ಹುಡುಕಿ

ಪೋರ್ಚುಗಲ್‌ನ ಯುವಜನರಿಗೆ ಪೋಪ್ ಲಿಯೋ ಹದಿನಾಲ್ಕನೇ ಅವರ ವೀಡಿಯೊ ಸಂದೇಶ. ಪೋರ್ಚುಗಲ್‌ನ ಯುವಜನರಿಗೆ ಪೋಪ್ ಲಿಯೋ ಹದಿನಾಲ್ಕನೇ ಅವರ ವೀಡಿಯೊ ಸಂದೇಶ.  (ANSA)

ಜಗದ್ಗುರುಗಳು ಪೋರ್ಚುಗೀಸ್ ಯುವಕರಿಗೆ: ಶಾಂತಿ ಮತ್ತು ಸಹೋದರಭಾವದ ನಾಡಿನ ಕನಸು ಕಾಣುವುದನ್ನು ಎಂದಿಗೂ ಬಿಡಬೇಡಿ.

ಜಗದ್ಗುರು ಲಿಯೋರವರು ಪೋರ್ಚುಗಲ್‌ನ ಯುವಜನರಿಗೆ ತಮ್ಮ ಅಂತರಂಗದ ಅಶಾಂತಿ ಮತ್ತು ಹುಡುಕಾಟದ ಮನೋಭಾವವು ದೇವರತ್ತ ಇನ್ನಷ್ಟು ಹತ್ತಿರವಾಗುವಂತೆ ಮಾಡಲಿ ಎಂದು ಪ್ರೋತ್ಸಾಹಿಸಿದರು. ಅಲ್ಲದೆ, ತಮ್ಮ ಜೀವನದ ಅತ್ಯಂತ ಮಹತ್ವದ ಪ್ರಶ್ನೆಗಳನ್ನೂ ಹೃದಯದಾಳದ ಆಳವಾದ ಆಕಾಂಕ್ಷೆಗಳನ್ನೂ ದೇವರ ಸನ್ನಿಧಿಯಲ್ಲಿ ಇರಿಸುವಂತೆ ಅವರು ಆಹ್ವಾನಿಸಿದರು.

ವ್ಯಾಟಿಕನ್ ವರದಿ

2026ರ ಜುಲೈ 26ರಂದು ಬಿಡುಗಡೆಗೊಂಡ ವೀಡಿಯೊ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಪೋರ್ಚುಗಲಿನ ಯುವಜನರಿಗೆ, ತಮ್ಮ ಅಂತರಂಗದ ಅಶಾಂತಿಯು ತಮ್ಮನ್ನು ಕ್ರಿಸ್ತನಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಲಿ ಹಾಗೂ ತಾವು ಪವಿತ್ರತೆಗೆ ಕರೆಯಲ್ಪಟ್ಟವರಾಗಿದ್ದೀರಿ ಎಂಬುದನ್ನು ಸದಾ ನೆನಪಿನಲ್ಲಿಡುವಂತೆ ಕರೆ ನೀಡಿದರು.

"ನಿಮ್ಮೊಳಗಿರುವ ಅಶಾಂತಿಗೆ ಹೆದರಬೇಡಿ! ಅದು ನಿಮ್ಮನ್ನು ಕ್ರಿಸ್ತನಿಗೆ ಇನ್ನಷ್ಟು ಹತ್ತಿರವಾಗುವಂತೆ ಪ್ರೇರೇಪಿಸಲಿ ಮತ್ತು ಸುವಾರ್ತೆಯ ಮೌಲ್ಯಗಳಿಗೆ ಸಾಕ್ಷಿಯಾಗುವಂತೆ ಮಾಡಲಿ. ಯೇಸುವಿನ ವಾಕ್ಯದಲ್ಲಿ ದೃಢವಾಗಿ ಬೇರೂರಿ, ಪ್ರತಿದಿನ ಸುವಾರ್ತೆಯನ್ನು ಓದಿ. ಶಾಂತಿ ಮತ್ತು ಸಹೋದರಭಾವ ನೆಲೆಸಿರುವ ನಾಡಿನ ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ. ಲೋಕವನ್ನು ವಿಸ್ಮಯದ ಕಣ್ಣಿನಿಂದ ನೋಡುವುದನ್ನಾಗಲಿ, ಭರವಸೆಯ ಬೆಳಕಿನೊಂದಿಗೆ ಭವಿಷ್ಯವನ್ನು ಎದುರಿಸುವುದನ್ನಾಗಲಿ ಎಂದಿಗೂ ಬಿಡಬೇಡಿ," ಎಂದು ಅವರು ಹೇಳಿದರು.

