ಜುಲೈ 29ರಂದು ಕಾಸ್ಟೆಲ್ ಗಾಂಡೋಲ್ಫೋದಲ್ಲಿ ‘ಶಾಂತಿಯ ಸ್ತೋತ್ರಗೀತೆ’ ಪ್ರಾರ್ಥನೆಗೆ ಜಗದ್ಗುರುಗಳ ನೇತೃತ್ವ.
ವ್ಯಾಟಿಕನ್ ವರದಿ
ಜುಲೈ 29, ಬುಧವಾರ ರಾತ್ರಿ 9.30ಕ್ಕೆ (ಸಿಇಟಿ), ಕಾಸ್ಟೆಲ್ ಗಾಂಡೋಲ್ಫೋದ ಬೊರ್ಗೊ ಲೌದಾತೋ ಸಿ'ಯಲ್ಲಿ ಜಗದ್ಗುರು XIVನೇ ಲಿಯೋರವರು ನೇತೃತ್ವದಲ್ಲಿ ನಡೆಯಲಿರುವ 'ಶಾಂತಿಯ ಸ್ತೋತ್ರಗೀತೆ' ಎಂಬ ಪ್ರಾರ್ಥನೆ ಮತ್ತು ಸಹೋದರತ್ವದ ಸಮಾವೇಶವನ್ನು ವ್ಯಾಟಿಕನ್ ನ್ಯೂಸ್ ತನ್ನ ಅಧಿಕೃತ ವೆಬ್‌ಸೈಟ್ www.vaticannews.va ಹಾಗೂ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರ ಮಾಡಲಿದೆ. ಈ ಕಾರ್ಯಕ್ರಮವನ್ನು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ ಮತ್ತು ಆಂಡ್ರಿಯಾ ಬೊಚ್ಚೆಲ್ಲಿ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿವೆ.
ಎಬಿಎಫ್ ವಾಯ್ಸಸ್ ಗಾಯನ ತಂಡದ ಸಾಕ್ಷ್ಯ
ಈ ಕಾರ್ಯಕ್ರಮವು ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಪರಲೋಕಗಮನದ ಎಂಟನೇ ಶತಮಾನೋತ್ಸವದ ಆಚರಣೆಗಳ ಅಂಗವಾಗಿದೆ. ಪ್ರಾರ್ಥನಾ ಸಮಾವೇಶದಲ್ಲಿ ಖ್ಯಾತ ಗಾಯಕ ಮೈಸ್ಟ್ರೋ ಆಂಡ್ರಿಯಾ ಬೊಚ್ಚೆಲ್ಲಿ ತಮ್ಮ ಗಾಯನದ ಮೂಲಕ ಭಾಗವಹಿಸಲಿದ್ದು, ಪವಿತ್ರಭೂಮಿ, ಉಗಾಂಡಾ, ಹೈಟಿ ಹಾಗೂ ಇಟಲಿಯಿಂದ ಆಗಮಿಸಿರುವ 164 ಮಕ್ಕಳು ಮತ್ತು ಯುವಕರನ್ನು ಒಳಗೊಂಡ ಎಬಿಎಫ್ ವಾಯ್ಸಸ್ ಗಾಯನ ತಂಡವೂ ಸಂಗೀತ ಸೇವೆ ಸಲ್ಲಿಸಲಿದೆ.
ಈ ಮಕ್ಕಳು ಮತ್ತು ಯುವಕರು ವಿಭಿನ್ನ ಜೀವನಾನುಭವಗಳನ್ನು ಹೊತ್ತು ಬಂದವರಾಗಿದ್ದಾರೆ. ಅವರಲ್ಲಿ ಅನೇಕರ ಬದುಕು ಯುದ್ಧ, ಬಡತನ ಮತ್ತು ಸಂಕಷ್ಟಗಳಿಂದ ಗುರುತಿಸಲ್ಪಟ್ಟಿದೆ. ಆದರೂ ಅವರು ಒಟ್ಟಾಗಿ ಹಾಡುವ ಮೂಲಕ, ಕಲೆ ಎಂಬುದು ಸಂವಾದ, ಭರವಸೆ ಮತ್ತು ಸೌಹಾರ್ದತೆಯ ಸಾರ್ವತ್ರಿಕ ಭಾಷೆಯಾಗಬಲ್ಲದು ಎಂಬ ಸತ್ಯಕ್ಕೆ ಜೀವಂತ ಸಾಕ್ಷಿಯಾಗಲು ಬಯಸುತ್ತಾರೆ.
