ಹುಡುಕಿ

2026.06.27 Pope

ಜಗದ್ಗುರುಗಳು ಇರಾಕ್‌ನ ಯುವಕರಿಗೆ: ಗಾಯಗೊಂಡಿರುವ ಜಗತ್ತಿನಲ್ಲಿ ಕ್ರಿಸ್ತನ ಬೆಳಕು ಮತ್ತು ಭರವಸೆಯಾಗಿರಿ.

ಅಂಕಾವಾದಲ್ಲಿ ಒಂದಾಗಿ ಸೇರಿದ್ದ ಇರಾಕ್‌ನ ಯುವ ಕ್ರೈಸ್ತರಿಗೆ ಜಗದ್ಗುರು XIVನೇ ಲಿಯೋರವರು, ನಂಬಿಕೆ, ಪ್ರೀತಿ ಮತ್ತು ಭರವಸೆಯ ಸಂದೇಶವಾಹಕರಾಗುವಂತೆ ಉತ್ತೇಜನ ನೀಡಿದರು. ಸಂಘರ್ಷ ಮತ್ತು ಅಸ್ಥಿರತೆಯಿಂದ ಗಾಯಗೊಂಡಿರುವ ತಮ್ಮ ದೇಶದಲ್ಲಿ ಕ್ರಿಸ್ತನ ಬೆಳಕಾಗಿಯೂ ಶಾಂತಿಯ ನಿರ್ಮಾತೃಗಳಾಗಿಯೂ ಬದುಕುವಂತೆ ಅವರು ಯುವಕರಿಗೆ ಕರೆ ನೀಡಿದರು.

ವ್ಯಾಟಿಕನ್ ವರದಿ

ಜುಲೈ 8ರಿಂದ 11ರವರೆಗೆ ಎರ್ಬಿಲ್‌ನ ಆರ್ಚ್‌ಎಪಾರ್ಕಿಯ ವ್ಯಾಪ್ತಿಯ ಅಂಕಾವಾದಲ್ಲಿ ನಡೆಯುತ್ತಿರುವ ವಾರ್ಷಿಕ ಯುವಜನರ ಸಮಾವೇಶಕ್ಕಾಗಿ ಇರಾಕ್‌ನ ವಿವಿಧ ಭಾಗಗಳಿಂದ ಯುವಕರು ಒಂದಾಗಿ ಸೇರಿರುವ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಅವರಿಗೆ ಭರವಸೆಯ ಸಂದೇಶವಾಹಕರಾಗುವ ತಮ್ಮ ಕರೆಯನ್ನು ಸ್ವೀಕರಿಸುವಂತೆ ಉತ್ತೇಜಿಸಿದ್ದಾರೆ. ಯುದ್ಧ ಮತ್ತು ಅಸ್ಥಿರತೆಯ ಪರಿಣಾಮಗಳನ್ನು ಇನ್ನೂ ಅನುಭವಿಸುತ್ತಿರುವ ತಮ್ಮ ದೇಶದಲ್ಲಿ “ಕ್ರಿಸ್ತನ ಬೆಳಕಾಗುವಂತೆ” ಅವರು ಯುವಕರನ್ನು ಪ್ರೋತ್ಸಾಹಿಸಿದರು.

ಈ ವರ್ಷದ “ಮಿಷನ್” ಎಂಬ ವಿಷಯದಡಿ ನಡೆಯುತ್ತಿರುವ ಈ ಸಮಾವೇಶಕ್ಕೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಇಂದಿನ ಧರ್ಮ ಸಭೆಯ ಜೀವನದಲ್ಲಿ ಯುವಜನರ ಪಾತ್ರ ಅನಿವಾರ್ಯವಾಗಿದೆ ಎಂದು ಜಗದ್ಗುರುಗಳು ನೆನಪಿಸಿದರು.

“ಕ್ರಿಸ್ತನ ಬೆಳಕನ್ನು ಲೋಕದೊಂದಿಗೆ ಹಂಚಿಕೊಳ್ಳುವ ಮೂಲಕ ಜಗತ್ತಿನ ಸೇವೆ ಮಾಡುವ ಜೀವಂತ ಧ್ಯೇಯವನ್ನು ಧರ್ಮ ಸಭೆ ಹೊಂದಿದೆ,” ಎಂದು ಅವರು ಹೇಳಿ, “ಮುಂದಿನ ವರ್ಷಗಳಲ್ಲಿ ಧರ್ಮ ಸಭೆಯನ್ನೂ ಜಗತ್ತನ್ನೂ ರೂಪಿಸುವ ಕಾರ್ಯದಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕು” ಎಂದು ಯುವಕರಿಗೆ ಕರೆ ನೀಡಿದರು.