"ಪ್ರಿಯ ಯುವಕರೇ, ನಿಮ್ಮ ಭರವಸೆಯನ್ನು ಯಾವುದಕ್ಕೂ ಅಥವಾ ಯಾರಿಗೂ ಕಸಿದುಕೊಳ್ಳಲು ಅವಕಾಶ ನೀಡಬೇಡಿ!"

ಜುಲೈ 24ರಿಂದ 26ರವರೆಗೆ ನಡೆಯುತ್ತಿರುವ ಎರಡನೇ "ರಿಜಾಯ್ಸ್ ರಾಷ್ಟ್ರೀಯ ಯುವ ದಿನ" ಸಮಾವೇಶದ ಪ್ರಯುಕ್ತ ಜಗದ್ಗುರುಗಳು ಈ ವೀಡಿಯೊ ಸಂದೇಶವನ್ನು ಕಳುಹಿಸಿದರು.

"ಲಮೇಗೊ ನಗರದಲ್ಲಿ ನಿಮ್ಮ ಈ ಸಂತೋಷಭರಿತ ಸಮಾಗಮವನ್ನು ಮುಂದುವರಿಸಿ! ಮತ್ತು 2027ರ ಆಗಸ್ಟ್‌ನಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯಲಿರುವ ಮುಂದಿನ ವಿಶ್ವ ಯುವಜನ ದಿನಾಚರಣೆಯಲ್ಲಿ ನಿಮ್ಮನ್ನು ಭೇಟಿಯಾಗುವ ನಿರೀಕ್ಷೆಯಿದೆ," ಎಂದು ಅವರು ಹೇಳಿದರು.

ಪವಿತ್ರರಾಗಿರಿ ಮತ್ತು ದೇವರೊಂದಿಗೆ ಸಂವಾದ ನಡೆಸಿರಿ

ತಮ್ಮ ವೀಡಿಯೊ ಸಂದೇಶದಲ್ಲಿ ಜಗದ್ಗುರುಗಳು ಯುವಜನರಿಗೆ "ಮುಂದೆ ಸಾಗುತ್ತಲೇ ಇರಿ" ಎಂದು ಪ್ರೋತ್ಸಾಹಿಸಿದರು. ಯುವಕರ ವೈಶಿಷ್ಟ್ಯವೇ ಆಗಿರುವ "ಅಶಾಂತ ಮನೋಭಾವ"ವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಜೀವನದ ಮಹತ್ವದ ಪ್ರಶ್ನೆಗಳ ಕುರಿತು ಚಿಂತನೆ ನಡೆಸುವಂತೆ ಅವರು ಯುವಕರನ್ನು ಆಹ್ವಾನಿಸಿದರು. ತಮ್ಮೊಳಗಿನ ಅಶಾಂತಿ ಹಾಗೂ ಜೀವನದ ಎಲ್ಲ ಸಂಕಷ್ಟಗಳನ್ನು ಪ್ರಾರ್ಥನೆ ಮತ್ತು ಮೌನದ ಕ್ಷಣಗಳಲ್ಲಿ ದೇವರ ಮುಂದೆ ಇಟ್ಟು, ಅವರೊಂದಿಗೆ ಸಂವಾದ ನಡೆಸುವಂತೆ ಕರೆ ನೀಡಿದರು.

