ಹುಡುಕಿ

2026.07.25 VMSG Giovani Diocesi Chota e Cutervo

"ಮರೆಯಲ್ಪಟ್ಟವರ ಸೇವೆಗೆ ಪವಿತ್ರ ಬಂಡಾಯದ ಮನೋಭಾವದಿಂದ ಮುಂದಾಗಿರಿ ಎಂದು ಪೆರುವಿನ ಯುವಕರಿಗೆ ಜಗದ್ಗುರುಗಳ ಕರೆ."

ಚೋಟಾ ಮತ್ತು ಕುಟೆರ್ವೊದ ಯುವಜನತೆಗೆ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು "ಪವಿತ್ರ ಬಂಡಾಯ" ಎಂಬ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದು, ಸಂತೋಷಭರಿತ ಸೇವೆಯ ಮೂಲಕ ದುಃಖ ಮತ್ತು ನೋವಿನಿಂದ ಕೂಡಿರುವ ಪರಿಸ್ಥಿತಿಗಳನ್ನು ಆಶಾಭರವಿನ ತಾಣಗಳಾಗಿ ಪರಿವರ್ತಿಸಬೇಕೆಂದು ಉತ್ತೇಜಿಸಿದ್ದಾರೆ.

ವ್ಯಾಟಿಕನ್ ವರದಿ

ಚೋಟಾ ಮತ್ತು ಕುಟೆರ್ವೊ ಪ್ರಿಲೇಚರ್‌ನ ಯುವಕರು ತಮ್ಮ ಶಕ್ತಿ ಮತ್ತು ಉತ್ಸಾಹವನ್ನು ಇತರರ ಸೇವೆಗೆ, ವಿಶೇಷವಾಗಿ ಅತ್ಯಂತ ನಿರ್ಲಕ್ಷಿಸಲ್ಪಟ್ಟವರ ಸೇವೆಗೆ ಸಮರ್ಪಿಸಬೇಕು ಹಾಗೂ ತಮ್ಮ ಸಮುದಾಯಗಳಲ್ಲಿ ಭರವಸೆಯ ದೂತರಾಗಬೇಕು ಎಂದು ಜಗದ್ಗುರು XIVನೇ ಲಿಯೋರವರು ಕರೆ ನೀಡಿದ್ದಾರೆ.

ಕುಟೆರ್ವೊ ಪ್ರದೇಶದಲ್ಲಿ ನಡೆದ ಚೋಟಾ ಮತ್ತು ಕುಟೆರ್ವೊ ಪ್ರಿಲೇಚರ್‌ನ ಎರಡನೇ ಧರ್ಮಪ್ರಾಂತೀಯ ಯುವಜನ ದಿನಾಚರಣೆಯಲ್ಲಿ ಭಾಗವಹಿಸಿದ ಯುವಕರಿಗೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಪ್ರಿಲೇಚರ್‌ನ 18 ಧರ್ಮ ಕೇಂದ್ರಗಳಿಂದ ಆಗಮಿಸಿದ ಯುವಕರು ಯೇಸು ಕ್ರಿಸ್ತನಲ್ಲಿ ತಮ್ಮ ನಂಬಿಕೆಯನ್ನು ಸಂಭ್ರಮಿಸಲು ಒಂದಾಗಿ ಸೇರಿರುವುದನ್ನು ಕಂಡು ತಮಗೆ ಅಪಾರ ಸಂತೋಷವಾಗಿದೆ ಎಂದು ಜಗದ್ಗುರುಗಳು ತಿಳಿಸಿದ್ದಾರೆ.

"ನೀವು ಕ್ರಿಸ್ತನ ಯುವಕರು," ಎಂದು ಜಗದ್ಗುರು XIVನೇ ಲಿಯೋರವರು ಹೇಳುತ್ತಾ, ಈ ವರ್ಷದ ಸಮಾವೇಶದ ಧ್ಯೇಯವಾಕ್ಯವಾದ "ಪ್ರೀತಿಸಲು ಕರೆಯಲ್ಪಟ್ಟವರು, ಸೇವೆ ಮಾಡಲು ಕಳುಹಿಸಲ್ಪಟ್ಟವರು" ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಿದರು.

ಯುವಕರು ಸುಖಸೌಕರ್ಯ ಅಥವಾ ನಿಷ್ಕ್ರಿಯತೆಯಲ್ಲಿ ತೃಪ್ತಿಪಡದೆ, ತಮ್ಮ ನಂಬಿಕೆಯ ಚೈತನ್ಯವನ್ನು ಧರ್ಮ ಸಭೆಗೂ ಸಮಾಜಕ್ಕೂ ತಂದುಕೊಡಬೇಕೆಂದು ಅವರು ಪ್ರೋತ್ಸಾಹಿಸಿದರು.

"ಯೇಸು ನಿಮ್ಮನ್ನು ಆರಾಮಕುರ್ಚಿಯಲ್ಲಿ ಕುಳಿತುಕೊಳ್ಳುವ ಯುವಕರಾಗಿಯೂ, ನಿದ್ರಿಸುತ್ತಿರುವವರಾಗಿಯೂ ಅಥವಾ 'ಇದುವರೆಗೆ ಹೀಗೆಯೇ ನಡೆಯುತ್ತಿದೆ' ಎಂಬ ಸುಖಕರ ಮನೋಭಾವದಲ್ಲಿ ತೃಪ್ತಿಪಡುವವರಾಗಿಯೂ ಇರಬೇಕೆಂದು ಬಯಸುವುದಿಲ್ಲ," ಎಂದು ಅವರು ಹೇಳಿದರು.