ಈ ಹಿಂದೆ ಹಲವಾರು ಬಾರಿ ತಾವು ವ್ಯಕ್ತಪಡಿಸಿರುವ ದೃಢನಂಬಿಕೆಯನ್ನು ಪುನರುಚ್ಚರಿಸಿದ ಜಗದ್ಗುರು ಲಿಯೋರವರು, “ಯುವಜನರು ಧರ್ಮ ಸಭೆಯ ಭವಿಷ್ಯ ಮಾತ್ರವಲ್ಲ, ಅದರ ವರ್ತಮಾನವೂ ಹೌದು” ಎಂದು ಹೇಳಿದರು. ಅನೇಕ ಇರಾಕಿ ಕ್ರೈಸ್ತರು ಇನ್ನೂ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದನ್ನು ಉಲ್ಲೇಖಿಸಿ, ಸುವಾರ್ತೆಗೆ ಸಾಕ್ಷಿಯಾಗುವುದು ಹಲವು ಸಂದರ್ಭಗಳಲ್ಲಿ ಸವಾಲಿನ ಸಂಗತಿಯಾಗಿದೆ ಎಂದು ಅವರು ಒಪ್ಪಿಕೊಂಡರು.

“ಲೋಕಕ್ಕೆ ಬೆಳಕಾಗಿರುವುದು ಯಾವಾಗಲೂ ಸುಲಭವಲ್ಲ,” ಎಂದು ಅವರು ಹೇಳಿದರು. “ಯುದ್ಧ ಮತ್ತು ಅಸ್ಥಿರತೆಯಿಂದ ಗಾಯಗೊಂಡಿರುವ ಪರಿಸ್ಥಿತಿಯಲ್ಲಿ ನೀವು ಈ ಬೆಳಕನ್ನು ಪ್ರಕಾಶಿಸುವಂತೆ ಕರೆಯಲ್ಪಟ್ಟಿದ್ದೀರಿ.”

ಭಯಪಡಬೇಡಿ

ಆದರೂ ಧೈರ್ಯ ಕಳೆದುಕೊಳ್ಳಬಾರದು ಎಂದು ಜಗದ್ಗುರುಗಳು ಯುವಕರಿಗೆ ಕರೆ ನೀಡಿದರು.

“ಭಯಪಡಬೇಡಿ! ಈ ಕಾರ್ಯದಲ್ಲಿ ನೀವು ಒಬ್ಬಂಟಿಯಾಗಿದ್ದೀರಿ ಎಂದು ಎಂದಿಗೂ ಭಾವಿಸಬೇಡಿ. ನಾನು ನಿಮ್ಮೊಂದಿಗಿದ್ದೇನೆ; ಧರ್ಮ ಸಭೆ ನಿಮ್ಮೊಂದಿಗಿದೆ. ಯೇಸು ಕ್ರಿಸ್ತನಲ್ಲಿ ನಿಮ್ಮ ಸಂಪೂರ್ಣ ವಿಶ್ವಾಸವಿರಲಿ,” ಎಂದು ಜಗದ್ಗುರು ಲಿಯೋರವರು ಹೇಳಿದರು.

ತಮ್ಮ ಸಂದೇಶದಲ್ಲಿ ಬೆಳಕಿನ ಪ್ರತೀಕವನ್ನು ಆಧಾರವಾಗಿಟ್ಟುಕೊಂಡು, ಪ್ರತಿಯೊಬ್ಬ ಕ್ರೈಸ್ತ ಶಿಷ್ಯನ ಜೀವನವನ್ನು ರೂಪಿಸಬೇಕಾದ ಮೂರು ಪ್ರಮುಖ ಗುಣಗಳನ್ನು ಅವರು ವಿವರಿಸಿದರು ನಂಬಿಕೆ, ಪ್ರೀತಿ ಮತ್ತು ಭರವಸೆ.

