ಜಗದ್ಗುರು ವಾಲ್ಡೆನ್ಸಿಯನ್ ಮಹಾಸಭೆಗೆ: ದೇವರ ಮಕ್ಕಳ ಸ್ವಾತಂತ್ರ್ಯಕ್ಕೆ ಒಟ್ಟಾಗಿ ಸಾಕ್ಷಿಯಾಗಿರಿ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಮೆಥಡಿಸ್ಟ್ ಮತ್ತು ವಾಲ್ಡೆನ್ಸಿಯನ್ ಧರ್ಮ ಸಭೆಗಳ ಮಹಾಸಭೆಗೆ ತಮ್ಮ “ಹೃತ್ಪೂರ್ವಕ ಶುಭಾಶಯಗಳನ್ನು” ಕಳುಹಿಸಿದ್ದಾರೆ. ಈ ಮಹಾಸಭೆಯು ಉತ್ತರ ಇಟಲಿಯ ಪೀಡ್ಮಾಂಟ್ ಪ್ರದೇಶದ ಟೊರೆ ಪೆಲ್ಲಿಚೆಯಲ್ಲಿ ಆಗಸ್ಟ್ 22, ಶನಿವಾರದಂದು ಆರಂಭಗೊಂಡಿತು.
ಪಿನೆರೋಲೊದ ಕಥೊಲಿಕ ಬಿಷಪ್ ಡೆರಿಯೊ ಒಲಿವೆರೊ ರವರಿಗೆ ಉದ್ದೇಶಿಸಿ ಕಳುಹಿಸಲಾದ ಈ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಸಹಿ ಹಾಕಿದ್ದಾರೆ.
ವಾಲ್ಡೆನ್ಸಿಯನ್ ಇವಾಂಜೆಲಿಕಲ್ ಧರ್ಮ ಸಭೆ ಇಟಲಿ, ಸ್ವಿಟ್ಜರ್ಲೆಂಡ್ ಮತ್ತು ದಕ್ಷಿಣ ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ಒಂದು ಪ್ರೊಟೆಸ್ಟಂಟ್ ಪಂಗಡವಾಗಿದ್ದು, ಇದು ಮೆಥಡಿಸ್ಟ್ ಇವಾಂಜೆಲಿಕಲ್ ಧರ್ಮ ಸಭೆಯೊಂದಿಗೆ ಏಕೀಕೃತವಾಗಿದೆ.
ಮೆಥಡಿಸ್ಟ್ ಮತ್ತು ವಾಲ್ಡೆನ್ಸಿಯನ್ ಧರ್ಮ ಸಭೆಗಳ ಒಕ್ಕೂಟದ ಮಹಾಸಭೆಯು 2026ರ ಆಗಸ್ಟ್ 22ರಿಂದ 26ರವರೆಗೆ ಟೊರಿನ್ ಪ್ರಾಂತ್ಯದ ಟೊರೆ ಪೆಲ್ಲಿಚೆಯಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಅದರ ಕಾರ್ಯಸೂಚಿ ಹಾಗೂ ಭವಿಷ್ಯದ ಆದ್ಯತೆಗಳ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ.
ಮಹಾಸಭೆಯ ಕಲಾಪಗಳಲ್ಲಿ ಶಾಂತಿ, ಸಾಮಾಜಿಕ ನ್ಯಾಯ, ಕ್ರೈಸ್ತರ ಐಕ್ಯತೆ (ಏಕ್ಯಮತ), ಮಾನವ ಹಕ್ಕುಗಳು, ದುರ್ಬಲರು ಮತ್ತು ಅಸಹಾಯಕರ ರಕ್ಷಣೆ, ಸುಸ್ಥಿರತೆ ಹಾಗೂ ಇಂದಿನ ಜಗತ್ತಿನಲ್ಲಿ ಕ್ರೈಸ್ತ ಸಾಕ್ಷಿಗೆ ಎದುರಾಗಿರುವ ಸವಾಲುಗಳು ಸೇರಿದಂತೆ ವ್ಯಾಪಕವಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸ್ವಾತಂತ್ರ್ಯಕ್ಕೆ ಒಟ್ಟಾಗಿ ಸಾಕ್ಷಿಯಾಗಲು ಕರೆಯಲ್ಪಟ್ಟ ಕ್ರೈಸ್ತರು
ಮಹಾಸಭೆಯ ಉದ್ಘಾಟನಾ ಕಾರ್ಯಕ್ರಮಗಳ ಹಿಂದಿನ ದಿನದ ಪ್ರಮುಖ ವಿಷಯವಾಗಿದ್ದ ಕೃತಕ ಬುದ್ಧಿಮತ್ತೆಯ ಕುರಿತು ಜಗದ್ಗುರುಗಳು ತಮ್ಮ ಸಂದೇಶದಲ್ಲಿ ಚಿಂತನೆ ವ್ಯಕ್ತಪಡಿಸಿದ್ದಾರೆ.
“ಮಾನವೀಯತೆಯನ್ನು ಮೀರಿ ಹೋಗುವಂತೆ ತೋರುವ ಡಿಜಿಟಲ್ ಕ್ರಾಂತಿಯ ಸಂದರ್ಭದಲ್ಲಿ,” ಎಂದು ಸಂದೇಶದಲ್ಲಿ ಹೇಳಲಾಗಿದೆ, “ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟ ಮಾನವರ ಸ್ವಾತಂತ್ರ್ಯಕ್ಕೆ ಕ್ರೈಸ್ತರು ಒಟ್ಟಾಗಿ ಸಾಕ್ಷಿಯಾಗಲು ಕರೆಯಲ್ಪಟ್ಟಿದ್ದಾರೆ ಎಂಬುದನ್ನು ಗುರುತಿಸುವಂತೆ ಜಗದ್ಗುರುಗಳು ಆಗ್ರಹಿಸುತ್ತಾರೆ.”
ಅತ್ಯುನ್ನತ ಮಾನವೀಯತೆ ವಿಶ್ವಪತ್ರಿಕೆಯಲ್ಲಿನ ಒಂದು ಭಾಗವನ್ನು ಸ್ಮರಿಸುತ್ತಾ, ಜಗದ್ಗುರು XIVನೇ ಲಿಯೋರವರು “ಮಾನವ ಹೃದಯವು ಹಿಂಜರಿಯಲು ಅವಕಾಶ ನೀಡದೆ ತಂತ್ರಜ್ಞಾನವನ್ನು ಮುಂದುವರಿಸುವ” ಅಗತ್ಯವನ್ನು ಒತ್ತಿಹೇಳಿದ್ದಾರೆ.
ಈ ಆಶಯದೊಂದಿಗೆ, ಅವರು ಪವಿತ್ರಾತ್ಮನ ವರಗಳಿಗಾಗಿ ಪ್ರಾರ್ಥಿಸಿ, ಮಹಾಸಭೆಯ ಮೇಲೆ ಪ್ರಭುವಿನ ಆಶೀರ್ವಾದ ಇರಲೆಂದು ಹಾರೈಸಿದರು.