"ಪ್ರಭುವೇ, ಧರ್ಮ ಸಭೆಯಲ್ಲಿಯೂ ಲೋಕದಲ್ಲಿಯೂ ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ? ನನ್ನ ಜೀವನದ ಕರೆಯೇನು? ವಿವಾಹದ ಮೂಲಕ ಒಂದು ಕುಟುಂಬವನ್ನು ಕಟ್ಟಲು ನನ್ನನ್ನು ಕರೆಯುತ್ತಿದ್ದೀರಾ? ಅಥವಾ ಯಾಜಕತ್ವಕ್ಕೆ? ಅಥವಾ ಧಾರ್ಮಿಕ ಜೀವನಕ್ಕೆ?" ಎಂಬ ಪ್ರಶ್ನೆಗಳನ್ನು ದೇವರಲ್ಲಿ ಕೇಳಿರಿ. "ಇವು ಅತ್ಯಂತ ಮಹತ್ವದ ಪ್ರಶ್ನೆಗಳಾಗಿವೆ," ಎಂದು ಜಗದ್ಗುರುಗಳು ಒತ್ತಿ ಹೇಳಿದರು.

ಆದರೆ, ನಮ್ಮ ಅಂತರಂಗದ ಜೀವನಕ್ಕೆ ಏಕತೆಯನ್ನು ನೀಡುವ ಒಂದು ನಿಶ್ಚಿತ ಸತ್ಯವನ್ನು ಎಂದಿಗೂ ಮರೆಯಬಾರದು ಎಂದು ಅವರು ನೆನಪಿಸಿದರು. "ದೇವರು ಯಾವಾಗಲೂ ನಮ್ಮನ್ನು ಪವಿತ್ರತೆಗೆ ಕರೆಯುತ್ತಾರೆ. ಪವಿತ್ರರು ಆಳವಾದ ಮಾನವೀಯತೆಯನ್ನು ಹೊಂದಿದವರಾಗಿದ್ದಾರೆ. ಆದ್ದರಿಂದ ಕ್ರಿಸ್ತನಂತೆಯೇ ನಿಜವಾದ ಮಾನವರಾಗಿರಿ; ಆಗ ನೀವು ಖಂಡಿತವಾಗಿಯೂ ಈ ಲೋಕವನ್ನು ಉತ್ತಮವಾಗಿ ಪರಿವರ್ತಿಸುವಿರಿ," ಎಂದು ಅವರು ಹೇಳಿದರು.

ದೇವರು ನಮ್ಮ ಹೃದಯದ ಆಳದಲ್ಲಿ ನಮ್ಮನ್ನು ಎದುರು ನೋಡುತ್ತಿದ್ದಾರೆ

2023ರಲ್ಲಿ ಲಿಸ್ಬನ್‌ನಲ್ಲಿ ನಡೆದ ವಿಶ್ವ ಯುವಜನ ದಿನಾಚರಣೆಯ ಜ್ವಾಲೆಯನ್ನು ಜೀವಂತವಾಗಿಡುವ ಉದ್ದೇಶದಿಂದ ಯುವಕರು ಒಂದಾಗಿ ಸೇರಿರುವುದನ್ನು ಹಾಗೂ ಅವರ ಉತ್ಸಾಹವನ್ನು ಜಗದ್ಗುರುಗಳು ಪ್ರಶಂಸಿಸಿದರು.

"ಯುವಕರೊಂದಿಗೆ ಇರುವುದು ಯಾವಾಗಲೂ ವಿಶೇಷ ಅನುಭವ. ಏಕೆಂದರೆ ನಿಮ್ಮ ನಂಬಿಕೆಯ ಉತ್ಸಾಹವು ಇತರರಿಗೂ ಪ್ರೇರಣೆ ನೀಡುತ್ತದೆ," ಎಂದು ಅವರು ಹೇಳಿದರು. 2025ರಲ್ಲಿ ರೋಮಿನಲ್ಲಿ ನಡೆದ ಯುವಜನ ಜುಬಿಲಿ ಹಾಗೂ ಈ ವರ್ಷದ ಜೂನ್ ತಿಂಗಳಲ್ಲಿ ಸ್ಪೇನಿನಲ್ಲಿ ಯುವಕರೊಂದಿಗೆ ನಡೆದ ತಮ್ಮ ಭೇಟಿಯನ್ನು ಅವರು ನೆನಪಿಸಿಕೊಂಡರು.

