ಬೊರ್ಗೊ ಲೌದಾತೋ ಸಿ'ಯಲ್ಲಿ ನಡೆದ ಮಧ್ಯಾಹ್ನದ ಊಟದಲ್ಲಿ ಜಗದ್ಗುರು ಲಿಯೋರವರು: 'ನಾನು ನಿಜವಾದ ಪ್ರೀತಿಯ ಸೇವೆಗಾಗಿ ಹಸಿವಿನೊಂದಿಗೆ ಬಂದಿದ್ದೇನೆ.'
ವ್ಯಾಟಿಕನ್ ವರದಿ
"ನಾನು ಯಾವುದೇ ಸಿದ್ಧಪಡಿಸಿದ ಭಾಷಣದೊಂದಿಗೆ ಬಂದಿಲ್ಲ. ಆದರೆ ನಾನು ಒಂದು ಹಸಿವಿನೊಂದಿಗೆ ಬಂದಿದ್ದೇನೆ ನ್ಯಾಯಕ್ಕಾಗಿ ಹಸಿವು, ನಿಜವಾದ ಪ್ರೀತಿಯ ಸೇವೆಗಾಗಿ ಹಸಿವು, ತನ್ನ ಬಾಗಿಲುಗಳನ್ನು ನಿಜವಾಗಿಯೂ ತೆರೆದು ಎಲ್ಲರನ್ನೂ ಸ್ವಾಗತಿಸಿ ಅಪ್ಪಿಕೊಳ್ಳಲು ತಿಳಿದಿರುವ ಧರ್ಮ ಸಭೆಗಾಗಿ ಹಸಿವು. ಅಲ್ಲಿ ಎಲ್ಲರ ಮೇಲೂ ಪ್ರೀತಿ ಇರುತ್ತದೆ; ಯಾರೂ ಶತ್ರುವಾಗಿರುವುದಿಲ್ಲ; ನಾವೆಲ್ಲರೂ ಸಮನ್ವಯ, ಕ್ಷಮೆ ಮತ್ತು ಶಾಂತಿಯಿಂದ ಬದುಕಲು ಕಲಿಯುತ್ತೇವೆ."
ಈ ಮಾತುಗಳೊಂದಿಗೆ ಜಗದ್ಗುರು XIVನೇ ಲಿಯೋರವರು ಕಾಸೆಲ್ ಗಾಂಡೋಲ್ಫೊದಲ್ಲಿರುವ ಜಗದ್ಗುರುಗಳ ಉದ್ಯಾನವನದ 'ಬೊರ್ಗೊ ಲೌದಾತೋ ಸಿ'ಯಲ್ಲಿ ನಡೆದ ವಿಶೇಷ "ಜಗದ್ಗುರುಗಳೊಂದಿಗೆ ಮಧ್ಯಾಹ್ನದ ಊಟ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ, ಅವರಲ್ಲಿ ಸುಮಾರು 40 ಮಕ್ಕಳು ಸೇರಿ, ಬಡತನ ಮತ್ತು ಸಾಮಾಜಿಕವಾಗಿ ದುರ್ಬಲ ಪರಿಸ್ಥಿತಿಯಲ್ಲಿ ಬದುಕುತ್ತಿರುವವರು ಭಾಗವಹಿಸಿದ್ದರು. ರೋಮಿನ ಧರ್ಮಪ್ರಾಂತ್ಯ ಮತ್ತು ಅದರೊಂದಿಗೆ ಕಾರ್ಯನಿರ್ವಹಿಸುವ ವಿವಿಧ ದತ್ತಿ ಸಂಸ್ಥೆಗಳ ಸಹಯೋಗದೊಂದಿಗೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೊರ್ಗೊ ಲೌದಾತೋ ಸಿ'ಯ ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕ ವಾತಾವರಣದಲ್ಲಿ ಅವರು ಇಡೀ ದಿನವನ್ನು ಕಳೆಯುವ ಅವಕಾಶ ಪಡೆದರು.