ಮೊದಲನೆಯದಾಗಿ, ಬೆಳಕು ನಮಗೆ ನೋಡುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಅವರು ಹೇಳಿದರು. ಆದ್ದರಿಂದ ನಂಬಿಕೆ ಎಂದರೆ ಜೀವನದ ಸಂಕಷ್ಟಗಳಿಗೆ ಕೇವಲ ಪ್ರತಿಕ್ರಿಯೆಯಲ್ಲ, “ವಾಸ್ತವವನ್ನು ಅರಿತು ಸತ್ಯದಲ್ಲಿ ಬದುಕುವುದು” ಎಂಬುದಾಗಿದೆ. ಇದರಿಂದ ವಿಶ್ವಾಸಿಗಳು ದೇವರ ದೃಷ್ಟಿಯಿಂದ ಜಗತ್ತನ್ನು, ಇತರರನ್ನು ಮತ್ತು ತಮ್ಮನ್ನೇ ಕಾಣಲು ಸಾಧ್ಯವಾಗುತ್ತದೆ. ತಮ್ಮ ಜೀವನದ ಸಾಕ್ಷಿಯ ಮೂಲಕ ಇತರರೂ ತಾವು ಹುಡುಕುತ್ತಿರುವ ಸತ್ಯ ಮತ್ತು ಜೀವನದ ಅರ್ಥವನ್ನು ಕಂಡುಕೊಳ್ಳುವಂತೆ ಬದುಕಲು ಅವರು ಯುವಕರನ್ನು ಉತ್ತೇಜಿಸಿದರು.

ನಂತರ, ಬೆಳಕನ್ನು ದೇವರ ಪ್ರೀತಿಯ ಉಷ್ಣತೆಯ ಸಂಕೇತವಾಗಿ ವಿವರಿಸಿದ ಜಗದ್ಗುರಗಳು, ನಿಜವಾದ ಸಂದೇಶ ಸಾರುವಿಕೆ ಕೇವಲ ಕಾರ್ಯಚಟುವಟಿಕೆಗಳಿಂದ ಆರಂಭವಾಗುವುದಿಲ್ಲ, ಪ್ರತಿದಿನದ ಪ್ರಾರ್ಥನೆ, ಸಂಸ್ಕಾರಗಳು ವಿಶೇಷವಾಗಿ ಪಾಪಸಂಕೀರ್ತನೆ (ಸಮನ್ವಯದ ಸಂಸ್ಕಾರ) ಮತ್ತು ಪವಿತ್ರ ಯೂಕರಿಸ್ಟ್ ಮೂಲಕ ಕ್ರಿಸ್ತನೊಂದಿಗೆ ಆಳವಾದ ವೈಯಕ್ತಿಕ ಭೇಟಿಯಿಂದ ಅದು ಆರಂಭವಾಗುತ್ತದೆ ಎಂದು ಹೇಳಿದರು.

ದೇವರ ಪ್ರೀತಿಯಲ್ಲಿ ನಿಮ್ಮ ಬೇರುಗಳನ್ನು ಆಳವಾಗಿ ನೆಡಿರಿ

“ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಎಂಬ ಅಚಲವಾದ ಅಡಿಪಾಯದಲ್ಲಿ ನಿಮ್ಮ ಹೃದಯಗಳನ್ನು ದೃಢವಾಗಿ ಬೇರೂರಿಸಿರಿ. ಕ್ರಿಸ್ತನ ಹೃದಯವನ್ನು ಅರಿತುಕೊಳ್ಳಿ, ನಿಮ್ಮ ಜೀವನವನ್ನು ಆತನ ಮೇಲೆ ಕಟ್ಟಲು ಎಂದಿಗೂ ಹೆದರಬೇಡಿ,” ಎಂದು ಅವರು ಹೇಳಿದರು.

ದೇವರ ಪ್ರೀತಿಯಲ್ಲಿ ದೃಢವಾಗಿ ಬೇರೂರಿದಾಗ ಮಾತ್ರ, “ದೇವರ ಪ್ರೀತಿಯ ಉಷ್ಣತೆಯನ್ನು ಮತ್ತು ಆತನ ಕೃಪೆಯ ಸಮನ್ವಯಗೊಳಿಸುವ ಶಕ್ತಿಯನ್ನು” ತಮ್ಮ ಸುತ್ತಲಿರುವ ಜನರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಕೊನೆಯಲ್ಲಿ, ಬೆಳಕನ್ನು ಬೆಳವಣಿಗೆ ಮತ್ತು ಭರವಸೆಯ ಸಂಕೇತವಾಗಿ ವಿವರಿಸಿದ ಜಗದ್ಗುರು XIVನೇ ಲಿಯೋರವರು, ಸಮನ್ವಯಕ್ಕಾಗಿ ಹಂಬಲಿಸುತ್ತಿರುವ ಈ ಪ್ರದೇಶದಲ್ಲಿ ಯುವ ಕ್ರೈಸ್ತರು ಶಾಂತಿಯ ನಿರ್ಮಾತೃಗಳಾಗುವಂತೆ ಕರೆ ನೀಡಿದರು.

