ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಜಗದ್ಗುರು XIVನೇ ಲಿಯೋ ರವರು. ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಜಗದ್ಗುರು XIVನೇ ಲಿಯೋ ರವರು.  (ANSA)

ಜಗದ್ಗುರು ಲಿಯೋರವರು ಗೌರವಾರ್ಥ ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಸಂಗೀತ ಕಛೇರಿ ಆಯೋಜನೆ.

ಅಲ್ಬಾನೊ ಧರ್ಮಪ್ರಾಂತವು ಜಗದ್ಗುರು XIVನೇ ಲಿಯೋರವರ ಗೌರವಾರ್ಥ ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ವಿಶೇಷ ಸಂಗೀತ ಕಛೇರಿಯನ್ನು ಆಯೋಜಿಸಿದೆ. ಪಗಾನಿನಿ ಮತ್ತು ಬೆಲ್ಲಿನಿರವರ ಸಂಗೀತ ಕೃತಿಗಳನ್ನು ಒಳಗೊಂಡಿರುವ ಈ ಕಛೇರಿಯು ಜುಲೈ 18ರಂದು ಕ್ಯಾಸ್ಟೆಲ್ ಗಾಂಡೋಲ್ಫೊದ ಪ್ರೇಷಿತರ ಅರಮನೆಯಲ್ಲಿ ನಡೆಯಲಿದ್ದು, ಜಗದ್ಗುರು XIVನೇ ಲಿಯೋರವರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಜುಲೈ 18ರ ಶನಿವಾರ ಕ್ಯಾಸ್ಟೆಲ್ ಗಾಂಡೋಲ್ಫೊದ ಪ್ರೇಷಿತರ ಅರಮನೆಯಲ್ಲಿ ಅಲ್ಬಾನೊ ಧರ್ಮಪ್ರಾಂತವು ತಮ್ಮ ಗೌರವಾರ್ಥ ಆಯೋಜಿಸಿರುವ ಸಂಗೀತ ಕಛೇರಿಯಲ್ಲಿ ಭಾಗವಹಿಸಲಿದ್ದಾರೆ.

ಅರಮನೆಯ ಪ್ರಾಂಗಣದಲ್ಲಿ ರಾತ್ರಿ 9:00 ಗಂಟೆಗೆ ಆರಂಭವಾಗಲಿರುವ ಈ ಸಂಗೀತ ಸಂಜೆಯು ಜಗದ್ಗುರುಗಳ ಮೇಲಿನ ಪ್ರೀತಿ, ಗೌರವ ಮತ್ತು ಐಕ್ಯತೆಯ ಸಂಕೇತವಾಗಿ ಆಯೋಜಿಸಲಾಗಿದೆ.

ಈಗಾಗಲೇ ಎಲ್ಲಾ ಪ್ರವೇಶ ಟಿಕೆಟ್‌ಗಳು ಹಂಚಿಕೆಗೊಂಡಿರುವ ಈ ಸಂಗೀತ ಕಛೇರಿಯು, ವಿಶ್ವವಿಖ್ಯಾತ ವಯೋಲಿನ್ ವಾದಕ ಮಾರ್ಕೊ ರೊಲಿಯಾನೊರವರಿಂದ ನಿಕೊಲೊ ಪಗಾನಿನಿಯವರ 'ಕಾನ್ಸೆರ್ಟೊ ಫಾರ್ ವಯೋಲಿನ್ ಅಂಡ್ ಆರ್ಕೆಸ್ಟ್ರಾ ನಂ. 3 ಇನ್ ಇ ಮೇಜರ್' ಕೃತಿಯ 'ಲಾ ಪೊಲಕ್ಕಾ' ಸಂಗೀತ ಭಾಗದ ಪ್ರದರ್ಶನದೊಂದಿಗೆ ಆರಂಭವಾಗಲಿದೆ.

ಅದರ ನಂತರ ಪಿಯಾನೋ ವಾದಕಿ ರೊಸ್ಸಾನಾ ತೊಮಾಸ್ಸಿ ಗೋಲ್ಕಾರ್ ರವರು 'ನೋರ್ಮಾ: ಎನ್ ಇಮೆನ್ಸ್ ಲವ್ ಸ್ಟೋರಿ – ಫ್ರೀ ಫ್ಯಾಂಟಸಿ ಅಂಡ್ ವ್ಯಾರಿಯೇಷನ್ಸ್ ಫಾರ್ ಪಿಯಾನೋ ಅಂಡ್ ಆರ್ಕೆಸ್ಟ್ರಾ' ಕೃತಿಯನ್ನು ಪ್ರಸ್ತುತಪಡಿಸಲಿದ್ದಾರೆ. ವಿನ್ಚೆನ್ಜೊ ಬೆಲ್ಲಿನಿಯವರ ಅಮರಕೃತಿಯನ್ನು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಲೂಯಿಸ್ ಬಕಲೋವ್ ಅವರು ವಿಶೇಷವಾಗಿ ಅವರಿಗಾಗಿ ಮರುಸಂಯೋಜಿಸಿರುವ ಹೊಸ ರೂಪವೇ ಈ ಕೃತಿ.