ಕಾರ್ಯಕ್ರಮವು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಮಹಾನಿರ್ದೇಶಕರಾದ ಕಾರ್ಡಿನಲ್ ಫಾಬಿಯೊ ಬಾಜ್ಜಿಯೋರವರ ನೇತೃತ್ವದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಯಿತು. ದಾನಧರ್ಮ ಸೇವಾ ವಿಭಾಗದ ಪ್ರಿಫೆಕ್ಟ್ ಹಾಗೂ ಜಗದ್ಗುರುಗಳ ಅಲ್ಮೋನರ್ ಆಗಿರುವ ಆರ್ಚ್‌ಬಿಷಪ್ ಲೂಯಿಸ್ ಮರಿನ್ ದೆ ಸಾನ್ ಮಾರ್ಟಿನ್ ಸಹಬಲಿಪೂಜೆ ಅರ್ಪಿಸಿದರು. ಬಳಿಕ ಅತಿಥಿಗಳು ಬೊರ್ಗೊ ಲೌದಾತೋ ಸಿ' ಪ್ರದೇಶದ ಮಾರ್ಗದರ್ಶಿತ ಭೇಟಿಯಲ್ಲೂ ಭಾಗವಹಿಸಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಎಲ್ಲರೂ ಆಗಮಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿ, ಪ್ರತಿಯೊಬ್ಬರಿಗೂ ದೇವರ ಪ್ರೀತಿಯನ್ನು ವ್ಯಕ್ತಪಡಿಸುವುದೇ ಧರ್ಮ ಸಭೆಯ ಧ್ಯೇಯವಾಗಿದೆ ಎಂದು ಹೇಳಿದರು. "ಜಗದ್ಗುರುಗಳು ಒಂದು ಬಿರುದು 'ಪಾಂಟಿಫ್'—ಅಂದರೆ ಸೇತುವೆ ನಿರ್ಮಿಸುವವರು. ಇಂದು ನಾವು ಸಹ ನಿಮ್ಮೊಂದಿಗೆ, ನಿಮ್ಮ ಕುಟುಂಬಗಳೊಂದಿಗೆ ಮತ್ತು ನಾವು ಕಟ್ಟಲು ಬಯಸುವ ಸಮಾಜದೊಂದಿಗೆ ಒಂದು ಸೇತುವೆಯನ್ನು ನಿರ್ಮಿಸಲು ಬಯಸುತ್ತೇವೆ. ಅದು ನ್ಯಾಯ ನೆಲೆಸಿರುವ, ಬಡತನದ ಕಾರಣಗಳನ್ನು ನಿರ್ಮೂಲ ಮಾಡುವ ಹಾಗೂ ಅನ್ಯಾಯಗಳನ್ನು ನಿವಾರಿಸುವ ಸಮಾಜವಾಗಿರಬೇಕು. ಇದೇ ನಾವು ನಿರ್ಮಿಸಲು ಬಯಸುವ ಧರ್ಮ ಸಭೆ" ಎಂದು ಅವರು ಹೇಳಿದರು.
"ನಾವೆಲ್ಲರೂ ಒಂದೇ ಮೇಜಿನ ಸುತ್ತ ಸೇರಿ, ನಮ್ಮ ನಡುವೆ ಉಪಸ್ಥಿತರಿರುವ ಯೇಸುವಿನೊಂದಿಗೆ ಈ ಸಹಭೋಜನವನ್ನು ಹಂಚಿಕೊಳ್ಳುವಾಗ, ನಾವು ಆಶಾಭರದಿಂದ ಹೊಸ ಲೋಕವನ್ನು ನಿರ್ಮಿಸುತ್ತಿದ್ದೇವೆ" ಎಂದು ಜಗದ್ಗುರುಗಳು ಹೇಳಿದರು. ಹಿಂಸೆ, ದ್ವೇಷ ಮತ್ತು ತಾರತಮ್ಯಗಳಿಂದ ವಿಭಜಿತವಾಗಿರುವ ಇಂದಿನ ಜಗತ್ತಿನಲ್ಲಿ ಐಕ್ಯತೆ, ಪರಸ್ಪರ ಕಾಳಜಿ ಮತ್ತು ಸಹೋದರತ್ವದಿಂದ ಬದುಕುವ ಸಮುದಾಯಗಳನ್ನು ಕಟ್ಟುವಂತೆ ಅವರು ಕರೆ ನೀಡಿದರು. "ನ್ಯಾಯ, ಶಾಂತಿ ಮತ್ತು ಪ್ರೀತಿಯ ಧರ್ಮ ಸಭೆಯಾಗಿರಲು ನಾವು ಒಟ್ಟಾಗಿ ಶ್ರಮಿಸೋಣ" ಎಂದು ಅವರು ಮನವಿ ಮಾಡಿದರು.
ಭೋಜನ ಆರಂಭಕ್ಕೂ ಮುನ್ನ ಜಗದ್ಗುರು ಲಿಯೋರವರು ಎಲ್ಲರಿಗಾಗಿ, ಅವರ ಕುಟುಂಬಗಳಿಗಾಗಿ ಮತ್ತು ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗಾಗಿ ಆಶೀರ್ವಾದದ ಪ್ರಾರ್ಥನೆ ಸಲ್ಲಿಸಿದರು. "ಓ ಪ್ರಭುವೇ, ನಮ್ಮ ಮೇಲೆ, ಈ ಆಹಾರದ ಮೇಲೆ ಮತ್ತು ಇದನ್ನು ಉದಾರವಾಗಿ ಒದಗಿಸಿದ ದಾನಿಗಳ ಮೇಲೆ ನಿನ್ನ ಆಶೀರ್ವಾದವನ್ನು ಸುರಿಸು. ನಮ್ಮ ಕುಟುಂಬಗಳನ್ನು ಆಶೀರ್ವದಿಸು. ಕಷ್ಟ ಮತ್ತು ದುಃಖದಲ್ಲಿರುವ ಎಲ್ಲರಿಗೂ ಶಾಂತಿ, ಕ್ಷಮೆ ಮತ್ತು ಸಮನ್ವಯವನ್ನು ಕರುಣಿಸು. ನಿನ್ನ ದೈವಿಕ ಅನುಗ್ರಹದಿಂದ ನಾವು ಸ್ವೀಕರಿಸುತ್ತಿರುವ ಈ ವರಗಳನ್ನು ಆಶೀರ್ವದಿಸು. ನಮ್ಮ ಪ್ರಭುವಾದ ಕ್ರಿಸ್ತನ ಮೂಲಕ. ಆಮೆನ್" ಎಂದು ಅವರು ಪ್ರಾರ್ಥಿಸಿದರು.
