ಜಗದ್ಗುರುಗಳೊಂದಿಗೆ ಏಷ್ಯಾದ ಧರ್ಮಸಭೆಗೆ ಕರೆ: ಪ್ರೀತಿಯ ಬಂಧದಲ್ಲಿ ಒಂದಾಗಿ, ಏಷ್ಯಾ ಖಂಡದಾದ್ಯಂತ ಸೇತುವೆಗಳನ್ನು ನಿರ್ಮಿಸಿ.
ವ್ಯಾಟಿಕನ್ ವರದಿ
"ಏಷ್ಯಾದ ಕಥೋಲಿಕ ಧರ್ಮ ಸಭೆಯ ಜೀವನ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷಯಗಳನ್ನು ಚರ್ಚಿಸಲು ನೀವು ಒಂದಾಗಿ ಸೇರಿರುವ ಈ ಸಂದರ್ಭದಲ್ಲಿ, ಪವಿತ್ರಾತ್ಮನು ನಿಮ್ಮ ಸಭೆಗೆ ಪ್ರೇರಣೆ ನೀಡಿ ಮಾರ್ಗದರ್ಶನ ಮಾಡಲೆಂದು ಪ್ರಾರ್ಥಿಸುತ್ತಾ, ನನ್ನ ಆಧ್ಯಾತ್ಮಿಕ ಸಾಮೀಪ್ಯವನ್ನು ನಿಮಗೆ ಭರವಸೆ ನೀಡುತ್ತೇನೆ."
ಇಂಡೋನೇಷ್ಯಾದ ಜಕಾರ್ತಾದಲ್ಲಿ ಜುಲೈ 20ರಿಂದ 26ರವರೆಗೆ ನಡೆಯುತ್ತಿರುವ ಫೆಡರೇಷನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸಸ್ (ಎಫ್ಎಬಿಸಿ)ಯ 12ನೇ ಮಹಾಸಭೆಯಲ್ಲಿ ಭಾಗವಹಿಸಿರುವ ಬಿಷಪ್‌ಗಳು ಮತ್ತು ಸದಸ್ಯರಿಗೆ ಶನಿವಾರ ಕಳುಹಿಸಿದ ವೀಡಿಯೊ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ಹೇಳಿದರು.
ಯೇಸು ನಮ್ಮ ಐಕ್ಯತೆಯ ಮೂಲ
ತಮ್ಮ ಸಂದೇಶದಲ್ಲಿ, ಸಭೆಗೆ ಆಯ್ಕೆ ಮಾಡಲಾದ ಧ್ಯೇಯವಾಕ್ಯವು ನತಾನಿಯೇಲನಿಗೆ ಯೇಸು ಹೇಳಿದ, "ನೀನು ಇದಕ್ಕಿಂತಲೂ ಮಹತ್ತರವಾದ ಕಾರ್ಯಗಳನ್ನು ನೋಡುವೆ" (ಯೋಹಾನ 1:50) ಎಂಬ ವಾಕ್ಯದಿಂದ ಪ್ರೇರಿತವಾಗಿದೆ ಎಂದು ಜಗದ್ಗುರುಗಳು ನೆನಪಿಸಿದರು.
ಫಿಲಿಪ್ಪ ಮತ್ತು ನತಾನಿಯೇಲನನ್ನು ತಮ್ಮ ಶಿಷ್ಯರಾಗಲು ಕರೆದಾಗ, "ನಮ್ಮ ಪ್ರಭು ತಾನೇ ದೇವರು ಮತ್ತು ಮಾನವರ ನಡುವಿನ ಏಕೈಕ ಮಧ್ಯವರ್ತಿಯಾಗಿದ್ದಾನೆ" (ಯೋಹಾನ 1:51) ಎಂಬುದನ್ನು ಸೂಚಿಸುತ್ತಾನೆ ಎಂದು ಅವರು ಹೇಳಿದರು.
"ಇಂದು ಅವರ ಶಿಷ್ಯರಾದ ನಾವು, ಯೇಸು ದೇವರೊಂದಿಗೆ ನಮ್ಮ ಐಕ್ಯತೆಯ ಮೂಲ ಮಾತ್ರವಲ್ಲ, ನಮ್ಮ ಪರಸ್ಪರ ಐಕ್ಯತೆಯ ಮೂಲವೂ ಆಗಿದ್ದಾನೆ ಎಂಬುದನ್ನು ಅರಿತಿದ್ದೇವೆ" ಎಂದು ಜಗದ್ಗುರುಗಳುಒತ್ತಿ ಹೇಳಿದರು.
