗುರು ಲಿಯೋರವರು ಸಾರ್ವಜನಿಕ ಭೇಟಿಯ ಮೊದಲು ಯಾತ್ರಾರ್ಥಿಗಳನ್ನು ಸ್ವಾಗತಿಸುತ್ತಾರೆ. ಜಗದ್ಗುರು ಲಿಯೋರವರು ಸಾರ್ವಜನಿಕ ಭೇಟಿಯ ಮೊದಲು ಯಾತ್ರಾರ್ಥಿಗಳನ್ನು ಸ್ವಾಗತಿಸುತ್ತಾರೆ.  (AFP or licensors)

ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳು: ಪ್ರಾರ್ಥನೆಯು ನಿರೀಕ್ಷೆಯ ಒಂದು ಕ್ರಿಯೆಯಾಗಿದೆ.

ಜಗದ್ಗುರು ಲಿಯೋರವರು ಎರಡನೇ ವ್ಯಾಟಿಕನ್ ಪರಿಷತ್ತಿನ “ಸಾಕ್ರೋಸಾಂಕ್ಟಮ್ ಕಾಂಸಿಲಿಯಮ್” ಎಂಬ ಆರಾಧನಾ ವಿಧಿವಿಧಾನಕ್ಕೆ ಸಂಬಂಧಿಸಿದ ಸಂವಿಧಾನದ ಕುರಿತು ತಮ್ಮ ಐದನೇ ಧರ್ಮೋಪದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಅವರು ಧಾರ್ಮಿಕ ಆರಾಧನೆಯ ಪ್ರಾರ್ಥನೆಯ ಧರ್ಮ ಸಭೆ-ಸಂಬಂಧಿತ ಆಯಾಮದ ಕುರಿತು ಚಿಂತನೆ ನಡೆಸಿ, ಆರಾಧನಾ ವಿಧಿಯನ್ನು “ದೇವರು ತನ್ನ ಪುತ್ರನ ಮೂಲಕ ಮಾನವಕುಲದ ಸಮೀಪಕ್ಕೆ ಬರುವ ತನ್ನ ಉಪಕ್ರಮದಲ್ಲಿ, ದೇವರು ಮತ್ತು ಮಾನವನ ಭೇಟಿಯಾಗುವ ಸ್ಥಳ” ಎಂದು ವಿವರಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಹಲವು ವಾರಗಳ ಬೇಸಿಗೆ ವಿಶ್ರಾಂತಿಯ ಬಳಿಕ, ಆಗಸ್ಟ್ 5ರ ಬುಧವಾರದಂದು ತಮ್ಮ ಸಾಮಾನ್ಯ ಸಭೆಗಳನ್ನು ಪುನರಾರಂಭಿಸಿದರು. ಸಂತ ಪೇತ್ರರ ಬಸಿಲಿಕಾದಲ್ಲಿ ಸೇರಿದ್ದ ಸಾವಿರಾರು ವಿಶ್ವಾಸಿಗಳನ್ನುದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಎರಡನೇ ವ್ಯಾಟಿಕನ್ ಪರಿಷತ್ತಿನ ಆರಾಧನಾ ವಿಧಿಗೆ ಸಂಬಂಧಿಸಿದ ಸಂವಿಧಾನವಾದ ಸಾಕ್ರೋಸಾಂಕ್ಟಮ್ ಕಾಂಸಿಲಿಯಮ್ ಕುರಿತು ತಮ್ಮ ಚಿಂತನೆಗಳನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಅವರು ಧಾರ್ಮಿಕ ಆರಾಧನೆಯ ಪ್ರಾರ್ಥನೆಯ ಮಹತ್ವದ ಕುರಿತು ಗಮನಹರಿಸಿದರು.

“ಪ್ರೇಷಿತರ ಪೌಲರು ಸೂಚಿಸುವಂತೆ, ನಮಗೆ ಪ್ರಾರ್ಥಿಸಲು ಕಲಿಸುವವರು ಪವಿತ್ರಾತ್ಮನೇ,” ಎಂದು ಜಗದ್ಗುರುಗಳು ಹೇಳಿದರು. “ಪಂಚಶತ್ರಮ ಹಬ್ಬದ ದಿನದಿಂದಲೂ ಪವಿತ್ರಾತ್ಮನು ಧರ್ಮ ಸಭೆಯಲ್ಲಿ ವಾಸಿಸುತ್ತಿದ್ದು, ಆಕೆಯ ಪ್ರತಿಯೊಂದು ಚಟುವಟಿಕೆಗೆ, ವಿಶೇಷವಾಗಿ ಪ್ರಾರ್ಥನೆಗೆ, ಪ್ರೇರಣೆ ನೀಡುತ್ತಾನೆ.” ಅಂದಿನಿಂದ ಧರ್ಮ ಸಭೆ “ಪಾಸ್ಕಾ ರಹಸ್ಯವನ್ನು ಆಚರಿಸಲು ಒಟ್ಟಾಗಿ ಸೇರುವುದನ್ನು ಎಂದಿಗೂ ನಿಲ್ಲಿಸಿಲ್ಲ” ಎಂದು ಅವರು ಗಮನಿಸಿದರು.