ವಾಸ್ತವವನ್ನು ಪರಿವರ್ತಿಸುವ ‘ಪವಿತ್ರ ಬಂಡಾಯ’

ಜಗದ್ಗುರು ಲಿಯೋರವರು ಯುವಕರು "ಪವಿತ್ರ ಬಂಡಾಯ" ಎಂದು ತಾವು ವಿವರಿಸಿದ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಇದು ನೋವು, ಸಂಕಷ್ಟ ಮತ್ತು ಅನ್ಯಾಯದ ಸಂದರ್ಭಗಳಿಗೆ ಸುವಾರ್ತೆಯ ಆಶಾಭರವಿನಿಂದ ಧೈರ್ಯವಾಗಿ ಪ್ರತಿಕ್ರಿಯಿಸುವ ಮನೋಭಾವವಾಗಿದೆ.

"ಚೋಟಾ ಮತ್ತು ಕುಟೆರ್ವೊದ ಧರ್ಮ ಸಭೆಗೆ ನಿಮ್ಮ ಪವಿತ್ರ ಬಂಡಾಯ, ನಿಮ್ಮ ನಿರ್ಮಲ ಶಕ್ತಿ ಹಾಗೂ ನೋವಿನ ವಾಸ್ತವಗಳನ್ನು ಭರವಸೆಯ ತಾಣಗಳಾಗಿ ಪರಿವರ್ತಿಸುವ ನಿಮ್ಮ ಹಂಬಲದ ಅಗತ್ಯವಿದೆ," ಎಂದು ಅವರು ಹೇಳಿದರು.

ಶಾಲೆಗಳು, ವಿಶ್ವವಿದ್ಯಾಲಯಗಳು, ಬೀದಿಗಳು ಮತ್ತು ಗ್ರಾಮೀಣ ಸಮುದಾಯಗಳಂತಹ ತಮ್ಮ ದೈನಂದಿನ ಬದುಕಿನಲ್ಲೇ ತಮ್ಮ ಮಿಷನರಿ ಕರೆಯನ್ನು ಗುರುತಿಸಿಕೊಳ್ಳುವಂತೆ ಜಗದ್ಗುರುಗಳು ಯುವಕರನ್ನು ಉತ್ತೇಜಿಸಿದರು.

"ನೀವು ಮಿಷನರಿಗಳಾಗಲು ಕರೆಯಲ್ಪಟ್ಟಿದ್ದೀರಿ ಎಂಬ ಭಾವನೆಯೊಂದಿಗೆ ಬದುಕಿರಿ," ಎಂದು ಹೇಳಿದ ಅವರು, ಸಂತೋಷ ಮತ್ತು ಸಮರ್ಪಣಾಭಾವದಿಂದ ಸೇವೆ ಮಾಡಲು ಯುವಕರನ್ನು ಆಹ್ವಾನಿಸಿದರು.

ಕ್ರಿಸ್ತನ ದುಃಖಿತ ಮುಖ ಕಾಣುವ ಸ್ಥಳದಲ್ಲೇ ಸೇವೆ ಮಾಡಿ

ಸಮಾಜದಲ್ಲಿ ಹೆಚ್ಚಾಗಿ ನಿರ್ಲಕ್ಷಿಸಲ್ಪಟ್ಟ ಮತ್ತು ಮರೆಯಲ್ಪಟ್ಟವರ ಸೇವೆಗೆ ಜಗದ್ಗುರು XIVನೇ ಲಿಯೋರವರು ವಿಶೇಷ ಒತ್ತು ನೀಡಿದರು. ಸಂಕಷ್ಟ ಅನುಭವಿಸುವವರಲ್ಲಿಯೇ ಕ್ರಿಸ್ತನನ್ನು ಕಾಣಬಹುದು ಎಂಬುದನ್ನು ಅವರು ಯುವಕರಿಗೆ ನೆನಪಿಸಿದರು.

"ಸಂತೋಷದಿಂದ ಸೇವೆ ಮಾಡಿ, ವಿಶೇಷವಾಗಿ ಅತ್ಯಂತ ನಿರ್ಲಕ್ಷಿಸಲ್ಪಟ್ಟವರಿಗೆ ಸೇವೆ ಸಲ್ಲಿಸಿ ಏಕೆಂದರೆ ಅಲ್ಲಿಯೇ ಯೇಸುವಿನ ದುಃಖಭರಿತ ಮುಖವನ್ನು ಕಾಣಬಹುದು," ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರುಗಳು ಚೋಟಾ ಮತ್ತು ಕುಟೆರ್ವೊದ ಯುವಕರನ್ನು ಕುಟೆರ್ವೊದ ಪೋಷಕಿಯಾದ ಸ್ವರ್ಗಾರೋಹಣದ ಪರಿಶುದ್ಧ ಕನ್ಯಾ ಮರಿಯಮ್ಮನವರ ರಕ್ಷಣೆಗೆ ಒಪ್ಪಿಸಿ, ಅವರು ಯುವಕರಿಗೆ ಮಾರ್ಗದರ್ಶನ ನೀಡಿ ಸದಾ ಕಾಪಾಡಲಿ ಎಂದು ಪ್ರಾರ್ಥಿಸಿದರು.

25 ಜುಲೈ 2026, 20:04