ಹುಡುಕಿ

2026.20.07 Il nuovo libro di Leone XIV “Disarmata e disarmante. La pace è un dono” (Libreria Editrice Vaticana)

"ಶಾಂತಿಯ ಕುರಿತ ಜಗದ್ಗುರುಗಳು ಪುಸ್ತಕದ ಸಂಪಾದಕ: ನೈತಿಕ ಜಾಗೃತಿಗೆ ಜಗದ್ಗುರುಗಳು ಸ್ಫೂರ್ತಿಯಾಗಬಲ್ಲರು."

ಜಗದ್ಗುರುಗಳ ಹೊಸ ಪುಸ್ತಕ ನಿರಾಯುಧ ಮತ್ತು ನಿರಾಯುಧಗೊಳಿಸುವುದು: ಶಾಂತಿಯು ಒಂದು ವರದ ಸಂಪಾದಕರಾದ ಅಲೆಸ್ಸಾಂದ್ರೋ ಬಾನ್‌ಫಿ, ಈ ವಿಷಯದ ಕುರಿತು ಜಗದ್ಗುರುಗಳ ಸಂದೇಶಗಳನ್ನು ಒಂದೇ ಸಂಕಲನದಲ್ಲಿ ಪ್ರಕಟಿಸುವ ಮಹತ್ವದ ಬಗ್ಗೆ ಹಾಗೂ ಅವರ ಸಂದೇಶದ ನಿಜವಾದ ಶಕ್ತಿಯು ಸುವಾರ್ತೆಯಲ್ಲಿಯೇ ಅಡಗಿದೆ ಎಂಬುದರ ಕುರಿತು ವ್ಯಾಟಿಕನ್ ನ್ಯೂಸ್‌ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವ್ಯಾಟಿಕನ್ ವರದಿ

2025ರ ಮೇ 8ರಂದು ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳಾಗಿ ಆಯ್ಕೆಯಾದ ತಕ್ಷಣವೇ, ತಮ್ಮ ಮೊದಲ ಸಂದೇಶದಲ್ಲಿ ಜಗತ್ತಿಗೆ "ಶಾಂತಿ"ಯ ಶುಭಾಶಯವನ್ನು ನೀಡಿದರು. ಆ ದಿನದಿಂದಲೂ ಅವರ ಭಾಷಣಗಳು, ಪ್ರವಚನಗಳು ಮತ್ತು ಸಂದೇಶಗಳ ಕೇಂದ್ರಬಿಂದುವಾಗಿರುವುದು ಶಾಂತಿಯೇ. ವಿಶ್ವದ ಅನೇಕ ರಾಷ್ಟ್ರಗಳು ಯುದ್ಧ ಮತ್ತು ಸಂಘರ್ಷಗಳಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ, ಜನರ ಹೃದಯಗಳಲ್ಲಿ, ಕುಟುಂಬಗಳಲ್ಲಿ ಮತ್ತು ರಾಷ್ಟ್ರಗಳ ನಡುವೆ ಶಾಂತಿ ನೆಲೆಸಲಿ ಎಂಬುದು ಅವರ ನಿರಂತರ ಪ್ರಾರ್ಥನೆಯಾಗಿದೆ.

ಈ ಸಂದೇಶಗಳ ಮಹತ್ವವನ್ನು ಒಟ್ಟುಗೂಡಿಸುವ ಉದ್ದೇಶದಿಂದ ವ್ಯಾಟಿಕನ್ ಪ್ರಕಾಶನ ಸಂಸ್ಥೆ  "ನಿರಾಯುಧ ಮತ್ತು ನಿರಾಯುಧಗೊಳಿಸುವುದು: ಶಾಂತಿಯು ಒಂದು ವರ" ಎಂಬ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯ ಸಂಪಾದಕರಾದ ಅಲೆಸ್ಸಾಂದ್ರೋ ಬಾನ್‌ಫಿ ರವರ ಪ್ರಕಾರ, ಜಗದ್ಗುರುಗಳ ಶಾಂತಿಯ ಸಂದೇಶಗಳನ್ನು ವಿಷಯಾಧಾರಿತ ಅಧ್ಯಾಯಗಳಲ್ಲಿ ಸಂಗ್ರಹಿಸಿ, ರಾಜತಾಂತ್ರಿಕರು, ಯುವಜನರು, ವಿಶ್ವ ಶಾಂತಿ ದಿನ ಹಾಗೂ ಇತರ ಸಂದರ್ಭಗಳಲ್ಲಿ ಅವರು ನೀಡಿದ ಎಲ್ಲಾ ಪ್ರಮುಖ ಸಂದೇಶಗಳನ್ನು ಈ ಪುಸ್ತಕ ಒಳಗೊಂಡಿದೆ. ವಿಭಿನ್ನ ಸಂದರ್ಭಗಳಿದ್ದರೂ, ಜಗದ್ಗುರುಗಳ ಸಂದೇಶದ ಮೂಲ ಉದ್ದೇಶ ಒಂದೇ ಸಂವಾದವನ್ನು ಬೆಳೆಸುವುದು, ಸೇತುವೆಗಳನ್ನು ನಿರ್ಮಿಸುವುದು ಮತ್ತು ವೈರತ್ವದ ಮನೋಭಾವವನ್ನು ತೊರೆದು ಸಹೋದರತ್ವವನ್ನು ಬೆಳೆಸುವುದು.

