ಮಧ್ಯಪ್ರಾಚ್ಯದಲ್ಲಿ ನ್ಯಾಯಯುತ ಶಾಂತಿ ಸ್ಥಾಪನೆಗೆ ನವೀಕೃತ ಮಾತುಕತೆಗಳನ್ನು ಆರಂಭಿಸುವಂತೆ ಜಗದ್ಗುರುಗಳು ಕರೆ ನೀಡಿದರು.
ವ್ಯಾಟಿಕನ್ ವರದಿ
ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಭಾನುವಾರದಂದು ನೀಡಿದ ತಮ್ಮ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಪವಿತ್ರ ಭೂಮಿ ಮತ್ತು ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಬೇಕೆಂಬ ತಮ್ಮ ತುರ್ತು ಮನವಿಯನ್ನು ಮತ್ತೊಮ್ಮೆ ಪುನರುಚ್ಚರಿಸಿದರು. ಉಲ್ಬಣಗೊಳ್ಳುತ್ತಿರುವ ಹಿಂಸಾಚಾರದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ ಅವರು, ತಕ್ಷಣವೇ ಸಂವಾದವನ್ನು ಮರುಪ್ರಾರಂಭಿಸುವಂತೆ ಕರೆ ನೀಡಿದರು.
ಪಶ್ಚಿಮ ದಂಡೆ ಮತ್ತು ಗಾಜಾದ ನಾಗರಿಕರ ಬಗ್ಗೆ ತೀವ್ರ ಕಳವಳ
"ಪವಿತ್ರ ಭೂಮಿಯಲ್ಲಿ ಮುಂದುವರಿಯುತ್ತಿರುವ ಮತ್ತು ಉಲ್ಬಣಗೊಳ್ಳುತ್ತಿರುವ ಹಿಂಸಾಚಾರದ ಬೆಳವಣಿಗೆಗಳನ್ನು ನಾನು ತೀವ್ರ ಕಳವಳದಿಂದ ಗಮನಿಸುತ್ತಿದ್ದೇನೆ," ಎಂದು ಜಗದ್ಗುರುಗಳು ಹೇಳಿದರು. "ಇತ್ತೀಚಿನ ದಿನಗಳಲ್ಲಿ ಪಶ್ಚಿಮ ದಂಡೆ ಮತ್ತು ಗಾಜಾ ಎರಡೂ ಪ್ರದೇಶಗಳಲ್ಲಿ ಅನೇಕ ಅಮಾಯಕ ನಾಗರಿಕರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ," ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಮಾನವನ ಸಮಾನ ಘನತೆ ಮತ್ತು ಸಮಾನ ಹಕ್ಕುಗಳ ತತ್ವದ ಮೇಲೆ ಆಧಾರಿತವಾದ ನ್ಯಾಯಯುತ ರಾಜಕೀಯ ಪರಿಹಾರವನ್ನು ಸಾಧಿಸುವ ಉದ್ದೇಶದಿಂದ ಮಾತುಕತೆಗಳನ್ನು ಪುನರಾರಂಭಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಅಲ್ಲದೆ, ಮತ್ತಷ್ಟು ಸೇನಾ ಕಾರ್ಯಾಚರಣೆಗಳು ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ತಿರಸ್ಕರಿಸಬೇಕು, ವಿಶೇಷವಾಗಿ ಎಲ್ಲ ಧರ್ಮಗಳ ಪವಿತ್ರ ಸ್ಥಳಗಳಿಗೆ ಸಲ್ಲಬೇಕಾದ ಗೌರವ ಹಾಗೂ ಅವುಗಳ ಯಥಾಸ್ಥಿತಿಯನ್ನು ಉಲ್ಲಂಘಿಸುವ ಕ್ರಮಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ರಾಜತಾಂತ್ರಿಕ ಮಾತುಕತೆಗೆ ಜಗದ್ಗುರುಗಳ ಮನವಿ
ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತಾಗಿಯೂ ಜಗದ್ಗುರುಗಳು ತಮ್ಮ ಮನವಿಯನ್ನು ಪುನರುಚ್ಚರಿಸಿದರು. "ಸೇನಾ ಕಾರ್ಯಾಚರಣೆಗಳ ತೀವ್ರತೆ ಮತ್ತೊಮ್ಮೆ ಹಿಂಸಾಚಾರ ಮತ್ತು ವಿನಾಶವನ್ನು ಹೆಚ್ಚಿಸಿದೆ. ಇದರಿಂದ ಅಸಂಖ್ಯಾತ ನಾಗರಿಕರ ಜೀವಗಳು ಗಂಭೀರ ಅಪಾಯಕ್ಕೆ ಸಿಲುಕಿದ್ದು, ಕುಡಿಯುವ ನೀರು ಮತ್ತು ವಿದ್ಯುತ್‌ನ ಕೊರತೆ ಇನ್ನಷ್ಟು ಉಲ್ಬಣಗೊಂಡಿದೆ," ಎಂದು ಅವರು ಹೇಳಿದರು.
"ಈ ಸಂಘರ್ಷದಲ್ಲಿ ತೊಡಗಿರುವ ಎಲ್ಲ ಪಕ್ಷಗಳಿಗೆ ನಾನು ಮನವಿ ಮಾಡುತ್ತೇನೆ ದಾಳಿಗಳನ್ನು ತಕ್ಷಣವೇ ಸ್ಥಗಿತಗೊಳಿಸಿ. ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳ ಮಾರ್ಗಗಳನ್ನು ಕೂಡಲೇ ಪುನಃ ತೆರೆಯಿರಿ. ಆಗ ಮಾತ್ರ ಈ ಪ್ರದೇಶದ ಜನರೆಲ್ಲರೂ ಬಹಳವಾಗಿ ಅಪೇಕ್ಷಿಸುತ್ತಿರುವ ಶಾಂತಿಯನ್ನು ಯಾವುದೇ ವಿಳಂಬವಿಲ್ಲದೆ ಸಾಧಿಸಲು ಸಾಧ್ಯವಾಗುತ್ತದೆ," ಎಂದು ಜಗದ್ಗುರುಗಳು ಹೇಳಿದರು.
ಯುದ್ಧದಿಂದ ನೊಂದಿರುವ ವಿಶ್ವದ ಜನರಿಗಾಗಿ ಪ್ರಾರ್ಥನೆ
ಯುದ್ಧದ ಸಂಕಷ್ಟದಿಂದ ಬಳಲುತ್ತಿರುವ ವಿಶ್ವದ ಎಲ್ಲ ಜನರಿಗಾಗಿ ಪ್ರಾರ್ಥನೆಯನ್ನು ಮುಂದುವರಿಸುವಂತೆ ಜಗದ್ಗುರು XIVನೇ ಲಿಯೋರವರು ಎಲ್ಲರನ್ನು ಪ್ರೋತ್ಸಾಹಿಸಿದರು.
"ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರ ಹೃದಯಗಳನ್ನು ಪ್ರಭು ಸ್ಪರ್ಶಿಸಲಿ ಅವರ ಮನಸ್ಸುಗಳನ್ನು ಬೆಳಗಿಸಲಿ. ಇದರಿಂದ ಸೌಹಾರ್ದತೆ ಮತ್ತು ಶಾಂತಿ ಶೀಘ್ರದಲ್ಲೇ ಮೇಲುಗೈ ಸಾಧಿಸಲಿ," ಎಂದು ಅವರು ಪ್ರಾರ್ಥಿಸಿದರು.