“ನಿಮ್ಮ ಸುತ್ತಲಿನ ಜನರನ್ನು ಒಂದಾಗಿಸುವವರಾಗಿಯೂ, ಶಾಶ್ವತ ಶಾಂತಿಯಿಂದ ಕೂಡಿದ ಭವಿಷ್ಯದ ಭರವಸೆಯನ್ನು ಇತರರಲ್ಲಿ ಬಿತ್ತುವವರಾಗಿಯೂ ನೀವು ವಿಶೇಷವಾಗಿ ಕರೆಯಲ್ಪಟ್ಟಿದ್ದೀರಿ,” ಎಂದು ಅವರು ಹೇಳಿದರು.

ತಾವು ಬದುಕುತ್ತಿರುವ ಪರಿಸ್ಥಿತಿಯನ್ನು ಯಾವಾಗಲೂ ಬದಲಾಯಿಸಲು ಸಾಧ್ಯವಾಗದಿದ್ದರೂ, “ಕ್ರಿಸ್ತನ ಶಾಂತಿಯು ನಿಮ್ಮ ಹೃದಯಗಳಲ್ಲಿ ಆಳಲಿ” ಎಂದು ಆಯ್ಕೆ ಮಾಡುವುದು ಯಾವಾಗಲೂ ಸಾಧ್ಯವೆಂದು ಅವರು ನೆನಪಿಸಿದರು. ಹೀಗೆ ಪುನರುತ್ಥಾನಗೊಂಡ ಪ್ರಭುವಿನಿಂದ ದೊರೆಯುವ ಭರವಸೆಯ ಜೀವಂತ ಚಿಹ್ನೆಗಳಾಗುವಂತೆ ಅವರು ಯುವಕರಿಗೆ ಕರೆ ನೀಡಿದರು.

ತಮ್ಮ ಸಂದೇಶದ ಕೊನೆಯಲ್ಲಿ, ಧರ್ಮ ಸಭೆಯ ತಾಯಿಯಾದ ಪವಿತ್ರ ಮರಿಯಮ್ಮನ ಮಾತೃಪ್ರೀತಿಯ ರಕ್ಷಣೆಗೆ ಯುವಕರನ್ನು ಒಪ್ಪಿಸಿ, ದೇವರು ಅವರ ಜೀವನಕ್ಕಾಗಿ ಹೊಂದಿರುವ ಪ್ರೀತಿಪೂರ್ಣ ಯೋಜನೆಯ ಮೇಲೆ ಸಂಪೂರ್ಣ ವಿಶ್ವಾಸವಿಡುವಂತೆ ಪ್ರೋತ್ಸಾಹಿಸಿದರು.

“ದೇವರ ಒಳ್ಳೆಯತನವನ್ನು ಎಂದಿಗೂ ಸಂದೇಹಿಸಬೇಡಿ. ನಿಮ್ಮ ಪ್ರತಿಯೊಬ್ಬರ ಜೀವನಕ್ಕಾಗಿ ಪ್ರಭು ಹೊಂದಿರುವ ಯೋಜನೆಗೆ ಭಯಪಡಬೇಡಿ,” ಎಂದು ಅವರು ಹೇಳಿದರು. ಪ್ರವಾದಿ ಜೆರೆಮಿಯನ ಮಾತುಗಳನ್ನು ಉಲ್ಲೇಖಿಸಿ, “ನಿಮಗೆ ಭರವಸೆಯಿಂದ ಕೂಡಿದ ಭವಿಷ್ಯವನ್ನು ನೀಡುವ ಉದ್ದೇಶವೇ ದೇವರದಾಗಿದೆ” ಎಂದು ಜಗದ್ಗುರುಗಳು ನೆನಪಿಸಿದರು.

 

08 ಜುಲೈ 2026, 18:24