"ಕ್ರಿಸ್ತನ ಮೇಲಿನ ನಿಮ್ಮ ಪ್ರೀತಿ ನನಗೆ ಅಪಾರ ಸಾಂತ್ವನವನ್ನು ನೀಡುತ್ತದೆ. ಇಂದಿನ ಕಾಲದಲ್ಲಿ ನಿಮ್ಮಂತಹ ಯುವಕರು ನಂಬಿಕೆಯಿಂದ ತುಂಬಿ, ಅದನ್ನು ಧೈರ್ಯದಿಂದ ಬಹಿರಂಗವಾಗಿ ವ್ಯಕ್ತಪಡಿಸುವುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ," ಎಂದು ಅವರು ಹೇಳಿದರು.

"ನೀವು ಸತ್ಯಕ್ಕಾಗಿ ಆಳವಾದ ದಾಹವನ್ನು ಹೊಂದಿದ್ದು, ಅದನ್ನು ಪ್ರಾಮಾಣಿಕ ಹೃದಯದಿಂದ ಹುಡುಕುತ್ತಿರುವುದನ್ನು ನೋಡುವುದು ಸುಂದರವಾಗಿದೆ. ನ್ಯಾಯ ಮತ್ತು ಪ್ರೀತಿಗಾಗಿ ನೀವು ಹಸಿದಿರುವಿರಿ ಹಾಗೂ ಕ್ಷಣಿಕ ಮೌಲ್ಯಗಳಿಂದ ತೃಪ್ತರಾಗುವುದಿಲ್ಲ ಎಂಬುದನ್ನು ನೋಡುವುದು ಸಂತೋಷಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಆದಿಕಾಲದಿಂದಲೂ ಇರುವ ಮತ್ತು ಸದಾ ನೂತನವಾಗಿರುವ ಸೌಂದರ್ಯವನ್ನು ಅಂದರೆ ನಮ್ಮ ಹೃದಯದ ಆಳದಲ್ಲಿ ನಮ್ಮನ್ನು ಎದುರು ನೋಡುತ್ತಿರುವ ನಮ್ಮ ದೇವರನ್ನು ನೀವು ಪ್ರೀತಿಸುವುದನ್ನು ನೋಡುವುದು ಅತ್ಯಂತ ಸುಂದರವಾಗಿದೆ," ಎಂದು ಜಗದ್ಗುರುಗಳು ಹೇಳಿದರು.

ಕ್ರಿಸ್ತನು "ನಮ್ಮೊಂದಿಗಿದ್ದಾನೆ; ಆತನೇ ನಮ್ಮ ಸಂತೋಷದ ಕಾರಣ. ಆತನೇ ನಮ್ಮ ಏಕತೆಯ ಮೂಲ. ಇಲ್ಲೊ ಉನೊ ಉನಮ್‌ನಲ್ಲಿ — 'ನಾವು ಅನೇಕರಾಗಿದ್ದರೂ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದೇವೆ,'" ಎಂದು ಅವರು ಸಂತ ಪೌಲರ ರೋಮಾಪುರದವರಿಗೆ ಬರೆದ ಪತ್ರದ 12ನೇ ಅಧ್ಯಾಯದ 5ನೇ ವಚನವನ್ನು ಉಲ್ಲೇಖಿಸಿದರು.

ಕೊನೆಯಲ್ಲಿ, ಯುವಕರು ಎಲ್ಲಿದ್ದರೂ ಸದಾ ಸಂತೋಷದಿಂದಿರಬೇಕೆಂದು ಜಗದ್ಗುರುಗಳು ಪ್ರೋತ್ಸಾಹಿಸಿದರು ಮತ್ತು ಈ ಸಮಾವೇಶದಲ್ಲಿ ಭಾಗವಹಿಸಿರುವ ಎಲ್ಲರ ಮೇಲೂ "ಸ್ವರ್ಗೀಯ ಕೃಪೆಗಳ ಸಮೃದ್ಧಿ ಸುರಿಯಲಿ" ಎಂದು ಆಶೀರ್ವದಿಸಿದರು.

26 ಜುಲೈ 2026, 17:06