ಕ್ರೈಸ್ತ ಐಕಮತ್ಯದ ಮೂಲ ಕ್ರಿಸ್ತನಲ್ಲಿದೆ
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ರಕ್ಷಿಸುವ ಕುರಿತು ತಾವು ಪ್ರಕಟಿಸಿದ 'ಮ್ಯಾಗ್ನಿಫಿಕಾ ಹುಮಾನಿತಾಸ್' ಎಂಬ ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, "ಕ್ರೈಸ್ತ ಐಕಮತ್ಯವು ಕ್ರಿಸ್ತನ ರಹಸ್ಯದಲ್ಲಿ ತನ್ನ ಮೂಲವನ್ನು ಕಂಡುಕೊಳ್ಳುತ್ತದೆ ಮತ್ತು ವಿಶೇಷವಾಗಿ ಪವಿತ್ರ ಯೂಕರಿಸ್ಟ್ ಸೇರಿದಂತೆ ಸಂಸ್ಕಾರಗಳಲ್ಲಿನ ನಮ್ಮ ಐಕ್ಯತೆಯಿಂದ ಹೊರಹೊಮ್ಮುತ್ತದೆ" ಎಂದು ತಾವು ಬರೆದಿರುವುದನ್ನು ಸಭಿಕರಿಗೆ ನೆನಪಿಸಿದರು.
ನಿಮ್ಮ ದೇಶಗಳಲ್ಲಿ ದೇವರ ಸಾನ್ನಿಧ್ಯದ ಇನ್ನಷ್ಟು ಪ್ರಕಾಶಮಾನವಾದ ಚಿಹ್ನೆಗಳಾಗಿರಿ
"ನಿಮ್ಮ ಸ್ಥಳೀಯ ಧರ್ಮ ಸಭೆಗಳಲ್ಲಿ ಯೂಕರಿಸ್ಟ್‌ಕೇಂದ್ರಿತ ಆಧ್ಯಾತ್ಮಿಕತೆಯನ್ನು ಬೆಳೆಸುವುದನ್ನು ಮುಂದುವರಿಸಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಅಂದರೆ, ಪವಿತ್ರ ಯೂಕರಿಸ್ಟ್‌ನಲ್ಲಿ ಪ್ರಭು ನೀಡಿದ ದಾನದ ಮೂಲಕ ಹರಿದುಬರುವ ಪ್ರೀತಿಯಲ್ಲಿ ಬೇರೂರಿರುವ ಧರ್ಮ ಸಭೆಯ ಐಕ್ಯತೆಯ ಆಧ್ಯಾತ್ಮಿಕತೆಯನ್ನು ಬೆಳೆಸಿರಿ"ಎಂದು ಜಗದ್ಗುರುಗಳು ಹೇಳಿದರು,
"ಸ್ಥಳೀಯ ಧರ್ಮ ಸಭೆಗಳ ಒಳಗೂ ಮತ್ತು ಅವುಗಳ ನಡುವೆಯೂ ಐಕ್ಯತೆಯ ಬಂಧಗಳು ಇನ್ನಷ್ಟು ಬಲಗೊಳ್ಳಲಿ. ಅವು ನಿಮ್ಮ ವಿವಿಧ ದೇಶಗಳಲ್ಲಿ ದೇವರ ಸಾನ್ನಿಧ್ಯದ ಇನ್ನಷ್ಟು ಸ್ಪಷ್ಟವಾದ ಚಿಹ್ನೆಗಳಾಗಲಿ. ಇದರಿಂದ ನೀವು ಏಷ್ಯಾದಾದ್ಯಂತ ಒಟ್ಟಾಗಿ ಸೇತುವೆಗಳನ್ನು ನಿರ್ಮಿಸುವವರಾಗಲು ಸಹಾಯವಾಗಲಿ ಎಂಬುದು ನನ್ನ ಆಶಯ" ಎಂದು ಅವರು ಮುಂದುವರಿಸಿದರು,
ಜಗದ್ಗುರುಗಳ ಅಂತಿಮ ಆಶೀರ್ವಾದ
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಸಭೆಯಲ್ಲಿ ಭಾಗವಹಿಸಿರುವ ಎಲ್ಲರನ್ನೂ ಹಾಗೂ ಅವರ ಚರ್ಚಾ-ಚಿಂತನೆಗಳನ್ನು ಧರ್ಮ ಸಭೆಯ ತಾಯಿಯಾದ ಪರಮಪವಿತ್ರ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಗೆ ಸಮರ್ಪಿಸಿದರು. ಅಲ್ಲದೆ, ಪ್ರಭುವು ಅವರಿಗೆ ಜ್ಞಾನ ಮತ್ತು ಧೈರ್ಯದ ವರಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಅಂತಿಮವಾಗಿ ಅವರು ಹೀಗೆ ಆಶೀರ್ವದಿಸಿದರು:
"ಸರ್ವಶಕ್ತನಾದ ದೇವರಾದ ತಂದೆ, ಪುತ್ರ ಮತ್ತು ಪವಿತ್ರಾತ್ಮರ ಆಶೀರ್ವಾದವು ನಿಮ್ಮ ಮೇಲೆ ಇಳಿದು ಸದಾಕಾಲವೂ ನಿಮ್ಮೊಂದಿಗಿರಲಿ. ಆಮೆನ್."