ಜಗದ್ಗುರುಗಳು ಸಂದೇಶದ ನಿಜವಾದ ಶಕ್ತಿಯು ಯಾವುದೇ ರಾಜಕೀಯ ಅಥವಾ ಸೈನಿಕ ಬಲದಲ್ಲಿಲ್ಲ; ಅದು ಸುವಾರ್ತೆಯಲ್ಲಿದೆ ಎಂದು ಬಾನ್‌ಫಿ ಹೇಳುತ್ತಾರೆ. ವ್ಯಾಟಿಕನ್‌ಗೆ ಸೇನೆಯಿಲ್ಲ, ಆದರೆ ಕ್ರಿಸ್ತನ ಪ್ರತಿನಿಧಿಯಾದ ಜಗದ್ಗುರುಗಳ ನೈತಿಕ ಧ್ವನಿಯು ವಿಶ್ವದ ನಾಯಕರ ಮನಸ್ಸನ್ನು ಸ್ಪರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರೀತಿ, ಸತ್ಯ, ನ್ಯಾಯ ಮತ್ತು ಕ್ಷಮೆಯ ಆಧಾರದ ಮೇಲೆ ನೀಡುವ ಅವರ ಸಂದೇಶವು ಜನರಲ್ಲಿ ನೈತಿಕ ಜಾಗೃತಿಯನ್ನು ಮೂಡಿಸಿ, ಶಾಂತಿಯತ್ತ ಹೆಜ್ಜೆಯಿಡಲು ಪ್ರೇರೇಪಿಸುತ್ತದೆ.

ತಮ್ಮ ಮುನ್ನುಡಿಯಲ್ಲಿ ಜಗದ್ಗುರು XIVನೇ ಲಿಯೋರವರು, "ಒಬ್ಬ ವ್ಯಕ್ತಿಯ ಆತ್ಮಸಾಕ್ಷಿಯೇ ಇಡೀ ಜಗತ್ತಿನ ಮೌಲ್ಯವನ್ನು ಹೊಂದಿರಬಹುದು" ಎಂದು ನೆನಪಿಸುತ್ತಾರೆ. 1983ರಲ್ಲಿ ಸೋವಿಯತ್ ಅಧಿಕಾರಿ ಸ್ಟಾನಿಸ್ಲಾವ್ ಪೆಟ್ರೋವ್ ರವರು ತಪ್ಪು ಎಚ್ಚರಿಕೆಯನ್ನು ನಂಬದೆ ತೆಗೆದುಕೊಂಡ ವಿವೇಕಪೂರ್ಣ ನಿರ್ಧಾರವು ಸಂಭವನೀಯ ಅಣುಯುದ್ಧವನ್ನು ತಪ್ಪಿಸಿತು ಎಂಬ ಘಟನೆಯನ್ನು ಅವರು ಉದಾಹರಿಸುತ್ತಾರೆ. ನಿಜವಾದ ಶಾಂತಿಯು ಪ್ರತಿಯೊಬ್ಬರ ಮನಸ್ಸಿನಿಂದ, ಕುಟುಂಬದಿಂದ, ನೆರೆಹೊರೆಯಿಂದ ಮತ್ತು ದೈನಂದಿನ ಬದುಕಿನಿಂದಲೇ ಆರಂಭವಾಗುತ್ತದೆ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ.

ಬಾನ್‌ಫಿರವರ ಪ್ರಕಾರ, ಕ್ರೈಸ್ತರ ಭರವಸೆಯ ಮೂಲ ದೇವರ ಮೇಲಿನ ವಿಶ್ವಾಸವಾಗಿದೆ. ಸಂತ ಅಗಸ್ಟಿನ್ ರವರ ದೇವರ ನಗರ ಕೃತಿಯಿಂದ ಪ್ರೇರಣೆ ಪಡೆದಿರುವ ಜಗದ್ಗುರು XIVನೇ ಲಿಯೋರವರು, ನ್ಯಾಯಯುತ ಮತ್ತು ಶಾಂತಿಯುತ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬ ಕ್ರೈಸ್ತನ ಮೇಲಿದೆ ಎಂದು ನೆನಪಿಸುತ್ತಾರೆ. ಪ್ರೀತಿ, ಸಂವಾದ ಮತ್ತು ಆಶಾಭರವಸೆಯಿಂದ ಕೂಡಿದ ಜೀವನವೇ ಹಿಂಸೆ ಮತ್ತು ದ್ವೇಷವನ್ನು ಸೋಲಿಸಿ, ಶಾಂತಿಯುತ ಭವಿಷ್ಯವನ್ನು ನಿರ್ಮಿಸಬಲ್ಲದು ಎಂಬುದು ಅವರ ಸಂದೇಶದ ಸಾರವಾಗಿದೆ.

21 ಜುಲೈ 2026, 16:36