ಪ್ರಾರ್ಥನೆಯನ್ನು ಅದರ ನಿಜಸ್ವರೂಪದಲ್ಲಿ ಪುನಃ ಕಂಡುಕೊಳ್ಳುವುದು

“ನಮ್ಮ ಕಾಲದಲ್ಲಿ,” ಎಂದು ಜಗದ್ಗುರುಗಳು ಮುಂದುವರಿಸಿದರು, “ಕಾರ್ಯಕ್ಷಮತೆ ಮತ್ತು ಗ್ರಾಹಕವಾದ ಮನೋಭಾವದಿಂದ ಪ್ರಭಾವಿತವಾಗಿರುವ ಪರಿಸರದಲ್ಲಿ, ಪ್ರಾರ್ಥನೆಯು ಅರ್ಥಹೀನ ಮತ್ತು ಅಲ್ಪಪ್ರಧಾನವಾದ ಸಂಗತಿಯಂತೆ ತೋರುವ ಸಾಧ್ಯತೆಯಿದೆ.”

“ವಿಜ್ಞಾನ ಮತ್ತು ತಂತ್ರಜ್ಞಾನವೇ ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ಒದಗಿಸಬಲ್ಲವು” ಎಂದು ಹೇಳಿಕೊಳ್ಳುವ ಜಗತ್ತಿನಲ್ಲಿ, ಪ್ರಾರ್ಥನೆಯು ವಾಸ್ತವದಿಂದ ಪಾರಾಗುವ ಒಂದು ಮಾರ್ಗವಾಗಿರಬಹುದು ಅಥವಾ ವೈಯಕ್ತಿಕ ಕ್ಷೇಮವನ್ನು ಸಾಧಿಸುವ ಉದ್ದೇಶದ ಮತ್ತೊಂದು ಮನೋವೈಜ್ಞಾನಿಕ ವಿಧಾನವಾಗಿರಬಹುದು ಎಂಬಂತೆ ಕಾಣಬಹುದು. ಆದರೆ ಪ್ರಾರ್ಥನೆಯನ್ನು “ಅದರ ನಿಜಸ್ವರೂಪದಲ್ಲಿ ಪುನಃ ಕಂಡುಕೊಳ್ಳುವುದು ಅತ್ಯಂತ ಅಗತ್ಯ” ಎಂದು ಜಗದ್ಗುರುಗಳು ಒತ್ತಿಹೇಳಿದರು.

ದೇವರೊಂದಿಗೆ ಭೇಟಿಯಾಗುವ ಸ್ಥಳ

ಸಾಕ್ರೋಸಾಂಕ್ಟಮ್ ಕಾಂಸಿಲಿಯಮ್ ಸಂವಿಧಾನವು ಈ ಅಗತ್ಯವನ್ನು ಗಂಭೀರವಾಗಿ ಪರಿಗಣಿಸಿತು. ಪರಿಷತ್ತಿನ ಈ ದಾಖಲೆಯು “ಪ್ರಾರ್ಥನೆ” ಎಂಬ ಪದವು ಸಮಗ್ರ ಆರಾಧನಾ ವಿಧಿಯನ್ನು ಸೂಚಿಸುತ್ತದೆ ಎಂದು ಸ್ಥಾಪಿಸಿತು. ಈ ದೃಷ್ಟಿಕೋನವು ನಿರ್ಣಾಯಕವಾದದ್ದು ಎಂದು ಪವಿತ್ರ ಪಿತೃ ವಿವರಿಸಿದರು, “ಏಕೆಂದರೆ ಅದು ಧಾರ್ಮಿಕ ಆರಾಧನೆಯ ಸುಧಾರಣೆಗೆ ಮಾರ್ಗದರ್ಶನ ನೀಡಿ, ವಿಶ್ವಾಸಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಅದರ ಕೇಂದ್ರ ಸ್ತಂಭವನ್ನಾಗಿ ಮಾಡಿತು.”

ಆರಾಧನಾ ವಿಧಿಯನ್ನು ಮುಖ್ಯವಾಗಿ “ದೇವರು ತನ್ನ ಪುತ್ರನ ಮೂಲಕ ಮಾನವಕುಲದ ಸಮೀಪಕ್ಕೆ ಬರುವ ತನ್ನ ಉಪಕ್ರಮದಲ್ಲಿ ದೇವರು ಮತ್ತು ಮಾನವನ ಭೇಟಿಯಾಗುವ ಸ್ಥಳ” ಎಂದು ಪ್ರಸ್ತುತಪಡಿಸಲಾಗಿದೆ.