ಈ ಇಬ್ಬರು ಏಕವ್ಯಕ್ತಿ ಕಲಾವಿದರಿಗೆ 55 ಸದಸ್ಯರ 'ಐ ಮುಸಿಚಿ ದಿ ಪಾರ್ಮಾ' ಆರ್ಕೆಸ್ಟ್ರಾ ಸಂಗೀತ ಸಹಕಾರ ನೀಡಲಿದ್ದು, ಅದರ ನೇತೃತ್ವವನ್ನು ಖ್ಯಾತ ನಿರ್ದೇಶಕ ಪಿಯರ್ ಕಾರ್ಲೊ ಒರಿಜಿಯೊ ವಹಿಸಲಿದ್ದಾರೆ. ಅವರು 2006ರಿಂದ ಬ್ರೆಶಿಯಾ ಮತ್ತು ಬೆರ್ಗಾಮೊ ಅಂತರರಾಷ್ಟ್ರೀಯ ಪಿಯಾನೋ ಉತ್ಸವದ ಕಲಾತ್ಮಕ ನಿರ್ದೇಶಕರಾಗಿದ್ದು, ಬ್ರೆಶಿಯಾದ ಲೂಕಾ ಮರೆನ್ಜಿಯೊ ಸಂಗೀತ ಸಂರಕ್ಷಣಾಲಯದಲ್ಲಿ ಆರ್ಕೆಸ್ಟ್ರಾ ನಿರ್ದೇಶನದ ಪ್ರಾಧ್ಯಾಪಕರಾಗಿದ್ದಾರೆ.

ಬೆಲ್ಲಿನಿಯವರ ಕೃತಿಯಿಂದ ಪ್ರೇರಿತವಾದ ಈ ಸಂಗೀತ ಸಂಯೋಜನೆಯೊಂದಿಗೆ, ನೋರ್ಮಾ ಒಪೆರಾದ ಪ್ರಮುಖ ನಾಟಕೀಯ ಕ್ಷಣಗಳನ್ನು ಬಿಂಬಿಸುವ ವಿಶೇಷ ದೃಶ್ಯ ನಿರೂಪಣೆಯೂ ಇರಲಿದೆ. ಈ ಸಂಗೀತ ಕಛೇರಿಯಲ್ಲಿ ಫಾಬ್ರಿನಿ ಸಂಗ್ರಹದಲ್ಲಿರುವ ಬೆಕ್‌ಸ್ಟೈನ್ ಗ್ರ್ಯಾಂಡ್ ಪಿಯಾನೋವನ್ನು ಬಳಸಲಾಗುವುದು.

"ಜಗದ್ಗುರುಗಳು ಮತ್ತೊಮ್ಮೆ ನಮ್ಮ ಧರ್ಮಪ್ರಾಂತದ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವುದು ನಮ್ಮ ಸ್ಥಳೀಯ ಧರ್ಮ ಸಭೆ ಹಾಗೂ ನಮ್ಮ ಜನರಲ್ಲಿ ಅಪಾರ ಸಂತೋಷವನ್ನು ಉಂಟುಮಾಡಿದೆ" ಎಂದು ಅಲ್ಬಾನೊದ ಧರ್ಮಾಧ್ಯಕ್ಷ ವಿನ್ಚೆನ್ಜೊ ವಿವಾ ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಉದಾರ ದಾನಿಗಳು ಮತ್ತು ಬೆಂಬಲಿಗರಿಗೆ, ವಿಶೇಷವಾಗಿ ಬಾಂಕಾ ದಿ ಕ್ರೆಡಿಟೊ ಕೋಒಪೆರಾತಿವೊ ದೇಯ್ ಕಾಸ್ತೆಲ್ಲಿ ರೊಮಾನಿ ಎ ದೆಲ್ ತುಸ್ಕೊಲೊ ಬ್ಯಾಂಕ್ ಹಾಗೂ ಅನೇಕ ಸ್ಥಳೀಯ ಸಂಸ್ಥೆಗಳಿಗೆ ಧರ್ಮಾಧ್ಯಕ್ಷ ವಿವಾ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ, ಈ ಕಾರ್ಯಕ್ರಮದ ಸಿದ್ಧತೆಯಲ್ಲಿ ಸಮರ್ಪಣಾಭಾವದಿಂದ ಶ್ರಮಿಸಿದ ಕಲಾವಿದರು, ಧರ್ಮಪ್ರಾಂತದ ಪವಿತ್ರ ಸಂಗೀತ ಕಚೇರಿ, ಪೊಂಟಿಫಿಕಲ್ ವಿಲ್ಲಾಗಳ ಸಿಬ್ಬಂದಿ ಹಾಗೂ ಜಗದ್ಗುರುಗಳ ನಿವಾಸದ ಪ್ರಿಫೆಕ್ಚರ್ ಸಿಬ್ಬಂದಿಗೂ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

16 ಜುಲೈ 2026, 16:57