ದೈನಂದಿನ ಜೀವನವನ್ನು ಪವಿತ್ರೀಕರಿಸುವುದು

ಪ್ರತಿ ವಾರವೂ ಮತ್ತು ಪ್ರತಿದಿನವೂ ಯೂಕರಿಸ್ಟ್ ಹಾಗೂ ಕಾಲಗಳ ಪ್ರಾರ್ಥನೆಗಳು “ಧಮ೯ಸಭೆಯ ಜೀವನದ ಉಸಿರಾಗಿದ್ದು, ಪವಿತ್ರಾತ್ಮನು ಆಕೆಯ ದೇಹದಾದ್ಯಂತ ಹರಿಯುವಂತೆ ಮಾಡುತ್ತವೆ” ಎಂದು ಜಗದ್ಗುರುಗಳು ಹೇಳಿದರು.

ಈ ಪ್ರಾರ್ಥನೆಯಲ್ಲಿ ಕ್ರಿಸ್ತನು “ಸಮಸ್ತ ಮಾನವ ಸಮುದಾಯವನ್ನು ತನ್ನೊಂದಿಗೆ ಒಂದುಗೂಡಿಸಿ, ದೈವಿಕ ಸ್ತುತಿಯ ಈ ಗೀತೆಯನ್ನು ತಾನೇ ಹಾಡುವುದರಲ್ಲಿ ಅದನ್ನೂ ಪಾಲುಗಾರನನ್ನಾಗಿ ಮಾಡುತ್ತಾರೆ.”

“ಯೂಕರಿಸ್ಟ್‌ಗೆ ನಿಕಟವಾಗಿ ಸಂಬಂಧ ಹೊಂದಿರುವ ಮತ್ತು ಅದರ ಬೆಳಕನ್ನು ಮುಂದುವರಿಸುವ ಕಾಲಗಳ ಪ್ರಾರ್ಥನೆಯು ನಮ್ಮ ದೈನಂದಿನ ಜೀವನದ ಸಮಯವನ್ನು ಪವಿತ್ರಗೊಳಿಸುತ್ತದೆ,” ಎಂದು ಜಗದ್ಗುರು ಲಿಯೋರವರು ಹೇಳಿದರು. ಬಳಿಕ ಅವರು ಪ್ರಾರ್ಥನೆಯ ವಿವಿಧ ಸಮಯಗಳನ್ನು ವಿವರಿಸಿದರು:

“ಬೆಳಿಗ್ಗೆ, ವಿಶ್ವಾಸ ಮತ್ತು ಕೃತಜ್ಞತೆಯೊಂದಿಗೆ ನಾವು ದಿನವನ್ನು ಆರಂಭಿಸುತ್ತೇವೆ,ಮಧ್ಯಾಹ್ನ, ನಮ್ಮ ಕಾರ್ಯಗಳ ನಡುವೆ ನಿಷ್ಠೆಯಿಂದ ಉಳಿಯಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸುತ್ತೇವೆ; ಸಂಜೆ, ನಮ್ಮ ಕೆಲಸ ಮುಗಿದ ಬಳಿಕ, ಸೂರ್ಯಾಸ್ತದ ಸಮಯದಲ್ಲಿ ಸಂಧ್ಯಾ ಪ್ರಾರ್ಥನೆ ನಮ್ಮೊಂದಿಗೆ ಇರುತ್ತದೆ; ರಾತ್ರಿ, ದೇವರ ಶಾಂತಿಗೆ ನಮ್ಮನ್ನು ಒಪ್ಪಿಸಿ ನಿದ್ರೆಗೆ ಜಾರುತ್ತೇವೆ.”

ಜಗದ್ಗುರು ಲಿಯೋರವರು ತಮ್ಮ ಸಂದೇಶದ ಕೊನೆಯಲ್ಲಿ “ಪ್ರತಿಯೊಂದು ಪ್ರಾರ್ಥನಾ ಸಮಯವೂ ನಿರೀಕ್ಷೆಯ ಒಂದು ಕ್ರಿಯೆಯಾಗಿದೆ” ಎಂದು ಒತ್ತಿಹೇಳಿದರು. “ನಮ್ಮ ಭೌಮಿಕ ತೀರ್ಥಯಾತ್ರೆಯ ಸಂದರ್ಭದಲ್ಲಿ, ಇಡೀ ಧರ್ಮ ಸಭೆಯೊಂದಿಗೆ ಪ್ರಭುವಿನ ಮಹಿಮಾಮಯ ಪುನರಾಗಮನವನ್ನು ನಿರೀಕ್ಷಿಸುತ್ತಾ ನಾವು ಜಾಗೃತರಾಗಿರುತ್ತೇವೆ.”

05 ಆಗಸ್ಟ್ 2026, 17:21